ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟಕ್‌ ಸಮಿತಿ ಶಿಫಾರಸಿಗೆ ಸಮ್ಮತಿ

Last Updated 28 ಮಾರ್ಚ್ 2018, 19:32 IST
ಅಕ್ಷರ ಗಾತ್ರ

ಮುಂಬೈ: ಕಾರ್ಪೊರೇಟ್‌ ಆಡಳಿತ ಸುಧಾರಣೆ ಮತ್ತು ಮ್ಯೂಚುವಲ್‌ ಫಂಡ್‌ ಯೋಜನೆಗಳಲ್ಲಿ ಹೂಡಿಕೆದಾರರ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಹಲವಾರು ಕ್ರಮಗಳನ್ನು ಪ್ರಕಟಿಸಿದೆ.

ಷೇರುಪೇಟೆ ವಹಿವಾಟಿನ ಸ್ವರೂಪದಲ್ಲಿ ಬದಲಾವಣೆ ತರಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಲು ರಚಿಸಲಾಗಿದ್ದ ಉದಯ್‌ ಕೋಟಕ್‌ ಸಮಿತಿ ನೀಡಿದ್ದ ಶಿಫಾರಸುಗಳನ್ನು ‘ಸೆಬಿ’ ಭಾಗಶಃ ಅಂಗೀಕರಿಸಿದೆ. ಮ್ಯೂಚುವಲ್‌ ಫಂಡ್‌ ಯೋಜನೆಗಳ ಮೇಲಿನ ಹೆಚ್ಚುವರಿ ವೆಚ್ಚದ ಶುಲ್ಕವನ್ನು ಶೇ 0.20 ರಿಂದ ಶೇ 0.5ಕ್ಕೆ ತಗ್ಗಿಸುವ ನಿರ್ಧಾರ ಕೈಗೊಂಡಿದೆ.

ಷೇರುಪೇಟೆಯಲ್ಲಿ ವ್ಯವಹರಿಸುವ ಸಂಸ್ಥೆಗಳಿಗೆ ಅಗತ್ಯವಾದ ದುಬಾರಿ ಸಂಪರ್ಕ ಜಾಲದ ಸೇವೆಯನ್ನು ಬಾಡಿಗೆ ನೀಡುವ, ಈಕ್ವಿಟಿ ಡೆರಿವೇಟಿವ್‌ ಮಾರುಕಟ್ಟೆ ಬಲಪಡಿಸುವ ಮತ್ತು ಸ್ವಾಧೀನ ನಿಯಮಗಳಿಗೆ ತಿದ್ದುಪಡಿ ತರುವ ಶಿಫಾರಸುಗಳನ್ನು ಅಂಗೀಕರಿಸಿದೆ.

ಸಮಿತಿಯ ಒಟ್ಟು 80 ಶಿಫಾರಸುಗಳ ಪೈಕಿ, ‘ಸೆಬಿ’ 40 ಸಲಹೆಗಳನ್ನು ಯಾವುದೇ ಬದಲಾವಣೆ ಇಲ್ಲದೆ ಒಪ್ಪಿಕೊಂಡಿದೆ. ಅವುಗಳ ಪೈಕಿ – ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಉದ್ದಿಮೆ ಸಂಸ್ಥೆಗಳ ನಿರ್ದೇಶಕರ ಸಂಖ್ಯೆಯನ್ನು 2020ರ ಏಪ್ರಿಲ್‌ ವೇಳೆಗೆ ಗರಿಷ್ಠ 7ಕ್ಕೆ ಸೀಮಿತಗೊಳಿಸಲು ಸಮ್ಮತಿಸಲಾಗಿದೆ. 18 ಶಿಫಾರಸುಗಳನ್ನು ತಿರಸ್ಕರಿಸಲಾಗಿದೆ. ಬುಧವಾರ ಇಲ್ಲಿ ಸಭೆ ಸೇರಿದ್ದ ‘ಸೆಬಿ’ ಸಭೆಯಲ್ಲಿ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಹಣಕಾಸು ಮಾರುಕಟ್ಟೆಯಲ್ಲಿ ಅತ್ಯಂತ ತ್ವರಿತವಾಗಿ ನಿರ್ಧಾರ ಕೈಗೊಳ್ಳುವ ಮತ್ತು ವಹಿವಾಟು ನಡೆಸುವಾಗ ಸಂಕೀರ್ಣ ಸ್ವರೂಪದ ಗಣಿತ ಮಾದರಿ ಮತ್ತು ಸೂತ್ರಗಳನ್ನು ಬಳಸುವುದನ್ನು ಬಲಪಡಿಸಲೂ (ಅಲ್ಗೊ ಟ್ರೇಡಿಂಗ್) ‘ಸೆಬಿ’ ನಿರ್ಧರಿಸಿದೆ.

ಷೇರು ಪೇಟೆಯಲ್ಲಿ ವ್ಯವಹರಿಸುವ ಸಣ್ಣ ಪ್ರಮಾಣದ ಸಂಸ್ಥೆಗಳಿಗೆ ಅಗತ್ಯವಾದ ದುಬಾರಿ ಸಂಪರ್ಕ ಜಾಲದ ಬಾಡಿಗೆ ಸೇವೆ ಒದಗಿಸುವುದನ್ನು ಕಡ್ಡಾಯ ಮಾಡಲಾಗಿದೆ. ಕೆಲ ಸೇವೆಗಳನ್ನು ಉಚಿತವಾಗಿ ನೀಡಲೂ ನಿರ್ಧರಿಸಲಾಗಿದೆ.

ದುಬಾರಿ ವೆಚ್ಚದ ಕಾರಣಕ್ಕೆ ಷೇರುಪೇಟೆಯ ಹಲವಾರು ಸಣ್ಣ ಮತ್ತು ಮಧ್ಯಮ ಗಾತ್ರದ ಸದಸ್ಯ ಸಂಸ್ಥೆಗಳು ಇಂತಹ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ.

ಆಡಳಿತ ಸುಧಾರಣೆ: ‘ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರುವುದರಿಂದ ಕಾರ್ಪೊರೇಟ್‌ ಆಡಳಿತದ ಗುಣಮಟ್ಟ ಗಮನಾರ್ಹವಾಗಿ ಸುಧಾರಿಸಲಿದೆ. ಮ್ಯೂಚುವಲ್‌ ಫಂಡ್‌ಗಳಲ್ಲಿನ ಹೂಡಿಕೆ ಮೇಲಿನ ವೆಚ್ಚ ತಗ್ಗಿಸುವುದರಿಂದ ಈ ಉದ್ಯಮದ ಪ್ರಗತಿಗೆ ನೆರವಾಗಲಿದೆ. ಹೂಡಿಕೆದಾರರಿಗೂ ಪ್ರಯೋಜನ ಆಗಲಿದೆ’ ಎಂದು ಜಿಯೊಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಮುಖ್ಯ ಹೂಡಿಕೆ ಅಧಿಕಾರಿ ವಿ. ಕೆ. ವಿಜಯಕುಮಾರ್‌ ಹೇಳಿದ್ದಾರೆ.

*
ಉದಯ್‌ ಕೋಟಕ್‌ ಸಮಿತಿಯ ಶಿಫಾರುಗಳನ್ನು ಭಾಗಶಃ ಸ್ವೀಕರಿಸಲು ಸಮ್ಮತಿಸಲಾಗಿದೆ.
–ಅಜಯ್‌ ತ್ಯಾಗಿ, ‘ಸೆಬಿ’ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT