ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಟಗಿ: ಶತಮಾನಗಳ ಕೆರೆಗೆ ಕಾಯಕಲ್ಪ

ಕೆರೆಗೆ ನೀರು ಹರಿಸಲು ವಿಧಾನಸಭಾ ಚುನಾವಣಾ ಅಭ್ಯರ್ಥಿಗಳಿಗೆ ಆಗ್ರಹ
Last Updated 12 ಏಪ್ರಿಲ್ 2018, 9:08 IST
ಅಕ್ಷರ ಗಾತ್ರ

ಹಾವೇರಿ: ಎಲ್ಲೆಡೆ ಚುನಾವಣಾ ಚರ್ಚೆಯೇ ಜೋರಾಗಿದ್ದರೆ, ರಾಣೆಬೆನ್ನೂರು ತಾಲ್ಲೂಕಿನ ಇಟಗಿ ಗ್ರಾಮದ ಕೆರೆಯ ಪಾತ್ರದಲ್ಲಿ ಮಾತ್ರ ಬುಲ್ಡೋಜರ್ ಸದ್ದು ಮಾಡುತ್ತಿದೆ. ಶತಮಾನ ಹಿಂದಿನ ಕೆರೆಯನ್ನು ಪುನರುಜ್ಜೀವನ ಗೊಳಿಸುವ ಕಾರ್ಯ ಭರದಿಂದ ಸಾಗಿದೆ.

‘ಯಾರನ್ನು, ಹೇಗೆ ಸೋಲಿಸಬೇಕು?’ ಎಂಬ ಲೆಕ್ಕಾಚಾರಗಳು ಅಲ್ಲಲ್ಲಿ ನಡೆಯುತ್ತಿದ್ದರೆ, ಇಟಗಿ ಗ್ರಾಮದಲ್ಲಿ ಮಾತ್ರ ರಾಮಲಿಂಗೇಶ್ವರ ಗುಡಿ ಬಳಿಯ ಕೆರೆಯನ್ನು ಸಂರಕ್ಷಿಸಿ, ಗ್ರಾಮವನ್ನೇ ಗೆಲ್ಲಿಸುವ ಕಾರ್ಯ ನಡೆಯುತ್ತಿದೆ. 11ನೇ ಶತಮಾನದ ಎನ್ನಲಾದ ಗುಡಿಯಷ್ಟೇ, ಕೆರೆಯೂ ಪ್ರಾಚೀನವಾಗಿದೆ. ಕೆರೆಯ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್‌ಕೆಡಿಆರ್‌ಡಿಪಿ) ಕೈ ಜೋಡಿಸಿದೆ.

ಸುಮಾರು 1.25 ಎಕರೆ ವ್ಯಾಪ್ತಿಯ ಕೆರೆಗೆ ಊರ ಕೊಳಚೆ ಸೇರಿ ಹೂಳು ತುಂಬಿ ಹೋಗಿತ್ತು. ಎರಡು ದಶಕಗಳಿಂದ ಕೆರೆ ನಿಷ್ಪ್ರಯೋಜಕವಾಗಿತ್ತು. ಕೆರೆಯ ನೀರನ್ನು ಯಾರೂ ಬಳಸುತ್ತಿರಲಿಲ್ಲ. ಸೊಳ್ಳೆ, ಹಾವು, ವಿಷ ಜಂತುಗಳ ಹಾವಳಿಯೂ ಹೆಚ್ಚಾಗಿತ್ತು. ಜೀವಜಲವಾದ ಕೆರೆ ಮಾರಕವಾಗಿತ್ತು. ಕೆರೆಯನ್ನು ಮುಚ್ಚಿ, ನಿವೇಶನ ಮಾಡಿ ಬಡವರಿಗೆ ಹಂಚಿಕೆ ಮಾಡುವುದೇ ಉತ್ತಮ ಎಂಬ ಚಿಂತನೆಗೆ ಬಂದಿದ್ದೆವು ಎಂದು ಕೆರೆ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ವೀರಬಸಪ್ಪ ಪೂಜಾರ ತಿಳಿಸಿದರು.

ಈ ನಡುವೆಯೂ ಗ್ರಾಮ ಪಂಚಾಯ್ತಿಯು ಕೆರೆಯ ಬದಿಗ ಪಿಚ್ಚಿಂಗ್ ಮಾಡಿತ್ತು. ಆದರೆ, ನಿರ್ವಹಣೆ ಇಲ್ಲದ ಪರಿಣಾಮ, ನೀರನ್ನು ಯಾರೂ ಬಳಸುತ್ತಿರಲಿಲ್ಲ.

‘ಏಳೆಂಟು ವರ್ಷಗಳ ಹಿಂದೆ ಗ್ರಾಮದಲ್ಲಿ ಆರಂಭಗೊಂಡ ಯೋಜನೆಯು (ಎಸ್‌ಕೆಡಿಆರ್‌ಡಿಪಿ) 28 ಸ್ವಸಹಾಯ ಸಂಘಗಳನ್ನು ರಚಿಸಿತು. ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಕೊಂಡಿತು. ಕಾರ್ಯ ವೈಖರಿಯನ್ನು ಕಂಡ ಗ್ರಾಮಸ್ಥರು ಕೆರೆ ಅಭಿವೃದ್ಧಿಗೆ ಮನವಿ ಮಾಡಿದರು. ತಾವೂ ಕೈ ಜೋಡಿಸುವುದಾಗಿ ಮುಂದೆ ಬಂದರು. ಹೀಗಾಗಿ, ‘ನಮ್ಮೂರು ನಮ್ಮ ಕೆರೆ ಕಾರ್ಯಕ್ರಮ’ದ ಅಡಿಯಲ್ಲಿ ₨20 ಲಕ್ಷದಲ್ಲಿ ಪುನರುಜ್ಜೀವನ ನೀಡಲು ಪ್ರಸ್ತಾವ ಕಳುಹಿಸಲಾಗಿತ್ತು’ ಎಂದು ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಈಶ್ವರ್ ತಿಳಿಸಿದರು.

‘ರೈತರ ಸಹಕಾರದಲ್ಲಿ ಹೂಳು ತೆಗೆಯಲಾಯಿತು. ಸಾವಿರಕ್ಕೂ ಹೆಚ್ಚು ಲೋಡ್ ಹೂಳನ್ನು ರೈತರು ಟ್ರ್ಯಾಕ್ಟರ್‌ ಮೂಲಕ ಹೊಲಕ್ಕೆ ಒಯ್ದರು. ದೇಣಿಗೆಯೂ ನೀಡಿದರು. ಯೋಜನೆ ನೀಡಿದ ₨8 ಲಕ್ಷ ಹಾಗೂ ಗ್ರಾಮಸ್ಥರ ಸಹಕಾರದ ಮೂಲಕ ಕಾಮಗಾರಿ ಆರಂಭಿಸಲಾಯಿತು’ ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ತಿಳಿಸಿದರು.

‘ಗ್ರಾಮಸ್ಥರ ಸಮಿತಿ ರಚಿಸಿಕೊಂಡು ಕೆರೆಯನ್ನು ಅಭಿವೃದ್ಧಿ ಪಡಿಸುತ್ತಿರುವ ಕಾರಣ ಮಹತ್ವ ಹೆಚ್ಚಿದೆ. ಗ್ರಾಮ ಪಂಚಾಯ್ತಿ ಸಹಕಾರವೂ ಪ್ರಮುಖವಾಗಿದೆ. ಕೆರೆಯನ್ನು ಸಂರಕ್ಷಿಸಿಕೊಂಡು ಹೋಗುವ ಜವಾಬ್ದಾರಿಯೂ ಸಮಿತಿಗೆ ಇದೆ. ಹೀಗಾಗಿ, ಸ್ಥಳೀಯರ ಸಹಭಾಗಿತ್ವದ ಯೋಜನೆ ಯಶಸ್ಸು ಕಾಣುತ್ತದೆ’ ಎಂದು ಅವರು ವಿವರಿಸಿದರು.

ನೀರು ಹರಿಸಿ: ಗ್ರಾಮದ ಕೊಳಚೆ ನೀರು ಕೆರೆಗೆ ಬಾರದಂತೆ ತಡೆ ಮಾಡಿ, ಹಳ್ಳಕ್ಕೆ ಹರಿಸಬೇಕು. ರಾಣೆಬೆನ್ನೂರು ದೊಡ್ಡ ಕೆರೆಗೆ ನೀರು ತುಂಬಿಸುವ ಯೋಜನೆ ಅಥವಾ ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆ ಮೂಲಕ ಕೆರೆಗೆ ನೀರನ್ನು ಹರಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದೇವೆ. ಈ ಚುನಾವಣೆಯಲ್ಲಿ ಆರಿಸಿ ಬರುವ ಶಾಸಕರು, ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಕೆರೆ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ವೀರಬಸಪ್ಪ ಪೂಜಾರ ತಿಳಿಸಿದರು.

ಒಟ್ಟಾರೆ, ಗ್ರಾಮಸ್ಥರ ಒಗ್ಗಟ್ಟು, ಎಸ್‌ಕೆಡಿಆರ್‌ಡಿಪಿ ನೆರವಿನಲ್ಲಿ ಕೆರೆ ಪುನರುಜ್ಜೀವನಗೊಳ್ಳುತ್ತಿದೆ. ಇಲ್ಲಿರುವ ಪ್ರಾಚೀನ ದೇಗುಲವನ್ನೂ ಅಭಿವೃದ್ಧಿ ಪಡಿಸಬೇಕು ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ.

**

‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದ ಮೂಲಕ ಕಳೆದ ವರ್ಷ ಜಿಲ್ಲೆಯಲ್ಲಿ 3 ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ವರ್ಷ 5 ಕೆರೆಗಳ ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ – ಮಹಾಬಲ ಕುಲಾಲ್, ಜಿಲ್ಲಾ ನಿರ್ದೇಶಕರು, ಎಸ್‌ಕೆಡಿಆರ್‌ಡಿಪಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT