ಗುರುವಾರ , ಜೂಲೈ 9, 2020
23 °C
ಅತಿವೃಷ್ಟಿಯಿಂದ ಮನೆ, ಕೃಷಿಗೆ ಹಾನಿ– ಈಡೇರದ ಸರ್ಕಾರದ ಭರವಸೆ

ಚಿಕ್ಕಮಗಳೂರು| ಪರ್ಯಾಯ ಜಮೀನು ಸಿಗದೆ ನೆರೆ ಸಂತ್ರಸ್ತರ ಪರದಾಟ

ಅನಿಲ್‍ಮೊಂತೆರೊ Updated:

ಅಕ್ಷರ ಗಾತ್ರ : | |

Prajavani

ಕೊಟ್ಟಿಗೆಹಾರ: ಅತಿವೃಷ್ಟಿಯಿಂದ ಹೋದ ವರ್ಷ ಮಲೆನಾಡಿನಲ್ಲಿ ಮನೆ, ಕೃಷಿ ಜಮೀನು ಕಳೆದುಕೊಂಡ ಕುಟುಂಬ ಗಳ ಬದುಕು ಇನ್ನೂ ಅತಂತ್ರವಾಗುತ್ತಿದೆ. ಕೊಟ್ಟಿಗೆಹಾರ ಸಮೀಪದ ಮಲೆಮನೆ ಗ್ರಾಮದ ನಿರಾಶ್ರಿತರು ಇನ್ನೂ ಬಾಡಿಗೆ ಮನೆಯಲ್ಲಿಯೇ ಆಶ್ರಯ ಪಡೆದಿದ್ದಾರೆ. ಸಂತ್ರಸ್ತರಿಗೆ ವಸತಿ, ಜಮೀನು ಕಲ್ಪಿಸುವುದಾಗಿ ಸರ್ಕಾರ ನೀಡಿದ್ದ ಭರವಸೆ ಈಡೇರುವ ಲಕ್ಷಣ ಕಾಣುತ್ತಿಲ್ಲ ಎಂದು ಸಂತ್ರಸ್ತರ ಅಳಲು ತೋಡಿಕೊಂಡಿದ್ದಾರೆ.

ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿಯ ನೆರೆ ಪೀಡಿತ ಗ್ರಾಮ ಮಲೆಮನೆಯಲ್ಲಿ ಅತಿವೃಷ್ಟಿಯಿಂದ 5 ಕುಟುಂಬಗಳ ಮನೆ, ಆಸ್ತಿಗೆ ಸಂಪೂರ್ಣ ಹಾನಿಯಾಗಿತ್ತು. ಸರ್ಕಾರದ ಹಾಗೂ ಜಿಲ್ಲಾಡಳಿತದ ಭರವಸೆಯ ನೆರಳಿನಲ್ಲಿ ಕೆಲವರು ಬಾಡಿಗೆ ಮನೆಯಲ್ಲಿ ಜೀವನ ಕಳೆಯುತ್ತಿದ್ದಾರೆ. ನಿರಾಶ್ರಿತರು ಬಾಡಿಗೆ ಮನೆಯಲ್ಲಿ ಉಳಿದರೆ ಬಾಡಿಗೆ ಹಣ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಹಾಗಾಗಿ, ಮಲೆಮನೆಯ ನಿರಾಶ್ರಿತರು ಬಾಡಿಗೆ ಮನೆಯ ದಾರಿ ಹಿಡಿದು ಜೀವನ ಸಾಗಿಸುತ್ತಿದ್ದಾರೆ. ಆದರೆ, ಸರ್ಕಾರ ಮಲೆಮನೆ ನಿರಾಶ್ರಿತರಿಗೆ ಬಾಡಿಗೆ ಮನೆಯಲ್ಲಿ 10 ತಿಂಗಳು ನಿಂತರೂ ಕೇವಲ 5 ತಿಂಗಳ ಬಾಡಿಗೆ ತಲಾ ₹ 5 ಸಾವಿರ ಮಾತ್ರ ನೀಡಿ ಕೈತೊಳೆದುಕೊಂಡಿದೆ ಎಂದು ಆರೋಪಿಸಿದ್ದಾರೆ.

ಜಾವಳಿಯ ಮಲೆಮನೆ ಗ್ರಾಮದಲ್ಲಿ ಮನೆ, ಆಸ್ತಿ ಪಾಸ್ತಿ, ಜಮೀನು ಕಳೆದುಕೊಂಡ ನಿರಾಶ್ರಿತರಿಗೆ ಸರ್ಕಾರ ಪರ್ಯಾಯ ಜಮೀನು ನೀಡುವುದಾಗಿ ಭರವಸೆ ನೀಡಿತ್ತು. ಆದರೆ, 10 ತಿಂಗಳಾದರೂ ಯಾವುದೇ ಬದಲಿ ಜಮೀನು ನೀಡದೇ ನಿರಾಶ್ರಿತರು ಸಂಕಷ್ಟದಲ್ಲೇ ಬದುಕುತ್ತಿದ್ದಾರೆ. ಭರವಸೆಯಲ್ಲಿಯೇ ಕಾಲ ಕಳೆಯುತ್ತಿರುವ ಮಲೆಮನೆ ನಿರಾಶ್ರಿತರ ಬದುಕು ಈಗ ಮುಳ್ಳಿನ ಹಾದಿಯಾಗಿದೆ. ಮಕ್ಕಳಿಗೆ ಶಿಕ್ಷಣ ನೀಡಲು ಪರದಾಡುವಂತಾಗಿದೆ. ಬಾಡಿಗೆ ಕಟ್ಟಲು ಕೂಡ ಹೆಣಗಾಡುತ್ತಿದ್ದು, ಪರ್ಯಾಯ ಜಮೀನು ಸಿಗದೇ, ಇತ್ತ ಇತರ ವ್ಯವಸ್ಥೆಯೂ ಆಗದೇ ಸಂತ್ರಸ್ತರ ಜೀವನ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ.

ಮಲೆಮನೆ ಸಂತ್ರಸ್ಥರ ಸಮಸ್ಯೆಯನ್ನು ಗಂಭೀರವಾಗಿ ಗಣನೆಗೆ ತೆಗೆದುಕೊಂಡು, ನಿರಾಶ್ರಿತರಿಗೆ ಆದಷ್ಟು ಬೇಗ ಪರ್ಯಾಯ ಜಮೀನು ಒದಗಿಸಿ ಬದುಕು ಕಟ್ಟಕೊಳ್ಳಲು ಸರ್ಕಾರ ಮುಂದಾಗಬೇಕು ಎಂದು ಸಂತ್ರಸ್ತರು ಒತ್ತಾಯಿಸಿದ್ದಾರೆ.

‘ಮಲೆಮನೆಯಲ್ಲಿ ಈಗಾಗಲೇ ಮನೆ ಕಳೆದುಕೊಂಡ ಎಲ್ಲ ಕುಟುಂಬಗಳು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ಸುರಿದ ಮಳೆಗೆ 5 ಕುಟುಂಬಗಳಿಗೆ ತಲಾ ₹ 5 ಸಾವಿರದಂತೆ 5 ತಿಂಗಳಿಗೆ ಬಾಡಿಗೆ ಹಣ ಸರ್ಕಾರ ನೀಡಿದೆ. ಆದರೆ, ಮನೆ ಅಡಿಪಾಯಕ್ಕೆಂದು ₹ 1ಲಕ್ಷ ಖಾತೆಗೆ ಜಮಾ ಮಾಡಿದೆ. ಆದರೆ, ಪರ್ಯಾಯ ಜಮೀನು ತೋರಿಸದೇ ಮನೆ ಕಳೆದುಕೊಂಡ ನಾವು ತಳಪಾಯ ಹಾಕುವುದಾದರೂ ಎಲ್ಲಿ?. ಸರ್ಕಾರ ಈ ಬಗ್ಗೆ ವ್ಯವಸ್ಥೆ ರೂಪಿಸಬೇಕು’ ಎನ್ನುತ್ತಾರೆ ನೆರೆ ಸಂತ್ರಸ್ತ ಎಂ.ಎನ್.ಅಶ್ವತ್ಥ್‌ಗೌಡ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು