ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಿಗೆರೆ | ಅರಿವಳಿಕೆ ಚುಚ್ಚುಮದ್ದು ನೀಡಲು ವಿಫಲ: ಆನೆ ಸೆರೆ ವಿಫಲ

ಕುಂದೂರಿನಲ್ಲಿ ಆನೆ ಸೆರೆ: ಯಶಸ್ವಿಯಾಗದ ಎರಡನೇ ದಿನದ ಕಾರ್ಯಾಚರಣೆ
Last Updated 3 ಡಿಸೆಂಬರ್ 2022, 7:12 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನ ಕುಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಆನೆ ಸೆರೆ ಕಾರ್ಯಾಚರಣೆಯು ಶುಕ್ರವಾರ ಮುಂದುವರಿದಿದ್ದು, ಆನೆಗೆ ಅರಿವಳಿಕೆ ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಆನೆ ಸೆರೆಯು ಯಶಸ್ವಿಯಾಗಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಶುಕ್ರವಾರ ಬೆಳಿಗ್ಗೆಯಿಂದಲೇ ಆನೆ ಸಂಚರಿಸಿರುವ ಕುರುಹು ಪತ್ತೆಗಾಗಿ ಪರಿಣಿತರ ತಂಡವು ಅರಣ್ಯಕ್ಕೆ ತೆರಳಿತ್ತು. ಮಂಡಗುಳಿಹರ ಗ್ರಾಮದಲ್ಲಿ ಆನೆ ಕಾಣಿಸಿಕೊಂಡಿದ್ದು, ಅದಕ್ಕೆ ಅರಿವಳಿಕೆ ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಆನೆಯು ಕುಂಡ್ರ ಕಾಡಿನತ್ತ ತೆರಳಿತು. ಮೂರು ಬಾರಿ ಸುಮಾರು 20 ಅಡಿ ದೂರದಲ್ಲಿ ಆನೆ ಕಾಣಿಸಿಕೊಂಡರೂ ಅರಿವಳಿಕೆ ಚುಚ್ಚುಮದ್ದು ನೀಡಲುವಲ್ಲಿ ತಂಡವು ವಿಫಲವಾಗಿದ್ದು, ಚುಚ್ಚು ಮದ್ದನ್ನು ಹಾರಿಸಲು ಹಿಂಜರಿದರು ಎಂದು ಸ್ಥಳೀಯರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಆನೆ ಸುಳಿವು ಪತ್ತೆಯಾದ ಬೆನ್ನಲ್ಲೇ ದೊಡ್ಢಳ್ಳದ ಶಿಬಿರದಿಂದ ಲಾರಿಗಳಲ್ಲಿ ದಸರಾ ಸಾಕಾನೆಗಳನ್ನು ಮಂಡಗುಳಿಹರಕ್ಕೆ ರವಾನಿಸಲಾಗಿತ್ತು. ಆದರೆ, ಕಾಡಾನೆಗೆ ಅರಿವಳಿಕೆ ಚುಚ್ಚುಮದ್ದು ಹಾಕಲು ವಿಫಲವಾದ ಹಿನ್ನೆಲೆಯಲ್ಲಿ ಸಂಜೆ ಸಾಕಾನೆಗಳನ್ನು ದೊಡ್ಡಳ್ಳದ ಶಿಬಿರಕ್ಕೆ ವಾಪಾಸು ಕರೆತರಲಾಯಿತು. ಮಧ್ಯಾಹ್ನದ ವೇಳೆಗೆ ಕಾರ್ಯಾಚರಣೆಯನ್ನು ಮುಕ್ತಾಗೊಳಿಸಿದ್ದರಿಂದ ಸ್ಥಳೀಯರು ಕಾರ್ಯಾಚರಣೆಯಲ್ಲಿ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದು ಆರೋಪಿಸಿದರು.

ಕಾರ್ಯಾಚರಣೆಗಾಗಿ ಬಂದಿದ್ದ ಗೋಪಿ ಎಂಬ ಸಾಕಾನೆಗೆ ಮದವೇರಿದ ಹಿನ್ನೆಲೆಯಲ್ಲಿ ಶುಕ್ರವಾರ ದೊಡ್ಡಳ್ಳದ ಶಿಬಿರದಿಂದ ದುಬಾರೆ ಆನೆ ಶಿಬಿರಕ್ಕೆ ವಾಪಸ್ ಕರೆದೊಯ್ಯಲಾಯಿತು. ಮಧ್ಯಾಹ್ನದ ವೇಳೆಗೆ ಕಾರ್ಯಾಚರಣೆ ಮುಗಿದ ಬಳಿಕ ಲಾರಿಯಲ್ಲಿ ದುಬಾರೆ ಶಿಬಿರಕ್ಕೆ ಸಾಗಿಸಲಾಯಿತು.

ಚುರುಕುಗೊಳ್ಳಲಿ: ‘ಆನೆ ಸೆರೆಗಾಗಿ ನಡೆಯುತ್ತಿರುವ ಕಾರ್ಯಾಚರಣೆಯು ಚುರುಕುಗೊಳ್ಳಬೇಕು ಎಂದು ತಳವಾರ ಅಶ್ವಥ್ ಒತ್ತಾಯಿಸಿದ್ದಾರೆ. ಆನೆ ಸೆರೆ ಕಾರ್ಯಾಚರಣೆಗಾಗಿ ಲಕ್ಷಾಂತರ ಮೊತ್ತವನ್ನು ವೆಚ್ಚಮಾಡಲಾಗುತ್ತಿದೆ. ಸಾಕಾನೆಗಳು, ಮಾವುತರು, ಅರಣ್ಯ ಸಿಬ್ಬಂದಿ ಸೇರಿದಂತೆ ಹಲವರು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ ಕಾರ್ಯಾಚರಣೆಯ ವೇಳೆ ಆನೆ ಕಾಣಿಸಿಕೊಂಡರೂ ಅರಿವಳಿಕೆ ನೀಡದೆ, ಹಿಡಿಯಲು ಸಾಧ್ಯವಾಗುತ್ತಿಲ್ಲ. ಕಾರ್ಯಾಚರಣೆಯ ಗಂಭೀರತೆಯನ್ನು ಅರಿತು ಆನೆಗಳ ಸೆರೆಗೆ ಮುಂದಾಗಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT