ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಅಬ್ಬರ: ಜನಜೀವನ ಅಸ್ತವ್ಯಸ್ತ

ಕಳಸ, ಬಾಳೆಹೊನ್ನೂರು, ಕೊಟ್ಟಿಗೆಹಾರದಲ್ಲಿ ಮಳೆ, ಕಾಫಿ, ಅಡಿಕೆಗೆ ಹಾನಿ
Last Updated 15 ನವೆಂಬರ್ 2021, 3:11 IST
ಅಕ್ಷರ ಗಾತ್ರ

ಕೊಪ್ಪ: ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಭಾನುವಾರ ಮಧ್ಯಾಹ್ನ ವ್ಯಾಪಕ ಮಳೆ ಸುರಿದಿದ್ದು, ಕೆಲ ಹೊತ್ತು ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಮಧ್ಯಾಹ್ನ 1.45 ಕ್ಕೆ ಆರಂಭಗೊಂಡ ಮಳೆ ಅರ್ಧ ಗಂಟೆ ಸುರಿಯಿತು. ಚರಂಡಿಯಲ್ಲಿ ಹರಿಯಬೇಕಾದ ನೀರು ಪಟ್ಟಣದ ರಸ್ತೆ ಮೇಲೆ ಹರಿಯಿತು. ಎಂ.ಎಸ್.ದ್ಯಾವೇಗೌಡ ಸ್ಮಾರಕ ಸಾರ್ವಜನಿಕ ಆಸ್ಪತ್ರೆ ಸಮೀಪದ ಹೋಟೆಲ್, ಸಲೂನ್‌ ಅಂಗಡಿಗಳ ಒಳಗೆ ನೀರು ನುಗ್ಗಿದ ಪರಿಣಾಮ ಹಾನಿ ಉಂಟಾಗಿದೆ.

ಕೆಲವು ದಿನಗಳಿಂದ ತಾಲ್ಲೂಕಿನ ವಿವಿಧೆಡೆ ಎಡೆಬಿಡದೆ ಮಳೆಯಾಗುತ್ತಿದೆ. ತೋಟದಲ್ಲಿ ಅಡಿಕೆ ಗೋ‌ನೆ ಹಣ್ಣಾಗಿ ಉದುರುತ್ತಿವೆ, ಅಡಿಕೆ ಕಟಾವು ಸಾಧ್ಯವಾಗದೇ ರೈತರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಭತ್ತದ ಗದ್ದೆಗಳಲ್ಲಿ ಈಗಾಗಲೇ ತೆನೆ ಬಲಿತಿದ್ದು ಅಕಾಲಿಕ ಮಳೆಯಿಂದ ಹಾನಿ ಆಗುತ್ತಿದೆ.

ಸಂಪರ್ಕ ಸ್ಥಗಿತ

ಬಾಳೆಹೊನ್ನೂರು: ಮಾಗುಂಡಿ ಹಾಗೂ ಜಯಪುರ ಸುತ್ತಮುತ್ತ ಭಾನುವಾರ ಒಂದು ಗಂಟೆಗೂ ಅಧಿಕ ಸಮಯ ಮಳೆ ಸುರಿದಿದೆ.

ಕಳಸ ಬಾಳೆಹೊನ್ನೂರು ನಡುವಿನ ಮಹಾಲ್ ಗೋಡು ಬಳಿ ರಸ್ತೆಯ ಮೇಲೆ ಹಳ್ಳದ ನೀರು ಹರಿದು ಸಂಪರ್ಕ ಸ್ಥಗಿತವಾಗಿತ್ತು. ಮೀಪದಲ್ಲಿ ತಾತ್ಕಾಲಿಕವಾಗಿ ಮೋರಿಯ ಎರಡೂ ಬದಿಗಳಲ್ಲಿ ಅಳವಡಿಸಿದ್ದ ಮರಳಿನ ಚೀಲಗಳು ಮಳೆಯ ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ. ಯಾವುದೇ ಕ್ಷಣದಲ್ಲೂ ಅಪಾಯ ಎದುರಾಗಬಹುದು. ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸುವಂತಾಗಿದೆ.
ಮಹಲ್ ಗೋಡು ಬಳಿ ನೀರಿನಲ್ಲಿ ಹಸು ಕೊಚ್ಚಿಕೊಂಡು ಹೋಗಿದ್ದು, ಕೆಲ ಹೊತ್ತಿನ ನಂತರ ಕಷ್ಟ ಪಟ್ಟು ದಡ ಸೇರಿದ ವಿಡಿಯೊ ವೈರಲ್ ಆಗಿದೆ.
ಜಯಪುರ: ಮಧ್ಯಾಹ್ನದ ವೇಳೆ ಒಂದು ಗಂಟೆ ಮಳೆ ಸುರಿದಿದೆ. ಇದರಿಂದಾಗಿ ಕೆಲ ಹೊತ್ತು ಜನಜೀವನ ಆಸ್ತವ್ಯಸ್ತಗೊಂಡಿತು. ಭಾನುವಾರ ಸಂತೆ ಇದ್ದ ಕಾರಣ ಹೊರ ಊರುಗಳಿಂದ ಬಂದಿದ್ದ ಜನ ಪರದಾಡಿದರು. ಅಡಿಕೆ, ಕಾಫಿ ಬೆಳೆಗಾರರಿಗೆ ಮಳೆಯಿಂದಾಗಿ ನಷ್ಟ ಉಂಟಾಗಿದೆ.

‌ತೋಟಗಳಿಗೆ ಹಾನಿ

ಕಳಸ: ತಾಲ್ಲೂಕಿನ ಬಾಳೆಹೊಳೆ ಆಸುಪಾಸಿನಲ್ಲಿ ಭಾನುವಾರ ವ್ಯಾಪಕ ಮಳೆ ಸುರಿದ ಪರಿಣಾಮ ಕಾಫಿ, ಅಡಿಕೆ ತೋಟಗಳಿಗೆ ಹಾನಿ ಸಂಭವಿಸಿದೆ.

ಮಧ್ಯಾಹ್ನದ ವೇಳೆಗೆ ಕಗ್ಗತ್ತಲು ಕವಿದು ಮಳೆ ಸುರಿಯಲಾರಂಭಿಸಿತು. ವರ್ಷಧಾರೆ ರಭಸಕ್ಕೆ ಅಡಿಕೆ ಮತ್ತು ಕಾಫಿ ತೋಟಗಳಲ್ಲಿ ನೀರು ತುಂಬಿ ಹರಿಯಿತು. ಪರಿಣಾಮ ತೋಟಗಳ ಮೇಲ್ಮಣ್ಣು ಕೊಚ್ಚಿಕೊಂಡು ಹೋಗಿ ನಷ್ಟ ಸಂಭವಿಸಿದೆ.

ಮಳೆಯಿಂದಾಗಿ ಬಸರೀಕಟ್ಟೆ- ಬಾಳೆಹೊಳೆ- ಕಳಸ ರಸ್ತೆಯಲ್ಲಿ ನೀರಿನ ಪ್ರವಾಹ ತುಂಬಿತ್ತು. ರಸ್ತೆ ಪಕ್ಕದ ತೋಟಗಳ ಧರೆಯು ಜರಿಯುತ್ತಿದ್ದ ದೃಶ್ಯಗಳು ವೈರಲ್ ಆಗಿವೆ. ಮಳೆ ನೀರಿನಿಂದಾಗಿ ಅಡಿಕೆ ತೋಟದಲ್ಲಿ ಉದುರಿ ಬಿದ್ದಿದ್ದ ಹಣ್ಣು ಅಡಿಕೆ ಹಳ್ಳಕ್ಕೆ ಹರಿದು ಹೋಗಿದೆ. ಇದರಿಂದ ಬೆಳೆಗಾರರಿಗೆ ನಷ್ಟ ಸಂಭವಿಸಿದೆ.

ಬಾಳೆಹೊಳೆ ಸಮೀಪ ಭಾನುವಾರ 125 ಮಿ.ಮೀ ಮಳೆ ಸುರಿದ ಬಗ್ಗೆ ದಾಖಲೆ ಆಗಿದೆ. ಇದ್ದಕ್ಕಿದ್ದಂತೆ ಸುರಿದ ಮಳೆಯಿಂದಾಗಿ ಅಡಿಕೆ ಸಂಸ್ಕರಣೆ ಆರಂಭಿಸಿದ್ದವರಿಗೆ ತೊಂದರೆ ಆಗಿದೆ. ಗಿಡದಲ್ಲಿ ಈಗಾಗಲೆ ಹಣ್ಣಾಗಿರುವ ಕಾಫಿ ಫಸಲು ಕೂಡ ನೆಲಕಚ್ಚುತ್ತಿದೆ. ಭತ್ತದ ಬೆಳೆಗೂ ಮಳೆ ಹಾನಿ ಮಾಡಿದೆ.

ಕೊಟ್ಟಿಗೆಹಾರ: ಧಾರಾಕಾರ ಮಳೆ

ಕೊಟ್ಟಿಗೆಹಾರ: ಬಣಕಲ್, ಕೊಟ್ಟಿಗೆಹಾರ, ಬಾಳೂರು, ನಿಡುವಾಳೆ, ಬಗ್ಗಸಗೋಡು, ಜಾವಳಿ ಸೇರಿದಂತೆ ಹಲವು ಕಡೆಗೆ ಭಾನುವಾರ ಮಳೆ ಸುರಿಯಿತು.

ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಸಂಜೆ ವೇಳೆಗೆ ಏಕಾಏಕಿಯಾಗಿ ಗುಡುಗು ಸಹಿತ ಮಳೆ ಸುರಿಯಿತು.

ಮಳೆಯಿಂದ ರಸ್ತೆ ಇಕ್ಕೆಲಗಳಲ್ಲಿ ಚರಂಡಿಗಳಲ್ಲಿ ನೀರು ಉಕ್ಕಿ ಹರಿಯಿತು. ಕಾಫಿ ಒಣಗಿಸಲಾಗದೆ ಬೆಳೆಗಾರರು ಕಣದಲ್ಲಿ ಹರಡಿದ್ದ ಕಾಫಿ ರಕ್ಷಣೆಗೆ ಪರದಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT