ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಿಗೆರೆ: ಕಣೆಗದ್ದೆಯಲ್ಲಿ ಕಾಫಿ ಮಧ್ಯೆ ಶುಂಠಿ, ಉಪ ಆದಾಯಕ್ಕೊಂದು ದಾರಿ

Last Updated 19 ಜುಲೈ 2022, 11:33 IST
ಅಕ್ಷರ ಗಾತ್ರ

ಮೂಡಿಗೆರೆ: ಕಾಫಿ ತೋಟದಲ್ಲಿಯೂ ಶುಂಠಿ ಬೆಳೆಯನ್ನು ಬೆಳೆದು ಲಾಭಗಳಿಸಬಹುದು ಎಂಬುದಕ್ಕೆ ಕಣೆಗದ್ದೆ ಗ್ರಾಮದ ಗಣೇಶ್ ಸಾಕ್ಷಿಯಾಗಿದ್ದಾರೆ.

ಅವರು ತೋಟದ ಬೇಲಿ ಹಾಗೂ ಕಾಫಿ ಗಿಡಗಳ ನಡುವೆ ಶುಂಠಿ ಬೆಳೆಯನ್ನು ಉಪ ಬೆಳೆಯನ್ನಾಗಿ ಬೆಳೆಯುವ ಮೂಲಕ ಉಪ ಆದಾಯದ ಮಾರ್ಗವನ್ನು ಕಂಡು ಕೊಂಡಿದ್ದಾರೆ.

ಕಾಫಿ ತೋಟವು ಹಲವಾರು ಉಪ ಬೆಳೆಗಳಿಗೆ ನೆಲೆಯಾಗುತ್ತದೆ. ಕಾಫಿ ತೋಟದಲ್ಲಿ ಕಿತ್ತಲೆ, ನಿಂಬೆ, ನೆಲ್ಲಿಕಾಯಿ, ಬಾಳೆ, ಕಾಳು ಮೆಣಸನ್ನು ಉಪ ಬೆಳೆಯನ್ನಾಗಿ ಬೆಳೆದು ಆದಾಯ ಪಡೆಯಬಹುದು.

‘ಶುಂಠಿ ಬೆಳೆಗೆ ಭತ್ತದ ಗದ್ದೆಗಳೇ ಸೂಕ್ತ. ಆದರೆ ಮಳೆ ಹೆಚ್ಚಾದರೆ ಭತ್ತದ ಗದ್ದೆಯಲ್ಲಿ ಬೆಳೆದ ಶುಂಠಿ ಎಷ್ಟೇ ಉಪಚರಿಸಿದರೂ ಕೊಳೆ ರೋಗಕ್ಕೆ ತುತ್ತಾಗದಿರದು. ಅದೇ ಕಾಫಿ ಗಿಡಗಳ ನಡುವೆ ಶುಂಠಿ ಬೆಳೆದರೆ ಎಷ್ಟೇ ಮಳೆ ಸುರಿದರೂ ಕೊಳೆ ರೋಗ ಮರೀಚಿಕೆ. ಆದ್ದರಿಂದಲೇ ಕಾಫಿ ತೋಟದಲ್ಲಿ ಶುಂಠಿ ಬೆಳೆಯಬೇಕು ಎಂಬ ನಿರ್ಧಾರವನ್ನು ಮಾಡಿಕೊಂಡು, ಮೊದಲ ಹಂತದಲ್ಲಿ ಸುಮಾರು ಮೂರು ಎಕರೆ ಕಾಫಿ ತೋಟದಲ್ಲಿ ಮೂರು ಮೂಟೆಯಷ್ಟು ಶುಂಠಿಯನ್ನು ನಾಟಿ ಮಾಡಿದೆವು. ಬೀಜೋಪಚಾರ, ನಾಟಿ ಮಾಡುವ ಖರ್ಚನ್ನು ಹೊರತು ಪಡಿಸಿದರೆ ಯಾವುದೇ ವಿಶೇಷ ವೆಚ್ಚಗಳು ಬೀಳಲಿಲ್ಲ. ಮೂರು ಮೂಟೆ ನಾಟಿ ಮಾಡಿದ್ದ ಶುಂಠಿಯಿಂದ 23 ಮೂಟೆ ಶುಂಠಿಯ ಬೆಳೆ ತೆಗೆದೆವು. ಮೂಟೆಯೊಂದಕ್ಕೆ ₹2,100 ರಂತೆ ಮಾರಾಟ ಮಾಡಿದೆವು. ಒಂದು ವರ್ಷದ ಅಂತರದ ಬಳಿಕ ಇದೀಗ ಐದು ಮೂಟೆಯಷ್ಟು ಶುಂಠಿ ನಾಟಿ ಮಾಡಿದ್ದೇವೆ’ ಎನ್ನುತ್ತಾರೆ ರೈತ ಗಣೇಶ್.

‘ಭತ್ತದ ಗದ್ದೆಯಲ್ಲಿ ಏಪ್ರಿಲ್ ಮೊದಲ ವಾರದೊಳಗೆ ಶುಂಠಿ ನಾಟಿ ಮಾಡಬೇಕಾಗುತ್ತದೆ. ಆದರೆ ಕಾಫಿ ತೋಟದಲ್ಲಿ ಮೇ ಅಂತ್ಯ ಅಥವಾ ಜೂನ್ ಮೊದಲ ವಾರದಲ್ಲಿ ನಾಟಿ ಮಾಡಬಹುದು. ನಾಟಿ ಮಾಡಿದ ಪ್ರಾರಂಭದಲ್ಲಿ ನೀರಿನ ಅಗತ್ಯ ಬರುತ್ತದೆ. ಕಾಫಿ ಗಿಡಕ್ಕೆ ನೀರಾಯಿಸುವ ನೀರನ್ನೇ ಶುಂಠಿ ಬೆಳೆಯು ಪಡೆದುಕೊಳ್ಳುವುದರಿಂದ ಖರ್ಚು ಕಡಿಮೆಯಾಗುತ್ತದೆ. ಪ್ರತಿ ಎರಡು ತಿಂಗಳಿಗೊಮ್ಮೆ ಶುಂಠಿ ಬುಡಕ್ಕೆ ಮಣ್ಣು ಕೊಟ್ಟರೆ, ಡಿಸೆಂಬರ್, ಜನವರಿ ಅಂತ್ಯಕ್ಕೆ ಬೆಳೆ ತೆಗೆಯಬಹುದು’ ಎಂಬುದು ರೈತ ಗಣೇಶ್ ಅವರ ಅನುಭವದ ಮಾತು.

ಮಲೆನಾಡಿನಲ್ಲಿ ನಾಲ್ಕೈದು ವರ್ಷಗಳಿಂದಲೂ ಅತಿವೃಷ್ಟಿ ಉಂಟಾಗಿ ರೈತರು ನಷ್ಟವನ್ನೇ ಹೊದ್ದುಕೊಳ್ಳುವಂತಾಗಿದ್ದು, ಶುಂಠಿ ಬೆಳೆಯಂತಹ ಉಪ ಬೆಳೆಗಳನ್ನು ಬೆಳೆಯುವ ಮೂಲಕ ನಷ್ಟದ ಇಳಿಕೆ ಸಾಧ್ಯವಾಗುತ್ತದೆ ಎಂಬುದು ರೈತರ ಅಭಿಪ್ರಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT