ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಪಾಯದಲ್ಲೇ ‘ರಾಷ್ಟ್ರಧ್ವಜಾರೋಹಣ‘ಕ್ಕೆ ನಿರ್ಧಾರ

ಚನ್ನಡಲು ಭೂಕುಸಿತಕ್ಕೆ 3 ವರ್ಷ : ಸಿಗದ ಸೂರು
Last Updated 10 ಆಗಸ್ಟ್ 2022, 4:31 IST
ಅಕ್ಷರ ಗಾತ್ರ

ಕಳಸ (ಚಿಕ್ಕಮಗಳೂರು): ತಾಲ್ಲೂಕಿನ ಚನ್ನಡಲಿನಲ್ಲಿ ಭೂ ಕುಸಿತ ಸಂಭವಿಸಿ ಮೂರು ವರ್ಷ ಕಳೆದಿದೆ. ಸರ್ಕಾರ ಇನ್ನೂ ತಮಗೆ ಸೂರು ನಿರ್ಮಿಸಿಕೊಟ್ಟಿಲ್ಲ ಎಂಬ ಕಾರಣಕ್ಕೆ ಸಂತ್ರಸ್ತರು ಇದೇ 13ರಿಂದ 15ರ ವರೆಗೆ ‘ಹರ್‌ ಘರ್ ತಿರಂಗಾ’ ಭಾಗವಾಗಿ, ತಮ್ಮ ಮನೆಗೆ ಹಾಕಿದ ಅಡಿಪಾಯದಲ್ಲೇ ರಾಷ್ಟ್ರಧ್ವಜ ಹಾರಿಸಲು ನಿರ್ಧರಿಸಿದ್ದಾರೆ.

2019ರಆಗಸ್ಟ್ 9ರಂದು ಹಿರೇಬೈಲು ಆಸುಪಾಸಿನಲ್ಲಿ ಮೇಘಸ್ಫೋಟ ಸಂಭವಿಸಿ ಚನ್ನಡಲಿನಲ್ಲಿ ಭೂಕುಸಿತವಾಗಿತ್ತು. ಸಂತೋಷ್ ಎಂಬ ಯುವಕ ಸಾವನ್ನಪ್ಪಿದ್ದರು.

‘ಇಡೀ ಚನ್ನಡಲು ಗ್ರಾಮವನ್ನು ಸ್ಥಳಾಂತರ ಮಾಡುತ್ತೇವೆ. ಪ್ರತಿ ಮನೆಗೆ ₹5 ಲಕ್ಷ ಪರಿಹಾರ, ಮನೆ ಕಟ್ಟುವವರೆಗೂ ಬಾಡಿಗೆ ಹಣ ಪಾವತಿಸುತ್ತೇವೆ ಎಂದು ಅಂದಿನ ಜಿಲ್ಲಾಧಿಕಾರಿ ಭರವಸೆ ನೀಡಿದ್ದರು. ಆದರೆ, ಅವು ಈ ವರೆಗೂ ಈಡೇರಿಲ್ಲ’ ಎಂಬುದು ಸಂತ್ರಸ್ತರ ದೂರು.

16 ಸಂತ್ರಸ್ತರಿಗೆ ಕಳಸ ಸಮೀಪದ ಕುಂಬಳಡಿಕೆಯಲ್ಲಿ ಜಿಲ್ಲಾಡಳಿತ ನಿವೇಶನದ ಜಾಗ ತೋರಿಸಿತ್ತು. ಆದರೆ, ತಮ್ಮ ಊರಿನಿಂದ 15 ಕಿ.ಮೀ ದೂರದ ಈ ನಿವೇಶನ ಬೇಡ ಎಂದು ಸಂತ್ರಸ್ತರು ನಿರಾಕರಿಸಿದ್ದರು. ಚನ್ನಡಲಿಗೆ ಸಮೀಪದ ಓಡಿನಕುಡಿಗೆಯಲ್ಲಿ ನಿವೇಶನ ನೀಡಬೇಕು ಎಂದು ಪಟ್ಟುಹಿಡಿದಿದ್ದರು. ಅಲ್ಲಿ 2 ಎಕರೆ 20 ಗುಂಟೆ ಭೂಮಿಯನ್ನು ಸಂತ್ರಸ್ತರಿಗೆ ಮಂಜೂರು ಮಾಡುವಲ್ಲಿ ಶಾಸಕ ಎಂ.ಪಿ.ಕುಮಾರಸ್ವಾಮಿ ನೆರವಾಗಿದ್ದರು.
ಈ ವೇಳೆಗೆ ಎರಡು ವರ್ಷ ಕಳೆದಿತ್ತು.

‘ಕಳಸ ತಾಲ್ಲೂಕು ಕಚೇರಿ ಮುಂದೆ ಮುಖಂಡ ರವಿ ರೈ ನೇತೃತ್ವದಲ್ಲಿ ಅನಿರ್ದಿಷ್ಟ ಧರಣಿ ನಡೆಸಿದ್ದೆವು. ಮೂಡಿಗೆರೆ ತಹಶೀಲ್ದಾರ್ ಧರಣಿ ಸ್ಥಳಕ್ಕೆ ಬಂದು ಓಡಿನಕುಡಿಗೆಯಲ್ಲಿ ನಿವೇಶನ ಕೊಡುತ್ತೇವೆ. ಮನೆ ಅಡಿಪಾಯ ಮಾಡಿಕೊಳ್ಳಿ, ಹಕ್ಕು ಪತ್ರವು ರಾಜೀವ್‌ ಗಾಂಧಿ ವಸತಿ ನಿಗಮದಿಂದ ಬರುತ್ತದೆ. ಮನೆ ನಿರ್ಮಾಣಕ್ಕೆ ಅನುದಾನ ಸಿಗುತ್ತದೆ ಎಂಬ ಭರವಸೆ ನೀಡಿದ್ದರು. 16 ಮನೆಗಳ ಅಡಿಪಾಯ ಒಂದು ತಿಂಗಳಲ್ಲಿ ತರಾತುರಿಯಲ್ಲಿ ಮಾಡಿಕೊಂಡಿದ್ದೇವೆ. ನಮ್ಮ ಹೆಸರಿಗೆ ಇನ್ನೂ ಹಕ್ಕುಪತ್ರ ಬಾರದ ಕಾರಣ ಜಿಪಿಎಸ್ ಮಾಡಲು ತಾಂತ್ರಿಕ ತೊಂದರೆ ಇದೆ ಎಂದು ಇಡಕಿಣಿ ಪಂಚಾಯಿತಿ ಅಧಿಕಾರಿ ತಿಳಿಸಿದ್ದಾರೆ’ ಎಂದು ಸಂತ್ರಸ್ತ ಅವಿನಾಶ್‌ ಹೇಳಿದರು.

‘ನಮಗೆ ಇನ್ನೂ ನಿವೇಶನದ ಹಕ್ಕು ಪತ್ರ ಕೊಟ್ಟಿಲ್ಲ. ಸೂರು ನಿರ್ಮಿಸಲು ಆಗಿಲ್ಲ. ಮನೆ ಇಲ್ಲದ ಕಾರಣ ಅಡಿಪಾಯದ ಮೇಲೇ ಧ್ವಜಾರೋಹಣ ಮಾಡುತ್ತೇವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT