ಗಣೇಶಚತುರ್ಥಿ ಸಡಗರ; ಖರೀದಿ ಜೋರು

7

ಗಣೇಶಚತುರ್ಥಿ ಸಡಗರ; ಖರೀದಿ ಜೋರು

Published:
Updated:
Deccan Herald

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಚೌತಿ ಸಡಗರ ಮೇಳೈಸಿದ್ದು, ಮೊದಲ ದಿನವಾದ ಬುಧವಾರ ಶ್ರದ್ಧಾಭಕ್ತಿಯಿಂದ ಗೌರಿ ಪೂಜೆ ಕೈಂಕರ್ಯಗಳು ನೆರವೇರಿದವು. ನಗರದ ವಿವಿಧೆಡೆಗಳಲ್ಲಿ ಗಣೇಶಮೂರ್ತಿಗಳ ಮಾರಾಟ ಜೋರಾಗಿತ್ತು.

ದೇಗುಲಗಳು, ಮನೆಗಳಲ್ಲಿ ಗೌರಿ ವಿಗ್ರಹವನ್ನು ಕೂರಿಸಿ ಪೂಜೆ ನೇರವೇರಿಸಿದರು. ಗೌರಿ ವಿಗ್ರಹಗಳು ಸರ್ವಾಲಂಕೃತವಾಗಿ ಕಂಗೊಳಿಸುತ್ತಿದ್ದವು. ಮಹಿಳೆಯರು ಪೂಜೆ ನೆರವೇರಿಸಿ, ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು.

ಹನುಮಂತಪ್ಪ ವೃತ್ತ, ಎಂ.ಜಿ ರಸ್ತೆ, ಮಾರುಕಟ್ಟೆ ರಸ್ತೆ ಇತರೆಡೆಗಳಲ್ಲಿ ಹಬ್ಬದ ಸಾಮಾನುಗಳ ಖರೀದಿ ಭರಾಟೆ ಜೋರಾಗಿತ್ತು. ಹಣ್ಣು, ಹೂವು, ತರಕಾರಿ, ಬಾಳೆಗಿಡ, ಮಾವಿನ ಎಲೆ, ಅಲಂಕಾರ ವಸ್ತುಗಳನ್ನು ಖರೀದಿಸಿದರು. ಹಬ್ಬಕ್ಕೆ ಹೊಸ ಬಟ್ಟೆಗಳ ಖರೀದಿಸಿದರು.

ವಿವಿಧೆಡೆ ಗಣಪತಿ ವಿಗ್ರಹಗಳ ಮಾರಾಟ ನಡೆಯಿತು. ವಿವಿಧ ಗಾತ್ರ, ಆಕಾರಗಳ ಗಣಪತಿ ಮೂರ್ತಿಗಳು ಇದ್ದವು. ದೇಗುಲ, ಸಂಘ, ಮಂಡಳಿ, ಮನೆಗಳವರು ಮೂರ್ತಿಗಳನ್ನು ಖರೀದಿಸಿದವರು. ದೊಡ್ಡ ಗಾತ್ರದ ಗಣಪತಿಗಳನ್ನು ಆಟೊ, ಜೀಪು, ಕಾರು ಮೊದಲಾದ ವಾಹನಗಳಲ್ಲಿ ಒಯ್ದರು. ಗಣೇಶೋತ್ಸವ ನಿಟ್ಟಿನಲ್ಲಿ ರಸಮಂಜರಿ, ನೃತ್ಯ, ಭಜನೆ, ವೀರಗಾಸೆ, ಗಾಯನ ಮೊದಲಾದ ಕಾರ್ಯಕ್ರಮಗಳು ಇವೆ.

ವ್ಯಾಪಾರಿ ಮಹೇಶ್‌ ಪ್ರಜಾವಾಣಿಯೊಂದಿಗೆ ಮಾತನಾಡಿ, ‘ಒಂದು ಅಡಿಯಿಂದ ಐದಾರು ಅಡಿಯವರೆಗಿನ ಮೂರ್ತಿಗಳು ಇವೆ. ₹ 100ರಿಂದ ₹ 8,000 ಸಾವಿರ ಬೆಲೆಯ ಮೂರ್ತಿಗಳು ಇವೆ. ಮನೆಗಳವರು ಸಾಮಾನ್ಯವಾಗಿ ಚಿಕ್ಕ ಮೂರ್ತಿಗಳನ್ನು ಒಯ್ಯುತ್ತಾರೆ. ವ್ಯಾಪಾರ ಪರವಾಗಿಲ್ಲ’ ಎಂದು ತಿಳಿಸಿದರು.

ಬಡಾವಣೆಗಳು, ಬೀದಿಗಳು, ಗಲ್ಲಿಗಳು ಎಲ್ಲೆಡೆ ಗಣಪತಿಗಳನ್ನು ಕೂರಿಸಲು ಮಂಟಪಗಳನ್ನು ನಿರ್ಮಿಸಿ ಸಜ್ಜುಗೊಳಿಸಿದ್ದಾರೆ. ಯುವಜನರು, ನಾಗರಿಕರು ಉತ್ಸಾಹದಿಂದ ಗಣಪತಿ ‍ಪ್ರತಿಷ್ಠಾಪನೆಗೆ ಎಲ್ಲವನ್ನೂ ಅಣಿಗೊಳಿಸಿದ್ದಾರೆ. ಆಜಾದ್‌ ಮೈದಾನದ ಗಣಪತಿ ಸೇವಾ ಸಮಿತಿ ವತಿಯಿಂದ ಬೋಳರಾಮೇಶ್ವರ ದೇಗುಲ ಆವರಣದ ಆಸ್ಥಾನ ಮಂಟಪದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ಅಣಿಗೊಳಿಸಲಾಗಿದೆ. ಮಂಟಪಗಳು ವಿದ್ಯುತ್‌, ಪುಷ್ಪಾಲಂಕಾರಗಳಿಂದ ಕಂಗೊಳಿಸಲಿವೆ.

‘ನಗರಸಭೆಯಲ್ಲಿ ಏಕಗವಾಕ್ಷಿ ವ್ಯವಸ್ಥೆಯಡಿ ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ಮಾಡಲಾಗಿತ್ತು. ಸುಮಾರು 80 ಮೂರ್ತಿ ಪ್ರತಿಷ್ಠಾಪನೆಗೆ ವಿವಿಧ ಸಂಘ, ಮಂಡಳಿ ಮೊದಲಾದವುಗಳವರು ಅನುಮತಿ ಪಡೆದಿದ್ದಾರೆ ’ ಎಂದು ನಗರಸಭೆ ಆಯುಕ್ತೆ ಎಂ.ವಿ.ತುಷಾರಮಣಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗಣಪತಿ ಮೂರ್ತಿ ವಿಸರ್ಜನೆ ನಿಟ್ಟಿನಲ್ಲಿ ನಗರಸಭೆಯು ಈ ಬಾರಿ ವಾಹನ ವ್ಯವಸ್ಥೆ ಮಾಡಿಲ್ಲ. ದಂಟರಮಕ್ಕಿ ಕೆರೆಯಲ್ಲಿ ತೊಟ್ಟಿ ವ್ಯವಸ್ಥೆ ಮಾಡಿ, ವಿಸರ್ಜನೆಗೆ ಅವಕಾಶ ಕಲ್ಪಿಸಲಾಗಿದೆ. ಮೂರ್ತಿಗೆ ಹಾಕಿದ್ದ ಹೂವು, ಇತರ ವಸ್ತುಗಳನ್ನು ಹಾಕಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಹೇಳಿದರು.

ಪೊಲೀಸ್‌ ಇಲಾಖೆ ವತಿಯಿಂದ ಮುಖಂಡರ ಸಭೆ ನಡೆಸಿ ಸೂಚನೆಗಳನ್ನು ನೀಡಲಾಗಿದೆ. ನಿಗದಿ‍ಪಡಿಸಿದ ಸಮಯದೊಳಗೆ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಗಿಸಬೇಕು. ಪಟ್ಟಿಯಲ್ಲಿನ ಅಂಶಗಳನ್ನು ಪಾಲಿಸುವಂತೆ ತಿಳಿಸಲಾಗಿದೆ.

ಹೂವು, ತೋರಣ ಮೊದಲಾದವನ್ನು ಬಳಕೆ ಬಳಿಕ ಕಸ ಸಂಗ್ರಹಣೆ ವಾಹನದಲ್ಲಿಯೇ ಹಾಕುವಂತೆ ತಿಳಿಸಲಾಗಿದೆ. ಮೊ:9886078719, 9483947666 ಗೆ ಸಂದೇಶ ಕಳಿಸಿದರೆ, ಕಸ ಸಂಗ್ರಹ ವಾಹನವನ್ನು ಸ್ಥಳಕ್ಕೆ ಕಳಿಸಿಕೊಡಲು ವ್ಯವಸ್ಥೆ ಮಾಡಲಾಗುವುದು ಎಂದು ನಗರಸಭೆ ತಿಳಿಸಿದೆ. ಪರಿಸರ ಸ್ನೇಹಿ ಮೂರ್ತಿಗಳನ್ನು ಮನವಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !