ಸರ್ಕಾರಿ ಶಾಲಾ ಆವರಣದಲ್ಲಿ ಔಷಧೀಯ ಸಸ್ಯ

7
ಮಕ್ಕಳಿಗೆ ಶುದ್ಧ ಕುಡಿಯುವ ನೀರು, ಕಂಪ್ಯೂಟರ್‌ ಶಿಕ್ಷಣ

ಸರ್ಕಾರಿ ಶಾಲಾ ಆವರಣದಲ್ಲಿ ಔಷಧೀಯ ಸಸ್ಯ

Published:
Updated:
Deccan Herald

ಕೊಪ್ಪ: ಹಸಿರಿನ ಹೂರಣ, ನಿತ್ಯ ಬಗೆಬಗೆಯ ಔತಣ, ಕಲಿಕೆಯೇ ಆಭರಣ, ಮಕ್ಕಳ ಕಣ್ಣುಗಳಲ್ಲಿ ಕನಸಿನ ಹೊಂಗಿರಣ... ಇದು ಸಮೀಪದ ಸರ್ಕಾರಿ ಹಿರಿಯ ಪ್ರಾಥಮಿಕ (ಪೂರ್ವ) ಶಾಲೆಯ ವಾತಾವರಣ.

55 ಮಕ್ಕಳು ಕಲಿಯುತ್ತಿರುವ ಈ ಸರ್ಕಾರಿ ಶಾಲೆ ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲ. ಶಾಲೆಯ ಆವರಣದಲ್ಲಿ ಹಲವು ಬಗೆಯ ಸಸ್ಯ ಬೆಳೆಸುವ ಮೂಲಕ ಪಠ್ಯದ ಜೊತೆಗೆ ಸಾವಯವ ಪಾಠವನ್ನೂ ಶಿಕ್ಷಕರು ಕಲಿಸುತ್ತಿದ್ದಾರೆ. ಶಾಲಾ ಕೈ ತೋಟದಲ್ಲಿ ನೆಲನೆಲ್ಲಿ, ನಾಗದಾಳಿ, ದಾಸವಾಳ, ತುಳಸಿ, ದೊಡ್ಡಪತ್ರೆ, ಕೇಸುವಿನ ಎಲೆ, ಇನ್ಸುಲಿನ್‌, ವೀಳ್ಯದೆಲೆಬಳ್ಳಿ, ಅಲವೇರಾ ಮುಂತಾದ ಔಷಧೀಯ ಸಸ್ಯಗಳಿವೆ. ಪಪ್ಪಾಯ, ಸಿಲ್ವರ್, ನಿಲಗೀರಿ, ನುಗ್ಗೆ, ಸೀತಾಫಲ, ಬಾಳೆ, ಅಶೋಕ, ಕಾಣಗಿಲೆ, ಕರ್ಣಕುಂಡಲ, ತೆಂಗು, ನೆಲ್ಲಿ, ದಾಳಿಂಬೆ ಮರಗಳೂ ಶಾಲೆಯ ಆವರಣದಲ್ಲಿವೆ. ಗುಲಾಬಿ, ಕನಕಾಂಬರ, ಮಲ್ಲಿಗೆ, ಸೇವಂತಿಗೆ, ಸ್ಫಟಿಕ, ಚೆಂಡು ಹೂವು, ಡೇರಾ ಹೂವು ಸೇರಿ ಹಲವು ಬಗೆಯ ಅಲಂಕಾರಿಕ ಗಿಡಗಳಿಂದ ಶಾಲೆಯ ಅಂದ ಹೆಚ್ಚಿಸಿವೆ.

ವಿದ್ಯಾರ್ಥಿಗಳಿಗೆ ನಿತ್ಯ ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಇದೆ. ಮಕ್ಕಳು ಕೇಸರಿಬಾತ್, ದೋಸೆ, ಹೋಳಿಗೆ, ಹಾಲಿನ ಜೊತೆ ಬಿಸ್ಕತ್‌, ಪಾಯಸ ಸೇರಿ ವಿವಿಧ ಬಗೆಯ ಊಟ ಸವಿಯುತ್ತಿದ್ದಾರೆ. ವಿಶೇಷ ದಾಖಲಾತಿ ಆಂದೋಲನ ಮಾಡಿ ಶಿಕ್ಷಕರು ಸ್ವಂತ ಖರ್ಚಿನಿಂದ ಉಚಿತ ಬ್ಯಾಗ್ ವಿತರಣೆ ಮಾಡಿ ಶಾಲೆಗೆ 35 ಮಕ್ಕಳನ್ನು ದಾಖಲು ಮಾಡಿಕೊಂಡಿದ್ದಾರೆ. ಶಾಲೆಯಲ್ಲಿ ಉತ್ತಮ ಪ್ರಯೋಗಾಲಯವಿದ್ದು ಪ್ರನಾಳ, ಗಣಿತದ ಕಿಟ್, ಜೀವ ಶಾಸ್ತ್ರಕ್ಕೆ ಸಂಬಂಧಿಸಿದ ಬಗೆಬಗೆಯ ಉಪಕರಣಗಳು ಇವೆ. ಸುಸಜ್ಜಿತವಾದ 4 ಕೊಠಡಿಗಳಲ್ಲಿ ಬೋಧನೆ ನಡೆಯುತ್ತಿದೆ. ಶಾಲೆಯ ಗ್ರಂಥಾಲಯದಲ್ಲಿ 5,500ಕ್ಕೂ ಹೆಚ್ಚು ಪುಸ್ತಕಗಳಿದ್ದು ವಾರಕೊಮ್ಮೆ ಶಾಲಾ ಆವರಣದಲ್ಲಿ ಹರಡಿ ವಿದ್ಯಾರ್ಥಿಗಳಿಗೆ ಬೇಕಾದ ಪುಸ್ತಕಗಳನ್ನು ತೆಗೆದುಕೊಂಡು ಓದುವ ಹವ್ಯಾಸ ರೂಢಿಸಲಾಗಿದೆ.

ಕಂಪ್ಯೂಟರ್ ಶಿಕ್ಷಣ: 2008ರಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಶಾಲೆಗೆ 5 ಕಂಪ್ಯೂಟರ್ ನೀಡಿದ್ದು ಅಂದಿನಿಂದ ವಿದ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಪ್ರಾರಂಭದಿಂದಲ್ಲೇ ಎಲ್ಲಾ ಮಕ್ಕಳು ಕಂಪ್ಯೂಟರ್ ಕಲಿಕೆಗೆ ಮುಂದಾಗುತ್ತಿದ್ದಾರೆ. 1927ರಲ್ಲಿ ಪ್ರಾರಂಭವಾದ ಶಾಲೆ ಶತಮಾನದ ಹೊಸ್ತಿಲಿನಲ್ಲಿದೆ. ಅಂದು ನಿರ್ಮಾಣ ಮಾಡಿದ್ದ 10 ಕೊಠಡಿಗಳು ಶಿಥಿಲಗೊಂಡಿವೆ. ಸ್ವಾತಂತ್ರ್ಯ ಪೂರ್ವದ ಶಾಲೆಗೆ ಕಾಯಕಲ್ಪ ಬೇಕಾಗಿದೆ. 4.5 ಎಕರೆ ವಿಶಾಲ ಮೈದಾನವಿರುವ ಶಾಲೆ ಸಸ್ಯರಾಶಿಯಿಂದ ಕಂಗೊಳಿಸುತ್ತಿದೆ. ಅಲ್ಲದೆ ಬೆಲೆ ಬಾಳುವ ಮರಗಳಿವೆ. ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಹೊಸ ಕಟ್ಟಡವನ್ನು ಕಟ್ಟಲು ಮನಸ್ಸು ಮಾಡಬೇಕಿದೆ ಎನ್ನುತ್ತಾರೆ ಗ್ರಾಮಸ್ಥ ಮೊಹಮ್ಮದ್‌ ಇಲಿಯಾಜ್.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !