ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಂಚಭೂತಗಳು ಜೀವಸಂಕುಲದ ಬದುಕಿನ ಜೀವಾಳ’

ಹಿರೆಕೊಳಲೆ ಕೆರೆ ಭರ್ತಿ: ಬಾಗಿನ ಅರ್ಪಣೆ
Last Updated 7 ಜುಲೈ 2022, 5:01 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಹಿರೆಕೊಳಲೆ ಕೆರೆಯು ಚಿಕ್ಕಮಗಳೂರು ನಗರದ ಅರ್ಧದಷ್ಟು ಭಾಗಕ್ಕೆ ಒದಗಿಸುತ್ತದೆ. ಕೆರೆ ಭರ್ತಿಯಾಗಿ ಕೋಡಿ ಬಿದ್ದಿರುವುದು ಸಂತಸ ತಂದಿದೆ’ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ಹಿರೇಕೊಳಲೆ ಕೆರೆಗೆ ಬುಧವಾರ ಬಾಗಿನ ಅರ್ಪಿಸಿ ಅವರು ಮಾತನಾಡಿದರು. ಅಗ್ನಿ, ಗಂಗೆ, ಭೂಮಿ, ಆಗಸ, ಗಾಳಿ ಇಲ್ಲದೇ ಜೀವಸಂಕುಲ ಬದುಕುಳಿಯಲು ಸಾಧ್ಯ ಇಲ್ಲ. ಈ ಪಂಚಭೂತಗಳಲ್ಲಿ ದೈವವನ್ನು ಕಾಣುತ್ತೇವೆ’ ಎಂದು ಹೇಳಿದರು.

‘ಕಳಸಾಪುರ, ಈಶ್ವರಹಳ್ಳಿ ಕೆರೆಗಳು ಭರ್ತಿಯಾಗಿವೆ. ಬೆಳವಾಡಿ ಕೆರೆಗೆ ನೀರು ಹರಿಯುತ್ತಿದೆ. ಬೆಳವಾಡಿ ಕೆರೆಯ ತುಂಬುವ ವಿಶ್ವಾಸ ಇದೆ’ ಎಂದರು.

‘ಬೈರಾಪುರ ಪಿಕಪ್‌ನಿಂದ್‌ ದಾಸರಹಳ್ಳಿ ಮತ್ತು ಲಕ್ಯಾ ಮಾದರಸನ ಕೆರೆಗೆ ನೀರು ಹರಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. 13 ತಿಂಗಳಲ್ಲಿ ಕಾಮಗಾರಿ ಮುಗಿಸುವಂತೆ ಸೂಚನೆ ನೀಡಲಾಗಿದೆ’ ಎಂದರು.

‘ಗೋಂದಿ ಯೋಜನೆ ಎರಡನೇ ಮತ್ತು ಮೂರನೇ ಹಂತಕ್ಕೆ ಅನುಮೋದನೆ ನೀಡುವಂತೆ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗಿದೆ. ಅನುಮೋದನೆ ದೊರಕಿದ ಬಳಿಕ ಕಾಮಗಾರಿ ಆರಂಭವಾಗಲಿದೆ’ ಎಂದರು.

‘ಪಠ್ಯಪುಸ್ತಕ ಪರಿಷ್ಕರಣೆ; ಸುಳ್ಳುಗಳ ವಿಜೃಂಭಣೆ’

‘ರೋಹಿತ್‌ ಚಕ್ರತೀರ್ಥ ಸಮಿತಿ ಪಠ್ಯ ಪುಸ್ತಕ ಪರಿಷ್ಕರಣೆ ಲೋಪಗಳಾಗಿದ್ದರೆ ಸರಿಪಡಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಸುಳ್ಳುಗಳು ವಿಜೃಂಭಿಸುತ್ತಿವೆ. ಕುವೆಂಪು, ಬಸವಣ್ಣ, ನಾರಾಯಣ ಗುರು ಸಹಿತ ಯಾವ ಮಹನೀಯರಿಗೂ ಅಪಮಾನ ಮಾಡಿಲ್ಲ. ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಹಿಂದಿನ ಬರಗೂರು ರಾಮಚಂದ್ರಪ್ಪ ಸಮಿತಿ ಹೆಚ್ಚು ಅವಾಂತರ ಮಾಡಿದೆ ಎಂದು ಬಹಳಷ್ಟು ತಜ್ಞರು ಹೇಳಿದ್ದಾರೆ’ ಎಂದು ಸಿ.ಟಿ.ರವಿ ಪ್ರತಿಪಾದಿಸಿದರು.

‘ಇಂದಿರಾ ಗಾಂಧಿ ಬಡಾವಣೆಯಲ್ಲಿ ಅಕ್ರಮ ಕಟ್ಟಡ ತೆರವುಗೊಳಿಸಲಾಗಿದೆ. ಮನೆ ದಾಖಲೆ ಇದ್ದವರ ಕಟ್ಟಡ ಕೆಡವಿದ್ದರೆ ಕಟ್ಟಿಸಿಕೊಡುತ್ತೇವೆ. ದಾಖಲೆಗಳು ಇಲ್ಲದಿದ್ದರೆ ಪ್ರತಿಭಟನೆ ಮಾಡಿದವರು ಕ್ಷಮೆಯಾಚಿಸಬೇಕು’ ಎಂದು ಅವರು ಪ್ರತಿಕ್ರಿಯಿಸಿದರು.

‘ಅಲ್ಲಿ ವಾಸ ಇದ್ದವರು ಯಾರು ಎಂಬುದು ಪರಿಶೀಲನೆ ಮಾಡಿದರೆ ಗೊತ್ತಾಗುತ್ತದೆ. ನಗರಸಭೆ ಅಧ್ಯಕ್ಷರು ಸಮಗ್ರ ತನಿಖೆ ಮಾಡಿಸಲು ಕ್ರಮ ವಹಿಸಬೇಕು’ ಎಂದರು.

‘ಇಡಿ ಸೂಚನೆಯಂತೆ ಎಸಿಬಿ ತಂಡ ಕಾರ್ಯಾಚರಣೆ ಮಾಡಿದೆ. ಜಮೀರ್‌ ಅಹಮದ್‌ ಮನೆಗೆ ಎಸಿಬಿ ದಾಳಿ ಮಾಡಿದರೆ ಸಿದ್ದರಾಮಯ್ಯ ಅವರಿಗೇನು ಸಂಕಟ. ಇಷ್ಟಕ್ಕೂ ಎಸಿಬಿ ರಚಿಸಿದ್ದೇ ಸಿದ್ದರಾಮಯ್ಯ’ ಎಂದು ಉತ್ತರಿಸಿದರು.

‘ಮಹಾರಾಷ್ಟ್ರದಲ್ಲಿ ರಾಜಕೀಯ ಧ್ರುವೀಕರಣ ಮಾಡಿದ್ದೇವೆ. ಅವಕಾಶ ಬಳಸಿಕೊಂಡಿದ್ದೇವೆ. ರಾಜಕೀಯ ನಿಂತ ನೀರಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT