ಬೆಳೆ ಸಮೀಕ್ಷೆ ವರದಿ: ರೈತರ ಮೊಬೈಲ್ ಸಂಖ್ಯೆ ಸೇರ್ಪಡೆಗೆ ಸೂಚನೆ

7
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೀವ್‌ ಚಾವ್ಲಾ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ

ಬೆಳೆ ಸಮೀಕ್ಷೆ ವರದಿ: ರೈತರ ಮೊಬೈಲ್ ಸಂಖ್ಯೆ ಸೇರ್ಪಡೆಗೆ ಸೂಚನೆ

Published:
Updated:
Deccan Herald

ಚಿಕ್ಕಮಗಳೂರು: ಬೆಳೆ ಸಮೀಕ್ಷೆ ವರದಿಯಲ್ಲಿ ರೈತರ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ಸೇರಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೀವ್ ಚಾವ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಳೆ ಬೆಳೆ ಸ್ಥಿತಿ, ಮಳೆಹಾನಿ ಬಗ್ಗೆ ಕೈಗೊಂಡ ಪರಿಹಾರ ಕ್ರಮಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಸ್ಥಳೀಯರು ಸಮೀಕ್ಷೆ ಮಾಡುವುದರಿಂದ ಅವರಿಗೆ ನಿಖರವಾದ ಮಾಹಿತಿ ಇರುತ್ತದೆ. ಪ್ರತಿ ಜಮೀನಿನಲ್ಲಿ ಸಮೀಕ್ಷೆ ಮಾಡಬೇಕು. ಗ್ರಾಮ ಲೆಕ್ಕಾಧಿಕಾರಿಗಳು ಸಮೀಕ್ಷೆ ಮೇಲ್ವಿಚಾರಣೆ ನಿರ್ವಹಿಸಬೇಕು. ಸಮೀಕ್ಷೆ ವೇಳೆ ಬೆಳೆ ನಮೂದಿಸುವಾಗ ವ್ಯತ್ಯಾಸಗಳಾಗಿದ್ದರೆ ಅಧಿಕಾರಿಗಳು ವರದಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ1,305 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ, 1,500 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳು ಹಾನಿಯಾಗಿದೆ. ಕೃಷಿ ಇಲಾಖೆಯು ಬೆಳೆಹಾನಿ ಅಂದಾಜು ನಷ್ಟ ₹ 88.7 ಲಕ್ಷ , ತೋಟಗಾರಿಕೆ ಇಲಾಖೆಯು ಅಂದಾಜು ನಷ್ಟ ₹ 8.99 ಕೋಟಿ ಪಟ್ಟಿ ಮಾಡಿದೆ. ಸಮೀಕ್ಷೆಗೆ ಕೃಷಿ ತೋಟಗಾರಿಕೆ ಹಾಗೂ ಕಂದಾಯ ಇಲಾಖೆಗಳ ಅಧಿಕಾರಿಗಳ ತಂಡ ರಚಿಸಲಾಗಿದೆ. ತೋಟಗಾರಿಕಾ ಪ್ರದೇಶದ ಸಮೀಕ್ಷೆ ಕಾರ್ಯ ಇನ್ನೂ ನಡೆಯುತ್ತಿದೆ. ನಷ್ಟದ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಮಾಹಿತಿ ನೀಡಿದರು.

ಕಡೂರು ಹಾಗೂ ಚಿಕ್ಕಮಗಳೂರು ತಾಲ್ಲೂಕಿನ ಲಕ್ಯಾ ಹೋಬಳಿಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಬಿತ್ತನೆ ಕಾರ್ಯ ಶೇ 33ರಷ್ಟು ಕುಂಠಿತವಾಗಿದೆ. ಆಗಸ್ಟ್ ಅಂತ್ಯದವರೆಗೆ ಈ ಪ್ರದೇಶಗಳಲ್ಲಿ ರಾಗಿ ಬಿತ್ತನೆ ಆಗಬೇಕಿತ್ತು. ಮಳೆ ಕೊರತೆಯಿಂದಾಗಿ ರಾಗಿ ಬಿತ್ತನೆ ಕಡಿಮೆಯಾಗಿದೆ. ಹಿಂಗಾರಿನಲ್ಲಿ ಉತ್ತಮ ಮಳೆಯಾದರೆ ಹುರುಳಿ ಬಿತ್ತನೆಗೆ ಅನುಕೂಲವಾಗುತ್ತದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಂ.ಸಿ.ಸೀತಾ ಮಾಹಿತಿ ನೀಡಿದರು.

ಕಡೂರು ಹಾಗೂ ಲಕ್ಯಾ ಹೋಬಳಿಗಳಲ್ಲಿ ಮಳೆ ಕಡಿಮೆಯಾಗಿರುವುದರಿಂದ ಈ ಪ್ರದೇಶವನ್ನು ಬರಪ್ರದೇಶಗಳ ಪಟ್ಟಿಗೆ ಸೇರಿಸಲು ಸರ್ಕಾರಕ್ಕೆ ಪ್ರಸ್ತಾವಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜನ ಸ್ಪಂದನ ಕಾರ್ಯಕ್ರಮವನ್ನು ಪ್ರತಿ ತಿಂಗಳು ಎರಡು ಹೋಬಳಿಗಳಲ್ಲಿ ಮಾಡಬೇಕು. ಜನ ಸ್ಪಂದನದಲ್ಲಿ ಸಾರ್ವಜನಿಕರಿಂದ ಬರುವ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ರಾಜೀವ್‌ ಚಾವ್ಲಾ ತಿಳಿಸಿದರು.

ಮುಖ್ಯಮಂತ್ರಿ ಜನತಾದರ್ಶನದಲ್ಲಿ ಪಡಿತರ ವಿತರಣೆ ವ್ಯವಸ್ಥೆಯಲ್ಲಿ ಜೀವ ಮಾಪಕ (ಬಯೊಮೆಟ್ರಿಕ್) ಪದ್ಧತಿ ಕೈಬಿಡಬೇಕು ಎಂದು ಜಿಲ್ಲೆಯ ಜಯಣ್ಣ ಎಂಬುವರು ಕೋರಿದ್ದಾರೆ. ಪಡಿತರ ವಿತರಣೆಗೆ ಸಬಂಧಿಸಿದಂತೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಉಪನಿರ್ದೇಶಕರನ್ನು ಚಾವ್ಲಾ ಪ್ರಶ್ನಿಸಿದರು.

ಜೀವ ಮಾಪಕ ವ್ಯವಸ್ಥೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಉಪನಿರ್ದೇಶಕರು ಸಭೆಗೆ ತಿಳಿಸಿದರು.

ಮಗಳಿಗೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ನೀಡಿಲ್ಲ ಎಂದು ವಸಂತ ಕುಮಾರಿ ಎಂಬವರು ಜನತಾದರ್ಶನದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಬಾಂಡ್ ವಿತರಣೆಗೆ ಏನು ಸಮಸ್ಯೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಯನ್ನು ಚಾವ್ಲಾ ಪ್ರಶ್ನಿಸಿದರು.

ಮಗುವಿಗೆ ಒಂದು ವರ್ಷ ತುಂಬುವುದರೊಳಗೆ ಭಾಗ್ಯಲಕ್ಷ್ಮಿ ಯೋಜನೆ ಬಾಂಡ್‌ಗೆ ಅರ್ಜಿ ಸಲ್ಲಿಸಬೇಕು. ವಸಂತ ಕುಮಾರಿ ಅವರು ಮಗುವಿನ ಒಂದು ವರ್ಷ ತುಂಬಿದ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ತಿರಸ್ಕರಿಸಲಾಗಿದೆ. ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದು ಬಾಂಡ್ ವಿತರಿಸುವ ಕುರಿತು ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಸವರಾಜಯ್ಯ ತಿಳಿಸಿದರು.

ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಅಮರೇಶ್, ಜಿಲ್ಲಾ ‍ಪಂಚಾಯಿತಿ ಕಾರ್ಯದರ್ಶಿ ರಾಜಗೋಪಾಲ್ ಇದ್ದರು.

 

 

 

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !