ವಿಶೇಷ ಪ್ಯಾಕೇಜ್‌ಗೆ ಸಿ.ಎಂಗೆ ಮನವಿ ಸಲ್ಲಿಕೆಗೆ ನಿರ್ಧಾರ

7
ಪ್ರಗತಿ ಪರಿಶೀಲನಾ ಸಭೆ: ಅತಿವೃಷ್ಟಿ–ಅನಾವೃಷ್ಟಿ ಚರ್ಚೆ

ವಿಶೇಷ ಪ್ಯಾಕೇಜ್‌ಗೆ ಸಿ.ಎಂಗೆ ಮನವಿ ಸಲ್ಲಿಕೆಗೆ ನಿರ್ಧಾರ

Published:
Updated:
Deccan Herald

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದ ಅತಿವೃಷ್ಟಿ, ಬಯಲುಸೀಮೆಯ ಅನಾವೃಷ್ಟಿ ಪರಿಹಾರಕ್ಕೆ ವಿಶೇಷ ಪ್ಯಾಕೇಜ್‌ ಘೋಷಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗ ಜಿಲ್ಲೆಯ ಜನಪ್ರತಿನಿಧಿಗಳು ನಿಯೋಗ ತೆರಳಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‌ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಮಲೆನಾಡು ಭಾಗದಲ್ಲಿ ಈ ಬಾರಿ ವಿಪರೀತ ಮಳೆಯಾಗಿದೆ. ಭೂಕುಸಿತ,ರಸ್ತೆ, ಸೇತುವೆ, ಬೆಳೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿವೆ. ಅಂದಾಜು ₹ 500 ಕೋಟಿಯ ಆಸ್ತಿಪಾಸ್ತಿ ನಷ್ಟವಾಗಿದೆ’ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಮಳೆಯಿಂದಾಗಿ ಮಲೆನಾಡಿನಲ್ಲ ಕಾಫಿ, ಕರಿಮೆಣಸು, ಅಡಿಕೆ ಮೊದಲಾದ ವಾಣಿಜ್ಯ ಬೆಳೆಗಳಿಗೆ ಹಾನಿಯಾಗಿದೆ. ರಸ್ತೆಗಳು ಹಾಳಾಗಿವೆ. ಪರಿಹಾರ ನಿಟ್ಟಿನಲ್ಲಿ ವಿಶೇಷ ಪ್ಯಾಕೇಜ್‌ ಘೋಷಿಸುವಂತೆ ಮುಖ್ಯಮಂತ್ರಿಯವರ ಒತ್ತಡ ಹೇರಬೇಕು ಎಂದು ಶಾಸಕ ಸಿ.ಟಿ.ರವಿ ಒತ್ತಾಯಿಸಿದರು.

ಬಯಲುಸೀಮೆ ಭಾಗ ಕಡೂರು, ತರೀಕೆರೆಯ ಕೆಲವು ಕಡೆ ಮಳೆ ಕೊರತೆಯಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಇದೆ. ಈ ಭಾಗದ ಅನಾವೃಷ್ಟಿ ನಿಭಾಯಿಸಲು ಪರಿಹಾರ ರೂಪಿಸಬೇಕು ಎಂದು ಶಾಸಕ ಬೆಳ್ಳಿಪ್ರಕಾಶ್‌ ಹೇಳಿದರು.

ಮಲೆನಾಡು ಭಾಗದಲ್ಲಿ ಅತಿವೃಷ್ಟಿಯಿಂದ ಹಾನಿ ಸಂಭವಿಸಿರುವುದು ಗಮನಕ್ಕೆ ಬಂದಿದೆ. ಜಿಲ್ಲೆಯ ಜನಪ್ರತಿನಿಧಿಗಳ ಜತೆ ನಿಯೋಗ ತೆರಳಿ ಕೊಡಗು ಜಿಲ್ಲೆಗೆ ವಿಶೇಷ ಪ್ಯಾಕೇಜ್‌ ಘೋಷಿಸಿರುವಂತೆ ಈ ಜಿಲ್ಲೆಗೂ ಘೋಷಿಸುವಂತೆ ಮುಖ್ಯಮಂತ್ರಿ ಗಮನ ಸೆಳೆಯೋಣ ಎಂದು ಸಚಿವ ಜಾರ್ಜ್‌ ತಿಳಿಸಿದರು.

ಹಕ್ಕುಪತ್ರ; ಬಿಸಿ ಚರ್ಚೆ

94 ‘ಸಿ’ ಮತ್ತು 94 ‘ಸಿಸಿ’ ಹಕ್ಕುಪತ್ರಗಳನ್ನು ನೀಡಲು ವಿವಿಧ ಕಾರಣಗಳಿಂದಾಗಿ ತೊಡಕಾಗಿ ಪರಿಣಮಿಸಿದೆ. ಅರಣ್ಯ ಜಾಗ, ಕಂದಾಯ ಜಾಗದ ಸಮಸ್ಯೆ ಇದೆ. ‘ಡಿನೋಟಿಫೈ’ಚಷಗೆ ಕ್ರಮವಹಿಸಿ, ಸಮಸ್ಯೆ ಪರಿಹರಿಸಬೇಕು ಎಂದು ಶಾಸಕ ರಾಜೇಗೌಡ ಹೇಳಿದರು.

ಕುಮ್ಕಿ, ಡೀಮ್ಡ್‌ ಅರಣ್ಯ, ಗೋಮಾಳ, ಸಿ ಅಂಡ್‌ ಆರ್‌ ಜಾಗಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಮನೆಗಳನ್ನು ಸಕ್ರಮಕ್ಕೆ ಅವಕಾಶ ಇರುವುದಿಲ್ಲ, ಇಂಥ 94‘ಸಿ’ ಅರ್ಜಿಗಳನ್ನು ತಿರಿಸ್ಕರಿಸುವಂತೆ ಈಚೆಗೆ ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಸುತ್ತೋಲೆ ಮಾರ್ಪಡಿಸಿ ಪರಿಷ್ಕೃತ ಸುತ್ತೋಲೆ ಪ್ರಕಟಿಸುವ ಅಗತ್ಯ ಇದೆ ಎಂದು ಸಿ.ಟಿ.ರವಿ ಹೇಳಿದರು.

ಭದ್ರಾ ಜಲಾಶಯ ನಿರ್ಮಾಣ ಸಂದರ್ಭದಲ್ಲಿ ನಿರಾಶ್ರಿತರಾದವರು ತರೀಕೆರೆ ತಾಲ್ಲೂಕಿನ ಕಂಚಿಕೊಪ್ಪದಲ್ಲಿ ಇದ್ದಾರೆ. ಅವರ ಸಂಕಷ್ಟ ಪರಿಹರಿಸಬೇಕು ಎಂದು ಶಾಸಕ ಡಿ.ಎಸ್‌.ಸುರೇಶ್‌ ಹೇಳಿದರು.

ಕಂದಾಯ ಜಾಗ ಮತ್ತು ಅರಣ್ಯ ಜಾಗದ ಸಮಸ್ಯೆ ಇದೆ. ಜಂಟಿ ಸಮೀಕ್ಷೆಗೆ ಕ್ರಮ ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್‌ ಕೋರಿದರು.

ಕಡೂರು ತಾಲ್ಲೂಕಿನ ಎಮ್ಮೆದೊಡ್ಡಿ ಭಾಗದ ಅಮೃತ್‌ ಮಹಲ್‌ ಕಾವಲ್‌ನಲ್ಲಿ ಕೆಲ ಭೂಹೀನರು ಬಹಳ ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದಾರೆ. ಸಾಗುವಳಿ ಮಾಡುತ್ತಿರುವವರಿಗೆ ನ್ಯಾಯ ಒದಗಿಸಲು ಕ್ರಮ ವಹಿಸಬೇಕು ಎಂದು ಬೆಳ್ಳಿ ಪ್ರಕಾಶ್‌ ಕೋರಿದರು.

ಜಂಟಿ ಸಮೀಕ್ಷೆ ನಡೆಸಲಾಗುವುದು. ಐದು ತಿಂಗಳಲ್ಲಿ ಈ ಪ್ರಕ್ರಿಯೆ ಪೂರೈಸಲಾಗುವುದು. ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಶ್ರೀರಂಗಯ್ಯ ತಿಳಿಸಿದರು.

ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗ ಯೋಜನೆ ಹೆಸರಿನಲ್ಲಿ ಅರಣ್ಯ ಇಲಾಖೆಗೆ ಕುದುರೆಮುಖದ 1600 ಎಕರೆ ಜಾಗ ನೀಡಲಾಗಿದೆ. ಕುದುರೆಮುಖದ ಟೌನ್‌ಶಿಪ್‌ ಉಳಿಸಲು ಕ್ರಮ ವಹಿಸಬೇಕು ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಗಮನಸೆಳೆದರು.

ಕುದುರೆಮುಖದ ಟೌನ್‌ಶಿಪ್‌ನಲ್ಲಿ ಅರಣ್ಯ ತರಬೇತಿ ಕೇಂದ್ರ ಮಾಡಲು ಕ್ರಮವಹಿಸಬಹುದು ಎಂದು ಸಿ.ಟಿ.ರವಿ ಹೇಳಿದರು.

ಕುದುರೆಮುಖ ಪ್ರದೇಶದ ಖಾಸಗಿಯವರಿಗೆ ಪರಿಹಾರ ನೀಡುತ್ತಿದ್ದೇವೆ. ಮಾವಿನಕೆರೆ ಪ್ರದೇಶದಲ್ಲಿ 10 ಎಕರೆ ಜಾಗ ಮೀಸಲಿಡಲಾಗಿದೆ. 72 ಕಾರ್ಮಿಕ ಕುಟುಂಬಗಳಿಗೆ ಪರಿಹಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರ.

ಮೂಢನಂಬಿಕೆಗೆ ಹೆದರಿ ಈಚೆಗೆ ಊರು ತೊರೆದಿದ್ದ ನರಸಿಂಹರಾಜಪುರ ತಾಲ್ಲೂಕಿನ ಸಿಗುವಾನಿ ಗ್ರಾಮದ ಹಾವುಗೊಲ್ಲ ಸಮುದಾಯದವರಿಗೆ ನಾಗಲಾಪುರದ ಸರ್ವೆ ನಂ 189ರಲ್ಲಿ ನಿವೇಶನಕ್ಕೆ ಜಾಗ ಮಂಜೂರು ಮಾಡಲು ಕ್ರಮ ವಹಿಸಬೇಕು. ಅರಣ್ಯ ಇಲಾಖೆಯವರು ಇದಕ್ಕೆ ಅಡ್ಡಿಪಡಿಸಬಾರದು ಎಂದು ರಾಜೇಗೌಡ ತಿಳಿಸಿದು.

ಫಸಲ್‌ ಬಿಮಾ ಯೋಜನೆಯಡಿ ರೈತರು ವಿಮಾ ಕಂತು ಪಾವತಿಸಿದ್ದಾರೆ. ಬಹಳಷ್ಟು ರೈತರಿಗೆ ವಿಮಾ ಮೊತ್ತ ಈವರೆಗೆ ಪಾವತಿಯಾಗಿಲ್ಲ ಎಂದು ವಿಧಾನಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ ಹೇಳಿದರು.

ಜಿಲ್ಲಾಪಂಚಾಯಿತಿ ಉಪಾಧ್ಯಕ್ಷ ಕೆ.ಆರ್‌.ಆನಂದಪ್ಪ ಇದ್ದರು.

ಚರ್ಚೆಯಾದ ವಿಚಾರಗಳು, ವ್ಯಕ್ತವಾದ ಸಲಹೆಗಳು

ಕಡೂರು ತಾಲ್ಲೂಕಿನಲ್ಲಿ ನೀರು ಪೂರೈಕೆ ಟ್ಯಾಂಕರ್‌ ಬಾಡಿಗೆ ಬಾಕಿ ₹ 2.75 ಕೋಟಿ ಪಾವತಿಸಬೇಕು
ರಸ್ತೆ ಪಕ್ಕದಲ್ಲಿ ಗಿಡ ನೆಡಲು ಅಂತರ ನಿಗದಿಪಡಿಸಬೇಕು
ಮೂಡಿಗೆರೆ ಭಾಗದಲ್ಲಿ ಆನೆ ಸಮಸ್ಯೆ ಸಮಸ್ಯೆ ಪರಿಹಾರಕ್ಕೆ ರೈಲ್ವೆ ಕಂಬಿ ತಡೆಗೋಡೆ ನಿರ್ಮಿಸಬೇಕು
ಫಸಲ್‌ ಬಿಮಾ ಯೋಜನೆಯ ವಿಮೆ ಮೊತ್ತ ರೈತರ ಖಾತೆಗೆ ಪಾವತಿಸಲು ಕ್ರಮವಹಿಸಬೇಕು
ಮಳೆಗಾಲ ಮುಗಿಯುವವರೆಗೆ ಟಿಂಬರ್‌ ಲಾರಿ ಸಂಚಾರ ನಿರ್ಬಂಧಿಸಬೇಕು
ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ವಹಿಸಬೇಕು
ಒಳಚರಂಡಿ, ಅಮೃತ್‌ ಯೋಜನೆ ಕಾಮಗಾರಿಗಳನ್ನು ಜಿಲ್ಲಾಧಿಕಾರಿ ವಾರಕ್ಕೊಮ್ಮೆ ಪರಿಶೀಲಿಸಬೇಕು
ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಸಲು ಕ್ರಮ ವಹಿಸಬೇಕು
ಅಂತ್ಯಸಂಸ್ಕಾರದ ನೆರವಿನ ಬಾಬ್ತಿನ ಅನುದಾನ ಬಿಡುಗಡೆ ಮಾಡಿಸಬೇಕು
ಎಪಿಎಂಸಿ ಪ್ರಾಂಗಣದಲ್ಲಿ ರೈತರಿಂದ ಕಮಿಷನ್‌ ವಸೂಲಿ ಮಾಡುವುದಕ್ಕೆ ಕಡಿವಾಣ ಹಾಕಬೇಕು
ರೈತರಿಂದ ಕಮಿಷನ್‌ ವಸೂಲಿ ಮಾಡುವ ದಳ್ಳಾಳಿಗಳ ಪರವಾನಗಿ ರದ್ದುಗೊಳಿಸಬೇಕು
ಅತಿವೃಷ್ಟಿ ಪ್ರದೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಪ್ರವಾಸ ಮಾಡಿ ಪರಿಶೀಲಿಸಬೇಕು
ಮಳಲೂರು ಏತ ನೀರಾವರಿ ಯೋಜನೆಗಿರುವ ತೊಡಕು ನಿವಾರಿಸಿ, ತ್ವರಿತವಾಗಿ ಕಾಮಗಾರಿ ಮುಗಿಸಬೇಕು
ಕರಗಡ ಯೋಜನೆ ಕಾಮಗಾರಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಸಣ್ಣ ನಿರಾವರಿ ಸಚಿವರಿಂದ ಪರಿಶೀಲನೆ
ಶಾಲೆಗಳ ದುರಸ್ತಿಗೆ ಅನುದಾನ ಒದಗಿಸಬೇಕು
ಹಾಲಿಗೆ ರಸಾಯಿನಿಕ ಮಿಶ್ರಣ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಬೇಕು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !