ತರೀಕೆರೆ: ತಾಲ್ಲೂಕಿನಾದ್ಯಂತ ಭಾನುವಾರ ರಾತ್ರಿ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಸಿಡಿಲು ಬಡಿದು ಹಲವೆಡೆ ಹಾನಿ ಸಂಭವಿಸಿದೆ.
ಪಟ್ಟಣದ ಬಿ.ಎಚ್.ರಸ್ತೆ ಸೇರಿದಂತೆ ಅನೇಕ ಕಡೆಯಲ್ಲಿ ಚರಂಡಿಗಳು ತುಂಬಿ ಹರಿದಿವೆ. ತಾಲ್ಲೂಕಿನ ಕಸಬಾ ಹೋಬಳಿಯ ಬೇಲೆನಹಳ್ಳಿ ತಾಂಡಾದ ನವ ಗ್ರಾಮದಲ್ಲಿ ಕಾರ್ಮಿಕರೊಬ್ಬರ ಮನೆಯ ಚಾವಣಿ ಕುಸಿದಿದ್ದು, ಗ್ರಾಮದ ರೈತರ ತೋಟಗಳಿಗೆ ಮಳೆ ನೀರು ನುಗ್ಗಿದೆ.
ಪಿರುಮೇನಹಳ್ಳಿಯಲ್ಲಿ ಮರ ರಸ್ತೆಗೆ ಬಿದ್ದು ಕೆಲವು ಕಾಲ ಸಂಚಾರ ಅಸ್ತವ್ಯಸ್ತವಾಗಿದ್ದು, ವಿದ್ಯುತ್ ಸಂಚಾರ ಸ್ಥಗಿತವಾಗಿತ್ತು. ಪಟ್ಟಣದಲ್ಲಿ 5.6, ಲಕ್ಕವಳ್ಳಿಯಲ್ಲಿ 6.2, ರಂಗೇನಹಳ್ಳಿಯಲ್ಲಿ 5.4, ಲಿಂಗದಹಳ್ಳಿ 4.1, ಉಡೇವಾ 4.1, ತಣಿಗೆಬೈಲು 7.5, ಹುಣಸಘಟ್ಟ 3.0 ಸೆಂ.ಮೀ. ಮಳೆ ಪ್ರಮಾಣ ದಾಖಲಾಗಿದೆ.
ಸಿಡಿಲು ಬಡಿದು ಹಾನಿ:ಅಮೃತಾಪುರ ಹೋಬಳಿಯ ನೇರಲಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ವಿಠಲಾಪುರ ಗ್ರಾಮದಲ್ಲಿ ರೈತ ಕರುಣಾಕರ ಎಂಬುವರಿಗೆ ಸೇರಿದ ಶೆಡ್‌ಗೆ ಭಾನುವಾರ ರಾತ್ರಿ ಸಿಡಿಲು ಬಡಿದು ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತುಗಳು ನಷ್ಟವಾಗಿದೆ.
ಶೆಡ್‌ನಲ್ಲಿದ್ದ ಟ್ರ್ಯಾಕ್ಟರ್ ಹಾಗೂ ಅಡಿಕೆ ಸುಲಿಯು ಯಂತ್ರವು ಸುಟ್ಟುಹೋಗಿದೆ. ದಾಸ್ತಾನು ಮಾಡಲಾಗಿದ್ದ ಕೊಬ್ಬರಿ ಮತ್ತು ಅಡಿಕೆಗೂ ಹಾನಿಯಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ. ಶಾಸಕ ಡಿ.ಎಸ್.ಸುರೇಶ್, ಉಪ ವಿಭಾಗಾಧಿಕಾರಿ ಸಿದ್ದಲಿಂಗರೆಡ್ಡಿ, ತಹಶೀಲ್ದಾರ್ ವಿಶ್ವೇಶ್ವರ ರೆಡ್ಡಿ, ಕಂದಾಯ ನಿರೀಕ್ಷಕ ಕಾಂತರಾಜು, ಗ್ರಾಮ ಲೆಕ್ಕಿಗ ಪ್ರತಾಪ್ ಭೇಟಿ ನೀಡಿದರು.
ರೈತನ ತಾಯಿ ನಿಧನ: ರೈತ ಕರುಣಾಕರ ಅವರ ತಾಯಿ ಗೌರಮ್ಮ (70) ಸೋಮವಾರ ನಿಧನರಾದರು.
ಗೌರಮ್ಮ ಅವರು ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದರು. ತಾಯಿ ನಿಧನದಿಂದ ಕಾಂತರಾಜು ಅವರಿಗೆ ಮತ್ತೊಂದು ಬರ ಸಿಡಿಲು ಬಡಿದಂತಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.