ಗುರುವಾರ , ಡಿಸೆಂಬರ್ 3, 2020
20 °C
ಭೈರಾಪುರದ ಎತ್ತಿನಭುಜ: ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ

ಭೈರಾಪುರದ ಎತ್ತಿನಭುಜ ಪ್ರವೇಶಕ್ಕೆ ಶುಲ್ಕ ವಸೂಲಿ: ಸ್ಥಳೀಯರ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂಡಿಗೆರೆ: ತಾಲ್ಲೂಕಿನ ಪ್ರಸಿದ್ಧ ಪ್ರಾಕೃತಿಕ ಪ್ರವಾಸಿ ತಾಣವಾದ ಭೈರಾಪುರದ ಎತ್ತಿನಭುಜ ಪ್ರವೇಶಕ್ಕೆ ಶುಲ್ಕ ವಿಧಿಸುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಭೈರಾಪುರದ ನಾಣ್ಯಭೈರವೇಶ್ವರ ದೇವಾಲಯದ ಸಮೀಪವಿರುವ ಪ್ರಾಕೃತಿಕ ತಾಣವು ಎತ್ತಿನಭುಜವೆಂದೇ ಪ್ರಸಿದ್ಧಿಯಾಗಿದ್ದು, ರಾಜ್ಯದ ನಾನಾ ಭಾಗಗಳಿಂದಲೂ ಈ ಪ್ರದೇಶಕ್ಕೆ ಪ್ರವಾಸಿಗರು ನಿತ್ಯ ಭೇಟಿ ನೀಡುತ್ತಾರೆ. ಅರಣ್ಯ ಇಲಾಖೆ ಹಾಗೂ ಎಕೋ ಟೂರಿಸಂ ವತಿಯಿಂದ ಎತ್ತಿನಭುಜಕ್ಕೆ ಭೇಟಿ ನೀಡುವ ಪ್ರವಾಸಿಗರಿಂದ ತಲಾ ₹ 250 ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ. ಪ್ರವಾಸಿ ತಾಣದಲ್ಲಿ ಮೂಲ ಸವಲತ್ತುಗಳನ್ನು ಕಲ್ಪಿಸಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.

ಎತ್ತಿನಭುಜಕ್ಕೆ ಸ್ಥಳೀಯರು ಭೇಟಿ ನೀಡಿದರೂ ಪ್ರವೇಶ ಶುಲ್ಕ ವಿಧಿಸುತ್ತಿದ್ದು, ಮನೆ ಬಾಗಿಲಿನಲ್ಲಿರುವ ಪ್ರವಾಸಿ ತಾಣಕ್ಕೆ ಭೇಟಿ ನೀಡಲು ಶುಲ್ಕ ಪಾವತಿಸಬೇಕಾಗಿರುವುದು ಸ್ಥಳೀಯರ ಆಕ್ರೋಶ ಉಲ್ಬಣಿಸಲು ಕಾರಣವಾಗಿದೆ.

ಈಗಾಗಲೇ ಪ್ರವೇಶ ಶುಲ್ಕ ಪಡೆಯದಂತೆ ಊರುಬಗೆ ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ‘ಪ್ರವೇಶ ಶುಲ್ಕ ರದ್ದು ಪಡಿಸಿ’ ‘ಪ್ರವೇಶ ಶುಲ್ಕದ ಲೆಕ್ಕ ಕೊಡಿ’ ಆಂದೋಲನಗಳು ಪ್ರಾರಂಭವಾಗಿವೆ.

‘ಪ್ರವಾಸಿ ತಾಣದಲ್ಲಿ ಸೌಲಭ್ಯ ಕಲ್ಪಿಸಬೇಕು, ‘ಸ್ಥಳೀಯರಿಗೆ ಪ್ರವೇಶ ಶುಲ್ಕ ವಿನಾಯ್ತಿ ನೀಡಬೇಕು’, ‘ಪ್ರವೇಶ ಶುಲ್ಕ ದರವನ್ನು ಕಡಿತಗೊಳಿಸಬೇಕು’ ಮುಂತಾದ ಬೇಡಿಕೆಗಳನ್ನು ಮುಂದಿಟ್ಟು ಕೊಂಡು ಇದೇ 1ರಂದು ಸ್ಥಳೀಯರು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಸುತ್ತಮುತ್ತಲ ಗ್ರಾಮಸ್ಥರು ಕೈ ಜೋಡಿಸಲು ಮುಂದಾಗಿದ್ದಾರೆ.

‘ಪ್ರವೇಶ ಶುಲ್ಕದಲ್ಲಿ ಬಾರಿ ಅವ್ಯವಹಾರ ನಡೆಸಲಾಗಿದೆ. ಪ್ರವಾಸಿಗರಿಗೆ ₹ 250, ವಿದ್ಯಾರ್ಥಿಗಳಿಗೆ ₹ 125 ಶುಲ್ಕ ಪಡೆಯಬೇಕಿದ್ದು, ನಿಗದಿತ ಹಣ ಪಡೆದು ಕಡಿಮೆ ಮೊತ್ತಕ್ಕೆ ರಸೀದಿ ನೀಡಲಾಗುತ್ತಿದೆ. ಗುಂಪಿನಲ್ಲಿ ಬರುವ ಪ್ರವಾಸಿಗರಿಗೆ ಪೂರ್ತಿ ಹಣ ಪಡೆದು ಕಡಿಮೆ ರಸೀದಿಯನ್ನು ನೀಡಲಾಗುತ್ತಿದೆ. ಹಣದ ಲೆಕ್ಕವನ್ನು ಕೇಳಿದರೆ ಅರಣ್ಯಾಧಿಕಾರಿಗಳು ಉಡಾಫೆಯಾಗಿ ವರ್ತಿಸುತ್ತಿದ್ದಾರೆ. ಹಳೇಯ ರಸೀದಿಗಳನ್ನು ಕೂಡ ದಿನಾಂಕ ಬದಲಿಸಿ ಪ್ರವಾಸಿಗರಿಗೆ ನೀಡುತ್ತಿದ್ದಾರೆ’ ಎಂದು ಗ್ರಾಮಸ್ಥ ಸಂದೀಪ್ ಹೊಸ್ಕೆರೆ ಆರೋಪಿಸಿದರು.

‘ಪ್ರವಾಸಿಗರಿಗೆ ಮಾಹಿತಿ ನೀಡಲು ಎಕೋ ಟೂರಿಸಂ ವತಿಯಿಂದ ಮಾರ್ಗದರ್ಶಿಗಳನ್ನು ನಿಯೋಜಿಸಲಾಗಿದ್ದು, ಅವರ ಗೌರವಧನಕ್ಕಾಗಿ ಪ್ರವೇಶ ಶುಲ್ಕ ವಿಧಿಸಲಾಗುತ್ತಿದೆ. ಪ್ರವೇಶ ಶುಲ್ಕ ಗೊಂದಲದ ಬಗ್ಗೆ ಶೀಘ್ರದಲ್ಲಿಯೇ ಹಿರಿಯ ಅಧಿಕಾರಿಗಳ ಸಭೆಯನ್ನು ಆಯೋಜಿಸಲಾಗಿದೆ’ ಎಂದು ಅರಣ್ಯಾಧಿ ಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.