ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೃಂಗೇರಿ: ಮುಚ್ಚುವ ಸ್ಥಿತಿಯಲ್ಲಿ ಸರ್ಕಾರಿ ಶಾಲೆ

ಮಲ್ಲಿಕಾರ್ಜುನ ಬೀದಿಯ ವಿದ್ಯಾದೇಗುಲದಲ್ಲಿ ಮಕ್ಕಳ ಕೊರತೆ
Last Updated 13 ಜನವರಿ 2021, 3:28 IST
ಅಕ್ಷರ ಗಾತ್ರ

‌ಶೃಂಗೇರಿ: ಪಟ್ಟಣದ ಮಲ್ಲಿಕಾರ್ಜುನ ಬೀದಿಯಲ್ಲಿರುವ ಒಂದೂವರೆ ಶತಮಾನ ಇತಿಹಾಸ ಹೊಂದಿರುವ ಹಾಗೂ ಶಾರದಾ ಪೀಠದ 34ನೇ ಗುರುಗಳಾದ ಚಂದ್ರಶೇಖರ ಭಾರತೀ ಸ್ವಾಮೀಜಿ ಅವರು ವ್ಯಾಸಂಗ ಮಾಡಿದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಹಂತ ತಲುಪಿದೆ.

ಈ ಸಾಲಿನಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಶಾಲೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಶಾಲೆ ಉಳಿಸುವಂತೆ ಹಿರಿಯ ವಿದ್ಯಾರ್ಥಿಗಳು ಫೇಸ್‌ಬುಕ್‌ನಲ್ಲಿ ಅಭಿಯಾನ ಆರಂಭಿಸಿದ್ದಾರೆ. ದಾಖಲೆಯ ಪ್ರಕಾರ ಬ್ರಿಟಿಷ್ ಆಳ್ವಿಕೆಯ 1853ರಲ್ಲಿ ತಾಲ್ಲೂಕಿನ ಮೊದಲ ಸರ್ಕಾರಿ ಶಾಲೆಯಾಗಿ ಇದು ಆರಂಭಗೊಂಡಿದೆ.

1970ರಿಂದ 1980 ನಡುವಿನ ಶೈಕ್ಷಣಿಕ ವರ್ಷದಲ್ಲಿ 800 ರಿಂದ 1,000 ವಿದ್ಯಾರ್ಥಿಗಳ ಸಂಖ್ಯಾಬಲ ಹೊಂದಿ ಉತ್ತುಂಗದ ಸ್ಥಿತಿಯಲ್ಲಿದ್ದ ಈ ಶಾಲೆಯು 2019-2020ನೇ ಶೈಕ್ಷಣಿಕ ಸಾಲಿನಲ್ಲಿ 1 ರಿಂದ 7ನೇ ತರಗತಿಯ ವರೆಗೆ ಕೇವಲ 14 ಮಕ್ಕಳಿದ್ದಾರೆ. ಹಾಗಾಗಿ, ‌ಶಾಲೆಗೆ ಬೀಗ ಹಾಕುವ ಸ್ಥಿತಿ ನಿರ್ಮಾಣವಾಗಿದೆ.

2019-20ನೇ ಸಾಲಿನಲ್ಲಿ 1ನೇ ತರಗತಿಯಲ್ಲಿ ಒಬ್ಬ, 2ನೇ ತರಗತಿಯಲ್ಲಿ 3, 4ನೇ ತರಗತಿಯಲ್ಲಿ 2, 5ನೇ ತರಗತಿಯಲ್ಲಿ 0, 6ರಲ್ಲಿ 3, 7ರಲ್ಲಿ 4 ವಿದ್ಯಾರ್ಥಿಗಳು ವ್ಯಾಸಂಗ ಮಾಡು ತ್ತಿದ್ದರು. ವಿದ್ಯಾರ್ಥಿಗಳು ಪ್ರೌಢಶಾಲೆಗೆ ಮುನ್ನೆಡೆದಾಗ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತದೆ.

ಕೊಠಡಿಗಳಿಗೆ ಬೀಗ: ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದ ಸಂದರ್ಭದಲ್ಲಿ 1 ರಿಂದ 7ನೇ ತರಗತಿಗಳನ್ನು ಏಕಕಾಲದಲ್ಲಿ ನಡೆಸಲು ಕೊಠಡಿಗಳೇ ಸಾಕಾಗದೇ, ಎರಡು ಅವಧಿಯಲ್ಲಿ ಬೋಧನೆ ಮಾಡಲಾಗುತ್ತಿತ್ತು. ಆದರೆ, ಪರಿಸ್ಥಿತಿ ಈಗ ಪೂರ್ಣ ಬದಲಾಗಿ ಹೋಗಿದೆ. ಶಾಲೆಯಲ್ಲಿ ಮಕ್ಕಳ ಸಂಖ್ಯೆ ತೀರಾ ಕಡಿಮೆಯಾಗಿರುವ ಕಾರಣ ಶಾಲೆಯಲ್ಲಿನ ಒಂದು ಕೊಠಡಿಯನ್ನು ಹೊರತುಪಡಿಸಿ ಮಿಕ್ಕೆಲ್ಲಾ ಕೊಠಡಿಗಳಿಗೆ ಬೀಗ ಹಾಕಲಾಗಿದೆ. ನಿರ್ವಹಣೆ ಕೊರತೆಯನ್ನು ಎದುರಿಸುತ್ತಿರುವ ಐದಾರು ಕೊಠಡಿಗಳು ಇಲಿ, ಹೆಗ್ಗಣ, ಜೇಡ ಬಲೆಗಳ ಆವಾಸ ಸ್ಥಾನವಾಗಿದೆ. ತುಂಬಿ ತುಳುಕುತ್ತಿದ್ದ ಆಟದ ಮೈದಾನ ಬಿಕೋ ಎನ್ನುತ್ತಿದೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಇರುವ ಈ ಶಾಲೆಯನ್ನು ಉಳಿಸಲು ಶಿಕ್ಷಣ ಇಲಾಖೆಯೊಂದಿಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂಬುದು ಸ್ಥಳೀಯರ ಒತ್ತಾಯ.

‘ಶಾಲೆ ಉಳಿಸಲು ಆಂದೋಲನ’
‘ಪೋಷಕರು ಮತ್ತು ಮಕ್ಕಳು ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗಿರುವುದರಿಂದ ಈ ಶಾಲೆಗೆ ಪ್ರವೇಶ ಕಡಿಮೆಯಾಗಿದೆ. ಶಾರದಾ ಪೀಠದ ಗುರುಗಳು ವ್ಯಾಸಂಗ ಮಾಡಿದ ಶಾಲೆಯನ್ನು ಉಳಿಸಲು ಆಂದೋಲನ ಶುರು ಮಾಡಿದ್ದೇವೆ. ಮೊದಲ ದಿನವೇ 4 ವಿದ್ಯಾರ್ಥಿಗಳು ದಾಖಲಾಗಿದ್ದಾರೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT