ಹೀಗೂ ಇದೆ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ

7

ಹೀಗೂ ಇದೆ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ

Published:
Updated:
Deccan Herald

ಸರ್ಕಾರಿ ಶಾಲೆಗಳೆಂದರೆ ಅಲ್ಲಿ ಸಮಸ್ಯೆಗಳ ಆಗರ. ಗುಣಮಟ್ಟದ ಶಿಕ್ಷಣ ದೊರೆಯುವುದಿಲ್ಲ ಎಂಬ ಮನೋಭಾವ ಸಾಕಷ್ಟು ಜನರಲ್ಲಿದೆ. ಆದರೆ, ಇದಕ್ಕೆ ಅಪವಾದ ನರಸಿಂಹರಾಜಪುರ ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾತ್ಕೋಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ. ಇಲ್ಲಿ ಹಲವು ಸಮಸ್ಯೆಗಳ ನಡುವೆಯೂ ಉತ್ತಮ ಶಿಕ್ಷಣ ನೀಡಲಾಗುತ್ತಿದೆ.

ತಾಲ್ಲೂಕಿನ ಗಡಿಗ್ರಾಮವಾದ ಸಾತ್ಕೋಳಿ ಅರಣ್ಯ ಪ್ರದೇಶದಿಂದ ಸುತ್ತವರಿದಿದೆ. ಇಲ್ಲಿ ಸರ್ಕಾರದಿಂದ ಬಹಳ ಹಿಂದೆಯೇ ಪ್ರಾರಂಭಿಸಿದ 1 ರಿಂದ 5ನೇ ತರಗತಿವರೆಗಿನ ಕಿರಿಯ ಪ್ರಾಥಮಿಕ ಶಾಲೆ ಇದೆ. ಸಾತ್ಕೋಳಿ, ಮರಾಠಿ ಕ್ಯಾಂಪ್ ಗ್ರಾಮಗಳ ಸಾಕಷ್ಟು ಕೃಷಿಕರು ಮತ್ತು ಕೂಲಿ ಕಾರ್ಮಿಕರ ಮಕ್ಕಳು ಇಲ್ಲಿ ವ್ಯಾಸಂಗಕ್ಕೆ ಬರುತ್ತಾರೆ. 2016ರಲ್ಲಿ ಈ ಶಾಲೆಯಲ್ಲಿದ್ದ ಮಕ್ಕಳ ಸಂಖ್ಯೆ 11 ಮಾತ್ರ. ಇಂದು ಮಕ್ಕಳ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.

ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಾಗಲು ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪುಷ್ಪಾ ಮತ್ತು ಶಾಂತಮ್ಮ ಎಂಬ ಇಬ್ಬರು ಶಿಕ್ಷಕಿಯರ ಕಾರ್ಯಕ್ಷಮತೆ ಪ್ರಮುಖ ಕಾರಣವಾಗಿದೆ. ಈ ಶಾಲೆಯ ಮಕ್ಕಳು ಪಟ್ಟಣದ ಖಾಸಗಿ ಶಾಲೆಯ ಮಕ್ಕಳಿಗಿಂತಲೂ ಕಡಿಮೆ ಇಲ್ಲದಂತೆ ಸಾಕಷ್ಟು ಬುದ್ಧಿವಂತರಾಗಿದ್ದು, ಕನ್ನಡ ಮಾಧ್ಯಮ ಶಾಲೆಯಾದರೂ ಹರಳು ಹುರಿದಂತೆ ಇಂಗ್ಲಿಷ್ ನಲ್ಲಿ ಸಂವಹನ ಕೌಶಲ ಬೆಳೆಸಿಕೊಂಡಿದ್ದಾರೆ.

ಶಾಲೆಯ ವಿದ್ಯಾರ್ಥಿನಿ ಧನ್ಯಶ್ರೀ ರಾಜ್ಯದ 30 ಜಿಲ್ಲೆಗಳ ಹೆಸರನ್ನು ಪಟಪಟನೇ ಹೇಳುತ್ತಾಳೆ. ಸೌಜನ್ಯ ಜ್ಞಾನಪೀಠ ಪ್ರಶಸ್ತಿ ಪಡೆದವರ ಹೆಸರು ಮತ್ತು ಕೃತಿಯನ್ನು ನಿರರ್ಗಳವಾಗಿ ಹೇಳುತ್ತಾಳೆ. ಲೋಹಿತ್ ಜಿಲ್ಲೆಯ 7 ತಾಲ್ಲೂಕುಗಳ ಬಗ್ಗೆ ವಿವರಿಸುತ್ತಾನೆ. ಸಂಜು ಯಾರೇ ಶಾಲೆಗೆ ಹೋದರು ಇಂಗ್ಲಿಷ್ ನಲ್ಲಿ ಸ್ವಾಗತಿಸುವ ಪರಿ ನಿಬ್ಬೆರೆಗಾಗಿಸುವಂತಿದೆ. ಇಬ್ಬರು ಶಿಕ್ಷಕಿಯರು ಶಾಲೆಗೆ ಬರುವುದು ತರೀಕೆರೆ ತಾಲ್ಲೂಕಿನಿಂದ. ತರೀಕೆರೆ ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕಿಯರು ಸರ್ಕಾರದ ನಿಯಮದಂತೆ ಹೆಚ್ಚುವರಿ ಶಿಕ್ಷಕಿಯರಾದರು. ಆಗ ಅವರು ಆಯ್ಕೆ ಮಾಡಿಕೊಂಡಿದ್ದು ಸಾತ್ಕೋಳಿ ಗ್ರಾಮದ ಶಾಲೆಯನ್ನು. ಪ್ರತಿ ನಿತ್ಯ ತರೀಕೆರೆಯಿಂದ ಮುತ್ತಿನಕೊಪ್ಪಕ್ಕೆ ಬಂದು ಅಲ್ಲಿಂದ ಆಟೋದಲ್ಲಿ 8 ಕಿ.ಮೀ ಸಾಗಿ ನಂತರ 2 ಕಿ.ಮೀ ಕಾಲ್ನಡಿಗೆಯ ಮೂಲಕ ಶಾಲೆಗೆ ತಲುಪಬೇಕಾಗುತ್ತದೆ.

ಕಾಡಿನ ದಾರಿ ಮಧ್ಯೆ ಶಾಲೆಗೆ ಹೋಗುವ ಸಂದರ್ಭದಲ್ಲಿ ಕೂಗಳತೆಯ ದೂರದಲ್ಲಿ ಕೆಲವು ಬಾರಿ ಹುಲಿ, ಆನೆಗಳು ಕಂಡದ್ದು ಉಂಟು. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಶಾಲೆಗೆ ಬರುವುದನ್ನು ಮಾತ್ರ ಇವರು ತಪ್ಪಿಸಿಲ್ಲ. ಶಿಕ್ಷಕಿಯರೇ ಹೇಳುವಂತೆ ‘2016ರಲ್ಲಿ ಈ ಶಾಲೆಗೆ ಬಂದೆವು. ಆಗ 11 ಮಕ್ಕಳು ಮಾತ್ರ ಇದ್ದರು. ಏನೇ ಪ್ರಶ್ನಿಸಿದರೂ ಸಹ ಉತ್ತರಿಸುತ್ತಿರಲಿಲ್ಲ. ಮೇಲೆ, ಕೆಳಗೆ ನೋಡಿಕೊಂಡು ಕೂರುತ್ತಿದ್ದರು. ಗ್ರಾಮಕ್ಕೆ ಬರುವ ಪರಿಪಾಟಲು, ಶಾಲೆಯಲ್ಲಿ ಮಕ್ಕಳ ಸ್ಥಿತಿ ನೋಡಿ ಪ್ರಾರಂಭದಲ್ಲಿ ಯಾಕಾದರೂ ಈ ಊರಿನ ಶಾಲೆ ಆಯ್ಕೆ ಮಾಡಿಕೊಂಡೆವು ಎಂದು ಅಳು ಬರುತ್ತಿತ್ತು. ಇದನ್ನೇ ಸವಾಲಾಗಿ ಸ್ವೀಕರಿಸಿ ಮಕ್ಕಳನ್ನು ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಿದೆವು. ಎಲ್ಲಾ ವಿಷಯಗಳನ್ನು ಮಕ್ಕಳಿಗೆ ನಲಿ, ಕಲಿ ಮೂಲಕ ಹೇಳಿಕೊಟ್ಟಿದ್ದರಿಂದ ಇಂದು ಮಕ್ಕಳು ಸಾಕಷ್ಟು ಬುದ್ಧಿವಂತರಾಗಿದ್ದಾರೆ. ಶಾಲೆಗೆ ಬರುವ ಮಕ್ಕಳ ಸಂಖ್ಯೆಯು ಹೆಚ್ಚಿದೆ’ ಎನ್ನುತ್ತಾರೆ.

ಶಾಲೆಗೆ ಬರಲು ಸಮರ್ಪಕವಾದ ರಸ್ತೆಯಿಲ್ಲ. ಮಳೆಗಾಲದಲ್ಲಿ ಕೆಸರು ಗದ್ದೆಯಾಗಿ ಪರಿಣಮಿಸುವ ರಸ್ತೆ. ರಸ್ತೆಯ ಎರಡು ಕಡೆ ಕಾಡು ಪ್ರಾಣಿಗಳಿಂದ ಬೆಳೆ ಉಳಿಸಿಕೊಳ್ಳಲು ಐಬಿಎಕ್ಸ್ ಅಳವಡಿಕೆ. ಸ್ವಲ್ಪ ಮೈಮರೆತರೂ ಅಪಾಯ ಕಟ್ಟಿಟ್ಟಬುತ್ತಿ. ಜತೆಗೆ ಖಾಸಗಿ ಜಾಗದಲ್ಲಿ ರಸ್ತೆ ಬರುವುದರಿಂದ ಓಡಾಡಲು ನಿತ್ಯ ಕಿರಿ, ಕಿರಿ ಇತ್ತು. ಶಾಲೆಗೆ ಸೂಕ್ತ ದಾರಿಯಿಲ್ಲದೆ ಬಿಸಿಯೂಟದ ಸಿಲೆಂಡರ್, ಅಕ್ಕಿ, ತರಕಾರಿ ಎರಡು ಕಿ.ಮೀ ದೂರದಿಂದ ಹೊತ್ತುಕೊಂಡು ಹೋಗುವ ಸ್ಥಿತಿ ಇದೆ. ಇಂತಹ ಸಮಸ್ಯೆಯನ್ನು ಶಾಲೆಯ ಶಿಕ್ಷಕಿಯರು ಎದುರಿಸುತ್ತಿದ್ದುದನ್ನು ಗ್ರಾಮಸ್ಥರಾದ ಸುಭಾಷ್, ಭಾಗ್ಯ, ಲೋಕೇಶ್, ಚಂದ್ರ ಶೇಖರ್, ಶಾಂತಲಾ, ಪುಷ್ಪಾವತಿ ಅವರು ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಆರ್.ಸದಾಶಿವ ಅವರ ಗಮನಕ್ಕೆ ತಂದರು. ತಾಲ್ಲೂಕು ಪಂಚಾಯಿತಿ ಸದಸ್ಯೆ ಲಲಿತಾ ನಾಗರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಸೈಯದ್ ಸಫೀರ್ ಅಹಮ್ಮದ್, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ನಾಗರಾಜ್ ಅವರೊಂದಿಗೆ ಶಾಲೆಗೆ ತೆರಳಿದ ಜಿಲ್ಲಾ ಪಂಚಾಯಿತಿ ಸದಸ್ಯರು ಶಾಲೆಗೆ ಹೋಗುವ ದುಸ್ಥಿತಿ, ಮಕ್ಕಳ ಬುದ್ಧಿಮತ್ತೆಯನ್ನು ಗಮನಿಸಿದರು. ಖಾಸಗಿ ವ್ಯಕ್ತಿಗಳೊಂದಿಗೆ ಚರ್ಚಿಸಿ ಶಾಲೆಗೆ ದಾರಿ ಬಿಟ್ಟುಕೊಡಲು ಮನವೊಲಿಸಿ ರಸ್ತೆಗೆ ಅನುದಾನವನ್ನು ಮೀಸಲಿಟ್ಟು ಸಮಸ್ಯೆ ಪರಿಹರಿಸಿದರು.

‘ಶಾಲೆಗೆ ಬರಲು ಸಮರ್ಪಕವಾದ ರಸ್ತೆ ನಿರ್ಮಾಣವಾದರೆ ಸಾಕಷ್ಟು ಸಮಸ್ಯೆ ಬಗೆಹರಿಯಲಿದೆ. ಸರ್ಕಾರ ವಸತಿ ನಿರ್ಮಿಸಿಕೊಟ್ಟರೆ ಗ್ರಾಮದಲ್ಲಿಯೇ ಉಳಿದು ಸೇವೆ ಸಲ್ಲಿಸಲು ಅನುಕೂಲವಾಗುತ್ತದೆ. ಕುಗ್ರಾಮದ ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಬೇಸರವಿಲ್ಲ. ಮಕ್ಕಳು ಉತ್ತಮವಾಗಿ ಕಲಿಯುತ್ತಿರುವುದು ಸಂತಸ ತಂದಿದೆ’ ಎನ್ನುತ್ತಾರೆ ಶಿಕ್ಷಕಿಯರಾದ ಪುಷ್ಪ ಮತ್ತು ಶಾಂತಮ್.

ಸರ್ಕಾರ ಇಂತಹ ಕುಗ್ರಾಮಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕಿಯರಿಗೆ ಮೂಲಸೌಲಭ್ಯ ಒದಗಿಸಿದರೆ ಗ್ರಾಮೀಣ ಭಾಗದಲ್ಲಿರುವ ಕನ್ನಡ ಶಾಲೆಗಳು ಉಳಿಯುತ್ತವೆ. ಮಕ್ಕಳಿಗೆ ಉತ್ತಮ ಶಿಕ್ಷಣವು ಲಭಿಸುತ್ತದೆ ಎಂಬುದು ಗ್ರಾಮಸ್ಥರ ಅಭಿಪ್ರಾಯ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !