ಜಿಎಸ್‌ಟಿ: ಚಿನ್ನಬೆಳ್ಳಿ ವಹಿವಾಟು ಕುಂಠಿತ

7
ವರ್ತಕ ಹೈರಾಣ; ಗ್ರಾಹಕರ ಮಂದಗತಿ

ಜಿಎಸ್‌ಟಿ: ಚಿನ್ನಬೆಳ್ಳಿ ವಹಿವಾಟು ಕುಂಠಿತ

Published:
Updated:
Deccan Herald

ಚಿಕ್ಕಮಗಳೂರು: ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಪದ್ಧತಿ ಜಾರಿಯಾಗಿ ಒಂದು ವರ್ಷವಾಗಿದೆ. ಅನುಕೂಲ–ಅನಾನುಕೂಲಗಳ ಜತೆಗೆ ವಹಿವಾಟು ನಡೆಯುತ್ತಿದೆ. ಚಿನ್ನಬೆಳ್ಳಿ ವ್ಯಾಪಾರದ ಏರುಪೇರು, ಲಾಭನಷ್ಟಗಳು ವರ್ತಕರಿಗೆ ಸಿಹಿಕಹಿ ಅನುಭವ ನೀಡಿವೆ.

ಜಿಎಸ್‌ಟಿಯಿಂದ ಚಿನ್ನಬೆಳ್ಳಿ ವ್ಯಾಪಾರದ ಮೇಲೆ ಯಾವ ರೀತಿಯ ಪರಿಣಾಮಗಳು ಉಂಟಾಗಿವೆ ಎಂದು ನಗರದ ವರ್ತಕರು ಮತ್ತು ಗ್ರಾಹಕರು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಒಂದು ವರ್ಷದಲ್ಲಿ ಈ ತೆರಿಗೆಗೆ ಒಗ್ಗಿಕೊಳ್ಳುವುದು ಮತ್ತು ಗ್ರಾಹಕರನ್ನು ಒಗ್ಗಿಸುವುದರಲ್ಲಿ ಹೈರಾಣಾಗಿದ್ದೇವೆ ಎಂದು ವರ್ತಕರು ಹೇಳುತ್ತಾರೆ. ಜಿಎಸ್‌ಟಿ ರಸೀತಿ ಸಿಗುವುದರಿಂದ ಅನುಕೂಲವಾಗಿದೆ. ಆದರೆ ಜಿಎಸ್‌ಟಿ ಜಾರಿ ನಂತರ ಬೆಲೆ ದುಬಾರಿಯಾಗಿದೆ ಎಂಬುದು ಬಹಳಷ್ಟು ಗ್ರಾಹಕರು ಹೇಳುತ್ತಾರೆ. ಒಟ್ಟಾರೆ ಈ ತೆರಿಗೆ ಕುರಿತು ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗಿವೆ.

‘ಜಿಎಸ್‌ಟಿಯಿಂದ ಲೆಕ್ಕಪತ್ರ ನಿರ್ವಹಣೆ ಹೊರೆ ಹೆಚ್ಚಾಗಿದೆ. ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಇದ್ದಾಗ ಚಿನ್ನಬೆಳ್ಳಿಗೆ ಶೇ 1 ತೆರಿಗೆ ಇತ್ತು. ಈಗ ಅದು ಶೇ 3 ಆಗಿದೆ. ಚಿನ್ನಬೆಳ್ಳಿ ವಹಿವಾಟಿಗೆ ಹೊಡೆತ ಬಿದ್ದಿದೆ. ಗ್ರಾಹಕರಿಗೆ ಈ ತೆರಿಗೆಯನ್ನು ಮನದಟ್ಟು ಮಾಡಿಸುವುದರಲ್ಲೇ ಹೈರಾಣಾಗಿದ್ದೇವೆ. ಗ್ರಾಹಕರು ಈ ತೆರಿಗೆ ಅರ್ಥಮಾಡಿಕೊಳ್ಳಲು ಇನ್ನು ಒಂದು ವರ್ಷ ಹಿಡಿಯಬಹುದು’ ಎಂದು ನಗರದ ಎಂ.ಜಿ.ರಸ್ತೆಯ ವಿಮಲ್‌ ಜ್ಯುವೆಲ್ಲರ್‌್್ಸನ ಕೈಲಾಶ್‌ ಹೇಳುತ್ತಾರೆ.

‘ಬಹಳಷ್ಟು ಮಂದಿಗೆ ಜಿಎಸ್‌ಟಿ ಎಂದರೆ ಏನು ಎಂದು ಗೊತ್ತಿಲ್ಲ. ಹಿಂದಿಗಿಂತ ಶೇ 40 ವಹಿವಾಟು ಕುಸಿದಿದೆ. ಕಸುಬು ಮತ್ತು ಲಾಭ ಎರಡಕ್ಕೂ ಬರೆ ಬಿದ್ದಿದೆ. ಈ ಪದ್ಧತಿಯಲ್ಲಿ ಯಾರಿಗೂ ಮೋಸ ಆಗುವುದಿಲ್ಲ. ಗ್ರಾಹಕರು ನಾವ್ಯಾಕೆ ತೆರಿಗೆ ಕೊಡಬೇಕು, ಅದನ್ನು ನೀವೇ ಪಾವತಿಸಿ ಎಂದು ದಬಾಯಿಸುತ್ತಾರೆ’ ಎಂದು ಕೊಹಿನೂರ್‌ ಆಭರಣ ಅಂಗಡಿಯ ನರೇಂದ್ರಕುಮಾರ್‌ ಹೇಳುತ್ತಾರೆ.

‘ಗ್ರಾಹಕರಿಗೆ ಜಿಎಸ್‌ಟಿ ರಸೀತಿ ನೀಡುವುದರಿಂದ ಖಾತ್ರಿ ಹೆಚ್ಚಾಗಿದೆ. ವ್ಯಾಪಾರದಲ್ಲಿ ದೊಡ್ಡ ವ್ಯತ್ಯಾಸ ಆಗಿಲ್ಲ. ಗ್ರಾಹಕರು ಮಾಮೂಲಿಯಂತೆ ಬರುತ್ತಾರೆ. ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ’ ಎಂದು ಮಾರುಕಟ್ಟೆ ರಸ್ತೆಯ ಆಭರಣ ಮಳಿಗೆಯ ವ್ಯವಸ್ಥಾಪಕರು ಹೇಳುತ್ತಾರೆ.

‘ಚಿನ್ನಬೆಳ್ಳಿಗೆ ವಿಧಿಸುವ ಶೇ 3 ತೆರಿಗೆ ಅಂತಿಮವಾಗಿ ಗ್ರಾಹಕರಿಗೆ ಹೊರೆ. ಜಿಎಸ್‌ಟಿಯಿಂದ ಗ್ರಾಹಕರಿಗೆ ಬರೆ ಬಿದ್ದಿದ್ದೆ. ಈ ತೆರಿಗೆ ಹೆಸರಲ್ಲಿ ವಸ್ತುಗಳ ಬೆಲೆಗಳು ಹೆಚ್ಚಾಗಿವೆ’ ಎಂದು ವಿಜಯಪುರದ ಗೃಹಿಣಿ ಆಶಾ ಅಭಿಪ್ರಾಯಪಡುತ್ತಾರೆ.

‘ನೋಟು ಅಮಾನ್ಯೀಕರಣ ಕ್ರಮದ ನಂತರ ಒಡವೆ ಖರೀದಿಸಿರಲಿಲ್ಲ. ಈಗ ಖರೀದಿಸಲು ಬಂದಿದ್ದೇನೆ. ಜಿಎಸ್‌ಟಿ ಬಗ್ಗೆ ಅಷ್ಟೇನೂ ಗೊತ್ತಿಲ್ಲ. ಜಿಎಸ್‌ಟಿಯಿಂದ ದೀರ್ಘಾವಧಿಯಲ್ಲಿ ಒಳ್ಳೆಯ ಪರಿಣಾಮ ಉಂಟಾಗಲಿದೆ ಎಂದು ಕೇಳಿದ್ದೇನೆ’ ಎಂದು ಕೋಟೆ ನಿವಾಸಿ ನಯನಾ ಸಂತೋಷ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಆಭರಣ ತೀರಾ ಅಗತ್ಯ ಸರಕು ಅಲ್ಲ. ಸಂಪಾದನೆ–ವೆಚ್ಚದ ನಂತರ ಮಿಗುತೆ ಇದ್ದರೆ, ಶುಭಸಮಾರಂಭ (ಮದುವೆ, ನಾಮಕರಣ...) ಅನಿವಾರ್ಯವಾದರೆ ಜನರು ಚಿನ್ನಬೆಳ್ಳಿ ಖರೀದಿ ಮಾಡಲು ಚಿತ್ತ ಹರಿಸುತ್ತಾರೆ. ಪ್ರತಿ ತಿಂಗಳ ನಿಗದಿತ ತಾರೀಖಿನೊಳಗೆ ವಹಿವಾಟಿನ ವಿವರ ಸಲ್ಲಿಸುವುದನ್ನು ಕಡ್ಡಾಯಗೊಳಿಸಿದ್ದಾರೆ. ಸಲ್ಲಿಸದಿದ್ದರೆ ದಂಡ ವಿಧಿಸುತ್ತಾರೆ. ಲೆಕ್ಕಪತ್ರ ಸಿದ್ಧಪಡಿಸುವುದಕ್ಕೆ ಸಮಯ ಹೆಚ್ಚು ಹಿಡಿಯುತ್ತದೆ. ಜಿಎಸ್‌ಟಿಯಿಂದಾಗಿ ವಹಿವಾಟು ಕುಂಠಿತವಾಗಿದೆ ಎನ್ನುತ್ತಾರೆ ವ್ಯಾಪಾರಸ್ಥರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !