ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ನೀತಿಯಿಂದ ರೈತರ ಬದುಕು ನಾಶ

ಮೂಡಿಗೆರೆಯಲ್ಲಿ ಜೆಡಿಎಸ್‌ ಪ್ರತಿಭಟನೆ–ಮುಖಂಡ ಬಿ.ಬಿ.ನಿಂಗಯ್ಯ ಆಕ್ರೋಶ
Last Updated 17 ಸೆಪ್ಟೆಂಬರ್ 2022, 5:36 IST
ಅಕ್ಷರ ಗಾತ್ರ

ಮೂಡಿಗೆರೆ: ‘ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಆಡಳಿತ ಮಾಡಲು ಬರುವುದಿಲ್ಲ. ಅವೈಜ್ಞಾನಿಕ ಹಾಗೂ ರೈತ ವಿರೋಧಿ ಯೋಜನೆಗಳನ್ನು ಜಾರಿ ಮಾಡುವ ಮೂಲಕ ರೈತರ ಬದುಕನ್ನೇ ಸರ್ವ ನಾಶ ಮಾಡಲು ಮುಂದಾಗಿದೆ’ ಎಂದು ಮಾಜಿ ಸಚಿವ ಬಿ.ಬಿ ನಿಂಗಯ್ಯ ಆರೋಪಿಸಿದರು.

ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಶುಕ್ರವಾರ ಜೆಡಿಎಸ್‌ನಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ತಾಲ್ಲೂಕಿನಲ್ಲಿ ಹಲವು ಜ್ವಲಂತ ಸಮಸ್ಯೆಗಳಿವೆ. ಇದರ ನಡುವೆ ಕಾಡುಪ್ರಾಣಿಗಳ ಹಾವಳಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಊರುಬಗೆ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಅರ್ಜುನ ಎಂಬುವರು ಹತ್ಯೆಯಾದ ಬಳಿಕ ಜನರು ರೊಚ್ಚಿಗೆದಿದ್ದಾರೆಂದು ಸರ್ಕಾರ ಕೇವಲ ಭೈರ ಎಂಬ ಒಂದು ಕಾಡಾನೆಯನ್ನು ಹಿಡಿಯಲು ಆದೇಶ ನೀಡಿ ಜನರ ಕಣ್ಣೊರೆಸುವ ಕೆಲಸ ಮಾಡಿದೆ. ಒಂದು ಕಾಡಾನೆ ಹಿಡಿಯುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ, ತಾಲ್ಲೂಕಿನಲ್ಲಿ ಭೈರ ಸೇರಿದಂತೆ ಮೂರು ಕಾಡಾನೆಗಳಿವೆ. ಅವುಗಳನ್ನು ಹಿಡಿಯುವ ಮೂಲಕ ಇಲ್ಲಿ ಬೀಡು ಬಿಟ್ಟಿರುವ ಎಲ್ಲಾ ಕಾಡಾನೆಗಳನ್ನು ಸ್ಥಳಾಂತರಿಸಬೇಕು. ತಾಲ್ಲೂಕಿನಲ್ಲಿರುವ ಹುಲಿ ಹಾವಳಿಯನ್ನು ಸಹ ತಡೆಯಬೇಕು’ ಎಂದು ಒತ್ತಾಯಿಸಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಂಜನ್ ಅಜಿತ್ ಕುಮಾರ್ ಮಾತನಾಡಿ, ‘ಅತಿವೃಷ್ಟಿಯಿಂದ ಕೇವಲ ತೋಟಗಾರಿಕೆ ಹಾಗೂ ಕೃಷಿ ಇಲಾಖೆಯಿಂದ ವರದಿ ಪಡೆದು ಅವೈಜ್ಞಾನಿಕವಾಗಿ ಪರಿಹಾರ ಕೊಡಲು ಮುಂದಾಗಿದ್ದಾರೆ. ಕಾಫಿ ಬೆಳೆ ಶೇ 80ರಷ್ಟು ಹಾನಿಯಾಗಿದೆ. ಆದರೆ,
ಕಾಫಿ ಬೋರ್ಡ್‌ನಿಂದ ಕೇವಲ ಶೇ 18ರಷ್ಟು ಕಾಫಿ ಬೆಳೆ ನಷ್ಟವಾಗಿದೆ ಎಂದು ವರದಿ ನೀಡಲಾಗಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನಾಪತ್ತೆಯಾಗಿದ್ದಾರೆ. ಅವರಿಗೆ ರೈತರ ಮೇಲೆ ಕಿಂಚಿತ್ತು ಕಾಳಜಿ ಇದ್ದರೆ ಬೆಳೆ ನಷ್ಟದ ವರದಿಯನ್ನು ಪುನರ್ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಡಿ.ಜೆ ಸುರೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಿಖಿಲ್‍ ಚಕ್ರವರ್ತಿ, ಮುಖಂಡರಾದ ಗಬ್ಬಳ್ಳಿ ಚಂದ್ರೇಗೌಡ, ಲೋಹಿತ್ ಬಿದರಹಳ್ಳಿ, ಸುಧಾ ಮಂಜುನಾಥ್, ಲಕ್ಷ್ಮಣ್ ಹುಣಸೆಮಕ್ಕಿ, ನೀಲಯ್ಯಕಳಸ, ಬಿ.ಎಂ ಭೈರೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT