ಮಂಗಳವಾರ, ನವೆಂಬರ್ 19, 2019
23 °C
ಮಹಾಮಳೆಯಿಂದ ಬೆಳೆ ಕಳೆದುಕೊಂಡ ಕೃಷಿಕರಿಗೆ ಮತ್ತೊಂದು ಆಘಾತ

ಕಾಡಾನೆಗಳ ದಾಳಿಗೆ ನಲುಗಿದ ರೈತ

Published:
Updated:
Prajavani

ಮೂಡಿಗೆರೆ: ಪ್ರಸಕ್ತ ಕೃಷಿ ವರ್ಷವು ತಾಲ್ಲೂಕಿನ ರೈತರ ಪಾಲಿಗೆ ದುರಂತವಾಗಿ ಪರಿಣಮಿಸಿದೆ. ಮಹಾಮಳೆಯಿಂದ ಕಾಫಿ, ಏಲಕ್ಕಿ, ಕಾಳು ಮೆಣಸಿನ ಬೆಳೆಯನ್ನು ಕಳೆದುಕೊಂಡ ರೈತರ ಗೋಳು ಒಂದೆಡೆಯಾದರೆ, ಎರಡು, ಮೂರು ತಲೆಮಾರುಗಳಿಂದ ಬದುಕು ಕಟ್ಟಿಕೊಟ್ಟಿದ್ದ ಕೃಷಿ ಜಮೀನುಗಳು ಮಳೆಯ ಹೊಡೆತಕ್ಕೆ ಸಿಲುಕಿ ಕಣ್ಣೆದುರೇ ಭೂ ಕುಸಿತವಾಗಿ ಬೆಳೆಯೆಲ್ಲವೂ ಮಣ್ಣುಪಾಲಾಗಿದೆ. ಇಷ್ಟಕ್ಕೆ ಸಾಲದೆಂಬಂತೆ ಕಾಡಾನೆಗಳು ಹಗಲಿರುಳೆನ್ನದೇ ದಾಳಿ ನಡೆಸಿ, ರೈತರು ಬೆವರಿಳಿಸಿ ಬೆಳೆದಿದ್ದ ಅಳಿದುಳಿದ ಬೆಳೆಯನ್ನು ಸರ್ವನಾಶ ಮಾಡುತ್ತಿರುವುದು ರೈತರ ಪಾಲಿಗೆ ನರಕವಾಗಿ ಪರಿಣಮಿಸಿದೆ.

ತಾಲ್ಲೂಕಿನಲ್ಲಿ ಪ್ರಮುಖವಾಗಿ ಕಾಡಾನೆಗಳು ಹಾಗೂ ಕಾಡೆಮ್ಮೆಗಳು ರೈತರಿಗೆ ಶತ್ರುವಾಗಿ ಪರಿಣಮಿಸಿವೆ. ಮೂಲರಹಳ್ಳಿ, ಗುತ್ತಿ, ಹೆಸಗೋಡು, ಕೊಟ್ರಕೆರೆ, ತರುವೆ, ಸಬ್ಬೇನಹಳ್ಳಿ, ಕೆಂಜಿಗೆ, ಬಿದರಹಳ್ಳಿ, ಕುಂದೂರು, ಸಾರಗೋಡು ಭಾಗಗಳಲ್ಲಿ ಕಾಡಾನೆಗಳು ದಾಳಿ ನಡೆಸಿ ಬೆಳೆಯನ್ನು ನಾಶಗೊಳಿಸಿದರೆ; ಕೂವೆ, ಗಬ್ಗಲ್, ಜಾವಳಿ, ಕೆಳಗೂರು ಭಾಗಗಳಲ್ಲಿ ಗುಂಪಿನಲ್ಲಿ ದಾಳಿ ನಡೆಸುವ ಕಾಡೆಮ್ಮೆಗಳು ರೈತರ ಕಾಫಿ ತೋಟ ಹಾಗೂ ಭತ್ತದ ಗದ್ದೆಗಳನ್ನು ಕ್ಷಣಾರ್ಧದಲ್ಲಿ ನಾಶಗೊಳಿಸುತ್ತಿವೆ.

ತಾಲ್ಲೂಕಿನಲ್ಲಿ ಕಾಡಾನೆಗಳು ಎರಡು ಗುಂಪಿನಲ್ಲಿ ಪ್ರತ್ಯೇಕವಾಗಿ ದಾಳಿ ನಡೆಸುತ್ತಿವೆ. ಮೂರು ಕಾಡಾನೆಗಳಿರುವ ಒಂದು ಗುಂಪು, ರಾತ್ರಿ ವೇಳೆ ರೈತರ ಜಮೀನಿಗಿಳಿದು, ಬೆಳೆದಿರುವ ಭತ್ತವನ್ನು ತಿಂದು, ತುಳಿದು ಹಾನಿಗೊಳಿಸಿದರೆ, ಕಾಫಿ ತೋಟಗಳಲ್ಲಿ ತಿರುಗಾಡಿ, ಬೃಹತ್ ಮರಗಳನ್ನು ಧರೆಗುರುಳಿಸಿ ಕಾಫಿ ಗಿಡಗಳನ್ನು ಮುರಿದು ನಾಶಗೊಳಿಸುತ್ತಿವೆ. ಒಂಟಿ ಸಲಗವೊಂದು ಪ್ರತ್ಯೇಕವಾಗಿ ದಾಳಿ ನಡೆಸುತ್ತಿದ್ದು, ಈಗಾಗಲೇ ಐದು ಮಂದಿಯನ್ನು ಬಲಿ ಪಡೆದಿರುವ ಈ ಒಂಟಿ ಸಲಗವು ಕಾಣಿಸಿಕೊಂಡರೆ, ಸುತ್ತಮುತ್ತಲ ಗ್ರಾಮಗಳಲ್ಲೆಲ್ಲಾ ಭಯದ ವಾತಾವರಣ ಸೃಷ್ಟಿಯಾಗುತ್ತದೆ.

‘ಕಾಡಾನೆ ದಾಳಿಯು ವಿಪರೀತವಾಗಿದ್ದು, ಭತ್ತದ ಬೆಳೆಯನ್ನು ಸಂಪೂರ್ಣ ನಾಶಗೊಳಿಸುತ್ತಿವೆ. ಅಕ್ಕಿಯನ್ನು ಕೊಂಡು ತಿನ್ನಲಾಗುವುದಿಲ್ಲ ಎಂಬ ಕಾರಣಕ್ಕಾಗಿ ಭತ್ತದ ಗದ್ದೆಯನ್ನು ಮಾಡುತ್ತಿದ್ದು, ಈ ಬಾರಿ ನಮ್ಮ ಎರಡೂವರೆ ಎಕರೆ ಪ್ರದೇಶದಲ್ಲಿ ಬಹುಭಾಗದ ಬೆಳೆಯನ್ನು ತುಳಿದು ನಾಶಗೊಳಿಸಿವೆ. ನಾಟಿ ಮಾಡಿದ ಅನೇಕ ರೈತರು ದಾಳಿಯಾಗಿದ್ದನ್ನು ಕಂಡು ಗದ್ದೆಯತ್ತ ಮುಖವನ್ನೇ ಮಾಡುತ್ತಿಲ್ಲ. ಕಾಡಾನೆಗಳನ್ನು ಓಡಿಸುವ ಬದಲು, ಸ್ಥಳಾಂತರಕ್ಕೆ ಮುಂದಾಗಬೇಕು’ ಎನ್ನುತ್ತಾರೆ ರೈತ ದೇವರಾಜ್.

ದಾಳಿಯಿಂದ ಭತ್ತದ ಗದ್ದೆಗಳಲ್ಲಿ ಪೈರುಗಳ ಬದಲಿಗೆ ಕಾಡಾನೆಗಳ ಹೆಜ್ಜೆ ಗುರುತುಗಳೇ ಕಾಣ ಸಿಗುತ್ತಿದ್ದು, ಸಾಲ ಮಾಡಿ ನಾಟಿ ಮಾಡಿದ್ದ ರೈತರ ಪಾಡು ಹೇಳತೀರದಾಗಿದೆ. ರೈತರ ಸಂಕಷ್ಟವನ್ನು ಬಗೆಹರಿಸಲು ತುರ್ತಾಗಿ ಯೋಜನೆ ರೂಪಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಪ್ರತಿಕ್ರಿಯಿಸಿ (+)