ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದಿಂದ ಈವರೆಗೂ ಸಿಗದ ಪರಿಹಾರ

ಅತಿವೃಷ್ಟಿಯಿಂದ ಭಾಗಶಃ ಹಾನಿಗೊಳಗಾದ ಮನೆಗಳ ಜನರ ಸ್ಥಿತಿ ದೇವರಿಗೆ ಪ್ರೀತಿ
Last Updated 19 ಸೆಪ್ಟೆಂಬರ್ 2019, 10:13 IST
ಅಕ್ಷರ ಗಾತ್ರ

ನರಸಿಂಹರಾಜಪುರ: ತಾಲ್ಲೂಕಿನಾದ್ಯಂತ ಇತ್ತೀಚೆಗೆ ಸುರಿದ ಭಾರಿ ಮಳೆಗೆ ಹಲವು ಮನೆಗಳು ಹಾನಿಗೊಳಗಾಗಿದ್ದು, ಇದುವರೆಗೂ ಪರಿಹಾರ ಬಾರದೆ ಸಂತ್ರಸ್ತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕಿನ ಬಾಳೆಹೊನ್ನೂರು ಹೋಬಳಿ ವ್ಯಾಪ್ತಿಯ ಮಾಗುಂಡಿ, ಬನ್ನೂರು ಮತ್ತಿತರ ಗ್ರಾಮಗಳಲ್ಲಿ ಭದ್ರಾ ನದಿ ಉಕ್ಕಿ ಹರಿದ ಪರಿಣಾಮವಾಗಿ 212 ಮನೆಗಳು ಜಲಾವೃತವಾಗಿ ಬಹುತೇಕ ಮನೆಯೊಳಗಿದ್ದ ಸರಕು, ಸಾಮಗ್ರಿಗಳು ನಾಶವಾಗಿದ್ದವು. ಅಲ್ಲದೆ ಕೆಲವು ಮನೆಗಳು ಕುಸಿದು ಹೋಗಿದ್ದವು. ಇದಕ್ಕೆ ಪ್ರತಿ ಕುಟುಂಬಕ್ಕೆ ಪಾತ್ರೆಗಳನ್ನು ಕೊಳ್ಳಲು ₹3,800 ಹಾಗೂ ಇತರೆ ಉದ್ದೇಶಕ್ಕೆ ₹6,200 ಸೇರಿ ₹10 ಸಾವಿರದಂತೆ ಒಟ್ಟು ₹21.20 ಲಕ್ಷ ಪರಿಹಾರವನ್ನು ವಿತರಿಸಲಾಗಿದೆ.

ಆದರೆ, ತಾಲ್ಲೂಕಿನಲ್ಲಿ 135 ಮನೆಗಳು ಭಾಗಶಃ ಹಾಗೂ ಪೂರ್ಣ ಹಾನಿಯಾಗಿದ್ದು ಈ ಫಲಾನುಭವಿಗಳಿಗೆ ಇದುವರೆಗೂ ಯಾವುದೇ ರೀತಿಯ ಪರಿಹಾರ ಸರ್ಕಾರದಿಂದ ದೊರೆತಿಲ್ಲ.

ಅತಿವೃಷ್ಟಿಯಿಂದ ಶೇ 76ರಿಂದ ಶೇ 100ರಷ್ಟು ಹಾನಿಗೊಳಗಾದ ಮನೆಗಳಿಗೆ ₹5ಲಕ್ಷ, ಶೇ 26ರಿಂದ ಶೇಕಡ 75ರಷ್ಟು ಹಾನಿಗೊಳಗಾದ ಮನೆಗಳಿಗೆ ₹1 ಲಕ್ಷ ಹಾಗೂ ಶೇ 15ರಿಂದ ಶೇ 25ರಷ್ಟು ಹಾನಿಗೊಳಗಾದ ಮನೆಗಳಿಗೆ ₹25 ಸಾವಿರ ಪರಿಹಾರವನ್ನು ಸರ್ಕಾರ ಘೋಷಿಸಿದೆ.

ತಾಲ್ಲೂಕಿನ 14 ಗ್ರಾಮ ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 135 ಮನೆಗಳು ಮಳೆಯಿಂದ ಹಾನಿಗೊಳಗಾಗಿವೆ. ಆಡುವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಶೇ 15ಕ್ಕೂ ಹೆಚ್ಚು ಹಾನಿಗೊಳಗಾದ 2 ಮನೆಗಳಿದ್ದರೆ; ಬಿ.ಕಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ 76ಕ್ಕಿಂತ ಹೆಚ್ಚು ಹಾನಿಗೊಳಗಾದ 13 ಮನೆಗಳು ಹಾಗೂ ಶೇ 26ಕ್ಕೂ ಹೆಚ್ಚು ಹಾನಿಯಾದ 9 ಹಾಗೂ ಶೇ 15ಕ್ಕೂ ಹೆಚ್ಚು ಹಾನಿಯಾದ 10 ಮನೆಗಳು ಇವೆ.

ಬಾಳೆ ಗ್ರಾಮ ಪಂಚಾಯಿತಿಯಲ್ಲಿ ಶೇ 76ಕ್ಕೂ ಹೆಚ್ಚು 1, ಶೇ15ಕ್ಕೂ ಹೆಚ್ಚು ಹಾನಿಯಾದ 1 ಮನೆ ಇದೆ. ಬನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ 76ಕ್ಕೂ ಹೆಚ್ಚು 9, ಶೇ 26ಕ್ಕೂ ಹೆಚ್ಚು 17, ಶೇ 15ಕ್ಕೂ ಹೆಚ್ಚು ಹಾನಿಯಾದ 6 ಮನೆಗಳಿವೆ.

ಗುಬ್ಬಿಗಾ ಗ್ರಾಮ ಪಂಚಾಯಿತಿಯಲ್ಲಿ ಶೇ 76ಕ್ಕೂ ಹೆಚ್ಚು 1 ಹಾಗೂ ಶೇ 15ಕ್ಕೂ ಹೆಚ್ಚು ಹಾನಿಯಾದ 1 ಮನೆ ಇದೆ. ಹೊನ್ನೆಕೂಡಿಗೆ ಗ್ರಾಮ ಪಂಚಾಯಿತಿಯಲ್ಲಿ ಶೇ 15ಕ್ಕೂ ಹೆಚ್ಚು ಹಾನಿಯಾದ 2 ಮನೆಗಳಿವೆ. ಕಡಹಿನ ಬೈಲು ಗ್ರಾಮದಲ್ಲಿ ಶೇ 76ಕ್ಕಿಂತ ಹೆಚ್ಚು 1ಮನೆ, ಶೇ 26ಕ್ಕಿಂತ ಹೆಚ್ಚು ಹಾನಿಯಾದ 2 ಮನೆಗಳಿವೆ. ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ 26ರಕ್ಕೂ ಹೆಚ್ಚು 1ಮನೆ, ಶೇ 15ಕ್ಕೂ ಹೆಚ್ಚು 1 ಮನೆಗೆ ಹಾನಿಯಾಗಿದೆ. ಕರ್ಕೇಶ್ವರದಲ್ಲಿ ಶೇ 76ಕ್ಕಿಂತ ಹೆಚ್ಚು 2 ಹಾಗೂ ಶೇ15ಕ್ಕಿಂತ ಹೆಚ್ಚು 2 ಮನೆಗಳಿಗೆ ಹಾನಿಯಾಗಿದೆ. ಮಾಗುಂಡಿಯಲ್ಲಿ ಶೇ 76ಕ್ಕೂ ಹೆಚ್ಚು 15, ಶೇ 26ಕ್ಕೂ ಹೆಚ್ಚು 3 ಹಾಗೂ ಶೇ 15ಕ್ಕೂ ಹೆಚ್ಚು 4 ಮನೆಗಳು ಹಾನಿಗೊಳಗಾಗಿವೆ.

ಮೆಣಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ 76ಕ್ಕೂ ಹೆಚ್ಚು 1, ಶೇ 26ಕ್ಕೂ ಹೆಚ್ಚು 2, ಶೇ 15ಕ್ಕೂ ಹೆಚ್ಚು 1ಮನೆ ಹಾನಿಗೊಳಗಾಗಿದೆ. ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ 26ಕ್ಕೂ ಹೆಚ್ಚು 10 ಹಾಗೂ ಶೇ 15ಕ್ಕಿಂತ ಹೆಚ್ಚು 2 ಮನೆಗಳಿಗೆ ಹಾನಿಯಾಗಿದೆ. ನಾಗಲಾಪುರ ಗ್ರಾಮ ಪಂಚಾಯಿತಿ ವ್ಯಾ‍ಪ್ತಿಯಲ್ಲಿ ಶೇ 26ಕ್ಕೂ ಹೆಚ್ಚು 1 ಮನೆಗೆ ಹಾನಿಯಾಗಿದೆ. ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ 76ಕ್ಕಿಂತ ಹೆಚ್ಚು 2, ಶೇ 26ಕ್ಕಿಂತ ಹೆಚ್ಚು 1, ಶೇ 15ಕ್ಕಿಂತ ಹೆಚ್ಚು 1 ಮನೆಗೆ ಹಾನಿಯಾಗಿದೆ.

ನರಸಿಂಹರಾಜಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ 26ಕ್ಕಿಂತ ಹೆಚ್ಚು 7, ಶೇ 15ಕ್ಕಿಂತ ಹೆಚ್ಚು 4 ಮನೆಗಳಿಗೆ ಹಾನಿಯಾಗಿದೆ. ಇದುವರೆಗೂ ಯಾವುದೇ ಫಲಾನುಭವಿಗಳಿಗೂ ಪರಿಹಾರದ ಹಣ ಬಂದಿಲ್ಲ.

ಹಾನಿಗೊಳಗಾದ 135 ಮನೆಗಳ ಜತೆಗೆ ಇನ್ನೂ 17 ಮಂದಿಯ ಮನೆಗಳು ಹಾನಿಗೊಳಗಾಗಿದ್ದು, ಇವರಿಗೆ ಪಡಿತರ ಚೀಟಿ ಇಲ್ಲದಿರುವುದರಿಂದ ಇವರ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಸಾಧ್ಯವಾಗಿಲ್ಲ.

‘ಶೀಘ್ರವೇ ಹಣ ಸಂದಾಯ’

ಈ ಬಗ್ಗೆ ‘ಪ್ರಜಾವಾಣಿ’ ತಹಶೀಲ್ದಾರ್ ನಾಗರಾಜ್ ಅವರನ್ನು ಸಂಪರ್ಕಿಸಿದಾಗ, ‘ಹಾನಿಯ ವರದಿಯನ್ನು ಆನ್‌ಲೈನ್‌ನಲ್ಲಿ ಕಳುಹಿಸಲಾಗಿದ್ದು ಜಿಲ್ಲಾಧಿಕಾರಿಗಳ ಕಚೇರಿಯಿಂದ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಶೀಘ್ರದಲ್ಲೇ ಸಂದಾಯವಾಗಲಿದೆ’ ಎಂದರು.

ತಾಲ್ಲೂಕಿನ ವ್ಯಾಪ್ತಿಯಲ್ಲಿ ನೀರಿನಲ್ಲಿ 8 ಹಸುಗಳು ಕೊಚ್ಚಿ ಹೋಗಿದ್ದು ಇದರ ಮಾಲೀಕರಿಗೆ ಪರಿಹಾರ ನೀಡಲು ₹1.70ಲಕ್ಷ ಬಿಡುಗಡೆಯಾಗಿದ್ದು ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT