ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಕುಸಿತ: ಕೋವಿಯಿಂದ ಗುಂಡು ಹಾರಿಸಿಕೊಂಡು ಕೃಷಿಕ ಆತ್ಮಹತ್ಯೆ

Last Updated 14 ಸೆಪ್ಟೆಂಬರ್ 2019, 17:02 IST
ಅಕ್ಷರ ಗಾತ್ರ

ಕಳಸ: ಅತಿವೃಷ್ಟಿಯಿಂದ ಭೂಕುಸಿತ ಉಂಟಾಗಿ ತೋಟ ಕಳೆದುಕೊಂಡಿದ್ದ ಕಾರಗದ್ದೆಯ ಕೃಷಿಕ ಚನ್ನಪ್ಪ ಗೌಡ (62) ತಮ್ಮ ಕೋವಿಯಿಂದ ಗುಂಡು ಹಾರಿಸಿಕೊಂಡು ಶನಿವಾರ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೋವಿಯನ್ನು ಎದೆಗೆ ಇರಿಸಿಕೊಂಡು ಕಾಲಿನಿಂದ ಟ್ರಿಗರ್ ಒತ್ತಿ ಗುಂಡು ಹಾರಿಸಿಕೊಂಡಿದ್ದಾರೆ. ಗುಂಡು ಬೆನ್ನಿನಿಂದ ಹೊರಗೆ ಹಾರಿದೆ. ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಆ. 9ರಂದು ಅವರ ಕಾಫಿತೋಟದಲ್ಲಿ ಅನೇಕ ಕಡೆ ಭೂಕುಸಿತ ಸಂಭವಿಸಿತ್ತು. ಸುಮಾರು 5 ಎಕರೆ ಕಾಫಿ, ಅಡಿಕೆ, ತೋಟವನ್ನು ಅವರು ಬೆಳೆಸಿದ್ದರು. ‌ತೋಟ ಮಣ್ಣುಪಾಲು ಆದಾಗಿನಿಂದ ಮನನೊಂದಿದ್ದರು.

ಶನಿವಾರ ಬೆಳಿಗ್ಗೆ ಕೋವಿಯೊಂದಿಗೆ ತೋಟಕ್ಕೆ ತೆರಳಿದ್ದ ಅವರು, ಭೂಕುಸಿತವಾಗಿದ್ದ ಪ್ರದೇಶಗಳನ್ನೆಲ್ಲಾ ವೀಕ್ಷಿಸಿದ್ದಾರೆ. ಬಳಿಕ ಭೂಕುಸಿತವಾಗಿರುವ ಪ್ರದೇಶದಲ್ಲೇ ಗುಂಡು ಹಾರಿಸಿಕೊಂಡಿದ್ದಾರೆ.

‘ನಂಗೆ ಸರ್ಕಾರ ಏನು ಕೊಟ್ಟರೂ ಕಡಿಮೆಯೇ. ಎಷ್ಟು ಕಷ್ಟಪಟ್ಟು ತೋಟ ಮಾಡಿದ್ದೆ’ ಎಂದು ಚನ್ನಪ್ಪಗೌಡ ಪ್ರತಿದಿನವೂ ಹಲುಬುತ್ತಿದ್ದರು. ‘ನಷ್ಟಕ್ಕೆ ಸರ್ಕಾರ ಪರಿಹಾರ ನೀಡುತ್ತದೆ’ ಎಂದು ಅವರ ಪತ್ನಿ ಸಮಾಧಾನ ಮಾಡಲು ಪ್ರಯತ್ನಿಸುತ್ತಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಅವರ ಪುತ್ರ ವಾಯುಪಡೆಯಲ್ಲಿ ಉದ್ಯೋಗಿಯಾಗಿದ್ದು, ಪುತ್ರಿಗೆ ವಿವಾಹವಾಗಿದೆ.

ರಾಜ್ಯ ಸರ್ಕಾರದಿಂದ ₹5 ಲಕ್ಷ ಪರಿಹಾರ

ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡ ರೈತ ಚನ್ನಪ್ಪಗೌಡ ಅವರ ಕುಟುಂಬಕ್ಕೆ ₹5 ಲಕ್ಷ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಕಟಿಸಿದ್ದಾರೆ.

ಸಾಲದ ಕಾರಣಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ಸಾಲ ಇದ್ದರೆ ಅದನ್ನು ತೀರಿಸಲು ಪರ್ಯಾಯ ಮಾರ್ಗವನ್ನು ಹುಡುಕೋಣ. ಆದರೆ, ಯಾವುದೇ ಕಾರಣಕ್ಕೂ ಜೀವ ಕಳೆದುಕೊಳ್ಳುವ ಬಗ್ಗೆ ಯೋಚನೆ ಮಾಡಬಾರದು ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT