ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಸೌಲಭ್ಯವೇನೂ ಇಲ್ಲ; ಅವ್ಯವಸ್ಥೆಯೇ ಎಲ್ಲ

ಕೊರೊನಾ ನೆಪದಲ್ಲೂ ಸುಧಾರಿಸದ ಕಳಸ ಸಮುದಾಯ ಆರೋಗ್ಯ ಕೇಂದ್ರ
Last Updated 2 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಕಳಸ: ‘ದೇವರ ದಯೆಯಿಂದ ನಮ್ಮೂರಿನಲ್ಲಿ ಯಾವುದೇ ಕೊರೊನಾ ಪ್ರಕರಣ ಇಲ್ಲ’ ಎಂದು ಪಟ್ಟಣದ ಜನರು ಹೇಳುವಾಗ ಅವರ ಮನಸ್ಸಿನಲ್ಲಿ ಇರುವುದು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಅವ್ಯವಸ್ಥೆಯ ಚಿತ್ರಣ.

30 ಹಾಸಿಗೆಗಳ ಈ ಆಸ್ಪತ್ರೆಯಲ್ಲಿ ಜನಪರ ಕಾಳಜಿಯಿಂದ ಕೆಲಸ ಮಾಡುವ ವೈದ್ಯರು ಇಲ್ಲ. ಆಡಳಿತಗಾರರ ತಾರತಮ್ಯದ ಕಾರಣಕ್ಕೆ ಸಿಬ್ಬಂದಿ ನಡುವೆ ಒಮ್ಮತವೂ ಇಲ್ಲ. ಆಸ್ಪತ್ರೆಯ ಬಹುತೇಕ ಸೌಲಭ್ಯಗಳು ಜನರಿಗೆ ತಲುಪುತ್ತಿಲ್ಲ. ಕೊರೊನಾ ಭಯದಲ್ಲಿ ಜನರು ಇದ್ದರೂ ಆಸ್ಪತ್ರೆ ಸುಧಾರಿಸಿಕೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ ಎಂಬುದು ಜನರ ಅನಿಸಿಕೆ.

ಆಸ್ಪತ್ರೆ ಸಿಬ್ಬಂದಿಗೆ ಇಲ್ಲಿನ ಆಡಳಿತಾಧಿಕಾರಿ ಸ್ಥಳೀಯವಾಗಿ ಹೊಲಿಸಿದ ಬಟ್ಟೆಯ ಎರಡೆರಡು ಮಾಸ್ಕ್ ನೀಡಿದ್ದಾರೆ. ಇದನ್ನು ಬಿಟ್ಟರೆ ಸಿಬ್ಬಂದಿಗೆ ಥರ್ಮಲ್ ಸ್ಕ್ರೀನಿಂಗ್‍ನಂತಹ ಸಲಕರಣೆ, ಪಿಪಿಇ ಕಿಟ್‌, ಎನ್‌95 ಮಾಸ್ಕ್‌ಗಳು ಲಭ್ಯವಿಲ್ಲ. ಇದರಿಂದಾಗಿ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಆತ್ಮವಿಶ್ವಾಸದಿಂದ ಕೆಲಸ ಮಾಡುವ ವಾತಾವರಣವೇ ಇಲ್ಲ.

‘ಆಸ್ಪತ್ರೆಯಲ್ಲಿ ಈಗಲೂ ಬಹುತೇಕ ಹುದ್ದೆಗಳು ಖಾಲಿ ಇದ್ದು ಇಬ್ಬರು ಆಯುಷ್ ವೈದ್ಯರು ಮತ್ತು ಒಬ್ಬ ನಿಯೋಜಿತ ವೈದ್ಯ ಮಾತ್ರ ಕರ್ತವ್ಯದಲ್ಲಿದ್ದಾರೆ. ಆಡಳಿತಾಧಿಕಾರಿ ದಂತ ವೈದ್ಯರಾಗಿದ್ದು, ಅವರ ಆಸಕ್ತಿಯ ಕೊರತೆಯಿಂದ ಆಸ್ಪತ್ರೆ ಅವ್ಯವಸ್ಥೆಯ ಗೂಡಾಗಿದೆ’ ಎಂದು ಜೆಡಿಎಸ್ ಮುಖಂಡ ರವಿ ರೈ ದೂರುತ್ತಾರೆ.

ಇಲ್ಲಿನ ಪ್ರಯೋಗಾಲಯದಲ್ಲಿ ಸಂಪೂರ್ಣ ರಕ್ತ ಪರೀಕ್ಷೆ ನಡೆಸುವ ಸಾಧನ ಕೆಟ್ಟು ವರ್ಷವೇ ಕಳೆದಿದೆ. ಆಸ್ಪತ್ರೆ ಯಲ್ಲಿ ಕುಡಿಯುವ ನೀರಿನ ಫಿಲ್ಟರ್ ಮತ್ತು ಬಿಸಿ ನೀರು ಪೂರೈಸಬೇಕಿದ್ದ ಸೋಲಾರ್ ಹೀಟರ್ ಕೆಟ್ಟು ನಿಂತಿದೆ. ವಾರ್ಡ್‌ಗಳಿಗೆ ಇನ್‌ವರ್ಟರ್ ಸೌಲಭ್ಯವೂ ಇಲ್ಲ.

ಆಸ್ಪತ್ರೆಯಲ್ಲಿ ಹೆರಿಗೆ ಆಗದೆ ವರ್ಷ ಕಳೆದಿದೆ. ವೈದ್ಯರ ನಿವಾಸವನ್ನು ಮೊರಾರ್ಜಿ ಶಾಲೆಯ ಶುಶ್ರೂಷಕಿಯೊಬ್ಬರಿಗೆ ನೀಡಲಾಗಿದೆ. ಆಸ್ಪತ್ರೆಯಲ್ಲಿ ಬಯೋಮೆಟ್ರಿಕ್ ಮತ್ತು ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಅನಧಿಕೃತ ಗೈರುಹಾಜರಾತಿಯ ಅಂಶ ಅಡ್ಡಿಯಾಗಿದೆ.

ಕಳಸ ತಾಲ್ಲೂಕು ವ್ಯಾಪ್ತಿಗೆ ವಿದೇಶದಿಂದ 7 ಮಂದಿ, ಹೊರರಾಜ್ಯಗಳಿಂದ 3, ಬೆಂಗಳೂರಿನಿಂದ 135, ಇತರ ಜಿಲ್ಲೆಗಳಿಂದ 3 ಮಂದಿ ಬಂದಿದ್ದಾರೆ. ವಿದೇಶದಿಂದ ಬಂದಿದ್ದವರಲ್ಲಿ ಇಬ್ಬರು ಈಗ ಕ್ವಾರಂಟೈನ್‌ನಲ್ಲಿ ಇದ್ದಾರೆ.

‘ಆಸ್ಪತ್ರೆಗೆ ಸೇವಾ ಮನೋಭಾವದ ವೈದ್ಯರೊಬ್ಬರನ್ನು ಆಡಳಿತಾಧಿಕಾರಿಯಾಗಿ ತುರ್ತಾಗಿ ನೇಮಿಸಬೇಕು. ಸಿಬ್ಬಂದಿಗೆ ಅಗತ್ಯ ಸಲಕರಣೆ ನೀಡಿ ವಿಶ್ವಾಸ ಮೂಡಿಸಬೇಕು’ ಎಂದು ಆಸ್ಪತ್ರೆಯ ಮೇಲ್ವಿಚಾರಣಾ ಸಮಿತಿ ಸದಸ್ಯ ಲಕ್ಷ್ಮಣಾಚಾರ್ ಆಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT