ಶುಕ್ರವಾರ, ಅಕ್ಟೋಬರ್ 7, 2022
28 °C

ಕೊಪ್ಪ | ‘ಧ್ವಜ ಸಂಹಿತೆ’ ಉಲ್ಲಂಘನೆ: ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪ: ‘ಸ್ವಾತಂತ್ರ್ಯ ಅಮೃತ ಮಹೋತ್ಸವ ಭಾಗವಾಗಿ ಗ್ರಾಮ ಪಂಚಾಯಿತಿ ವತಿಯಿಂದ ಮನೆಗಳಿಗೆ ವಿತರಿಸುತ್ತಿರುವ ಧ್ವಜಗಳಲ್ಲಿ ‘ಧ್ವಜ ಸಂಹಿತೆ’ಯನ್ನು ಉಲ್ಲಂಘಿಸಲಾಗಿದೆ’ ಎಂದು ಕ್ಷೇತ್ರ ರೈತ ಸಂಘದ ಕಾರ್ಯಾಧ್ಯಕ್ಷ, ಶಾನುವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ನವೀನ್ ಕರುವಾನೆ ದೂರಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ಧ್ವಜಕ್ಕೆ ಬಳಸಿದ ಬಟ್ಟೆಯೂ ಗುಣಮಟ್ಟದಿಂದ ಕೂಡಿಲ್ಲ, ಬಣ್ಣಗಳೂ ಕ್ರಮಬದ್ಧವಾಗಿಲ್ಲ. ಕೇಸರಿ, ಬಿಳಿ, ಹಸಿರು ಜತೆಗೆ ಸುತ್ತಲೂ ಬಿಳಿ ಪಟ್ಟಿ ಇದೆ ಈ ಮೂಲಕ ರಾಷ್ಟ್ರಧ್ವಜಕ್ಕೆ ಅಗೌರವ ತೋರಲಾಗಿದೆ. ಪ್ರತಿ ಮನೆಯಲ್ಲೂ ರಾಷ್ಟ್ರ ಧ್ವಜ ಹಾರಿಸುವಂತೆ ಸರ್ಕಾರ ಆದೇಶಿಸಿದೆ. ಅದರಂತೆ ಗ್ರಾಮ ಪಂಚಾಯಿತಿಯಲ್ಲಿ ಧ್ವಜವೊಂದಕ್ಕೆ ₹38 ರಂತೆ ಮಾರಾಟ ಮಾಡಲಾಗುತ್ತಿದೆ’ ಎಂದರು.

‘ಆದೇಶ ಪ್ರತಿಯಲ್ಲಿ ಧ್ವಜ ಸಂಹಿತೆ ಉಲ್ಲಂಘಿಸಿದವರಿಗೆ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಉಲ್ಲೇಖಿಸಲಾಗಿದೆ. ಕೂಲಿ ಕಾರ್ಮಿಕನೊಬ್ಬ ಮನೆಯಲ್ಲಿ ಧ್ವಜ ಹಾರಿಸಿ, ಕೆಲಸಕ್ಕೆ ಹೋದಾಗ ಆಕಸ್ಮಿಕವಾಗಿ ಏನಾದರೂ ಧ್ವಜಕ್ಕೆ ಅಪಮಾನವಾದರೆ, ಅದರ ಬಗ್ಗೆ ಅರಿವಿರದ ಕೂಲಿ ಕಾರ್ಮಿಕ ಶಿಕ್ಷೆಗೆ ಒಳಗಾಗುತ್ತಾನೆ ಎಂಬ ಆತಂಕ ಎದುರಾಗಿದೆ’ ಎಂದು ತಿಳಿಸಿದರು.

‘ಮನೆ ಇಲ್ಲದವರಿಗೆ ಮನೆ ನಿರ್ಮಿಸಿಕೊಡುವುದು ಅಥವಾ ಮೂಲಭೂತ ಸೌಕರ್ಯ ಕಲ್ಪಿಸುವ ಮೂಲಕ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಅರ್ಥವತ್ತಾಗಿ ಆಚರಿಸಬಹುದಿತ್ತು. ರಾಷ್ಟ್ರ ಧ್ವಜವನ್ನು ಮಾರಾಟ ಮಾಡುವಂತಹ ಪರಿಸ್ಥಿತಿ ಬರಬಾರದಿತ್ತು’ ಎಂದ ಅವರು, ಧ್ವಜದಲ್ಲಿ ಬಿಳಿ ಪಟ್ಟಿ ಇರುವುದನ್ನು ಪ್ರದರ್ಶಿಸಿದರು.

ಮುಖಂಡರಾದ ಬರ್ಕತ್ ಆಲಿ, ಹೊಂಚಿಕೊಳಲು ದಿನೇಶ್ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು