ಜೋಸೆಫ್.ಎಂ
ಆಲ್ದೂರು: ಸಮೀಪದ ಮಲ್ಲಂದೂರು ಪ್ರಾಥಮಿಕ ಆರೋಗ್ಯ ಕೇಂದ್ರ ಸಮಸ್ಯೆಗಳ ಆಗರವಾಗಿದ್ದು, ತುರ್ತು ಸಂದರ್ಭಗಳಲ್ಲಿ ಜನರು ಪರದಾಡುವಂತಾಗಿದೆ.
ಗ್ರಾಮದ ಮುಖಂಡ ತಿಮ್ಮೇಗೌಡ ಮಾತನಾಡಿ, ‘ಮಲ್ಲೇನಹಳ್ಳಿ ಮತ್ತು ಮಲ್ಲಂದೂರು ಆಸ್ಪತ್ರೆಯನ್ನು 83 ವರ್ಷಗಳ ಹಿಂದೆ ಬ್ರಿಟಿಷರ ಆಡಳಿತ ಅವಧಿಯಲ್ಲಿ ನಿರ್ಮಿಸಲಾಗಿದೆ. ಸುತ್ತಲಿನ 20 ಹಳ್ಳಿಗಳ ಜನರು ಆರೋಗ್ಯ ಸೇವೆಗಾಗಿ ಈ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ.ಈ ಹಿಂದೆ ಪ್ರಕಾಶ್ ಎಂಬ ವೈದ್ಯರು ಇದ್ದಾಗ ಆಸ್ಪತ್ರೆಯಲ್ಲಿ 24×7 ವೈದ್ಯಕೀಯ ಸೇವೆ ದೊರೆಯುತ್ತಿತ್ತು. ಶಿರವಾಸೆ, ಬೊಗಸೆ, ಆವತಿ ಮುಂತಾದ ಕಡೆಗಳಿಂದ ಪ್ರತಿದಿನ 100ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆಗಾಗಿ ಭೇಟಿ ಕೊಡುತ್ತಿದ್ದರು. ಆದರೆ, ಈಗ ಆಸ್ಪತ್ರೆಯ ಕಟ್ಟಡ, ವಸತಿಗೃಹ ಶಿಥಿಲಾವಸ್ಥೆ ತಲುಪಿ ಪಾಳು ಬಿದ್ದಿದೆ. ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಸರ್ಕಾರ, ಜನಪ್ರತಿನಿಧಿಗಳು ಆಸಕ್ತಿ ವಹಿಸಬೇಕು’ ಎಂದು ಆಗ್ರಹಿಸಿದರು.
ಈ ಆಸ್ಪತ್ರೆಗೆ ಗುತ್ತಿಗೆ ಆಧಾರದಲ್ಲಿ ಒಬ್ಬ ಶುಶ್ರೂಷಕಿಯನ್ನು ನೇಮಿಸಲಾಗಿದೆ. ಸದ್ಯ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಸಂಜೆ 4 ಗಂಟೆವರೆಗೆ ಇದ್ದು, ಆಣೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳುತ್ತಾರೆ. ಹೆರಿಗೆ,ಅಪಘಾತ, ಮುಂತಾದ ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಚಿಕ್ಕಮಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗಿದೆ.
ಆಸ್ಪತ್ರೆಯಲ್ಲಿ ಮೊದಲಿನಂತೆ 24x7 ವೈದ್ಯಕೀಯ ಸೌಲಭ್ಯ ಲಭಿಸುವಂತೆ ಮಾಡಬೇಕು, ಕಟ್ಟಡ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ಬಿ.ಆರ್ ನಾಗರಾಜ್ ಮಾಕೋಡು, ಧರ್ಮಸ್ಥಳ ಒಕ್ಕೂಟದ ಮುಖಂಡ ಧರ್ಮರಾಜ್, ಕಾಫಿ ಬೆಳೆಗಾರ ಸಿ.ಎಸ್ ಶಶಿಧರ್ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎಸ್ ಅಹಮದ್ ಒತ್ತಾಯಿಸಿದ್ದಾರೆ.
‘ಆಸ್ಪತ್ರೆಗೆ ಕುಡಿಯುವ ನೀರಿನ ಟ್ಯಾಂಕ್, ಆವರಣಗೋಡೆಗೆ ಬಣ್ಣ, ಆಸ್ಪತ್ರೆ ಆವರಣದಲ್ಲಿ ಪಾರ್ಕ್ ನಿರ್ಮಾಣಕ್ಕೆ ₹5 ಲಕ್ಷವನ್ನು ನರೇಗಾ ಯೋಜನೆಯಡಿ ಮೀಸಲಿಡಲಾಗಿದೆ. ಆಸ್ಪತ್ರೆಯ ದುರಸ್ತಿ ಮತ್ತು ರಿಪೇರಿಗೆ ₹15 ಲಕ್ಷ ಅನುದಾನ ಜಿಲ್ಲಾ ಪಂಚಾಯಿತಿಯಿಂದ ಒದಗಿಸಲಾಗಿದ್ದು ಟೆಂಡರ್ ಪ್ರಕ್ರಿಯೆಗೆ ಕಳುಹಿಸಲಾಗಿದೆ, ಶೀಘ್ರ ಕೆಲಸ ಆರಂಭವಾಗಲಿದೆ. ಪಂಚಾಯಿತಿ ಅಧ್ಯಕ್ಷ ಸಂದೀಪ್ ಮಾಕೋಡು ಅವರ ಮೂಲಕ ಶಾಸಕರಿಗೆ ಆಸ್ಪತ್ರೆಯ ಅಭಿವೃದ್ಧಿ ಕುರಿತು ಪತ್ರದ ಮೂಲಕ ಮನವಿ ಮಾಡಲಾಗಿದೆ‘ ಎಂದು ಪಿಡಿಒ ಜಗನ್ನಾಥ್ ತಿಳಿಸಿದರು.
ಪಾಳುಬಿದ್ದ ಆಸ್ಪತ್ರೆ ಕಟ್ಟಡ ನೆಲಸಮ ಮಾಡಲು ಕೆಎಸ್‌ಎಸ್‌ಆರ್‌ಡಿಪಿ ಎಂಜಿನಿಯರ್‌ಗಳ ಮೂಲಕ ವರದಿ ಪಡೆಯಲಾಗಿದೆ. ಸಿಎಸ್ಆರ್ ಅನುದಾನದ ಮೂಲಕ ಹಿರೇಮಗಳೂರು ಆಸ್ಪತ್ರೆಯನ್ನು ಗುಣಮಟ್ಟದಲ್ಲಿ ನಿರ್ಮಿಸಿರುವಂತೆ ಬೊಗಸೆ ಗ್ರಾಮದ ಮಹಾಚಂದ್ರ ಪ್ರತಿಷ್ಠಾನದ ಮುಖ್ಯಸ್ಥರಾದ ದಾನಿ ರವಿಶಂಕರ್ ಮೂಲಕ ಆಸ್ಪತ್ರೆ ನಿರ್ಮಾಣಕ್ಕೆ ₹1 ಕೋಟಿ ಸಿಎಸ್ಆರ್ ಅನುದಾನಕ್ಕಾಗಿ ಮನವಿ ಮಾಡಲಾಗಿದೆ. ಆಸ್ಪತ್ರೆಯ ತಾತ್ಕಾಲಿಕ ದುರಸ್ತಿಗಿಂತಲೂ ಭವಿಷ್ಯದ ದೃಷ್ಟಿಯಿಂದ ಶಾಶ್ವತ ಪರಿಹಾರಕ್ಕೆ ಒತ್ತು ನೀಡಲಾಗಿದೆ’ ಎಂದು ಡಿಎಚ್‌ಒ ಅಶ್ವತ್ಥ್ ಬಾಬು ತಿಳಿಸಿದರು.
ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ಈಗಾಗಲೇ ಮಾಹಿತಿ ಪಡೆದುಕೊಂಡಿದ್ದೇನೆ. ಅಗತ್ಯವಿರುವ ಕ್ರಮಗಳನ್ನು ತುರ್ತುಗಾಗಿ ಕೈಗೊಳ್ಳಲಾಗುವುದು
-ನಯನಾ ಮೋಟಮ್ಮ ಶಾಸಕಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.