ಮಂಗಳವಾರ, ಜನವರಿ 18, 2022
24 °C

ಗಿರಿಶ್ರೇಣಿ ಪ್ರದೇಶದಲ್ಲಿ ಪ್ಲಾಸ್ಟಿಕ್‌, ಕಸ ಅವಾಂತರ

ಬಿ.ಜೆ.ಧನ್ಯಪ್ರಸಾದ್‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಗಿರಿಶ್ರೇಣಿ ಪ್ರದೇಶದಲ್ಲಿ ಪ್ರವಾಸಿಗರ ದಾಂಗುಡಿ ಪ್ಲಾಸ್ಟಿಕ್‌, ಕಸ ಸಮಸ್ಯೆಗೆ ಎಡೆಮಾಡಿದೆ. ಈ ಭಾಗದಲ್ಲಿ ತ್ಯಾಜ್ಯ ಸಂಗ್ರಹ, ವಿಲೇವಾರಿ ಸವಾಲಾಗಿ ಪರಿಣಮಿಸಿದೆ.

ಚಂದ್ರದ್ರೋಣ ಪರ್ವತ ಶ್ರೇಣಿಯ ಪ್ರವಾಸಿ ತಾಣಗಳ ಮಾರ್ಗದ ಬಹುತೇಕ ಕಸದ ತೊಟ್ಟಿಗಳು ತುಂಬಿ ತುಳುಕುತ್ತಿವೆ. ರಸ್ತೆಗಳ ಇಕ್ಕೆಲಗಳಲ್ಲಿ ಅಲ್ಲಲ್ಲಿ ಪ್ಲಾಸ್ಟಿಕ್‌ ಬಾಟಲಿ. ಲೋಟ, ತಟ್ಟೆಗಳು, ಮದ್ಯದ ಖಾಲಿ ಬಾಟಲಿಗಳು, ಕುರುಕಲು ತಿನಿಸಿನ ಖಾಲಿ ಪೊಟ್ಟಣಗಳು ಬಿದ್ದಿವೆ.

ಬಹಳಷ್ಟು ಪ್ರವಾಸಿಗರು ಈ ತಾಣ ಗಳಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುತ್ತಾರೆ. ವಾಹನಗಳಲ್ಲಿ ಸಾಗುವಾಗ ಬಾಟಲಿ, ಪ್ಲಾಸ್ಟಿಕ್‌ ಪೊಟ್ಟಣಗಳು, ಗುಟ್ಕಾ ಪ್ಯಾಕೆಟ್‌ಗಳು ಮೊದಲಾದವನ್ನು ರಸ್ತೆಯಲ್ಲೇ ಬಿಸಾಕುತ್ತಾರೆ. ಪ್ರವಾಸಿಗರ ಈ ಚಾಳಿಗೆ ಕಡಿವಾಣ ಬಿದ್ದಿಲ್ಲ.
ಗಿರಿಶ್ರೇಣಿ ಮಾರ್ಗದಲ್ಲಿ ‘ಪ್ಲಾಸ್ಟಿಕ್‌ ನಿಷೇಧಿತ ಪ್ರದೇಶ’, ‘ಎಲ್ಲೆಂದರಲ್ಲಿ ಪ್ಲಾಸ್ಟಿಕ್‌, ಕಸ ಹಾಕಿದರೆ ದಂಡ ವಿಧಿಸಲಾಗುವುದು’ ಎಂಬ ಫಲಕಗಳನ್ನು ಅಳವಡಿಸಲಾಗಿದೆ. ಈ ಸೂಚನೆಗಳು ಫಲಕಕ್ಕೆ ಮಾತ್ರ ಸೀಮಿತ ಎಂಬಂತಾಗಿದೆ.

ಗಿರಿಶ್ರೇಣಿ ಪ್ರದೇಶಕ್ಕೆ ಮದ್ಯವನ್ನು ಒಯ್ಯಲು ಅವಕಾಶ ಇಲ್ಲ. ಆದರೆ, ಮಾರ್ಗದಲ್ಲಿನ ಕಸದ ತೊಟ್ಟಿಗಳಲ್ಲಿ ಮದ್ಯದ ಖಾಲಿ ಬಾಟಲಿಗಳೇ ಹೆಚ್ಚು ಇವೆ. ಕೈಮರದಲ್ಲಿನ ಚಂದ್ರ ದ್ರೋಣ ತನಿಖಾ ಠಾಣೆಯಲ್ಲಿ ತಪಾಸಣೆ, ಕಣ್ಗಾವಲು ಇದ್ದರೂ ಗಿರಿ ಶ್ರೇಣಿ ಪ್ರದೇಶಕ್ಕೆ ಮದ್ಯದ ಬಾಟಲಿ ಅನಾಯಾಸವಾಗಿ ತಲುಪುವುದು ಸೋಜಿಗದ ಸಂಗತಿಯಾಗಿದೆ.

ಯುವಕರು, ಮದ್ಯವ್ಯಸನಿಗಳು ‘ಕಳ್ಳ ದಾರಿ’ಯ ಮೂಲಕ ಮದ್ಯವನ್ನು ಗಿರಿ ಪ್ರದೇಶ ಒಯ್ಯುತ್ತಾರೆ ಎಂದು ಚೆಕ್‌ ಪೋಸ್ಟ್‌ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೊಸ ವರ್ಷಾಚರಣೆಗೆ ನಾಡಿನ ವಿವಿಧೆಡೆಗಳಿಂದ ಪ್ರವಾಸಿಗರ ದಂಡು ಗಿರಿಗೆ ಹರಿದು ಬಂದಿತ್ತು. ಗುಂಡು– ತುಂಡು ಕೂಟಗಳು, ಯುವಜನರ ಚೀರಾಟ, ತೂರಾಟ ಜೋರಾಗಿತ್ತು’ ಎಂದು ಕೈಮರ ಗ್ರಾಮಸ್ಥರಾದ ಸಾವಿತ್ರಿ ತಿಳಿಸಿದರು

ಗಿರಿಶ್ರೇಣಿ ಪ್ರದೇಶ ರಸ್ತೆ ಮಗ್ಗುಗಳಲ್ಲಿ ಹಲವೆಡೆ ಮಾಸ್ಕ್‌ಗಳು ಬಿದ್ದಿವೆ. ಆಹಾರ ಸೇವಿಸಿ ತಟ್ಟೆಗಳನ್ನು ಎಸೆಯಲಾಗಿದೆ. ಕೊರಕಲು ಗುಂಡಿಗಳಲ್ಲಿ ಕೆಲವೆಡೆ ಈ ತ್ಯಾಜ್ಯ ಸಂಗ್ರಹವಾಗಿದೆ. ಮಾಣಿಕ್ಯ ಧಾರಾ ಝರಿಯಲ್ಲಿ ಮಿಂದು ಬಟ್ಟೆ ಬಿಸಾಡುವ ಚಾಳಿ ಇನ್ನು ನಿಂತಿಲ್ಲ. ಸ್ವಚ್ಛತೆ ನಿರ್ವಹಣೆ ಸವಾಲಾಗಿದೆ. ಪ್ರವಾಸಿಗರಲ್ಲಿ ಹಲವರು ಮಾಸ್ಕ್‌ ಧರಿಸಿರುವುದಿಲ್ಲ.

ಜಿಲ್ಲಾಡಳಿತ, ಅರಣ್ಯ ಇಲಾಖೆ, ವಿವಿಧ ಸಂಘಟನೆಗಳ, ಎನ್‌ಸಿಸಿ ಸಹಯೋಗದಲ್ಲಿ ಈಚೆಗಷ್ಟೇ ಗಿರಿಶ್ರೇಣಿಯಲ್ಲಿ ಶ್ರಮದಾನ ಮಾಡಿ ಕಸ ಸಂಗ್ರಹಿಸಿ ವಿಲೇವಾರಿ ಮಾಡಲಾಗಿತ್ತು. ಗಿರಿ ಶ್ರೇಣಿಯಲ್ಲಿ ಎಲ್ಲೆಂದರಲ್ಲಿ ಕಸ ಹಾಕುವವರಿಗೆ ದಂಡ ವಿಧಿಸಿ ಬಿಸಿ ಮುಟ್ಟಿಸಲು ಜಿಲ್ಲಾಡಳಿತ ಹೇಳಿತ್ತು. ಈವರೆಗೆ ನಿರ್ಧಾರ ಕಾರ್ಯಗತವಾಗಿಲ್ಲ.

‘ಗಿರಿ ಶ್ರೇಣಿ ಮಾರ್ಗದಲ್ಲಿ ಕಸ ಸಮಸ್ಯೆ ವಿಪರೀತವಾಗಿದೆ. ಕಸ ಸಮಸ್ಯೆ ಪರಿಹರಿಸಬೇಕು. ಗಿರಿ ಶ್ರೇಣಿಗೆ ಮದ್ಯವನ್ನು ಕೊಂಡೊಯ್ಯದಂತೆ ನಿಗಾ ವಹಿಸಬೇಕು’ ಎಂದು ಮುಳ್ಳಯ್ಯನಗಿರಿ ತಪ್ಪಲು ಸಂರಕ್ಷಣಾ ವೇದಿಕೆ ಸಂಚಾಲಕ ಕೆ.ಎಸ್‌. ಗುರುವೇಶ್‌ ಒತ್ತಾಯಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.