ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು ಗ್ರಾಮಗಳಲ್ಲಿ ಸ್ಮಶಾನ ಇಲ್ಲ, ಇದ್ದಲ್ಲಿ ನಿರ್ವಹಣೆ ಇಲ್ಲ

ನದಿ ದಂಡೆಯ ಆಸುಪಾಸಿನಲ್ಲಿ ಶವಸಂಸ್ಕಾರ l ಮಳೆಯಲ್ಲೇ ದಹನ ಕ್ರಿಯೆಯ ದುಃಸ್ಥಿತಿ l ಸಂಪರ್ಕ ರಸ್ತೆಯೂ ಅಸ್ತವ್ಯಸ್ತ
Last Updated 8 ಆಗಸ್ಟ್ 2022, 4:24 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಇಲ್ಲಿ ಸತ್ತರೂ ಸಮಸ್ಯೆ’ ಎಂಬ ಮಾತಿನಂತೆ ಜಿಲ್ಲೆಯಲ್ಲಿ ಸ್ಮಶಾನಕ್ಕೂ ಕೊರತೆ. ಹಲವು ಗ್ರಾಮಗಳಲ್ಲಿ ಸ್ಮಶಾನಗಳೇ ಇಲ್ಲ. ಕೆಲವೆಡೆ ಜಾಗ ಗುರುತಿಸಿದ್ದರೆ, ಮತ್ತೆ ಕೆಲವೆಡೆ ಹದ್ದುಬಸ್ತು ಮಾಡಿಲ್ಲ. ಬಹುತೇಕ ಕಡೆಗಳಲ್ಲಿ ಸ್ಮಶಾನ ಇದ್ದರೂ ನಿರ್ವಹಣೆ ಕೊರತೆ. ಕೆಲವರು ಸ್ಮಶಾನವನ್ನೂ ಒತ್ತುವರಿ ಮಾಡಿದ್ದಾರೆ.

ಜಿಲ್ಲಾಡಳಿತ ಅಂಕಿಅಂಶ ಪ್ರಕಾರ ಜಿಲ್ಲೆಯ1,142 ಗ್ರಾಮಗಳ ಪೈಕಿ 75 ಗ್ರಾಮಗಳಲ್ಲಿ ಸ್ಮಶಾನ ಇಲ್ಲ. ಚಿಕ್ಕಮಗಳೂರಿನ ಕಲ್ಯಾಣನಗರ ನಾಲ್ಕನೇ ಹಂತದ ಐದನೇ ಮುಖ್ಯರಸ್ತೆ ಕೊನೆ ಭಾಗದಲ್ಲಿರುವ ಸ್ಮಶಾನ ಅವ್ಯವಸ್ಥೆ ಕೂಪವಾಗಿದೆ. ಪ್ರವೇಶ ದ್ವಾರ ಅಧ್ವಾನವಾಗಿದೆ. ಗಿಡ,ಗಂಟಿ ಪೊದೆಗಳು ಬೆಳೆದಿವೆ. ಶವ ಒಯ್ಯಲು ಹರಸಾಹಸ ಪಡಬೇಕಾಗಿದೆ.

ಹಲವೆಡೆ ತೋಟ, ಜಮೀನುಗಳಲ್ಲಿ ಶವಸಂಸ್ಕಾರ ನೆರವೇರಿಸಲಾಗುತ್ತದೆ. ಆದರೆ, ತೋಟ, ಜಮೀನು ಇಲ್ಲದವರು ಪಡಿಪಾಟಲುಪಡಬೇಕಾಗಿದೆ.

ಸೊಪ್ಪಿನ ಬೆಟ್ಟ, ಅರಣ್ಯ ಜಾಗ ಮೊದಲಾದ ತಾಂತ್ರಿಕ ಸಮಸ್ಯೆಯಿಂದಾಗಿ ಮಲೆನಾಡಿನ ಕೆಲವೆಡೆ ಸ್ಮಶಾನಕ್ಕೆ ಜಾಗ ನೀಡುವುದು ಕಗ್ಗಂಟಾಗಿದೆ. ಬಯಲುಸೀಮೆಯಲ್ಲಿ ಸರ್ಕಾರಿ ಜಾಗದ ಕೊರತೆ ಇದೆ ಎಂಬುದು ಅಧಿಕಾರಿಗಳ ‘ಸಬೂಬು’.

6 ಗ್ರಾಮಗಳಲ್ಲಿ ಸ್ಮಶಾನ ಇಲ್ಲ: ಕಡೂರು ತಾಲ್ಲೂಕಿನ ಆರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸ್ಮಶಾನಗಳಿಲ್ಲ. ಆಣೇಗೆರೆ, ಬಿಸಿಲೇಹಳ್ಳಿ, ಎಮ್ಮೆದೊಡ್ಡಿ, ಕೆ.ಬಿದರೆ, ಪಂಚನಹಳ್ಳಿ, ವಿ.ಯರದಕೆರೆ ಗ್ರಾಮಪಂಚಾಯಿತಿ ವ್ಯಾಪ್ತಿಗಳಲ್ಲಿ ಸ್ಮಶಾನಕ್ಕಾಗಿ ಜಾಗ ಗುರುತಿಸಿ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಲಾಗಿದೆ.

ಬಿಳುವಾಲ, ಹರುವನಹಳ್ಳಿ, ಚಟ್ನಹಳ್ಳಿ, ಕಬ್ಬಳಿಗಳಲ್ಲಿ ಸ್ಮಶಾನಕ್ಕೆ ಜಾಗ ಗುರುತಿಸಿ ಪ್ರಸ್ತಾವವನ್ನು ಶೀಘ್ರ ಸಲ್ಲಿಸಲಾಗುವುದು ಎಂದು ತಹಶೀಲ್ದಾರ್ ಜೆ.ಉಮೇಶ್ ತಿಳಿಸಿದ್ದಾರೆ.

ಸರ್ಕಾರಿ ಜಾಗದ ಕೊರತೆ: ಅಜ್ಜಂಪುರ ತಾಲ್ಲೂಕಿನ ಕಣಬಗಟ್ಟೆ, ಸೊಲ್ಲಾಪುರ ಗ್ರಾಮದಲ್ಲಿ ಸ್ಮಶಾನ ಇಲ್ಲ. ಈ ಗ್ರಾಮಗಳ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿಯೂ ಇಲ್ಲ. ಶವ ಸಂಸ್ಕಾರಕ್ಕೆ ತೊಂದರೆಯಾಗಿದೆ.

ಸೊಲ್ಲಾಪುರದಲ್ಲಿ ಸ್ಮಶಾನ ಇಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡದವರು ಅಂತ್ಯ ಸಂಸ್ಕಾರಕ್ಕೆ ಸಮಸ್ಯೆ ಎದರಿಸುತ್ತಿದ್ದಾರೆ. ಗ್ರಾಮಕ್ಕೆ ಹೊಂದಿರುವ ಸೌತನಹಳ್ಳಿಯಲ್ಲಿ 24 ಎಕರೆ ಸರ್ಕಾರಿ ಜಾಗ ಇದೆ. ಅದರಲ್ಲಿ ಸ್ವಲ್ಪ ಜಾಗವನ್ನು ಸ್ಮಶಾನಕ್ಕೆ ನೀಡುವಂತೆ ನಿವಾಸಿಗಳು ಮನವಿ ಮಾಡಿದ್ದಾರೆ.

ಸೌಲಭ್ಯಗಳ ಕೊರತೆ: ತರೀಕೆರೆ ತಾಲ್ಲೂಕಿನ ಮಳಲಿಚನ್ನೆನಹಳ್ಳಿ, ಮಾಳಿಕೊಪ್ಪ, ಮುಂಡ್ರೆವಳ್ಳಿ, ಉಪ್ಪಾರ ಬೀರನಹಳ್ಳಿ, ಕೆಸರು ಕೊಪ್ಪ, ನಂದಿಬಟ್ಟಲು, ರಂಗಾ ಪುರ, ಸುಣ್ಣದ ಹಳ್ಳಿ, ಹೊಸಹಳ್ಳಿ, ಗುಳ್ಳದಮನೆ, ಕೆಂಚೇನಹಳ್ಳಿ, ಪಿಳ್ಳೆನಹಳ್ಳಿ, ಬರಗೇನ
ಹಳ್ಳಿ, ಚಿಕ್ಕಾತೊರು, ರಂಗಾಪುರ ಸಹಿತ 15 ಗ್ರಾಮಗಳಲ್ಲಿ ಸ್ಮಶಾನ ಇಲ್ಲ. ‘ಪರಿಶಿಷ್ಟ ಜಾತಿ ಕುಟುಂಬಗಳು ಹೆಚ್ಚು ಇರುವ ರಂಗಾಪುರದಲ್ಲಿ ಸ್ಮಶಾನ ಇಲ್ಲ. ಅರಣ್ಯ ಪ್ರದೇಶದಲ್ಲಿ ಸಂಸ್ಕಾರ ಮಾಡುತ್ತೇವೆ. ಅರಣ್ಯ ಇಲಾಖೆಯವರು ಕಿರಿಕಿರಿ ಮಾಡುತ್ತಾರೆ’ ಎನ್ನುತ್ತಾರೆ ಗ್ರಾಮದ ಮುತ್ತಪ್ಪ.

ಸ್ಮಶಾನ ಭೂಮಿಯ ಹದ್ದುಬಸ್ತಿಗೆ ಮೀನಮೇಷ: ಕೊಪ್ಪ ತಾಲ್ಲೂಕಿನ ಗ್ರಾಮಗಳಲ್ಲಿ ಸ್ಮಶಾನ ಜಾಗ ಕಾಯ್ದಿರಿಸಿದ್ದರೂ ಈವರೆಗೆ ಅನೇಕ ಕಡೆಗಳಲ್ಲಿ ಜಾಗ ಹದ್ದುಬಸ್ತು ಮಾಡದೆ ದಾಖಲೆಗಷ್ಟೆ ಸೀಮಿತವಾಗಿದೆ.

ಸ್ಮಶಾನಕ್ಕಾಗಿ ಕಂದಾಯ ಇಲಾಖೆ ಜಾಗ ಕಾಯ್ದಿರಿಸಿದೆ. ಆದರೆ, ಒಂದು ಅಥವಾ ಎರಡು ಕಡೆ ಮಾತ್ರ ಬಳಕೆ ಮಾಡುತ್ತಿದ್ದಾರೆ. ಉಳಿದ ಗ್ರಾಮಗಳಲ್ಲಿ ಗೊಂದಲ ಮುಂದುವರಿದಿದೆ.

ಪಟ್ಟಣದ ಕೆಸವೆ ರಸ್ತೆಯ ಸ್ಮಶಾನ ಹಾಗೂ ಜಯಪುರ ಸಹಿತ ಕೆಲವೆಡೆ ಮಾತ್ ಚಾವಣಿ ವ್ಯವಸ್ಥೆ ಇದೆ. ಉಳಿದೆ ಮಳೆಗಾಲದಲ್ಲಿ ಶವ ಸಂಸ್ಕಾರ ಮಾಡಲು ಕಷ್ಟದ ಸ್ಥಿತಿ ಇದೆ.

ಅನೇಕ ಕಡೆ ಬೇಲಿ ಇಲ್ಲ. ಒತ್ತುವರಿಯಾಗಿರುವ ದೂರುಗಳು ಇವೆ. ಮೇಗುಂದಾ ಹೋಬಳಿ ವ್ಯಾಪ್ತಿಯ ಭೈರೇದೇವರು ಗ್ರಾಮ, ಹೇರೂರು(ಹುತ್ತಿನಗದ್ದೆ) ಕಡೆಗಳಲ್ಲಿ ಸ್ಮಶಾನ ಸಮಸ್ಯೆ ಇದೆ.

ಕೆಲವು ಗ್ರಾಮಗಳಲ್ಲಿ ಸ್ಮಶಾನ ಜಾಗವನ್ನು ಅರಣ್ಯಕ್ಕೆ ಸೇರಿಸಿದ್ದು, ನಾಲ್ಕಾರು ಕಿಲೋ ಮೀಟರ್ ದೂರ ಶವ ಹೊತ್ತೊಯ್ದು ಅಂತ್ಯಕ್ರಿಯೆ ನಡೆಸಬೇಕಾದ ಪರಿಸ್ಥಿತಿ ಇದೆ.

ಸ್ಮಶಾನ ಸಂಪರ್ಕ ರಸ್ತೆಗಳ ಅವ್ಯವಸ್ಥೆ: ಕಳಸ ಪಟ್ಟಣದ ಹಿಂದೂ ರುದ್ರಭೂಮಿ ಮತ್ತು ಮುಸ್ಲಿಮರ ಸ್ಮಶಾನ ಅಕ್ಕಪಕ್ಕದಲ್ಲೇ ಇದೆ. ಆದರೆ ಈ ಸ್ಮಶಾನಗಳಿಗೆ ತಲುಪುವ ರಸ್ತೆ ತೀರಾ ಹದಗೆಟ್ಟಿದೆ. ಈ ರಸ್ತೆ ದುರಸ್ತಿಯನ್ನು ಉಪೇಕ್ಷೆ ಮಾಡಲಾಗಿದೆ.

ಇದೀಗ ಸ್ಮಶಾನ ಜಾಗವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಸ್ಥಳೀಯರ ಸಹಕಾರದೊಂದಿಗೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಡಾ.ವಿಶ್ವನಾಥ ಪ್ರಭು ಕುಟುಂಬದ ಟ್ರಸ್ಟ್ ವತಿಯಿಂದ ಹಿಂದೂಗಳ ಅಂತಿಮ ವಿಧಿ ನೆರವೇರಿಸಲು ಕಟ್ಟಡ ನಿರ್ಮಿಸಲಾಗುತ್ತಿದೆ. ‘ರುದ್ರಭೂಮಿಯಿಂದ ಭದ್ರಾ ನದಿಯ ಸೇತುವೆವರೆಗೂ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಬೇಕು. ಜೊತೆಗೆ ನದಿ ಪಕ್ಕ ಧರೆ ಕುಸಿಯದಂತೆ ತಡೆಗೋಡೆ ನಿರ್ಮಿಸಬೇಕು’ ಎಂಬುದು ಪಟ್ಟಣದ ಜಯಕುಮಾರ ಭಟ್ ಒತ್ತಾಯ.

ಬಹುತೇಕ ಗ್ರಾಮಗಳಲ್ಲಿ ಸ್ಮಶಾನ ಇಲ್ಲ: ನರಸಿಂಹರಾಜಪುರ ತಾಲ್ಲೂಕು ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ಸ್ಮಶಾನ ಇಲ್ಲ. ತಾಲ್ಲೂಕಿನ 58 ಗ್ರಾಮಗಳ ಪೈಕಿ 35 ಗ್ರಾಮಗಳಿಗೆ ಸ್ಮಶಾನಕ್ಕೆ ಜಾಗ ಮಂಜೂರಾಗಿದೆ.

ತಾಲ್ಲೂಕಿನ ಶಿಂಸೆ,ಅಳೆಹಳ್ಳಿ, ದಾವಣ, ಹರಾವರಿ, ಮೇಗರಮಕ್ಕಿ, ಕೊಳಲೆ ಗ್ರಾಮದ ವ್ಯಾಪ್ತಿಯಲ್ಲಿ ಸ್ಮಶಾನಕ್ಕೆ ಜಾಗ ಗುರುತಿಸಲಾಗಿದ್ದು ಅರಣ್ಯ ಇಲಾಖೆಯ ಅಭಿಪ್ರಾಯಕ್ಕೆ ಕಳುಹಿಸಲಾಗಿದೆ. ತಾಲ್ಲೂಕಿನ ಹಲಸೂರು, ಮಾಗುಂಡಿ, ವರ್ಕಾಟೆ, ಮುಧುಗುಣಿ, ಕುಸುಬೂರು, ಮಡಬೂರು, ಬೈರಾಪುರ, ಕಣಿವೆ, ಕೆ.ಕಣಬೂರು, ಕೋಣಕರೆ, ವಿಠಲ, ಹಳೆದಾನಿವಾಸ, ಸೂಸಲವಾನಿ, ನೇರಲೆಕೊಪ್ಪ, ಆರಂಬಳ್ಳಿ ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ಕಾಯ್ದಿರಿಸುವುದು ಬಾಕಿ ಇದೆ.

ಪಟ್ಟಣ ಪಂಚಾಯಿತಿ ನಿರ್ವಹಿಸುವ ಮೆಣಸೂರು ಗ್ರಾಮ ಭದ್ರಾ ಹಿನ್ನೀರಿನ ದಡದಲ್ಲಿರುವ ಸ್ಮಶಾನ, ಹಿಳುವಳ್ಳಿ ಗ್ರಾಮದ ವ್ಯಾಪ್ತಿಯಲ್ಲಿರುವ ಸ್ಮಶಾನ, ನಾಗಲಾಪುರ ಗ್ರಾಮದ ವ್ಯಾಪ್ತಿಯಲ್ಲಿ ಸ್ಮಶಾನ, ಬಿ.ಕಣಬೂರು ಗ್ರಾಮ ಪಂಚಾಯಿತಿಯ ಅಕ್ಷರನಗರದ ವ್ಯಾಪ್ತಿಯಲ್ಲಿರುವ ಸ್ಮಶಾನ. ಬನ್ನೂರು ಗ್ರಾಮದ ಬೈರೇಗುಡ್ಡ ಗ್ರಾಮದ ವ್ಯಾಪ್ತಿಯ ಸ್ಮಶಾನ ಸುಸಜ್ಜಿತವಾಗಿದೆ. ‘ತಾಲ್ಲೂಕಿನ ಗುಬ್ಬಿಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಮಶಾನಕ್ಕೆ ಜಾಗ ಮಂಜೂರಾಗಿಲ್ಲ. ಜನರು ಅರಣ್ಯದ ಪ್ಲಾಂಟೇಷನ್‌ಗಳಲ್ಲಿ ಶವಸಂಸ್ಕಾರ ಮಾಡುವ ಸ್ಥಿತಿ ಇದೆ. ನಿವೇಶನ ಮಂಜೂರಾಗಿದೆ ಎಂಬ ಮಾಹಿತಿ ಇದೆ. ಆದರೆ ಪಹಣಿ ಲಭ್ಯವಾಗಿಲ್ಲ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ್.

ಮಾಗುಂಡಿ ಗ್ರಾಮದಲ್ಲಿ ಸ್ಮಶಾನಕ್ಕೆ ಸಮರ್ಪಕವಾದ ಜಾಗ ಹಾಗೂ ದಾರಿ ಇಲ್ಲದ ಸ್ಥಿತಿ ಇದೆ. ತಾಲ್ಲೂಕಿನ ಹೊನ್ನೆಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ7 ಗ್ರಾಮಗಳಲ್ಲೂ ಹಿಂದೂ ಸ್ಮಶಾನಕ್ಕೆ ಜಾಗ ಮಂಜೂರಾಗಿದ್ದರೂ ಬೇಲಿ ನಿರ್ಮಿಸಿಲ್ಲ.

ತಾಲ್ಲೂಕಿನ ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಮಲಾಪುರ, ಮಲ್ಲಂದೂರ, ಶೇಡಿಗಾರು, ಬೆಳ್ಳೂರು, ಸೀತೂರು, ಹಾತೂರು, ಕೊನೋಡಿ ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗ ಗುರುತಿಸಲಾಗಿದೆ. ಪರಿಶಿಷ್ಟ ಜಾತಿ, ಪಂಗಡದವರು ಹೆಚ್ಚಾಗಿರುವ ಗ್ರಾಮಗಳಲ್ಲಿ ಸಮುದಾಯಕ್ಕೆ ಸ್ಮಶಾನ ಇಲ್ಲ ಎಂದು ವಾಲ್ಮೀಕಿ ಸಂಘದ ಶೃಂಗೇರಿ ಕ್ಷೇತ್ರಾಧ್ಯಕ್ಷ ವಾಲ್ಮೀಕಿ ಶ್ರೀನಿವಾಸ್ ಹೇಳುತ್ತಾರೆ.

(ಪೂರಕ ಮಾಹಿತಿ: ಬಾಲು ಮಚ್ಚೇರಿ, ಜೆ.ಒ.ಉಮೇಶ ಕುಮಾರ್‌, ಹಾ.ಮ.ರಾಜಶೇಖರಯ್ಯ, ಕೆ.ಎನ್‌.ರಾಘವೇಂದ್ರ, ಕೆ.ವಿ.ನಾಗರಾಜ್‌, ರವಿ ಕೆಳಂಗಡಿ, ರವಿಕುಮಾರ್‌ ಶೆಟ್ಟಿಹಡ್ಲು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT