ಗ್ರಾಮದ ಪಕ್ಕ ಕಸ ಘಟಕ: ಇಂದಾವರಕ್ಕೆ ಬರಲು ಸಂಬಂಧಿಕರ ಹಿಂದೇಟು!

ಬುಧವಾರ, ಜೂನ್ 19, 2019
26 °C
ಗ್ರಾಮಸ್ಥರ ಆರೋಗ್ಯಕ್ಕೆ ‘ಕಂಟಕ’ವಾದ ಕಸ ತಾಕು

ಗ್ರಾಮದ ಪಕ್ಕ ಕಸ ಘಟಕ: ಇಂದಾವರಕ್ಕೆ ಬರಲು ಸಂಬಂಧಿಕರ ಹಿಂದೇಟು!

Published:
Updated:
Prajavani

ಚಿಕ್ಕಮಗಳೂರು: ನಗರದ ಹೊರವಲಯದ ಇಂದಾವರ ಗ್ರಾಮದ ಪಕ್ಕದಲ್ಲಿನ ಕಸ ಘಟಕ(ತಾಕು) ಗ್ರಾಮಸ್ಥರ ಆರೋಗ್ಯಕ್ಕೆ ‘ಕಂಟಕ’ವಾಗಿ ಪರಿಣಮಿಸಿದೆ. ಸಾಂಕ್ರಾಮಿಕ ರೋಗ ಬಾಧೆ ಭೀತಿಯಿಂದಾಗಿ ಈ ಊರಿಗೆ ಬರಲು ಸಂಬಂಧಿಕರು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ.

ಚಿಕ್ಕಮಗಳೂರು ನಗರದ ಘನತ್ಯಾಜ್ಯವನ್ನು ಇಂದಾವರ ಸಮೀಪದ ತಾಕಿಗೆ ವಿಲೇವಾರಿ ಮಾಡಲಾಗುತ್ತದೆ. ತಾಕಿನಲ್ಲಿ ಬೆಟ್ಟದಷ್ಟು ಕಸ ಸಂಗ್ರಹವಾಗಿದೆ. ಸಂಸ್ಕರಣೆ ಮಾಡದಿರುವುದರಿಂದ ಘಟಕ ಅಧ್ವಾನವಾಗಿದೆ. ಇಡೀ ಗ್ರಾಮ ದುರ್ನಾತದ ಕೂಪವಾಗಿದೆ.

ಗ್ರಾಮದ ಚರಂಡಿಗಳಲ್ಲಿ ಹೂಳು, ಕಸಕಡ್ಡಿ, ಗಿಡಗಂಟಿ ತುಂಬಿಕೊಂಡಿವೆ. ಸೊಳ್ಳೆ, ನೊಣ, ಕ್ರಿಮಿಕೀಟಗಳ ಹಾವಳಿ ವಿಪರೀತ ಇದೆ. ಇಲ್ಲಿನ ಜನರಿಗೆ ಸುಸ್ತು, ತಲೆಭಾರ, ಮೈಕೈನೋವು, ಜ್ವರ ಬಾಧೆ ಸಾಮಾನ್ಯವಾಗಿದೆ. ಪ್ರತಿದಿನ ನಗರದ ಆಸ್ಪತ್ರೆಗಳಿಗೆ ಅಲೆಯುವಂತಾಗಿದೆ.
ಗ್ರಾಮದ ಶಶಿಕಲಾ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘15 ದಿನಗಳಿಂದ ಡೆಂಗಿ ಜ್ವರ ಕಾಡುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ನಾಲ್ಕು ದಿನ ದಾಖಲಾಗಿದ್ದೆ, ಪೂರ್ಣವಾಗಿ ಹುಷಾರಾಗಿಲ್ಲ. ಸುಸ್ತು, ಜ್ವರ ತಾಳಲಾಗದು. ಆರೈಕೆಗೆ ನೆಂಟರನ್ನು ಕೆರೆದರೆ ಬರಲ್ಲ, ಬದಲಿಗೆ ನಮ್ಮೂರಿಗೇ ಬನ್ನಿ ಆರೈಕೆ ಮಾಡುತ್ತೇವೆ ಎನ್ನುತ್ತಾರೆ. ಈ ರೋಗಪುರದಲ್ಲಿ ವಾಸಿಸುವುದೇ ದೊಡ್ಡ ಸವಾಲಾಗಿದೆ’ ಎಂದು ಅಳಲು ತೋಡಿಕೊಂಡರು.

‘ಮನೆಯೊಳಗೆ ಕುಳಿತುಕೊಂಡರೆ ಸೆಖೆ ತಾಳಲಾಗದು. ಹೊರಗೆ ಕುಳಿತರೆ ಸಹಿಸಲಸಾಧ್ಯವಾದ ಗಬ್ಬುನಾತ ವಾಸನೆಗೆ ಮೂಗು ಉರಿಯುತ್ತದೆ. ಹಗಲಿನಲ್ಲಿ ನೊಣಗಳ ಕಾಟ, ರಾತ್ರಿಯಲ್ಲಿ ಸೊಳ್ಳೆಗಳ ಕಾಟ. ನಮ್ಮ ಗೋಳು ಕೇಳುವವರಿಲ್ಲ’ ಎಂದು ಅವರು ಅಲವತ್ತುಕೊಂಡರು.

‘ಸಂಬಂಧಿಕರು, ಅವರ ಮಕ್ಕಳನ್ನು ನಮ್ಮೂರಿಗೆ ಬನ್ನಿ ಎಂದರೆ ಬರಲ್ಲ ಎಂದು ಮುಖ ತಿರುಗಿಸುತ್ತಾರೆ. ಈ ಊರನ್ನು ‘ಸಾಂಕ್ರಾಮಿಕ ರೋಗಪುರ’, ‘ಸೊಳ್ಳೆಪುರ’ ಎಂದೆಲ್ಲ ಜರಿಯುತ್ತಾರೆ. ವಿದೇಶ, ಪಟ್ಟಣ, ನಗರಗಳಲ್ಲಿ ಸೇರಿಕೊಂಡಿರುವವರೂ ಈ ಊರಿನವರೇ ಹಬ್ಬಹರಿದಿನ, ಸಮಾರಂಭಗಳಿಗೆ ಒಂದೆರಡು ದಿನಕ್ಕೂ ಇಲ್ಲಿಗೆ ಬರಲು ವಲ್ಲೆ ಎನ್ನುತ್ತಾರೆ. ಊರಿನ ಈ ದುಃಸ್ಥಿತಿಗೆ ಕಸ ಘಟಕವೇ ಕಾರಣ’ ಎಂದು ವಿದ್ಯಾರ್ಥಿನಿ ಸುಪ್ರಿಯಾ ದೂಷಿಸಿದರು.

ತಾಕಿನ ಘನತ್ಯಾಜ್ಯ ಸಂಸ್ಕರಣೆಗೆ ಸಮರ್ಪಕ ವ್ಯವಸ್ಥೆ ಮಾಡಿಲ್ಲದಿರುವುದು ಸಮಸ್ಯೆಗೆ ಎಡೆಮಾಡಿದೆ. ಇಡೀ ಘಟಕವು ಪ್ಲಾಸ್ಟಿಕ್‌ ರಾಶಿಮಯವಾಗಿದೆ. ಗ್ರಾಮದಲ್ಲಿ ಸ್ವಚ್ಛತೆ ಕೊರತೆ ತಾಂಡವವಾಡುತ್ತಿದೆ. ಒಬ್ಬರಿಗೆ ಜ್ವರ ಹುಷಾರಾಯಿತು ಎನ್ನುವಷ್ಟರಲ್ಲಿ ಮತ್ತೆ ನಾಲ್ಕೈದು ಮಂದಿಗೆ ಶುರುವಾಗಿರುತ್ತದೆ. ಸಾಂಕ್ರಾಮಿಕ ರೋಗ ಬಾಧೆ ಆತಂಕ ಊರಿನವರ ನಿದ್ದೆಗೆಡಿಸಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಪರೀಕ್ಷೆ; 10 ಮಂದಿಗೆ ಡೆಂಗಿಜ್ವರ

ಒಂದು ತಿಂಗಳಿನಿಂದ ಗ್ರಾಮದ10ಕ್ಕೂ ಹೆಚ್ಚು ಮಂದಿ ಡೆಂಗಿ ಜ್ವರಕ್ಕೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಇವೆರೆಲ್ಲರಿಗೂ ಡೆಂಗಿ ಜ್ವರದ ಆರಂಭಿಕ ಲಕ್ಷಣ ‘ಎನ್‌ಎಸ್‌1ಎಜಿ’ ಇರುವುದು ಖಾಸಗಿ ಪ್ರಯೋಗಾಲಯ ವರದಿಯಲ್ಲಿ ಇದೆ. ಡೆಂಗಿ ಜ್ವರದಿಂದ ಕೆಲವರು ಪೂರ್ಣವಾಗಿ ಇನ್ನು ಗುಣಮುಖರಾಗಿಲ್ಲ. ವರದಿ ಪ್ರತಿಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

* ಕಸ ಘಟಕದ ನಿರ್ವಹಣೆಗೆ ಗಮನಹರಿಸಲಾಗಿದೆ. ದುರ್ನಾತ ಇಲ್ಲ. ಇಂದಾವರದಲ್ಲಿ ಸೊಳ್ಳೆ ಹತೋಟಿಗೆ ಫಾಗಿಂಗ್‌ ಮಾಡಿಸಲಾಗಿದೆ. ಚರಂಡಿಗಳಿಗೆ ಮಿಲೆಥಿನ್‌ ಪುಡಿ ಸಿಂಪಡಣೆ ಮಾಡಿಸಲಾಗಿದೆ.

–ಕೆ.ಪರಮೇಶಿ, ಆಯುಕ್ತರು, ನಗರಸಭೆ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !