ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶ್ಲೇಷಾ ಅಬ್ಬರ; ನಲುಗಿದ ಮಲೆನಾಡು

ಚೆನ್ನಹಡ್ಲು ಗ್ರಾಮದ ಸಂತೋಷ ನಾಪತ್ತೆ
Last Updated 9 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಆಶ್ಲೇಷಾ ಮಳೆಯ ಅಬ್ಬರಕ್ಕೆ ಜಿಲ್ಲೆಯ ಮಲೆನಾಡು ಭಾಗವು ನಲುಗಿದೆ. ವಿವಿಧೆಡೆ ಈವರೆಗೆ 60ಕ್ಕೂ ಹೆಚ್ಚು ಮನೆಗಳು ಕುಸಿದಿವೆ, 150ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಧರೆಗುರುಳಿವೆ. 10ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ.

ಮುಳುಗಡೆ ಭೀತಿಯಿಂದಾಗಿ ಮೂಡಿಗೆರೆ ತಾಲ್ಲೂಕಿನ ಹೇಮಾವತಿ ನದಿ ಪಾತ್ರದ ಹುಗ್ಗೆಹಳ್ಳಿಯ 40 ಕುಟುಂಬಗಳಿಗೆ ಗೋಣಿಬೀಡು ಪರಿಹಾರ ಕೇಂದ್ರದಲ್ಲಿ ತಾತ್ಕಾಲಿಕವಾಗಿ ತಂಗಲು ವ್ಯವಸ್ಥೆ ಮಾಡಲಾಗಿದೆ. ಗುತ್ತಿ, ಬಾಳೂರು, ಮಾಡ್ರಳ್ಳಿ, ದೇವನಗುಲ್‌ ಗ್ರಾಮಗಳಲ್ಲಿ 50ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಹಂತೂರು ಬಳಿ ಶ್ರೀವತ್ಸ ಎಂಬಾತ ಹೇಮಾವತಿ ನದಿಯಲ್ಲಿ ಕೊಚ್ಚಿಹೋಗಿದ್ದು, ಶೋಧ ಮುಂದುವರಿದೆ.

ಹಿರೇಬೈಲು–ಮಲ್ಲೇಶನಗುಡ್ಡ ರಸ್ತೆಯ ಚೆನ್ನಹಡ್ಲು ಗ್ರಾಮದ ಸಂತೋಷ (35) ನಾಪತ್ತೆಯಾಗಿದ್ದಾರೆ. ಮನೆ ಮುಂದು ಗುಡ್ಡಕುಸಿದಿದೆ. ಗುಡ್ಡ ಕುಸಿದು ಇಡೀ ಊರಿನಲ್ಲಿ ಭಯ ಆವರಿಸಿದೆ. 10 ಕುಟುಂಬದವರು ಮನೆ ತೊರೆದು ಮಲ್ಲೇಶನಗುಡ್ಡ ಎಸ್ಟೇಟ್‌ ಕಚೇರಿಯಲ್ಲಿ ಆಶ್ರಯ ಪಡೆದಿದ್ದಾರೆ.

ಹಿರೇಮಗಳೂರಿನ ಮುತ್ತಿನಮ್ಮ ದೇಗುಲ ಸಮೀಪದ ಕುಮಾರಸ್ವಾಮಿ ಅವರ ವಾಸದ ಮನೆಯ ಗೋಡೆ ಕುಸಿದು ಹಾನಿಯಾಗಿದೆ. ಮನೆಯೊಳಗಿದ್ದ ವಸ್ತುಗಳು ನಾಶವಾಗಿವೆ.

ಆವುತಿ ಹೋಬಳಿಯ ಕುಂಬಾರಹಳ್ಳಿಯಲ್ಲಿ ಗುಡ್ಡದಮಣ್ಣು ಕುಸಿದು ಮನೆಗೆ ಹಾನಿಯಾಗಿದೆ. ಮತ್ತಾವರದಲ್ಲಿ ಗಂಗಯ್ಯ ಎಂಬವರ ಮನೆ ಕುಸಿದಿದೆ. ವಸ್ತಾರೆ ಹೋಬಳಿಯ ಕೂದುವಳ್ಳಿಯಲ್ಲಿ ಮಂಜುಳಾ ಅವರ ಮತ್ತು ಲಕ್ಯಾ ಹೋಬಳಿಯ ಬೆಳವಾಡಿಯಲ್ಲಿ ಪ್ರಕಾಶ್‌ ಸಿಂಗ್ ಅವರ ಮನೆ ಕುಸಿದಿದೆ.

ಭಾರಿ ಮಳೆಯಿಂದಾಗಿ ಗುಡ್ಡದ ಮಣ್ಣು ಕುಸಿದು ವಿವಿಧೆಡೆ ಅವಾಂತರವಾಗಿದೆ. ಮಲೆನಾಡು ಭಾಗದಲ್ಲಿ ಬಹಳಷ್ಟು ರಸ್ತೆಗಳು ಜಲಾವೃತವಾಗಿ ಸಂಚಾರ ಕಡಿತಗೊಂಡಿವೆ. ಮಳೆಗೆ ಇಡೀ ಮಲೆನಾಡು ನಲುಗಿದೆ. ಆಸ್ಪತ್ರೆ, ಕಚೇರಿ ಮೊದಲಾದವಕ್ಕೆ ಹೋಗಲು ಪರದಾಡುವಂತಾಗಿದೆ. ಹಲವಾರು ಕಡೆ ಗುಡ್ಡದ ಮಣ್ಣು ಕುಸಿದಿದೆ. ಈ ಭಾಗದ ಗ್ರಾಮಗಳ ಜನರಲ್ಲಿ ಭಯ ಮೂಡಿದೆ.

ಗಿರಿಶ್ರೇಣಿಯ ಮಾರ್ಗದಲ್ಲಿ ಹಲವು ಕಡೆ ಗುಡ್ಡದ ಮಣ್ಣು ರಸ್ತೆಗೆ ಅಡ್ಡಲಾಗಿ ಕುಸಿದಿದೆ. ಮರಗಳು, ಕೊಂಬೆಗಳು ಬಿದ್ದಿವೆ. ಚಿಕ್ಕಮಗಳೂರು ನಗರಕ್ಕೆ ನೀರು ಪೂರೈಸುವ ಮೂಲಗಳಲ್ಲಿ ಒಂದಾದ ಹಿರೇಕೊಳಲೆ ಕೆರೆ ಭರ್ತಿಯಾಗಿದೆ. ಕಣಿವೆಹಳ್ಳಿ ಬಳಿ ಹಳಿ ಮೇಲೆ ಗುಡ್ಡದ ಕಲ್ಲುಮಣ್ಣು ಕುಸಿದು ಸಂಚಾರಕ್ಕೆ ಅಡ್ಡಿಯಾಗಿತ್ತು.

ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡತೆ ತಾಲ್ಲೂಕುವಾರು ಚಿಕ್ಕಮಗಳೂರು 7.8, ಕಡೂರು 3.9, ಕೊಪ್ಪ 155, ಮೂಡಿಗೆರೆ 177, ಎನ್‌.ಆರ್‌.ಪುರ 8.7, ಶೃಂಗೇರಿ 16.9, ತರೀಕೆರೆ 7.9 ಸೆಂ.ಮೀ ಮಳೆಯಾಗಿದೆ. ಮೂಡಿಗೆರೆಯ ಜಾವಳಿಯಲ್ಲಿ ಅತಿಹೆಚ್ಚು 21.5 ಸೆಂ.ಮೀ ಮಳೆಯಾಗಿದೆ.

5 ತಾಲ್ಲೂಕುಗಳ ಶಾಲಾಕಾಲೇಜಿಗೆ ರಜೆ ಇಂದು
ಜಿಲ್ಲೆಯ ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ ಮತ್ತು ಎನ್ಆರ್‌ ಪುರ ತಾಲ್ಲೂಕುಗಳ ಶಾಲಾಕಾಲೇಜುಗಳಿಗೆ ಆ.10ರಂದು ರಜೆ ಘೋಷಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT