ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರದ್ರೋಣ ಪರ್ವತ ಶ್ರೇಣಿ ಭಾಗದಲ್ಲಿ ಜೂಜಾಟ, ಮೋಜು ಮಸ್ತಿ, ರಂಪಾಟ

Last Updated 6 ಜನವರಿ 2022, 2:48 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ಶ್ರೇಣಿ ಭಾಗದಲ್ಲಿ ಮದ್ಯ – ಗಾಂಜಾ ಸೇವನೆ, ಜೂಜಾಟ, ಪುಂಡಾಟಿಕೆ ಮೊದಲಾದ ಚಟುವಟಿಕೆಗಳದ್ದೇ ಕಾರುಬಾರು. ಈ ಗುಡ್ಡಗಾಡಿನ ನಿರ್ಜನ ಪ್ರದೇಶಗಳಲ್ಲಿ ನಡೆವ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿಲ್ಲ.

ಹೊಸ ವರ್ಷದ ದಿನ ಗಿರಿಶ್ರೇಣಿ ರಸ್ತೆಯ ಬದಿಯ ಕಸ ತೊಟ್ಟಿಯೊಂದು ಮದ್ಯದ ಖಾಲಿ ಬಾಟಲಿಗಳು, ಸಿಗರೇಟು ಪೊಟ್ಟಣಗಳಿಂದ ತುಂಬಿಕೊಂಡಿತ್ತು. ಕಸ ತೊಟ್ಟಿಗಳಲ್ಲಿನ ಬಾಟಲಿಗಳು, ಪೊಟ್ಟಣಗಳು, ಬಾಕ್ಸ್‌ಗಳು, ತಟ್ಟೆ, ಲೋಟಗಳು, ಪ್ಲಾಸ್ಟಿಕ್‌ ಅಸುಪಾಸಿನಲ್ಲಿ ನಡೆದಿರುವ ಮೋಜುಮಸ್ತಿ, ರಂಪಾಟಗಳನ್ನು ಸಾಕ್ಷಿಕರಿಸುತ್ತವೆ.

ಹೋಮ್‌ ಸ್ಟೆ, ರೆಸಾರ್ಟ್‌ಗಳವರು ಚೀಲಗಳಲ್ಲಿ ಮದ್ಯದ ಖಾಲಿ ಬಾಟಲಿಗಳು, ತ್ಯಾಜ್ಯಗಳನ್ನು ಕಸದ ತೊಟ್ಟಿಗಳು ಸುರಿಯುತ್ತಾರೆ ಎಂದು ಮೂಲಗಳು ತಿಳಿಸಿವೆ.
ಹಲವರು ಮೋಜು ಮಸ್ತಿಗಾಗಿಯೇ ಗಿರಿಶ್ರೇಣಿಗೆ ಭೇಟಿ ನೀಡುತ್ತಾರೆ. ವಾರಾಂತ್ಯ, ಸಾಲು ರಜಾ ದಿನಗಳಲ್ಲಿ ಗುಂಪುಗುಂಪಾಗಿ ದಾಂಗುಡಿ ಇಡುತ್ತಾರೆ. ಬೆಟ್ಟಸಾಲಿನ ತಪ್ಪಲು, ಆಸುಪಾಸಿನ ಪ್ರದೇಶಗಳಲ್ಲಿ ಹೋಮ್‌ ಸ್ಟೆ, ರೆಸಾರ್ಟ್‌, ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡುತ್ತಾರೆ.

ಹಳ್ಳ, ಝರಿ, ಕೆರೆ, ಹುಲ್ಲುಗಾವಲು, ರಸ್ತೆ ಬದಿ ಮೊದಲಾದ ಕಡೆಗಳಲ್ಲಿ ಮೋಜು ಮಸ್ತಿ ಮಾಡುತ್ತಾರೆ. ನಿರ್ಜನ ಪ್ರದೇಶಗಳಲ್ಲಿ ದುಶ್ಚಟ, ಚೆಲ್ಲಾಟಗಳಲ್ಲಿ ತೊಡಗುತ್ತಾರೆ. ಮದ್ಯದ ಖಾಲಿ ಬಾಟಲಿ ಹೊಡೆದು ಚೂರು ಮಾಡುತ್ತಾರೆ. ರಂಪಾಟದಲ್ಲಿ ತೊಡಗುತ್ತಾರೆ. ಕೋವಿಡ್ ಪರಿವೆಯೇ ಇಲ್ಲದಂತೆ ವರ್ತಿಸುತ್ತಾರೆ.

ಸ್ಥಳೀಯ ಕೆಲ ಪಡ್ಡೆಗಳು ದ್ವಿಚಕ್ರ ವಾಹನ ವೇಗವಾಗಿ ಚಲಾಯಿಸಿಕೊಂಡು ತಿರುಗಾಡುವುದು, ಹೆಲ್ಮೆಟ್‌ ಹಾಕದಿರುವುದು, ಒಂದು ಬೈಕಿನಲ್ಲಿ ಮೂವರು, ನಾಲ್ವರು ಸಾಗುವುದು ಮೊದಲಾದ ಚಟುವಟಿಕೆಗಳು ಮಾಮೂಲಿಯಾಗಿವೆ. ಪೊಲೀಸರ ಕಣ್ತಪ್ಪಿಸಿ ಚಾಲಾಕಿಗಳು ಓಡಾಡುತ್ತಾರೆ.

‘ಗಿರಿ ಶ್ರೇಣಿಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿಲ್ಲ. ಪುಂಡರು, ಪೋಕರಿಗಳ ಹಾವಳಿ ಹೆಚ್ಚಾಗಿದೆ. ಹುಡುಗ – ಹುಡುಗಿ ಜೊತೆಯಲ್ಲಿ ಬೈಕಿನಲ್ಲಿ ಓಡಾಡುತ್ತಾರೆ. ನಿರ್ಜನ ಪ್ರದೇಶಗಳಲ್ಲಿ ಈ ‘ಜೋಡಿಹಕ್ಕಿಗಳು’ ಎಗ್ಗಿಲ್ಲದೆ ಸಲ್ಲಾಪದಲ್ಲಿ ತೊಡಗುತ್ತವೆ’ ಎಂದು ಸ್ಥಳೀಯ ವ್ಯಾಪಾರಿಯೊಬ್ಬರು ತಿಳಿಸಿದರು.

ಗಿರಿ ಶ್ರೇಣಿ ಭಾಗದ ಕೆಲವಡೆ ಕದ್ದುಮುಚ್ಚಿ ಗಾಂಜಾ ಮಾರಾಟ ಮಾಡಲಾಗುತ್ತದೆ. ಗಾಂಜಾ ಸೇವಿಸಿ ನಶೆಯಲ್ಲಿ ತೇಲುತ್ತಾರೆ. ಗಾಂಜಾ, ಮದ್ಯ, ಮಾದಕ ಪದಾರ್ಥಗಳು, ಮೊದಲಾದವು ಕಳ್ಳದಾರಿಯಲ್ಲಿ ಗಿರಿ ಶ್ರೇಣಿಗೆ ತಲುಪುತ್ತಿವೆ.

‘ಪರವಾನಗಿ ಪಡೆದಿರುವ ಹೋಮ್‌ ಸ್ಟೆಗಳವರು ಮಾರ್ಗಸೂಚಿಗಳನ್ನು ಪಾಲಿಸುತ್ತವೆ. ಜಿಲ್ಲಾಡಳಿತ ಅನಧಿಕೃತ ಹೋಮ್‌ ಸ್ಟೆಗಳನ್ನು ಪತ್ತೆ ಹಚ್ಚಬೇಕು. ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು’ ಎಂದು ಹೋಮ್‌ ಸ್ಟೆ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಆರ್‌. ಉತ್ತಮ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT