ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು ಜಿಲ್ಲೆಯಲ್ಲಿ ವರುಣನ ಅಬ್ಬರ: ಇಬ್ಬರು ನೀರುಪಾಲು

ಅಜ್ಜಂಪುರ: ಜಲಾವೃತವಾದ ಹೊಲ-, ಸೇತುವೆ, ಬೆಳೆ ನಷ್ಟ
Last Updated 21 ನವೆಂಬರ್ 2021, 3:09 IST
ಅಕ್ಷರ ಗಾತ್ರ

ಅಜ್ಜಂಪುರ: ತಾಲ್ಲೂಕಿನಾದ್ಯಂತ ಮಳೆಯು ಅವಾಂತರ ಸೃಷ್ಟಿಸಿದೆ. ಕೆಲವೆಡೆ ಸೇತುವೆಗಳು ಮುಳುಗಡೆಯಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ.

ಶುಕ್ರವಾರ ಬಿದ್ದ ಮಳೆಗೆ ತಾಲ್ಲೂಕಿನ ಹೆಗ್ಗಡಿಹಳ್ಳಿ ಗ್ರಾಮದಲ್ಲಿ ಹೊಲಕ್ಕೆ ತೆರಳಿದ್ದ ರೈತ ಆನಂದಪ್ಪ (43) ಮಳೆ ನೀರಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದಾರೆ.

ತಾಲ್ಲೂಕಿನಲ್ಲಿ ಮಳೆಯಿಂದ 24ಕ್ಕೂ ಅಧಿಕ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಗೋಡೆ ಕುಸಿತ, ಚಾವಣಿ ಕುಸಿತದಂತಹ ಘಟನೆ ನಡೆದಿದೆ.

ಬುಕ್ಕಾಂಬುಧಿ ಭಾಗದ ಖಾನಿಹಳ್ಳದ ಭಾಗದ ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ಬುಕ್ಕಾಂಬುಧಿ- ಶಿವನಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಅನುವನಹಳ್ಳಿ ರಸ್ತೆಯಲ್ಲಿನ ಸೇತುವೆ ಮುಳುಗಡೆ ಗೊಂಡಿದ್ದು, ಶಿವನಿ- ಬಂಕನಗಟ್ಟೆ ಸಂಪರ್ಕ ಕಳೆದುಕೊಂಡಿದೆ. ವಾಹನ ಸಂಚಾರ ಸ್ಥಗಿತಗೊಂಡಿದ್ದು, ಜನಸಾಮಾನ್ಯರು ಊರುಗಳಿಗೆ ತೆರಳಲು ಪರದಾಡುವಂತಾಗಿದೆ.

ಬುಕ್ಕಾಂಬುಧಿ ಭಾಗದಲ್ಲಿ ವರುಣನ ಅಬ್ಬರಕ್ಕೆ ಹೊಲ- ತೋಟಗಳು ಜಲಾವೃತಗೊಂಡಿವೆ. ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಅಡಿಕೆ ಕೊಯ್ಲು ವಿಳಂಬವಾಗಿದೆ. ಸುಮಾರು 150 ಎಕರೆ ತೋಟದಲ್ಲಿ ಮೂರನೇ ಕೊಯಿಲು ನಡೆಸಬೇಕಾದ ರೈತರು ಮೊದಲ ಕೊಯಿಲು ತೆಗೆಯಲು ಸಾಧ್ಯವಾಗಿಲ್ಲ.

ಮಳೆಗೆ ಬಿದ್ದ ಅಡಿಕೆ ಕೊಚ್ಚಿ ಹೋಗಿವೆ. ತಮ್ಮಟದಹಳ್ಳಿ- ಅಂತರಘಟ್ಟೆ ಭಾಗದಲ್ಲಿನ ರಾಗಿ ತೆನೆ ನೆಲಕಚ್ಚಿದ್ದು, ರಾಗಿ ಕಾಳು ಮೊಳಕೆಯೊಡೆದು ಹಾಳಾಗಿವೆ. ಮೆಣಸಿನಕಾಯಿ ಗಿಡದಲ್ಲಿ ಹಣ್ಣಾಗಿ ಕೊಳೆಯುತ್ತಿವೆ. ಮುಂಗಾರು ಪ್ರಮುಖ ಬೆಳೆ ಕಡಲೆಕಾಳು ಬಿತ್ತನೆ ಕಂಡಿದ್ದರೂ, ತೀವ್ರ ತೇವಾಂಶದಿಂದ ಮೊಳಕೆಯೊಡೆದಿಲ್ಲ ಎಂದು ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.

‘ಬುಕ್ಕಾಂಬುಧಿಯ ಬುಕ್ಕರಾಯನ ಕೆರೆ ತುಂಬಿ, ಕೋಡಿ ಬಿದ್ದಿದೆ. ಹೊರಕ್ಕೆ ಹರಿಯುತ್ತಿರುವ ನೀರು ಹೊಲತೋಟಗಳಿಗೆ ನುಗ್ಗಿ, ಬೆಳೆ ನಷ್ಟ ಉಂಟುಮಾಡುತ್ತಿದೆ. ಸಣ್ಣ ನೀರಾವರಿ ಇಲಾಖೆಯವರು, ಕಂದಾಯ ಇಲಾಖೆಯವರು ಭೇಟಿ ನೀಡಿಲ್ಲ. ನೀರು ಸರಾಗ ಹೊರ ಹರಿಯುವಂತೆ ಮಾಡುವಲ್ಲಿ, ನಷ್ಟವಾದ ಬೆಳೆಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳು ಗಮನ ಹರಿಸಿಲ್ಲ’ ಎಂದು ಬುಕ್ಕಾಂಬುಧಿ ರೈತ ವಿಕಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನಲ್ಲಿ 24 ಮನೆಗೆ ಹಾನಿಯಾಗಿದೆ. ಅಧಿಕಾರಿಗಳ ತಂಡ, ನಷ್ಟವಾಗಿರುವ ಬೆಳೆ ಸಮೀಕ್ಷೆ ನಡೆಸುತ್ತಿದ್ದಾರೆ. ಮಳೆ ಹಾನಿಯ ತುರ್ತು ಸಂಧರ್ಭದಲ್ಲಿ ಸ್ಪಂದಿಸಲು ತಾಲ್ಲೂಕು ಆಡಳಿತ ಸನ್ನದ್ಧವಾಗಿದೆ ಎಂದು ತಹಶೀಲ್ದಾರ್ ವಿಶ್ವೇಶ್ವರ ರೆಡ್ಡಿ ತಿಳಿಸಿದ್ದಾರೆ.

ಕೊಟ್ಟಿಗೆಹಾರ ವರದಿ: ಕೊಟ್ಟಿಗೆಹಾರ, ಬಣಕಲ್, ಬಾಳೂರು ಸುತ್ತಮುತ್ತ ಧಾರಾಕಾರ ಗಾಳಿ ಮಳೆಯಾಗುತ್ತಿದೆ.

ಚಾರ್ಮಾಡಿ ಘಾಟಿನಲ್ಲಿ ನಿರಂತರ ಮಳೆಯಾಗುತ್ತಿದ್ದು, ಮಂಜು ಕವಿದ ವಾತಾವರಣ ಸೃಷ್ಟಿಯಾಗಿದೆ. ಮಳೆಯಿಂದ ಕಾಫಿನಾಡಿನ ರೈತರು ಹೈರಾಣಾರಾಗಿದ್ದು, ಬೆಳೆ ನಷ್ಟದ ಸಂಕಷ್ಟದಲ್ಲಿ ವ್ಯಥೆ ಪಡುವಂತಾಗಿದೆ.

ತರೀಕೆರೆ ವರದಿ: ತಾಲ್ಲೂಕಿನಾದ್ಯಂತ ಸುರಿದ ಮಳೆಗೆ ಹಳ್ಳ–ಕೊಳ್ಳಗಳು ತುಂಬಿ ಹರಿಯುತ್ತಿವೆ. ಹುಲಿ ತಿಮ್ಮಾಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ದ್ವಿಚಕ್ರ ವಾಹನದ ಸಮೇತ ಹಳ್ಳದಲ್ಲಿ ಕೊಚ್ಚಿಹೋಗಿದ್ದಾರೆ.

ಲಿಂಗದಹಳ್ಳಿ ಹೋಬಳಿಯ ಸಿದ್ದರಹಳ್ಳಿ ಗ್ರಾಮದ ಪೊನ್ನುಸ್ವಾಮಿ (50) ಮೃತರು.

ಪೊನ್ನುಸ್ವಾಮಿ ಅವರು ಶುಕ್ರವಾರ ರಾತ್ರಿ ಲಿಂಗದಹಳ್ಳಿಯಿಂದ ತನ್ನ ಕೆಲಸ ಮುಗಿಸಿಕೊಂಡು ವಾಪಸ್‌ ಸಿದ್ದರಹಳ್ಳಿಗೆ ಹೊರಟಿದ್ದರು. ದಾರಿ ಮಧ್ಯೆ ಹುಲಿ ತಿಮ್ಮಾಪುರ ಗ್ರಾಮದ ಸೇತುವೆಯ ಮೇಲೆ ನೀರು ಹರಿಯುತ್ತಿತ್ತು. ಕತ್ತಲೆಯಲ್ಲಿ ಹಳ್ಳಕ್ಕೂ ಸೇತುವೆಗೂ ವ್ಯತ್ಯಾಸ ತಿಳಿಯದೆ ತನ್ನ ವಾಹನದ ಸಮೇತ ಹಳ್ಳಕ್ಕೆ ಬಿದ್ದು, ನೀರುಪಾಲಾಗಿದ್ದಾರೆ.

ಲಿಂಗದಹಳ್ಳಿ ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಮೃತದೇಹಕ್ಕೆ ಶೋಧ ನಡೆಸಿದ್ದಾರೆ. ಶನಿವಾರ ಬೆಳಿಗ್ಗೆ ಶವ ಪತ್ತೆಯಾಗಿದೆ. ಮೃತರಿಗೆ ಪತ್ನಿ, ಪುತ್ರಿ ಹಾಗೂ ಪುತ್ರ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT