ಮಂಗಳವಾರ, ಅಕ್ಟೋಬರ್ 22, 2019
21 °C

ಕೇಂದ್ರ ಸರ್ಕಾರ ಅನುದಾನ ನೀಡದಿದ್ದರೆ ಧ್ವನಿ: ಸಿ.ಟಿ.ರವಿ

Published:
Updated:
Prajavani

ಚಿಕ್ಕಮಗಳೂರು: ‘ಕೇಂದ್ರ ಸರ್ಕಾರವು ಬೇರೆ ರಾಜ್ಯಕ್ಕೆ ಅನುದಾನ ನೀಡಿ, ಕರ್ನಾಟಕಕ್ಕೆ ಅನುದಾನ ನೀಡದಿದ್ದರೆ ಎಚ್‌.ಡಿ.ಕುಮಾರಸ್ವಾಮಿಗಿಂತ ಮುಂಚೆ ನಾವೇ ಧ್ವನಿ ಎತ್ತುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರತಿಕ್ರಿಯಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಾಲಮಿತಿಯೊಳಗೆ ಅನುದಾನ ನೀಡದಿದ್ದರೆ ಧ್ವನಿ ಎತ್ತುವುದು ಖಚಿತ. ಈ ವಿಚಾರದಲ್ಲಿ ಯಾವ ಭಯ, ಹಿಂಜರಿಕೆ ಇಲ್ಲ. ನಮಗೆ ಸಾಮರ್ಥ್ಯ ಸಾಲದಿದ್ದರೆ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರನ್ನೂ ಕರೆದೊಯ್ಯುತ್ತೇವೆ’ ಎಂದು ಉತ್ತರಿಸಿದರು.

‘ಕೇಂದ್ರ ಬಿಜೆಪಿ ನಾಯಕರು ಕರ್ನಾಟಕವನ್ನು ಟಾರ್ಗೆಟ್‌ ಮಾಡಿದ್ದಾರೆ ಎಂದು ಬಸವನಗೌಡ ಪಾಟೀಲ್‌ ಯತ್ನಾಳ್‌ ಹೇಳಿರುವುದು ಹಾಸ್ಯಾಸ್ಪದವಾಗಿದೆ. ಅವರು ಒಳಬೇಗುದಿ ತೋಡಿಕೊಳ್ಳಲು ಈ ರೀತಿ ಹೇಳಿಕೆ ನೀಡಿರಬಹುದು. 10 ರಾಜ್ಯಗಳಲ್ಲಿ ಅತಿವೃಷ್ಟಿ ಹಾನಿ ಸಂಭವಿಸಿದೆ. ಯಾವ ರಾಜ್ಯಕ್ಕೂ ಅನುದಾನ ಬಿಡುಗಡೆಯಾಗಿಲ್ಲ. ಟಾರ್ಗೆಟ್‌ ಮಾಡಿದ್ದಾರೆ ಎನ್ನುವುದು ಎಷ್ಟು ಸರಿ’ ಎಂದು ತಿವಿದರು.

‘ಹೊಸ ಫಾರ್ಮ್ಯಾಟ್‌ನಲ್ಲಿ ವಿವರ ಸಲ್ಲಿಸದಿರುವುದು ಮತ್ತು ನೇರ ನಗದು ವರ್ಗಾವಣೆ (ಡಿಬಿಟಿ) ಕಾರಣಕ್ಕೆ ಅನುದಾನ ಬಿಡುಗಡೆ ಕೊಂಚ ವಿಳಂಬವಾಗಿದೆ. ಕೇಂದ್ರ ಸರ್ಕಾರವು ರಾಜ್ಯಕ್ಕೆ ಅನುದಾನ ಒದಗಿಸುತ್ತದೆ ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಚಿಕ್ಕಮಗಳೂರಿನ ಮೆಡಿಕಲ್‌ ಕಾಲೇಜು ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಇದೇ 10ರಂದು ಸಭೆ ನಡೆಯಲಿದೆ. ಮಂಜೂರಾತಿ ದೊರಕುವ ವಿಶ್ವಾಸ ಇದೆ’ ಎಂದರು.

‘ನಗರದ ರಸ್ತೆ ಗುಂಡಿ, ಇತರ ಸಮಸ್ಯೆಗಳನ್ನು ಮುಖ್ಯಮಂತ್ರಿಯೊಂದಿಗೆ ಚರ್ಚಿಸಲಾಗಿದೆ. ₹ 10 ಕೋಟಿ ವಿಶೇಷ ಅನುದಾನ ನೀಡುವುದಕ್ಕೆ ಒಪ್ಪಿದ್ದಾರೆ. ₹ 18 ಕೋಟಿ ಅನುದಾನ ಇದೆ. ಅಮೃತ್‌ ಯೋಜನೆ, ಕೆಲಸ ಮುಗಿದಿರುವ ಕಡೆಗಳಲ್ಲಿ ರಿಪೇರಿ ಕೈಗೆತ್ತಿಕೊಳ್ಳಲು ಸೂಚನೆ ನೀಡಲಾಗಿದೆ’ ಎಂದರು.

‘ಅತಿವೃಷ್ಟಿಯಲ್ಲಿ ಮನೆ ಕಳೆದುಕೊಂಡವರಿಗೆ ಬಾಡಿಗೆ ಮನೆ ಹುಡುಕಿಕೊಳ್ಳಲು ತಿಳಿಸಲಾಗಿದೆ. ಬಾಡಿಗೆ ಪಾವತಿಗೆ ವ್ಯವಸ್ಥೆ ಮಾಡಲಾಗಿದೆ’ ಎಂದು ಉತ್ತರಿಸಿದರು.

ಜೈರಾಂ ರಮೇಶ್‌ ಕ್ಷಮೆಯಾಚನೆಗೆ ಆಗ್ರಹ

‘ಮಧ್ಯಪ್ರದೇಶದಲ್ಲಿ ಶೌಚಾಲಯ ನಿರ್ಮಾಣ ಸಂದರ್ಭದಲ್ಲಿ ಬಿಜೆಪಿ ವಿರೋಧ ಮಾಡಿದೆ ಎಂದು ರಾಜ್ಯಸಭಾ ಸದಸ್ಯ ಜೈರಾಂ ರಮೇಶ್‌ ಸುಳ್ಳು ಹೇಳಿಕೆ ನೀಡಿದ್ದಾರೆ. ಅದಕ್ಕೆ ಅವರು ಕ್ಷಮೆಯಾಚಿಸಬೇಕು’ ಎಂದು ರವಿ ಆಗ್ರಹಿಸಿದರು.

‘ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಬಂದ ನಂತರ ಶೌಚಾಲಯ ನಿರ್ಮಾಣದ ಕ್ರಾಂತಿಯಾಯಿತು. ಅದಕ್ಕೆ ಮುಂಚೆ ಶೌಚಾಲಯ ನಿರ್ಮಾಣ ಘೋಷಣೆ ಮಾತ್ರ ಇತ್ತು. ಘೋಷಣೆಯನ್ನು ಅನುಷ್ಠಾನಗೊಳಿಸಿದ ಕೀರ್ತಿ ಮೋದಿ ಸರ್ಕಾರಕ್ಕೆ ಸಲ್ಲುತ್ತದೆ. ಸ್ವಚ್ಛತೆಯು ಬಿಜೆಪಿ ಸರ್ಕಾರಕ್ಕೆ ಘೋಷಣೆ ಅಲ್ಲ, ಅದೊಂದು ಆಂದೋಲನ’ ಎಂದು ಪ್ರತಿಪಾದಿಸಿದರು.

‘ಗಾಂಧೀಜಿ ವಿಚಾರಧಾರೆಗಳನ್ನು ವಾರಸುದಾನಾಗಿದ್ದ ಕಾಂಗ್ರೆಸ್‌ ಪಕ್ಷವೇ ಮೂಲೆಗುಂಪು ಮಾಡಿತು. ಗಾಂಧೀಜಿ ಹೆಸರು, ಫೋಟೊ ಬಳಸಿಕೊಂಡಿದ್ದು ಬಿಟ್ಟರೆ ವಿಚಾರಧಾರೆಗಳನ್ನು ಕಾರ್ಯಗತ ಮಾಡಲಿಲ್ಲ. ಗಾಂಧೀಜಿ ತತ್ವಕ್ಕೆ ಅಪಮಾನ ಮಾಡಿರುವುದಕ್ಕೆ ಇವತ್ತಿನ ಕಾಂಗ್ರೆಸ್ಸಿಗರು ಎಷ್ಟು ಜನ್ಮ ಎತ್ತಿ ಪಾಪದ ಪ್ರಾಯಶ್ಚಿತ್ತ ಮಾಡಿದರೂ ಸಾಕಾಗಲ್ಲ’ ಎಂದು ಕುಟುಕಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)