ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಕಿಗೆ ಆಹುತಿಯಾದ ಮನೆ

Last Updated 21 ಡಿಸೆಂಬರ್ 2021, 3:24 IST
ಅಕ್ಷರ ಗಾತ್ರ

ಕೊಪ್ಪ: ತಾಲ್ಲೂಕಿನ ಮರಿತೊಟ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿ ಹುಲುಗಾರು ಗ್ರಾಮದ ಶಾಂತಮ್ಮ ಎಂಬುವರ ಮನೆಯಲ್ಲಿ ಸೋಮವಾರ ನಸುಕಿನ ಜಾವ ಅಗ್ನಿ ಅವಘಡ ಸಂಭವಿಸಿದೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಘಟನೆ ಸಂಭವಿಸಿದೆ. ಚಾವಣಿ ಸುಟ್ಟು ಕರಕಲಾಗಿದೆ, ಹೆಂಚುಗಳು ಪುಡಿಯಾಗಿವೆ. ಬಟ್ಟೆ, ಬೆಳ್ಳಿ, ಬಂಗಾರದ ಒಡವೆ, ನಗದು ಹಣ ಸಹಿತ ದಾಖಲೆ ಪತ್ರಗಳು ಕೂಡ ಬೆಂಕಿಗೆ ಆಹುತಿಯಾಗಿವೆ.

ಕೂಲಿ ಕೆಲಸವನ್ನು ನೆಚ್ಚಿಕೊಂಡಿರುವ ಶಾಂತಮ್ಮ ಅವರು ಮನೆಯಲ್ಲಿ ಮಗ, ಸೊಸೆ, ಚಿಕ್ಕ ಮಗುವಿನೊಂದಿಗೆ ವಾಸವಿದ್ದಾರೆ.

‘ಮಗ, ಸೊಸೆ ಊರಲ್ಲಿ ಇರಲಿಲ್ಲ. ನಮ್ಮ ಮನೆ ಸಮೀಪದಲ್ಲಿ ಇರುವ ಮಗಳ ಮನೆಯಲ್ಲಿ ನಾನು ಉಳಿದುಕೊಂಡಿದ್ದೆ. ರಾತ್ರಿ 3 ಗಂಟೆ ಹೊತ್ತಿಗೆ ಬೆಂಕಿ ಉರಿಯುತ್ತಿರುವುದು ಕಂಡು ಬಂತು. ಒಡವೆ, ಹಣ, ಬಟ್ಟೆ ಸುಟ್ಟು ಹೋಗಿವೆ. ಉಟ್ಟ ಬಟ್ಟೆ ಹೊರತುಪಡಿಸಿ, ಏನೂ ಉಳಿದಿಲ್ಲ, ಏನು ಮಾಡಬೇಕೆಂದು ದಿಕ್ಕು ತೋಚದ ಸ್ಥಿತಿಯಲ್ಲಿದ್ದೇನೆ’ ಎಂದು ಶಾಂತಮ್ಮ ಗದ್ಗದಿತರಾದರು.

‘ರಾತ್ರಿ ವೇಳೆ ಬೆಂಕಿ ಕಾಣಿಸಿ ಕೊಂಡಿತು. ತಕ್ಷಣವೇ ಗ್ರಾಮಸ್ಥರು ಸೇರಿ ಬೆಂಕಿ ನಂದಿಸಿದೆವು. ಗ್ಯಾಸ್ ಸಿಲಿಂಡರ್ ಸ್ಫೋಟ ಗೊಂಡಿರಬಹುದೆಂದು ಭಯ ಗೊಂಡಿದ್ದೆವು. ಆದರೆ, ಹಿಂಬದಿ ಬಾಗಿಲು ತೆರೆದು ನೋಡಿದಾಗ ಹಾಗೆ ಆಗಿರಲಿಲ್ಲ. ಬೆಂಕಿ ನಂದಿಸಿದ ಬಳಿಕ ಸಿಲಿಂಡರ್ ಹೊರ ತೆಗೆದು ದೂರದಲ್ಲಿ ಇಟ್ಟೆವು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

‘ಸ್ಥಳಕ್ಕೆ ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಿಗರು ಭೇಟಿ ನೀಡಿದ್ದಾರೆ. ಅವರ ವರದಿ ಪರಿಶೀಲಿಸಿ, ಪರಿಹಾರ ದೊರಕಿಸಿಕೊಡಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತಹಶೀಲ್ದಾರ್ ಎಚ್.ಎಸ್.ಪರಮೇಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT