ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಆರಂಭದಲ್ಲೇ ಎದುರಾಯ್ತು ವಿಘ್ನ!

Last Updated 26 ಮೇ 2018, 19:30 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ಸುಳ್ಯ, ಸುಬ್ರಹ್ಮಣ್ಯ ಭಾಗದಲ್ಲಿ ನಿತ್ಯ ಮಳೆ ಸುರಿಯುತ್ತಿದೆ. ಸೋಮವಾರದಿಂದಲೇ ಶಾಲೆಯೂ ಆರಂಭವಾಗುತ್ತಿದೆ. ಇರುವ ಒಂದು ತೂಗು ಸೇತುವೆಯೂ ಮುರಿದು ಬಿದ್ದಿರುವುದರಿಂದ ಮಕ್ಕಳು ಶಾಲೆಗೆ ಹೋಗುವುದು ಹೇಗೆ ಎಂಬ ಚಿಂತೆ ಆರಂಭವಾಗಿದೆ. ಈ ವಿದ್ಯಮಾನ ನಡೆದಿರುವುದು ಸುಳ್ಯ ತಾಲ್ಲೂಕಿನ ತುತ್ತತುದಿಯಲ್ಲಿರುವ ಕಲ್ಮಕಾರಿನಲ್ಲಿ.

ಕಲ್ಮಕಾರಿನಿಂದ ಅಂಜನಕಜೆ, ಕೊಪ್ಪಡ್ಕ, ಗುಳಿಕಾನ, ಗುಡ್ಡೆಕಾನ, ಪೆರ್ಮುಕಜೆ ಭಾಗಗಳನ್ನು ತಲುಪಬೇಕಿದ್ದರೆ ಶೆಟ್ಟಿಕಜೆ ಎಂಬಲ್ಲಿ ಹರಿಯುತ್ತಿರುವ ಹೊಳೆ ದಾಟಲೇಬೇಕು. ಮಳೆಗಾಲ ಈ ಹೊಳೆ ನೆರೆಯಿಂದ ತುಂಬಿ ಹರಿಯುತ್ತಿದೆ. ಸಂಚಾರಕ್ಕೆ ತೊಡಕಾಗುತ್ತದೆ. ಇಲ್ಲಿಗೆ ಶಾಶ್ವತ ಕಾಲುಸಂಕ ಕನಸಿನ ಮಾತು. ಅಡಿಕೆ ಮರದ ತಾತ್ಕಾಲಿಕ ಸಂಕವನ್ನೇ ನೆಚ್ಚಿಕೊಂಡ ಸ್ಥಳೀಯರಿಗೆ ಇದೀಗ ಸಂಕವೂ ಇಲ್ಲವಾಗಿದೆ. ಕಾರಣ ಆ ಸಂಕ ಈಚೆಗೆ ಮುರಿದು ಬಿದ್ದಿದೆ.

ಈ ಭಾಗದ ವಿದ್ಯಾರ್ಥಿಗಳು ಕಲ್ಮಕಾರು ಪ್ರಾಥಮಿಕ ಶಾಲೆ, ಅಂಗನವಾಡಿ ಹಾಗೂ ಇತರೆಡೆಯ ಶಾಲಾ ಕಾಲೇಜುಗಳಿಗೆ ಬಂದು ಹೋಗುತ್ತಾರೆ. ಶೆಟ್ಟಿಕಜೆ ಎಂಬಲ್ಲಿ ಸ್ಥಳೀಯರೇ ಅಡಿಕೆ ಮರದಿಂದ ತಾತ್ಕಾಲಿಕ ತೂಗು ಸೇತುವೆ ನಿರ್ಮಿಸಿಕೊಂಡು ಬಳಕೆ ಮಾಡುತ್ತಾರೆ. ಇದುವರೆಗೆ ಈ ಸೇತುವೆಯಲ್ಲೇ ಓಡಾಡುತ್ತಿದ್ದರು. ಜೀವ ಕೈಯಲ್ಲಿ ಹಿಡಿದುಕೊಂಡು ಈ ಸೇತುವೆ ದಾಟುವ ಸಾಹಸ ಮಾಡುತ್ತಿದ್ದರು. ಈಗ ಅದಕ್ಕೂ ಸಂಚಕಾರ ಬಂದಿದೆ. ಶಾಲಾ ಆರಂಭದ ದಿನಗಳಲ್ಲೇ ವಿಘ್ನ ಉಂಟಾಗಿದೆ.

ಪ್ರತಿ ಮಳೆಗಾಲದ ಅವಧಿಯಲ್ಲಿ ಪ್ರತಿದಿನ ಮಕ್ಕಳ ಪೋಷಕರು ಎರಡೂ ಹೊತ್ತು ಈ ಹೊಳೆಯ ತನಕ ಬಂದು ಮಕ್ಕಳನ್ನು ಬಿಟ್ಟು/ ಕರೆದುಕೊಂಡು ಹೋಗುವುದು ರೂಢಿಯಾಗಿಬಿಟ್ಟಿದೆ. ಈ ಬಾರಿ ತಾತ್ಕಾಲಿಕ ಸೇತುವೆಯೇ ಇಲ್ಲ. ಹೊಳೆಯಲ್ಲಿ ನೀರು ತುಂಬಿ ಹರಿದರೆ ಶಾಲೆಗೆ ಚಕ್ಕರ್‌ ಹಾಕದೆ ಬೇರೆ ದಾರಿಯೇ ಇಲ್ಲ ಎನ್ನುವಂತಾಗಿದೆ.

-ಲೋಕೇಶ್, ಸುಬ್ರಹ್ಮಣ್ಯ

******

40 ಮನೆಗಳ ಸಮಸ್ಯೆ

ಈ ಪ್ರದೇಶದಲ್ಲಿ ವಾಹನ ಸಂಚಾರ ಇಲ್ಲ. 40ಕ್ಕೂ ಅಧಿಕ ಮನೆಗಳಿವೆ. ಪರಿಶಿಷ್ಟ ಜಾತಿ, ಪಂಗಡಗಳ ಕುಟುಂಬಗಳು ಇಲ್ಲಿ ಹೆಚ್ಚಿವೆ. ಪಡಿತರ, ಆಹಾರ ಸಾಮಗ್ರಿ ತರಲು, ಅನಾರೋಗ್ಯ ಇತ್ಯಾದಿ ಬಾಧಿಸಿದಾಗ ಈ ಮುರುಕಲು ಸೇತುವೆಯೇ ಸಂಪರ್ಕ ಕೊಂಡಿ. ಊರಿಗೆ ಇರುವ ಇತರ ಬಳಸು ದಾರಿಯಲ್ಲೂ ಹೊಳೆ ಸಿಗುತ್ತದೆ. ಅಲ್ಲೂ ಕಷ್ಟ ತಪ್ಪಿದ್ದಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT