ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀರೂರು: ತಜ್ಞ ವೈದ್ಯರ ಕೊರತೆಯೇ ಅಡ್ಡಿ

ಪಟ್ಟಣದ ಪತ್ರೆ ಕೆ.ಶಿವಪ್ಪಯ್ಯ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಕಡಿಮೆ
Last Updated 3 ಏಪ್ರಿಲ್ 2020, 10:31 IST
ಅಕ್ಷರ ಗಾತ್ರ

ಬೀರೂರು: ಪಟ್ಟಣದ ಪತ್ರೆ ಕೆ.ಶಿವಪ್ಪಯ್ಯ ಸಾರ್ವಜನಿಕ ಆಸ್ಪತ್ರೆ ಐವತ್ತು ಹಾಸಿಗೆಗಳ ಸೌಲಭ್ಯ ಹೊಂದಿದ್ದು, ಕೊರೊನಾ ಸೋಂಕಿತ ಪುರುಷರು ಮತ್ತು ಮಹಿಳೆಯರ ಚಿಕಿತ್ಸೆ ಸಲುವಾಗಿ ಪ್ರತ್ಯೇಕ ವಾರ್ಡ್‌ಗಳನ್ನು ರಚಿಸಲಾಗಿದೆ.

ಸಾಮಾನ್ಯ ಜ್ವರ ಅಥವಾ ಕೆಮ್ಮು, ಶೀತದಂತಹ ಲಕ್ಷಣಗಳ ರೋಗಿಗಳಿಗೆ ಪ್ರಥಮ ಚಿಕಿತ್ಸೆ ಬಳಿಕ ಪ್ಯಾರಾಸಿಟಮಲ್ ಮತ್ತು ಆಂಟಿಬಯೋಟಿಕ್ ಔಷಧ ವಿತರಿಸಿ ರೋಗಲಕ್ಷಣಗಳನ್ನು ಗಮನಿಸಿ ಅವರ ಬಗ್ಗೆ ವಿಶೇಷ ಗಮನ ನೀಡಲಾಗುತ್ತಿದೆ.

ಸದ್ಯಕ್ಕೆ ಆಸ್ಪತ್ರೆಯಲ್ಲಿ ಯಾವುದೇ ಒಳರೋಗಿಗಳು ದಾಖಲಾಗಿಲ್ಲ. ಎಲ್ಲ ವಾರ್ಡ್‌ಗಳಿಗೂ (ಹೆರಿಗೆ ವಾರ್ಡ್ ಸೇರಿ) ಖಾಲಿ ಇದ್ದು ತುರ್ತು ಅಗತ್ಯ ಬಂದಲ್ಲಿ ಬಳಸಲು ಸಾಧ್ಯವಾಗುವಂತೆ ಯೋಜನೆ ರೂಪಿಸಲಾಗಿದೆ. ಸಾಮಾನ್ಯವಾಗಿ ನಿತ್ಯ 250ರಿಂದ 300 ರೋಗಿಗಳು ಚಿಕಿತ್ಸೆಗಾಗಿ ಬರುತ್ತಿದ್ದ ಆಸ್ಪತ್ರೆಗೆ ಗ್ರಾಮೀಣ ಪ್ರದೇಶಗಳಿಂದಲೂ ರೋಗಿಗಳು ಬರುತ್ತಿದ್ದರೂ ಸದ್ಯ ಅವರ ಸಂಖ್ಯೆ ತೀವ್ರ ಕುಸಿದಿದೆ.

ಬೀರೂರು ವ್ಯಾಪ್ತಿಯಲ್ಲಿ ಜ್ವರ ಎಂದು ಬರುವ ರೋಗಿಗಳನ್ನು ಪರೀಕ್ಷಿಸಿ ಅವರಿಗೆ ಮೂರು ದಿನಗಳಿಗೆ ಆಗುವಷ್ಟು ಔಷಧಿ ವಿತರಿಸಿ ಅವರ ಹೆಸರು, ದೂರವಾಣಿ ಸಂಖ್ಯೆ, ವಿಳಾಸಗಳನ್ನು ನಮೂದಿಸಿಕೊಂಡು, ಔಷಧಗಳನ್ನು ತಪ್ಪದೆ ಸೇವಿಸಬೇಕು, ಕುಟುಂಬ ಸದಸ್ಯರಿಂದ ಪ್ರತ್ಯೇಕವಾಗಿರಬೇಕು, ಮೂರು ದಿನಗಳ ನಂತರವೂ ಜ್ವರ ಕಡಿಮೆಯಾಗದಿದ್ದರೆ ತಜ್ಞ ವೈದ್ಯರ ಸಲಹೆ ಪಡೆಯಬೇಕು ಎಂದು ಮಾರ್ಗದರ್ಶನ ಮಾಡಲಾಗುತ್ತಿದೆ.

ಆಸ್ಪತ್ರೆಗೆ ಬರುವ ಹೊರರೋಗಿಗಳನ್ನು ತುರ್ತು ಚಿಕಿತ್ಸಾ ಘಟಕದ ಬಳಿಯೇ ಪರೀಕ್ಷಿಸಿ ಅಗತ್ಯ ಮಾತ್ರೆ, ಚುಚ್ಚುಮದ್ದು ಮತ್ತಿತರ ಚಿಕಿತ್ಸೆ ನೀಡಲಾಗುತ್ತಿದೆ.

ಆಸ್ಪತ್ರೆಯಲ್ಲಿ ತಜ್ಞವೈದ್ಯರ ಕೊರತೆ ಇದ್ದು ಕಡೂರು, ತರೀಕೆರೆ, ಅಜ್ಜಂಪುರ ಸಾರ್ವಜನಿಕ ಆಸ್ಪತ್ರೆಗಳ ತಜ್ಞವೈದ್ಯರ ಮೊರೆ ಹೋಗಬೇಕಾದ ಸ್ಥಿತಿ ಸ್ಥಳೀಯ ನಾಗರಿಕರದ್ದಾಗಿದೆ. ವೆಂಟಿಲೇಟರ್ ಸೌಲಭ್ಯ ತಾಲ್ಲೂಕು ಕೇಂದ್ರಗಳಲ್ಲಿಯೇ ಇಲ್ಲದ ಕಾರಣ ಇಲ್ಲಿ ಅದನ್ನು ನಿರೀಕ್ಷಿಸುವುದು ಕನಸಿನ ಮಾತು ಎಂಬುದು ಸ್ಥಳೀಯರ ನೋವು.

ಇರುವ ಇಬ್ಬರು ವೈದ್ಯರು ಸಾಧ್ಯವಿರುವ ಮಟ್ಟಿನ ವೈದ್ಯಕೀಯ ಸೇವೆ ನೀಡುತ್ತಿದ್ದು, ಅನೇಕ ಸಂದರ್ಭಗಳಲ್ಲಿ ಶವಪರೀಕ್ಷೆ, ರೋಗಿಗಳ ಫೋನ್‍ ಕರೆಗೆ ಉತ್ತರಿಸಿ, ಸೂಕ್ತ ಸಲಹೆ ನೀಡುವಂತಹ ಕೆಲಸಗಳಲ್ಲಿಯೂ ತೊಡಗಿಕೊಳ್ಳಬೇಕಿದೆ.

ಜಿಲ್ಲಾ ಉಸ್ತುವಾರಿ ಸಚಿವರು ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿ ಹೋಗಿದ್ದಾರೆ. ಇಲ್ಲಿನ ಕುಂದು-ಕೊರತೆಗಳನ್ನು ನೀಗಿಸಿದಲ್ಲಿ ಮಾತ್ರ ಮತ್ತಷ್ಟು ಉತ್ತಮ ಸೇವೆ ಲಭ್ಯವಾಗಬಹುದು.

ಕಡೂರು ತಾಲ್ಲೂಕಿನಲ್ಲಿ ಎಲ್ಲಿಯೂ ಪಾಸಿಟಿವ್ ಪ್ರಕರಣ ಪತ್ತೆಯಾಗದೆ ಕೊರೊನಾ ಭೀತಿ ಸಾಂಕ್ರಾಮಿಕವಾಗಿಲ್ಲದ ಕಾರಣ ಅಷ್ಟರಮಟ್ಟಿಗೆ ಆಸ್ಪತ್ರೆ ಮೇಲಿನ ಹೊರೆಯೂ ಕಡಿಮೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT