ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರೀಕೆರೆಯಲ್ಲಿದ್ದ ಮಾನಸಿಕ ಅಸ್ವಸ್ಥ ಮರಳಿ ಮನೆಗೆ: ಸಂಪರ್ಕ ಕೊಂಡಿಯಾದ ಫೇಸ್‌ಬುಕ್‌

ತರೀಕೆರೆಯಲ್ಲಿದ್ದ ಮಾನಸಿಕ ಅಸ್ವಸ್ಥ ಮರಳಿ ಮನೆಗೆ
Last Updated 23 ನವೆಂಬರ್ 2019, 19:45 IST
ಅಕ್ಷರ ಗಾತ್ರ

ತರೀಕೆರೆ: ಸಾಮಾಜಿಕ ಜಾಲತಾಣಗಳ ಬಳಕೆಯ ಕುರಿತು ಪರ ಮತ್ತು ವಿರೋಧ ಚರ್ಚೆಗಳು ನಡೆಯುತ್ತಲೇ ಇದೆ. ಈ ಮಧ್ಯೆ ಕುಟುಂಬದ ಸಂಬಂಧ ಕಳೆದುಕೊಂಡು ತರೀಕೆರೆಯಲ್ಲಿ ಓಡಾಡುತ್ತಿದ್ದ ಮಾನಸಿಕ ಅಸ್ವಸ್ಥ ಯುವಕ ‘ಫೇಸ್‌ಬುಕ್‌’ನ ಕೃಪೆಯಿಂದ ಕೇರಳದಲ್ಲಿರುವ ತನ್ನ ಕುಟುಂಬದ ತೆಕ್ಕೆಗೆ ಸೇರಿದ್ದಾನೆ.

ನಾಲ್ಕು ತಿಂಗಳಿನಿಂದ ಈ ಯುವಕ ಕೊಳೆತು ನಾರುತ್ತಿದ್ದ ಅಂಗಿ ಧರಿಸಿ, ಗಡ್ಡ ಬಿಟ್ಟುಕೊಂಡು ಪಟ್ಟಣದ ಸಾಲುಮರದಮ್ಮ ದೇವಸ್ಥಾನದ ಕಟ್ಟೆಯ ಮೇಲೆ ಮಲಗಿ ದಿನ ದೂಡುತ್ತಿದ್ದ. ಕೆಲವು ಅಂಗಡಿಗಳಲ್ಲಿ ಬ್ರೆಡ್ ಮತ್ತು ಟೀ ಕೇಳಿ ಪಡೆಯುತ್ತಿದ್ದ. ಯಾವಾಗಲೂ ಒಬ್ಬನೇ ನಗುವುದು, ಮಲೆಯಾಳಂ ಭಾಷೆಯಲ್ಲಿ ಮಾತನಾಡುವುದು ಇವನ ಸ್ವಭಾವವಾಗಿತ್ತು.

ಇದನ್ನು ಗಮನಿಸಿದ ಮಾರಿ ಗದ್ದುಗೆ ವೃತ್ತದ ಯುವಕರಾದ ಮೋಹನ್, ಶ್ರೀನಿವಾಸ್ ಬಾಲಾಜಿ, ಲೋಕೇಶ್, ಸೈಬರ್ ಶಿವು, ನವೀನ್ ಹಾಗೂ ಗೆಳೆಯರು ಸೇರಿ ಮಲೆಯಾಳಂ ಭಾಷೆ ಮಾತಾಡುವ ಕೇರಳದ ಅಡಿಕೆ ವ್ಯಾಪಾರಿ ಪಟ್ಟಣದಲ್ಲಿರುವ ಮಸೂದ್‌ಗೆ ವಿಷಯ ತಿಳಿಸಿದ್ದಾರೆ. ಯುವಕನೊಂದಿಗೆ ಮಾತನಾಡಿದ ಮಸೂದ್ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಯುವಕನ ಪೋಟೊ ಹಾಕಿ ಮಾಹಿತಿ ಹಾಕಿದ್ದಾರೆ. ಕೇರಳದ ಸ್ನೇಹಿತರ ಮೂಲಕ ಮಾಹಿತಿ ಪಡೆದ ಯುವಕನ ಕುಟುಂಬದ ಸದಸ್ಯರು ತರೀಕೆರೆ ಶನಿವಾರ ಬಂದು ಆತನನ್ನು ಕರೆದೊಯ್ದಿದ್ದಾರೆ.

ಇತ್ತೀಚೆಗೆ ಲೋಕಸಭೆ ಚುನಾವಣೆಯಲ್ಲಿ ದೇಶದ ಗಮನ ಸೆಳೆದಿದ್ದ ಕೇರಳ ರಾಜ್ಯದ ವಯನಾಡ್ ಜಿಲ್ಲೆಯ ಪಾನಮರಂ ಪಟ್ಟಣದ ಪ್ರಸಾದ್ ಎಂಬ ಯುವಕನೇ ಆ ಮಾನಸಿಕ ಅಸ್ವಸ್ಥ ಎಂದು ಆತನ ಸಹೋದರ ಪ್ರದೀಪ್ ತಿಳಿಸಿದ್ದಾರೆ.

‘ಪದವೀಧರನಾಗಿದ್ದ ಪ್ರಸಾದ್ ಕಾಲೇಜು ದಿನಗಳಲ್ಲಿ ಉತ್ತಮ ಸಾಹಿತಿಯಾಗಿದ್ದ. ಬುಕ್ ಸ್ಟಾಲ್ ಇಟ್ಟುಕೊಂಡಿದ್ದ. ಡಿಸೇಲ್ ಮೆಕಾನಿಕ್ ಕೆಲಸವನ್ನು ಸಹ ಮಾಡಿದ್ದ. 8 ವರ್ಷಗಳ ಹಿಂದೆ ಮಾನಸಿಕ ಅಸ್ವಸ್ಥತೆಯಿಂದಾಗಿ ಚಿಕಿತ್ಸೆಯ ಸಮಯದಲ್ಲಿ ತಪ್ಪಿಸಿಕೊಂಡಿದ್ದಾನೆ. ಆತನನ್ನು ಹುಡುಕಿ ಸಾಕಾಗಿತ್ತು. ಆತ ಬದುಕಿರುವ ಬಗ್ಗೆ ನಮಗೆ ಅನುಮಾನವಿತ್ತು’ ಎಂದು ‘ಪ್ರಜಾವಾಣಿ’ ತಿಳಿಸಿದ್ದಾರೆ.

ತನ್ನ ಸಹೋದರ ಹಾಗೂ ಕಾಲೇಜಿನ ಸ್ನೇಹಿತರನ್ನು ಪ್ರಸಾದ್ ಗುರುತಿಸಿದ್ದಾನೆ. ಅಸ್ವಸ್ಥ ಸಹೋದರನ ಪತ್ತೆಗೆ ನೆರವಾದ ಹುಡುಗರನ್ನು ಕೃತಜ್ಞತೆಯಿಂದ ನೆನೆಸುವುದಾಗಿ ತಿಳಿಸಿದ ಪ್ರದೀಪ್, ನಮ್ಮ ತಾಯಿ ಮಗನನ್ನು ಅಪ್ಪಿಕೊಳ್ಳಲು ದಾರಿ ಕಾಯುತ್ತಿದ್ದಾಳೆ ಎಂದು ಆನಂದ ಭಾಷ್ಪವನ್ನು ಸುರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT