ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯವ ನೀರಿನ ಪೈಪು ಅಳವಡಿಸಲು ರಸ್ತೆ ಬಗೆತ: ಐ.ಜಿ ರಸ್ತೆ ಸಂಚಾರ ಪಡಿಪಾಟಲು

Last Updated 22 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಅಮೃತ್‌ ಯೋಜನೆಯಡಿ ಕುಡಿಯುವ ನೀರಿನ ಪೈಪು ಅಳವಡಿಸಲು ಐ.ಜಿ (ಇಂದಿರಾಗಾಂಧಿ) ರಸ್ತೆಯ ಬದಿಯ ಉದ್ದಕ್ಕೂ ಅಗೆಯಲಾಗಿದ್ದು ಸಂಚಾರಕ್ಕೆ ಸಂಚಕಾರವಾಗಿ ಪರಿಣಮಿಸಿದೆ. ವಾಹನ ನಿಲುಗಡೆಗೆ ಹರಸಾಹಸಪಡಬೇಕಾಗಿದೆ.

ಜನ ವಾಹನ ದಟ್ಟಣೆಯಿಂದ ಗಿಜಿಗುಡುವ ಈ ರಸ್ತೆಯಲ್ಲಿ ಮಣ್ಣಿನ ರಾಶಿ, ತಗ್ಗುಗಳ ನಡುವೆ ಸಂಚರಿಸುವುದು ತ್ರಾಸದಾಯಕವಾಗಿದೆ. ಈ ರಸ್ತೆಯ ಸಂಚಾರ ‘ಎಚ್ಚರ ಬಿದ್ದೀರಾ ಜೋಕೆ...’ ಎಂಬಂತಾಗಿದೆ.

ನಗರದ ಹೃದಯ ಭಾಗದ ಈ ರಸ್ತೆಯಲ್ಲಿ ಶಾಲಾ ವಾಹನಗಳು, ಟಿಂಬರ್‌ ಲಾರಿಗಳು, ಟ್ರಕ್‌ಗಳು, ಆಟೊಗಳು, ಕೆಎಸ್‌ಆರ್‌ಟಿಸಿ ಬಸ್ಸುಗಳು ಇತ್ಯಾದಿ ವಾಹನಗಳು ಹೆಚ್ಚು ಸಂಚರಿಸುತ್ತವೆ. ವಾರಾಂತ್ಯದ ದಿನಗಳಲ್ಲಿ ಪ್ರವಾಸಿ ವಾಹನಗಳು ಹೆಚ್ಚು ಇರುತ್ತದೆ. ಈ ರಸ್ತೆಯಲ್ಲಿ ಲಾಡ್ಜ್‌, ಹೋಟೆಲ್‌, ಅಂಗಡಿ, ವಾಣಿಜ್ಯ ಮಳಿಗೆ, ಆಸ್ಪತ್ರೆ ಮೊದಲಾದವು ಹೆಚ್ಚು ಇವೆ.

ರಸ್ತೆ ಬದಿಯ ಉದ್ದಕ್ಕೂ ಅಲ್ಲಲ್ಲಿ ಕಲ್ಲು–ಮಣ್ಣು ಗುಡ್ಡೆಗಳಿದ್ದು, ವಾಹನಗಳ ನಿಲುಗಡೆ (ಪಾರ್ಕಿಂಗ್‌) ನಾಗರಿಕರಿಗೆ ತಲೆನೋವಾಗಿ ಪರಿಣಮಿಸಿದೆ. ಅಗೆದು ಪೈಪು ಅಳವಡಿಸಿದ ನಂತರ ಮಣ್ಣು ಎಳೆದು ಬೇಕಾಬಿಟ್ಟಿಯಾಗಿ ಮುಚ್ಚಲಾಗಿದೆ. ಸಮತಟ್ಟು ಮಾಡಿಲ್ಲ. ಇದು ಸುಗಮ ಸಂಚಾರಕ್ಕೆ ತೊಡಕಾಗಿದೆ. ಪಾದಾಚಾರಿಗಳ ಗೋಳು ಹೇಳತೀರದಾಗಿದೆ.

ಅಗೆದ ಮಣ್ಣು ರಸ್ತೆ ಮೇಲೆ ರಾಶಿ ಹಾಕಲಾಗಿದೆ. ಮಕ್ಕಳು, ವೃದ್ಧರು, ರೋಗಿಗಳು ಗುಂಡಿ ದಾಟಿಕೊಂಡು ಸಾಗಲು ಪ್ರಯಾಸ ಪಡಬೇಕಾಗಿದೆ. ‘ಟ್ರಾಫಿಕ್‌ ಜಾಮ್‌’ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಪಾದಚಾರಿ ಮಾರ್ಗದಲ್ಲಿ ಮದ್ಯವ್ಯಸನಿಗಳು, ನಿರ್ಗತಿಕರು, ಭಿಕ್ಷಕರು ಉಪಟಳ ತಪ್ಪಿಲ್ಲ.

ಪಾಯಸ್‌ ಕಾಂಪೌಂಡ್‌ ನಿವಾಸಿ ಏಜಾಜ್‌ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ರಾತ್ರಿ ವೇಳೆಯಲ್ಲಿ ಕಾಮಗಾರಿ ಮಾಡಿದರೆ, ಸ್ವಲ್ಪಮಟ್ಟಿಗೆ ಸಮಸ್ಯೆ ತಪ್ಪಿಸಬಹುದು. ಕುಡಿಯುವ ನೀರಿನ ಪೈಪು ಅಳವಡಿಸುವುದಾಗಿ ಈ ಹಿಂದೆ ನಗರದ ಎಲ್ಲ ಬಡಾವಣೆಗಳಲ್ಲಿಯೂ ಅಗೆದಿದ್ದರು. ಆ ತಗ್ಗುಗಳನ್ನೇ ಇನ್ನು ಸರಿಪಡಿಸಿಲ್ಲ. ಈಗ ಐ.ಜಿ ರಸ್ತೆಯಲ್ಲಿ ಶುರು ಮಾಡಿದ್ದಾರೆ’ ಎಂದು ಅಳಲು ತೋಡಿಕೊಂಡರು.

‘ಪಾರ್ಕಿಂಗ್‌ ಜಾಗದಲ್ಲಿ ಅಗೆದಿದ್ದಾರೆ. ಕೆಲವೆಡೆ ಮಣ್ಣಿನ ರಾಶಿಗಳು ಹಾಗೆಯೇ ಇವೆ. ಈ ರಾಶಿಗಳು ವಾಹನ ನಿಲ್ಲಿಸಲು, ಓಡಾಡಲು ತೊಡಕಾಗಿವೆ. ಈ ಬಗ್ಗೆ ಹೇಳಿದರೆ ಅಧಿಕಾರಿಗಳು ಗಮನ ನೀಡುತ್ತಿಲ್ಲ’ ಎಂದು ಅವರು ದೂಷಿಸಿದರು.

‘ಈ ರಸ್ತೆಯಲ್ಲಿ ಅಗೆಯಲು ಶುರು ಮಾಡಿ ಸುಮಾರು 15 ದಿನಗಳಾಯಿತು. ಒಂದಲ್ಲ ಒಂದು ಕಡೆ ಅಗೆಯುತ್ತಲೇ ಇರುತ್ತಾರೆ. ಕಾಮಗಾರಿ ಪ್ರಗತಿಯಲ್ಲಿರುವ ಬಗ್ಗೆ ಫಲಕವನ್ನೂ ಅಳವಡಿಸಿಲ್ಲ. ಒಂದೆರಡು ಕಡೆ ಸಂಚಾರ ನಿರ್ಬಂಧಿಸಿದ್ದು, ಸುತ್ತಿ ಬಳಸಿ ಸಂಚರಿಸಬೇಕಾಗಿದೆ. ಮಕ್ಕಳು, ಅಜ್ಜ–ಅಜ್ಜಿಯರನ್ನು ಗುಂಡಿ ದಾಟಿಸಲು ಬಹಳ ಕಷ್ಟಪಡಬೇಕಾದ ಸ್ಥಿತಿ ಇದೆ. ಕಾಮಗಾರಿ ತ್ವರಿತವಾಗಿ ಮುಗಿಸುವತ್ತ ಸಂಬಂಧಪಟ್ಟವರು ಗಮನ ಹರಿಸಬೇಕು’ ಎಂದು ಮಧುವನ ಬಡಾವಣೆಯ ಗೃಹಿಣಿ ಎಂ.ಎನ್‌.ಲತಾ ಒತ್ತಾಯಿಸಿದರು.

‘ಇನ್ನು 15 ದಿನಗಳಲ್ಲಿ ಕಾಮಗಾರಿ ಪೂರ್ಣ’

‘ಅಮೃತ್‌ ಯೋಜನೆಯಡಿ ಹೆಚ್ಚುವರಿಯಾಗಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇನ್ನು 15 ದಿನಗಳಲ್ಲಿ ಈ ರಸ್ತೆ ಬದಿಯಲ್ಲಿ ಪೈಪು ಅಳವಡಿಕೆ ಕಾಮಗಾರಿ ಮುಗಿಯಲಿದೆ’ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಂಜಿನಿಯರ್‌ ಶಿಲ್ಪಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಕೆಎಂಆರ್‌ಪಿ ಕಂಪೆನಿಯವರು ಅರ್ಧಂಬರ್ಧ ಕಾಮಗಾರಿ ಮಾಡಿದ್ದರು. ಬಾಕಿ ಇದ್ದ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದೇವೆ. ಇಲ್ಲಿ ಒಟ್ಟು 1,100 ಮೀಟರ್‌ ಉದ್ದ ಪೈಪು ಅಳವಡಿಸಬೇಕಿದೆ. ಈಗಾಗಲೇ ಸುಮಾರು 500 ಮೀಟರ್‌ ಅಳವಡಿಕೆ ಕಾರ್ಯ ಮುಗಿದಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT