ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು | ರಸ್ತೆಗಳು ಅಧ್ವಾನ; ಸಂಚಾರ ಅಯೋಮಯ

Last Updated 11 ಜುಲೈ 2022, 2:44 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯ ಹಲವೆಡೆ ರಸ್ತೆಗಳು ಹದಗೆಟ್ಟಿವೆ, ಮಳೆಯಿಂದಾಗಿ ಮಲೆನಾಡು ಭಾಗದ ಕೆಲವೆಡೆ ರಸ್ತೆಗಳು ಕುಸಿದಿವೆ. ಗುಂಡಿ, ಕೆಸರುಮಯ ಹಾದಿಗಳಲ್ಲಿ ಓಡಾಟ ಪಡಿಪಾಟಲಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಒಟ್ಟು ರಸ್ತೆಗಳ ಪೈಕಿ ಅರ್ಧದಷ್ಟು ಕಚ್ಚಾ ರಸ್ತೆಗಳು. ಸುಮಾರು ಕಚ್ಚಾರಸ್ತೆಗಳ ಉದ್ದಳತೆ 4.5 ಸಾವಿರ ಕಿ.ಮೀ ಇದೆ. ಕಲ್ಲುಮಣ್ಣಿನ ಈ ಹಾದಿಗಳಲ್ಲಿ ಸಂಚಾರ ಗೋಳಾಗಿ ಪರಿಣಮಿಸಿದೆ. ಪಕ್ಕಾ ರಸ್ತೆಗಳಲ್ಲೂ (2.9 ಸಾವಿರ ಕಿ.ಮೀ) ಹಲವು ಹಾಳಾಗಿದ್ದು ದುರಸ್ತಿ ಕಂಡಿಲ್ಲ.

ನಗರ, ಪಟ್ಟಣ ಪ್ರದೇಶಗಳಲ್ಲೂ ಬಹಳಷ್ಟು ರಸ್ತೆಗಳ ಸ್ಥಿತಿ ಗ್ರಾಮೀಣ ರಸ್ತೆಗಳಿಗಿಂತ ಭಿನ್ನವಾಗಿಲ್ಲ. ಚಿಕ್ಕಮಗಳೂರು ನಗರದಲ್ಲಿ ‘ಅಮೃತ್‌’ ಕುಡಿಯುವ ನೀರಿನ ಪೈಪ್‌ ಅಳವಡಿಕೆ, ಒಳಚರಂಡಿ ಕಾಮಗಾರಿಗೆ ರಸ್ತೆಗಳನ್ನು ಪದೇಪದೇ ಅಗೆದು ತಗ್ಗುದಿಣ್ಣೆಮಯವಾಗಿವೆ.

ಇನ್ನು ಮಲೆನಾಡು ಭಾಗದ ಬಹಳಷ್ಟು ರಸ್ತೆಗಳ ದುಃಸ್ಥಿತಿಯಲ್ಲಿವೆ. ಕಲ್ಲುಮಣ್ಣಿನ ಈ ಹಾದಿಗಳಲ್ಲಿ ಓಡಾಟ ಹರಸಾಹಸಪಡಬೇಕು. ಕೆಲವೆಡೆ ಸಾರಿಗೆ ಸೌಕರ್ಯವೂ ಇಲ್ಲ. ಕಾಲ್ನಡಿಗೆಯಲ್ಲೇ ಐದಾರು ಕಿ.ಮೀ ಸಾಗಬೇಕು.


ವಾಹನ ಚಾಲನೆ ಸವಾಲು

ಮೂಡಿಗೆರೆ: ತಾಲ್ಲೂಕಿನ ಮೂಡಿಗೆರೆ – ತತ್ಕೊಳ, ಮೂಲರಹಳ್ಳಿ – ಗುತ್ತಿ, ಹೊಸಂಪುರ – ಕೂವೆ, ಚೊಟ್ಟೆಗದ್ದೆ – ಕಾರ್ಲಗದ್ದೆ, ಮೇಕನಗದ್ದೆ – ಕೂಡ ರಸ್ತೆ ಸಹಿತವ ಹಲವು ಗ್ರಾಮಗಳ ರಸ್ತೆಗಳು ಗುಂಡಿಮಯವಾಗಿವೆ. ವಾಹನ ಸವಾರರು, ಚಾಲಕರು ವಾಹನ ಚಲಾಯಿಸುವುದು ಸವಾಲಾಗಿದೆ.

ಗ್ರಾಮೀಣ ರಸ್ತೆಗೆ ಅನುದಾನ ಒದಗಿಸಿ ಹಲವು ರಸ್ತೆಗಳನ್ನು ಡಾಂಬರೀಕರಣ ಮಾಡಲಾಗಿದೆ. ಆದರೆ, ಕಾಮಗಾರಿ ಮುಗಿದ ಆರು ತಿಂಗಳಲ್ಲೇ ರಸ್ತೆಗಳು ಹಾಳಾಗಿರುವ ಉದಾಹರಣೆಗಳು ಸಾಕಷ್ಟು ಇವೆ.

ಮಳೆ ನೀರು ಹರಿದು ಹೋಗಲು ರಸ್ತೆ ಬದಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದಿರುವುದು, ಕೆಲವೆಡೆ ಚರಂಡಿ ಇದ್ದರೂ ಹೂಳು ತುಂಬಿವೆ, ಹೀಗಾಗಿ ಮಳೆ ನೀರು ರಸ್ತೆ ಮೇಲೆ ಹರಿದು ಗುಂಡಿಗಳಾಗಿರುವುದೇ ಹೆಚ್ಚು.

ಮಳೆಗಾಲದಲ್ಲಿ ಟಿಂಬರ್ ದಿಮ್ಮಿಗಳನ್ನು ರಸ್ತೆ ಬದಿಯಲ್ಲಿ ಹಾಕಿ ಚರಂಡಿ ಮುಚ್ಚುವುದು, ಟಿಂಬರ್‌ ಹೊತ್ತ ಲಾರಿಗಳ ಓಡಾಟದಿಂದ ರಸ್ತೆಗಳು ಹಾಳಾಗುತ್ತಿವೆ.

ಗುಂಡಿ ರಸ್ತೆಯಲ್ಲಿ ಸಂಚಾರದಿಂದ ವಾಹನ ಪದೇಪದೇ ರಿಪೇರಿ ಮಾಡಿಸಬೇಕಾಗುತ್ತದೆ ಎಂಬ ಕಾರಣ ನೀಡಿ ಖಾಸಗಿ ವಾಹನಗಳು ಈ ರಸ್ತೆಗಳ ಸಂಚಾರಕ್ಕೆ ದುಬಾರಿ ಬಾಡಿಗೆ ಕೇಳುತ್ತಾರೆ. ಮಹಿಳೆಯರು, ವಿದ್ಯಾರ್ಥಿಗಳು, ರೋಗಿಗಳು, ಗರ್ಭಿಣಿಯರು ತಾಲ್ಲೂಕು ಕೇಂದ್ರಗಳಿಗೆ ಓಡಾಟಲು ಪರದಾಡುವಂತಾಗಿದೆ.

ಹೆದ್ದಾರಿ ಅವಾಂತರ: ಮೂಡಿಗೆರೆ ತಾಲ್ಲೂಕಿನಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿ ಹಾದುಹೋಗಿವೆ. ವಿಲ್ಲುಪುರಂ– ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಸ್ಕೇಬೈಲ್ ನಿಂದ ಕೊಟ್ಟಿಗೆಹಾರದವರೆಗಿನ ರಸ್ತೆಯು ಅವಾಂತರದಿಂದ ಕೂಡಿದೆ.

ಮೂರು ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ ಈವರೆಗೆ ಪೂರ್ಣಗೊಂಡಿಲ್ಲ. ಈ ರಸ್ತೆಯು ಸದಾ ಮಂಜಿನಿಂದ ಕೂಡಿದ್ದು, ಹಗಲಿನಲ್ಲೂ ದೀಪ ಬೆಳಗಿಸಿಕೊಂಡು ಸಾಗಬೇಕಾದ ಸ್ಥಿತಿ ಇದೆ. ರಸ್ತೆ ಬದಿಗೆ ಬಿಳಿಯ ಬಣ್ಣ ಬಳಿದಿಲ್ಲ. ಪದೇಪದೇ ಅಪಘಾತಗಳು ಸಂಭವಿಸುತ್ತಿವೆ. ರಸ್ತೆ ವಿಭಜಕ ನಿರ್ಮಿಸದಿರುವುದ ಕೂಡ ಅಪಘಾತಕ್ಕೆ ಕಾರಣವಾಗುತ್ತಿದೆ. ಸೇತುವೆಗಳು, ತಿರುವುಗಳ ಬಗೆ ಮಾಹಿತಿ ಫಲಕಗಳು ಇಲ್ಲದಿರುವುದರಿಂದ ಸದಾ ಸಂಕಷ್ಟ ಎದುರಿಸುವಂತಾಗಿದೆ ಎಂದು ಸಾರ್ವಜನಿಕರು ದೂರುತ್ತಾರೆ.


ಹೆದ್ದಾರಿ ಸಂಚಾರ ಪಡಿಪಾಟಲು

ಶೃಂಗೇರಿ: ತಾಲ್ಲೂಕಿನ ತನಿಕೋಡು– ಕೆರೆಕಟ್ಟೆ (ರಾಷ್ಟ್ರೀಯ ಹೆದ್ದಾರಿ-169) ರಸ್ತೆ ಹದಗೆಟ್ಟಿದೆ. ಈ ರಸ್ತೆಯಲ್ಲಿ ಸಂಚಾರ ಹರಸಾಹಸವಾಗಿದೆ.

ಇದು ಶೃಂಗೇರಿಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಪ್ರಮುಖ ರಸ್ತೆ. ಶಿವಮೊಗ್ಗ-ಮಂಗಳೂರು ಕಡೆ ಸಂಚರಿಸುವವರು ರಸ್ತೆಯಲ್ಲಿ ಸಾಗಬೇಕು.

ಹಾದಿಕಿರೂರು, ಮರ್ಕಲ್, ಮೆಣಸೆ, ಬಲೇಕಡಿ, ನೀಲಂದೂರು, ಎಡದಾಳು, ಕಿಕ್ರೆ, ಮೇಗಳಬೈಲು, ಶೀರ್ಲು, ಬೇಗಾರು, ಬೆಟ್ಟಗೆರೆ, ಕೊಚ್ಚವಳ್ಳಿ, ಮೌಳಿ, ಗುಂಡುಗದ್ದೆಮಕ್ಕಿ, ಕೆರೆಮನೆ, ತಲವಂತಿಕೊಡಿಗೆ, ಕೈಮನೆಯಿಂದ ಮೀಗಾ ರಸ್ತೆ, ಬುಕ್ಕುಡಿಬೈಲಿನ ಮಲ್ನಾಡ್ ರಸ್ತೆ, ಕಿಗ್ಗಾ, ಮರ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳು, ತನಿಕೋಡು, ಕೊಲ್ಲಿ ಇತ್ಯಾದಿ ಕಡೆ ಗ್ರಾಮೀಣ ಭಾಗದ ರಸ್ತೆಗಳು ದುಃಸ್ಥಿತಿಯಲ್ಲಿವೆ. ಗುಂಡಿಮಯ ಹಾದಿಯಲ್ಲಿ ಸಾಮಗ್ರಿ, ಗೊಬ್ಬರ ಇತ್ಯಾದಿ ಲಗೇಜು ಒಯ್ಯುವ ಕಷ್ಟ ಹೇಳತೀರದು.

‘ಮಣ್ಣಿನ ರಸ್ತೆಯಲ್ಲೇ ಓಡಾಟ ಸವಾಲಾಗಿದೆ. ವಾಹನ ಚಲಾಯಿಸುವಾಗ ಮೈಯೆಲ್ಲ ಕಣ್ಣಾಗಿರಬೇಕು. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳು ಗಮನ ಹರಿಸಬೇಕು’ ಎಂದು ಶೃಂಗೇರಿಯ ಆಟೊ ರಿಕ್ಷಾ ಚಾಲಕ ರಾಜಶೇಖರ ಒತ್ತಾಯಿಸುತ್ತಾರೆ.

ರಸ್ತೆ ಗುಂಡಿಮಯ ಸಂಚಾರಕ್ಕೆ ಸಮಸ್ಯೆ

ನರಸಿಂಹರಾಜಪುರ: ತಾಲ್ಲೂಕಿನ ಗ್ರಾಮಾಂತರ ಭಾಗಗಳ ಬಹುತೇಕ ರಸ್ತೆಗಳು ದುಃಸ್ಥಿತಿಯಲ್ಲಿವೆ.

ತಾಲ್ಲೂಕಿನ ವ್ಯಾಪ್ತಿಯಲ್ಲಿ ಒಟ್ಟು 715 ಕಿ.ಮೀ ಜಿಲ್ಲಾ ಪಂಚಾಯಿತಿ ವ್ಯಾಪ್ತಿ ರಸ್ತೆಗಳು ಇವೆ. ತಾಲ್ಲೂಕಿನ ಗುಬ್ಬಿಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಮನೆ, ಬಾಳೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಶಿರಗಳಲೆ, ಸೀಗುವಾನಿ, ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾತ್ಕೋಳಿ ಮತ್ತಿತತರ ಗ್ರಾಮಗಳ ರಸ್ತೆಗಳು ದುಸ್ಥಿತಿಗೆ ತಲುಪಿದ್ದು ಭಾರಿ ಪ್ರಮಾಣದಲ್ಲಿ ಗುಂಡಿಗಳಾಗಿವೆ. ಸಂಚಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ.

ಕೆಲವು ಗ್ರಾಮಗಳಿಗೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಶಾಸಕರ ಅನುದಾನ,ಮಲೆನಾಡು ಪ್ರದೇಶಾಭಿವೃದ್ಧಿಮಂಡಳಿ ಅನುದಾನ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಅನುದಾನದಲ್ಲಿ ರಸ್ತೆಗಳು ಅಭಿವೃದ್ಧಿಹೊಂದಿವೆ.

ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಆದ್ಯತೆ ನೀಡಿದಂತೆ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡದಿರುವುದರಿಂದ ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಅಭಿವೃದ್ಧಿಯಾಗಿಲ್ಲ ಎಂದು ಸಾರ್ವಜನಿಕರು ಹೇಳುತ್ತಾರೆ.

ಅನೇಕ ರಸ್ತೆಗಳು ಡಾಂಬರು ಕಂಡಿಲ್ಲ

ಕೊಪ್ಪ: ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ರಸ್ತೆ ಸಂಪರ್ಕ ಸಮರ್ಪಕವಾಗಿಲ್ಲ. ಅನೇಕ ಕಡೆಗಳಲ್ಲಿ ಡಾಂಬರು ಕಂಡಿಲ್ಲ, ಜಲ್ಲಿ ಕಲ್ಲುಗಳು ಕಾಲಿಗೆ ಎಡತಾಕುತ್ತಿವೆ.

ಮುಂಡುಗೋಡು, ಮಲಗಾರು, ಕೋಣಂಬಿ, ಹುತ್ತಿನಗದ್ದೆ, ಎ.ಜಿ ಕಟ್ಟೆ ಬಳಿ ಕಾಲೋನಿ ಮೂಲಕ ಹಾದುಹೋಗುವ ಪಂಚಾಯಿತಿಗೆ ಸಂಪರ್ಕ ಕಲ್ಪಿಸುವ ರಸ್ತೆ, ಅಲಗೇಶ್ವರ, ಹೊಸೂರು, ಮೇಲ್ಪಾಲ್ ಸಂಪರ್ಕ ರಸ್ತೆ, ಕೌನಳ್ಳ ರಸ್ತೆ, ಮೇಗೂರು ಸಮೀಪದ ಬೈರೇದೇವರು ಮುಂತಾದ ಕಡೆಗಳಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ.

‘ಮಲಗಾರು ಭಾಗದಲ್ಲಿ ಅಂದಾಜು ಮೂರು ಕಿ.ಮೀದೂರದ ರಸ್ತೆಯಲ್ಲಿ ಕೇವಲ ಒಂದು ಕಿ.ಮೀ ಮಾತ್ರ ಡಾಂಬರು ರಸ್ತೆಯಾಗಿದ್ದು, ಉಳಿದ 2 ಕಿ.ಮೀಟರ್ ದೂರ ಹೊಂಡ ಗುಂಡಿಗಳಿಂದ ಕೂಡಿದೆ. ಕೆಲವೆಡೆ ಜನವಸತಿ ಪ್ರದೇಶ ಸಂಪರ್ಕಿಸುವ ಮಾರ್ಗದಲ್ಲಿ ಡಾಂಬರು ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ’ ಎಂದು ಡಿಎಸ್ಎಸ್ ಮುಖಂಡ ರವೀಂದ್ರ ಕವಡೆಕಟ್ಟೆ ದೂರುತ್ತಾರೆ.

ರಸ್ತೆ ಅಭಿವೃದ್ಧಿ; ಅನುದಾನ ಮರೀಚಿಕೆ..

ಕಳಸ: ತಾಲ್ಲೂಕಿನ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ರಸ್ತೆ, ಪ್ರಮುಖ ಜಿಲ್ಲಾ ರಸ್ತೆಗಳು, ಹೆದ್ದಾರಿಗಳು ಹೀನಾಯ ಸ್ಥಿತಿಯಲ್ಲಿವೆ. ಗ್ರಾಮೀಣ ಪ್ರದೇಶದ ರಸ್ತೆಗಳು ಅನುದಾನದ ಕೊರತೆ, ಅತಿವೃಷ್ಟಿಯಿಂದ ಬಳಲುತ್ತಿವೆ.

ಗ್ರಾಮ ಪಂಚಾಯಿತಿಗಳು ರಸ್ತೆಗಳಿಗೆ ಹಣ ಒದಗಿಸಲು ಆಗದೆ ಕೈಚೆಲ್ಲಿವೆ. ಜಿಲ್ಲಾ ಪಂಚಾಯಿತಿ ಅಸ್ತಿತ್ವದಲ್ಲಿ ಇರದೆ ವರ್ಷ ಕಳೆದಿದ್ದು ರಸ್ತೆಗೆ ಅನುದಾನ ಮರೀಚಿಕೆ ಆಗಿದೆ.

ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆಗಳೆಲ್ಲ ಸ್ವರೂಪ ಕಳೆದುಕೊಂಡಿವೆ ಎಂಬ ಆರೋಪ ಇದೆ.

ರಸ್ತೆ ಬದಿಯ ಚರಂಡಿ ನಿರ್ವಹಣೆ ಮಾಡದೆ ಇರುವುದು, ಹೊಸ ರಸ್ತೆಗಳ ಕಾಮಗಾರಿಯ ಮೇಲುಸ್ತುವಾರಿ ಮಾಡದಿರುವುದು, ಮಳೆಗಾಲದಲ್ಲಿ ರಸ್ತೆ ನಿರ್ವಹಣೆ ಬಗ್ಗೆ ನಿರ್ಲಕ್ಷ್ಯ ತೋರುವುದರಿಂದ ಪ್ರಮುಖ ರಸ್ತೆಗಳು ಶಿಥಿಲಗೊಂಡಿವೆ.

ಕಳಸ-ಬಾಳೆಹೊಳೆ-ಮಾಗುಂಡಿ, ಕಳಸ-ಕುದುರೆಮುಖ-ಎಸ್.ಕೆ.ಬಾರ್ಡರ್ ರಾಜ್ಯ ಹೆದ್ದಾರಿಗಳು ತೀವ್ರವಾಗಿ ಹದಗೆಟ್ಟಿವೆ. ಈ ರಸ್ತೆಗಳ ದುರಸ್ತಿಗೆ ಕಳೆದ ವರ್ಷದಿಂದ ಆಗ್ರಹಿಸುತ್ತಿರುವ ಗ್ರಾಮಸ್ಥರಿಗೆ ಆಶ್ವಾಸನೆ ಬಿಟ್ಟರೆ ಫಲ ಸಿಕ್ಕಿಲ್ಲ. ಕಳಸ ತಾಲ್ಲೂಕಿನ ಕಳಸ-ಕುದುರೆಮುಖ-ಎಸ್.ಕೆ.ಬಾರ್ಡರ್ ರಾಜ್ಯ ಹೆದ್ದಾರಿಗುಂಡಿಮಯವಾಗಿದೆ.

ಹದಗೆಟ್ಟ ಹೆದ್ದಾರಿ; ಸುಂಕ ವಸೂಲಿಗೆ ಆಕ್ರೋಶ

ಅಜ್ಜಂಪುರ : ತಾಲ್ಲೂಕಿನಲ್ಲಿ ಹಾದುಹೋಗಿರುವ ಬೀರೂರು - ದಾವಣಗೆರೆ ರಾಜ್ಯ ಹೆದ್ದಾರಿ ಗುಂಡಿಗಳಾಗಿ ಹಾಳಾಗಿದೆ. ಗ್ರಾಮೀಣ ಪ್ರದೇಶಗಳ ಹಲವು ರಸ್ತೆಗಳು ಹತ್ತಾರು ವರ್ಷಗಳಿಂದ ದುಃಸ್ಥಿತಿಯಲ್ಲಿವೆ.

ರಾಜ್ಯ ಹೆದ್ದಾರಿ ಮಾರ್ಗದ ನಾಗವಂಗಲ– ಹಣ್ಣೆಯವರೆಗಿನ ರಸ್ತೆಯ ಅಲ್ಲಲ್ಲಿ ಗುಂಡಿಗಳಾಗಿವೆ.

ಹೆದ್ದಾರಿಯಲ್ಲಿ ಚಿಕ್ಕಾನವಂಗಲ ಬಳಿ ಟೋಲ್ ವಸೂಲಿ ಮಾಡುವುದಕ್ಕೆ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಡಿಹಳ್ಳಿ- ಹೊಸೂರು- ಅಣ್ಣಾಪುರ- ನಂದೀಪುರ ರಸ್ತೆ ತೀವ್ರ ಹಾಳಾಗಿದೆ. ಅಜ್ಜಂಪುರ-ಹೆಬ್ಬೂರು-ನಾರಣಾಪುರ-ಬಂಗನಗಟ್ಟೆ-ಅನುವನಹಳ್ಳಿ ಸಂಪರ್ಕ ರಸ್ತೆ ಹದಗೆಟ್ಟಿದೆ.

ಬೇಗೂರು-ಗರಗದಹಳ್ಳಿ ಸಂಪರ್ಕ ರಸ್ತೆ, ಬಗ್ಗವಳ್ಳಿ-ಚನ್ನಾಪುರ ರಸ್ತೆ, ಬಗ್ಗವಳ್ಳಿ-ನಾಗವಂಗಲ ರಸ್ತೆ ಸಂಪೂರ್ಣ ದುಸ್ಥಿತಿ ತಲುಪಿವೆ. ಶಿವನಿ-ಚೀರನಹಳ್ಳಿ, ಬಂಗನಗಟ್ಟೆ-ಎಂ.ಹೊಸಹಳ್ಳಿ ಸಂಪರ್ಕ ರಸ್ತೆ ಅಧೋಗತಿಯಲ್ಲಿವೆ.

‘ಬಂಕನಗಟ್ಟೆ-ಹೆಬ್ಬೂರು, ಬಂಕಗನಗಟ್ಟೆ-ಅಸುಂಡಿ-ಗಡಿಹಳ್ಳಿ ರಸ್ತೆಯನ್ನು ಪುನರ್ ನಿರ್ಮಿಸಬೇಕು’ ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಮಹೇಶ್ವರಯ್ಯ ಒತ್ತಾಯಿಸುತ್ತಾರೆ.


ಕಲ್ಹತ್ತಿಗಿರಿ, ಕೆಮ್ಮಣ್ಣುಗುಂಡಿ ರಸ್ತೆ ದುರಸ್ತಿಗೆ ಮೊರೆ

ತರೀಕೆರೆ: ತಾಲ್ಲೂಕಿನ ಲಿಂಗದಹಳ್ಳಿ, ಕಲ್ಹತ್ತಿಗಿರಿ, ಕೆಮ್ಮಣ್ಣುಗುಂಡಿ ಭಾಗದಲ್ಲಿ ಸುಮಾರು 10 ಕಿ.ಮೀ ರಸ್ತೆ ಹಾಳಾಗಿದೆ. ರಸ್ತೆ ಹದಗೆಟ್ಟಿರುವುದು ಸಂಚಾರಕ್ಕೆ ಪ್ರವಾಸೋದ್ಯಮಕ್ಕೆ ಬಾರಿ ತೊಂದರೆ ಆಗಿದೆ.

ಹದಗೆಟ್ಟಿರುವ ರಸ್ತೆ ದುರಸ್ತಿಗೆ ಕ್ರಮ ವಹಿಸಬೇಕು ಎಂದು ತಿಗಡ ಗ್ರಾಮ ಪಂಚಾಯತಿ ಸದಸ್ಯ ರಮೇಶ್ ಒತ್ತಾಯಿಸುತ್ತಾರೆ.

‘ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ರಸ್ತೆ ನಿರ್ವಹಣೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೇರಿದೆ. ಕಲ್ಹತ್ತಿಗಿರಿ ಕೆಮ್ಮಣ್ಣುಗುಂಡಿ ರಸ್ತೆ ದುರಸ್ತಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಮಂಜೂರಾತಿ ನೀಡಿದರೆ ಕಾಮಗಾರಿಗೆ ಕ್ರಮ ವಹಿಸಲಾಗುವುದು’ ಎಂದು ಲೋಕೋಪಯೋಗಿ ಎಂಜಿನಿಯರ್ ವಾಗೀಶ್ ತಿಳಿಸಿದರು.

ಆಂಜನೇಯ ಸ್ವಾಮಿ ವೃತ್ತ: ಸಂಚಾರ ದಟ್ಟಣೆ ಸಮಸ್ಯೆ ಮಾಮೂಲಿ

ಕಡೂರು: ಪಟ್ಟಣದಲ್ಲಿ ಕೆಲ ರಸ್ತೆಗಳು ಹದಗೆಟ್ಟಿವೆ. ಕೆ.ಎಂ.ರಸ್ತೆಯ ಗಣಪತಿ ಆಂಜನೇಯ ಸ್ವಾಮಿ ವೃತ್ತದಲ್ಲಿ ರಸ್ತೆ ಗುಂಡಿಗಳಾಗಿವೆ. ಈ ಭಾಗದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಮಾಮೂಲಿಯಾಗಿದೆ.

ಶನಿದೇವರ ದೇವಸ್ಥಾನಕ್ಕೆ ಬನ್ನಿ ಮರದ ಕಡೆಯ ಸಂಪರ್ಕ ರಸ್ತೆ, ಮರವಂಜಿ ರಸ್ತೆಗೆ ಸಾಗು ಮಾರ್ಗಗಳಲ್ಲಿ ಮಳೆಗಾಲದಲ್ಲಿ ನೀರು ತುಂಬಿ ವಾಹನಗಳು ಚಲಿಸಲಾರದಂಥ ಸ್ಥಿತಿ ನಿರ್ಮಾಣವಾಗುತ್ತದೆ.

‘ರಸ್ತೆ ನಿರ್ಮಿಸಿದರೆ ಶನಿದೇವರ ದೇಗುಲ ಸಂಪರ್ಕ ಮತ್ತು ಆ ಭಾಗದಿಂದ ವಾಸವಿ ಗುಡಿ, ಛತ್ರದ ಬೀದಿ ಕಡೆ ಸಾಗಲು ಅನುಕೂಲವಾಗುತ್ತದೆ. ಪುರಸಭೆಯವರು ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು’ ಎಂದು ಸ್ಥಳೀಯರ ಒತ್ತಾಯವಾಗಿದೆ.

‘ಜಿಲ್ಲೆಯ ಗ್ರಾಮೀಣ ರಸ್ತೆಗಳ ಸುಧಾರಣೆಗೆ 100 ಕೋಟಿ ಮಂಜೂರು’

ಗ್ರಾಮೀಣ ರಸ್ತೆಗಳ ಸುಧಾರಣೆ ಮತ್ತು ನವೀಕರಣಕ್ಕೆ ‘5054’ನಡಿ ₹ 100 ಕೋಟಿ ಅನುದಾನ ಮಂಜೂರಾಗಿದೆ. ಅಲ್ಲದೇ, ‘3054’ ನಡಿಯೂ ಅನುದಾನ ಮಂಜೂರಾಗಿದೆ. ರಸ್ತೆಗಳ ರಿಪೇರಿ, ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ।‘ಪ್ರಜಾವಾಣಿ’ಗೆ ತಿಳಿಸಿದರು.

ಅತಿವೃಷ್ಟಿಗೆ ಸಂಬಂಧಿಸಿದಂತೆ 17 ಕೋಟಿ ಅನುದಾನ ಇದೆ. ಮಳೆ ಕಡಿಮೆಯಾದ ನಂತರ ಕಾಮಗಾರಿ ಕೈಗೆತ್ತಿಕೊಳ್ಳಲು ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದರು.

(ಪೂರಕ ಮಾಹಿತಿ: ಕೆ.ಎನ್‌.ರಾಘವೇಂದ್ರ, ರವಿ ಕೆಳಂಗಡಿ, ರವಿಕುಮಾರ್ ಶೆಟ್ಟಿಹಡ್ಲು, ಕೆ.ವಿ.ನಾಗರಾಜ್‌, ಬಾಲು ಮಚ್ಚೇರಿ, ಜೆ.ಒ.ಉಮೇಶಕುಮಾರ್‌, ಎಚ್‌.ಎಂ.ರಾಜಶೇಖರ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT