ನೋಡಬನ್ನಿ ನಮ್ಮೂರ ಹೇಮಾವತಿ ಉತ್ಸವ

7

ನೋಡಬನ್ನಿ ನಮ್ಮೂರ ಹೇಮಾವತಿ ಉತ್ಸವ

Published:
Updated:

ಮೂಡಿಗೆರೆಯು ಹಲವು ನದಿಗಳ ಉಗಮ ತಾಣಗಳನ್ನು ತನ್ನ ಮಡಿಲಿನಲ್ಲಿಟ್ಟು ಕೊಂಡಿರುವ ಪ್ರಾಕೃತಿಕ ಸೊಬಗಿನ ತಾಲ್ಲೂಕು ಎಂದೇ ಗುರುತಿಸಿಕೊಂಡಿದೆ. ನಾಡಿನ ಪ್ರಸಿದ್ದ ನದಿಗಳಾದ ತುಂಗಾ, ಭದ್ರ, ನೇತ್ರಾವತಿ ನದಿಗಳು ಇದೇ ತಾಲ್ಲೂಕಿನ ಕುದುರೆಮುಖ ಪರ್ವತ ಶ್ರೇಣಿಯಲ್ಲಿ ಜನ್ಮ ಕಂಡರೆ, ಕಾವೇರಿ ನದಿಯ ಉಪನದಿಯಾದ ಹೇಮಾವತಿಯು ಬಾಳೂರು ಹೋಬಳಿಯ ಜಾವಳಿ ಗ್ರಾಮದಲ್ಲಿ ಉಗಮವಾಗತ್ತದೆ. ಈ ಹೇಮಾವತಿ ನದಿಯ ಉಗಮ ತಾಣದಲ್ಲಿ ಆಚರಿಸುವ ಹೇಮಾವತಿ ಉತ್ಸವವು ಧಾರ್ಮಿಕ ಸೌಹಾರ್ದತೆಗೆ ಅಡಿಪಾಯವಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಜಾವಳಿ ಗ್ರಾಮದಿಂದ ಎರಡು ಕಿ.ಮೀ. ಬೆಟ್ಟದತ್ತ ಸಾಗಿದರೆ ಪ್ರಕೃತಿಯ ಹಸಿರ ಸಿರಿಯ ನಡುವೆ ಹೇಮಾವತಿಯು ಜಿನುಗುತ್ತಾ ಧರೆಗಿಳಿದು, ಸಮೀಪದಲ್ಲಿಯೇ ಇರುವ ಬೃಹತ್ ಕೊಳವನ್ನು ಸೇರಿ, ಕಾವೇರಿಯ ಸಂಗಮಕ್ಕಾಗಿ ಹಾತೊರೆಯುತ್ತ ಗಿರಿ ಕಾನನದ ನಡುವೆ ಬಳುಕಿ ಬಾಗಿ ಹರಿಯುತ್ತಾಳೆ. ನದಿ ಉಗಮದ ತಾಣದಲ್ಲಿ ಮಹಾಗಣಪತಿ ದೇವಾಲಯವನ್ನು ನಿರ್ಮಿಸಿದ್ದು, ಪ್ರತಿ ವರ್ಷವೂ ಫೆಬ್ರವರಿ ತಿಂಗಳಿನಲ್ಲಿ ವಾರ್ಷಿಕ ಜಾತ್ರಾ ಉತ್ಸವ ನಡೆಸಲಾಗುತ್ತದೆ. ಈ ಜಾತ್ರಾ ಉತ್ಸವದಲ್ಲಿ ಗಣಪತಿಯೊಂದಿಗೆ ಹೇಮಾವತಿಗೂ ಪೂಜೆಸಲ್ಲಿಸುವುದರಿಂದ ಹೇಮಾವತಿ ಉತ್ಸವವೆಂದೇ ಪ್ರಸಿದ್ಧಿಯಾಗಿದೆ.


ಮಹಾಗಣಪತಿಯ ಗರ್ಭಗುಡಿಯ ದೃಶ್ಯ.

ಇತಿಹಾಸ: ‘ಹೇಮಾವತಿ ನದಿಯು ಪೌರಾಣಿಕ ಇತಿಹಾಸದಲ್ಲಿ ‘ಸತ್ಯಕಾಮನೆಂಬ ಬಾಲಕನು ಜ್ಞಾನಿಯಾದ ಗೌತಮ ಮಹರ್ಷಿ ಅವರ ಬಳಿಗೆ ಹೋಗಿ ಶಿಷ್ಯನನ್ನಾಗಿ ಸ್ವೀಕರಿಸುವಂತೆ ವಿನಂತಿಸುತ್ತಾನೆ. ಗೌತಮ ಮಹರ್ಷಿಯು ಆತನ ಗೋತ್ರವನ್ನು ವಿಚಾರಿಸಿದಾಗ ಸತ್ಯಕಾಮನಿಗೆ ತನ್ನ ಗೋತ್ರದ ಅರಿವಿಲ್ಲದ ಕಾರಣ, ಆತನ ತಾಯಿ ಜಾವಾಲಿ ಬಳಿ ವಿಚಾರಿಸಲು ಸಾಗುತ್ತಾನೆ. ತಾಯಿಗೂ ಕೂಡ ಮಗನ ಗೋತ್ರ ತಿಳಿದಿರಲಿಲ್ಲ. ಮಹರ್ಷಿಯು ಸತ್ಯಕಾಮನ ಪೂರ್ವಾಪರವನ್ನು ತಿಳಿದುಕೊಂಡು ಸತ್ಯಕಾಮನನ್ನು ಶಿಷ್ಯನನ್ನಾಗಿ ಸ್ವೀಕರಿಸುತ್ತಾರೆ. ಗೌತಮ ಮಹರ್ಷಿಯು ಸತ್ಯಕಾಮನಿಗೆ ಬ್ರಹ್ಮೋಪದೇಶ ಮಾಡಿ 300 ಗೋವುಗಳನ್ನು ನೀಡಿ ಇವುಗಳ ಸಂಖ್ಯೆ 1ಸಾವಿರ ಆಗುವವರೆಗೆ ನೋಡಿಕೊಳ್ಳಲು ಅಜ್ಞಾಪಿಸುತ್ತಾರೆ. ಸತ್ಯಕಾಮನು ಗೌತಮ ಮಹರ್ಷಿಯು ಕೊಟ್ಟ ಹಸುಗಳೊಂದಿಗೆ ತಪಸ್ಸಿಗೆ ತೆರಳುತ್ತಾನೆ. ಹಾಗೇ ತಪಸ್ಸಿಗೆ ಕುಳಿತ ಬೆಟ್ಟವೇ ಜಾವಳಿ ಸಮೀಪದ ಹೇಮಾವತಿ ಬೆಟ್ಟ’ ಎಂಬ ನಂಬಿಕೆ ಇದೆ. ‘ಆ ಆಶ್ರಮದ ವಾತಾವರಣದಲ್ಲಿ ಹಸುಗಳಿಗೆ ಕುಡಿಯಲು ನೀರಿಲ್ಲ ಎಂಬ ಕಾರಣಕ್ಕಾಗಿ ಸತ್ಯ ಕಾಮನು ಶಿವನ ಶಿರದಿಂದ ಹರಿಯುವ ಗಂಗೆಯನ್ನು ಕರುಣಿಸುವಂತೆ ಪಾರ್ವತಿಯನ್ನು ಪ್ರಾರ್ಥಿಸಿದ್ದರಿಂದ, ಪಾರ್ವತಿಯು ಪ್ರತ್ಯಕ್ಷಳಾಗಿ ಸತ್ಯಕಾಮನಿಗೆ ಆಶೀರ್ವಾದಿಸಿ, ದಟ್ಟವಾದ ಅರಣ್ಯದ ನಡುವೆ  ಮಂಜುಗೆಡ್ಡೆಗಳನ್ನು ಸೃಷ್ಟಿಸಿ, ‘ಮಂಜುಗಡ್ಡೆಯು ನೀರಾಗಿ ಹರಿದು ಒಣ ಭೂಮಿ ಫಲವತ್ತಾಗಲಿ’ ಎಂದು ಹರಸಿದಳು. ಆಗ ಮಂಜುಗಡ್ಡೆಯು ನೀರಾಗಿ ಕರಗಿ ಹನಿಹನಿಯಾಗಿ ಭೂಮಿಗೆ ತೊಟ್ಟಿಕ್ಕತೊಡಗಿತು’. ಇಂದಿಗೂ ಎಂಥ ಮಳೆಗಾಲದಲ್ಲೂ ಹೇಮಾವತಿಯು ಹನಿಯ ರೂಪದಲ್ಲಿ ಮಾತ್ರ ಕಾಣಿಸಿಕೊಳ್ಳುವುದು ಈ ಪೌರಾಣಿಕ ಕಥೆಗೆ ಹೋಲಿಕೆಯಾಗಿದೆ. ಅಲ್ಲದೇ ಸತ್ಯಕಾಮ ಸ್ಥಾಪಿಸಿದ ಆಶ್ರಮವು ಜಾವಾಲಿ ಎಂದಾಯಿತು. ಕಾಲಕ್ರಮೇಣ ಜಾವಳಿ ಎಂದು ಕರೆದರು. ತೊಟ್ಟಿಕ್ಕುವ ಹನಿಗಳೇ ಕೊಳವನ್ನು ಸೇರಿ ಹೇಮಾವತಿಯಾಗಿ ಹರಿಯುವುದನ್ನು ಇಂದಿಗೂ ಕಾಣಬಹುದಾಗಿದೆ. ‘ಪಾರ್ವತಿ ದೇವಿಯು ಜಾವಲಿ ಆಶ್ರಮದ ಏಳಿಗೆಗಾಗಿ ತೆರಳಲು ತನ್ನ ಪ್ರೀತಿಯ ಪುತ್ರನಾದ ಮಹಾಗಣಪತಿಗೆ ಆಜ್ಞಾಪಿಸಿದ ಕಾರಣ, ಗಣಪತಿ ದೇವಾಲಯ ನಿರ್ಮಾಣವಾಗಿದ್ದು, ಇಲ್ಲಿಗೆ ಬರುವ ಭಕ್ತರ ಕೋರಿಕೆಯನ್ನು ಮಹಾಗಣಪತಿಯು ಈಡೇರಿಸುತ್ತಾನೆ’ ಎಂಬ ನಂಬಿಕೆ ಭಕ್ತರಲ್ಲಿದೆ.


ಹೇಮಾವತಿ ನದಿಮೂಲದಲ್ಲಿ ನೀರು ಜಿನುಗುವ ಸ್ಥಳ.

9ರಂದು ಉತ್ಸವ

ಈ ಬಾರಿಯ ಹೇಮಾವತಿ ಉತ್ಸವವು ಇದೇ 9 ರಂದು ನಡೆಯಲಿದ್ದು, ಸಾರ್ವಜನಿಕರು, ಗ್ರಾಮಸ್ಥರು ಹಾಗೂ ಗ್ರಾಮದ ಪ್ರಮುಖ ಮುಖಂಡರ ಸಾರಥ್ಯದಲ್ಲಿ ನಡೆಯುವ ಉತ್ಸವದಲ್ಲಿ ಗಣಹೋಮ, ವಿಶೇಷ ಪೂಜೆ, ಅನ್ನ ಸಂತರ್ಪಣೆ ಹಾಗೂ ಪಲಕ್ಕಿ ಉತ್ಸವ ಮಾಡಲಾಗುತ್ತದೆ. ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡರೆ ಜೀವನದಲ್ಲಿ ಎದುರಾಗುವ ವಿಘ್ನಗಳೆಲ್ಲವೂ ದೂರವಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ.

ಸ್ಥಳೀಯ ಶೈಕ್ಷಣಿಕ ಹರಿಕಾರ ಎಂ.ಎಲ್.ಗುರ್ಜರ್ ನೇತೃತ್ವದಲ್ಲಿ ಪ್ರತಿವರ್ಷವೂ ಉತ್ಸವ ನಡೆಯುತ್ತಿತ್ತು. ಅವರು ವಿಧಿವಶರಾಗಿರುವುದರಿಂದ ಈ ಬಾರಿ ಅಧ್ಯಕ್ಷರಾಗಿ ಪ್ರವೀಣ್ ಎ.ಗುರ್ಜರ್ ಹಾಗೂ ಉಪಾಧ್ಯಕ್ಷರಾಗಿ ಯಶವಂತ್ ಗುರ್ಜರ್ ನೇತೃತ್ವ ವಹಿಸಿದ್ದು, ಆಡಳಿತ ಮಂಡಳಿಯ ಸದಸ್ಯರ ಸಹಕಾರದಲ್ಲಿ ಪಲ್ಲಕ್ಕಿ ಉತ್ಸವವನ್ನು ಅದ್ಧೂರಿಯಾಗಿ ನಡೆಲಿದೆ.

 ಹೀಗೆ ಬನ್ನಿ..

ತಾಲ್ಲೂಕಿನ ಕೊಟ್ಟಿಗೆಹಾರದಿಂದ – ಕಳಸ – ಹೊರನಾಡಿಗೆ ಹೋಗುವ ಬಸ್ ಗಳು ಜಾವಳಿ ಮಾರ್ಗವಾಗಿ ತೆರಳುವುದರಿಂದ ಉತ್ಸವಕ್ಕೆ ತೆರಳುವ ಭಕ್ತರು ಬಳಸಬಹುದು. ಜಾವಳಿ ಗ್ರಾಮದಿಂದ ನದಿಮೂಲಕ್ಕೆ ಆಟೊ ರಿಕ್ಷಾ ಸೌಕರ್ಯವಿದ್ದು, ಉತ್ಸವಕ್ಕೆ ಬರುವ ಭಕ್ತರ ಸೇವೆಗಾಗಿ ಇಡೀ ಗ್ರಾಮವೇ ಸಜ್ಜುಗೊಂಡಿದೆ.

* ಪ್ರಕೃತಿಯ ಮಡಿಲಿನಲ್ಲಿರುವ ಹೇಮಾವತಿ ನದಿ ಮೂಲವು ಒಂದು ಪವಿತ್ರ ಯಾತ್ರಾಸ್ಥಳವಾಗಿದ್ದು, ಇಲ್ಲಿರುವ ಮಹಾಗಣಪತಿಯು ಭಕ್ತರ ಕೋರಿಕೆಯನ್ನು ಈಡೇರಿಸುತ್ತಾನೆ ಎಂಬ ನಂಬಿಕೆಯಿದೆ. ಈ ನಂಬಿಕೆಯಿಂದಾಗಿಯೇ ಜಾತ್ರಾ ಉತ್ಸವಕ್ಕೆ ನಾಡಿನೆಲ್ಲೆಡೆಯಿಂದ ಭಕ್ತರ ಪ್ರವಾಹವೇ ಹರಿದು ಬರುತ್ತದೆ.

-ಪರೀಕ್ಷಿತ್‍ಜಾವಳಿ, ವಕೀಲರು.
 


ಹೇಮಾವತಿಯ ನದಿಮೂಲದಲ್ಲಿರುವ ಮಹಾಗಣಪತಿ ದೇವಸ್ಥಾನ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !