ಸ್ವಾವಲಂಬನೆಗೆ ಅಡ್ಡಿಯಾಗದ ಅಂಗವಿಕಲತೆ

ಸೋಮವಾರ, ಮಾರ್ಚ್ 25, 2019
33 °C
ಆಭರಣ ತಯಾರಿಕೆಯಲ್ಲಿ ಬದುಕು ಕಟ್ಟಿದ ಡೀನಾ ರೋಡ್ರಿಗಸ್

ಸ್ವಾವಲಂಬನೆಗೆ ಅಡ್ಡಿಯಾಗದ ಅಂಗವಿಕಲತೆ

Published:
Updated:
Prajavani

ಮೂಡಿಗೆರೆ: ಸಾಧಿಸುವ ಛಲದೊಂದಿಗೆ ಆತ್ಮವಿಶ್ವಾಸವಿದ್ದರೆ ಎಂತಹ ಅಡೆತಡೆಗಳಿದ್ದರೂ ಕೂಡ ಎದುರಿಸಬಹುದು ಎನ್ನುವುದಕ್ಕೆ ತಾಲ್ಲೂಕಿನ ಬಣಕಲ್‍ ಗ್ರಾಮದ ಡೀನಾ ರೋಡ್ರಿಗಸ್ ಸಾಕ್ಷಿಯಾಗಿದ್ದಾರೆ.

ಜನ್ಮದತ್ತವಾಗಿ ಸಂಗಾತಿಯಾಗಿರುವ ಅಂಗವಿಕಲತೆಯ ನಡುವೆಯೂ ಕರಕುಶಲ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಯಾರಿಗೂ ಹೊರೆಯಾಗದೆ ಬದುಕಿನ ಬಂಡಿಯನ್ನು ಸಾಗಿಸುತ್ತಿರುವ ಡೀನಾ ಅವರ ಬದುಕು ಮಹಿಳಾ ದಿನಾಚರಣೆಯ ಹೊಸ್ತಿಲಿನಲ್ಲಿರುವ ಸ್ವಾವಲಂಬಿ ಅಪೇಕ್ಷಿತ ಹೆಣ್ಣು ಮಕ್ಕಳಿಗೆ ಮಾದರಿಯಾಗಿದೆ.

ಬಣಕಲ್ ಗ್ರಾಮದ ಕಾರ್ಮಿನ್‍ ರೋಡ್ರಿಗಸ್ ಹಾಗೂ ಥೋಮಸ್ ದಂಪತಿಯ ಪುತ್ರಿಯಾದ ಡೀನಾ, ಬಾಲ್ಯದಲ್ಲಿಯೇ ಪೋಲಿಯೊಗೆ ತುತ್ತಾಗಿ ಎರಡು ಕಾಲುಗಳ ಸ್ವಾಧೀನವನ್ನು ಕಳೆದುಕೊಂಡಿದ್ದರೂ ಛಲಬಿಡದೇ ಪದವಿಪೂರ್ವ ಶಿಕ್ಷಣವನ್ನು ಪೂರೈಸಿದ್ದಾರೆ. ಶೈಕ್ಷಣಿಕ ಹಂತದಲ್ಲಿಯೇ ತಂದೆ ತೋಮಸ್ ನಿಧನರಾದ ಕಾರಣ ಶೈಕ್ಷಣಿಕ ಬದುಕಿಗೆ ಇತಿಶ್ರೀ ಹಾಡಿ ಉದ್ಯೋಗಕ್ಕಾಗಿ ಅಲೆದಾಡಿದ್ದಾರೆ. ಪ್ರಾರಂಭದಲ್ಲಿ ಅಂಗವಿಲಕ ಮೀಸಲಾತಿಯಡಿಯಲ್ಲಿ ಸರ್ಕಾರಿ ಕಚೇರಿಯಲ್ಲಿ ಕೆಲಸ ಸಿಗಬಹುದು ಎಂದು ಸರ್ಕಾರಿ ಕಚೇರಿಗಳ ಮೆಟ್ಟಿಲು ಏಣಿಸಿದ ಅವರಿಗೆ ಎಲ್ಲೆಡೆ ನಿರಾಸೆಯೇ ವ್ಯಕ್ತವಾಗಿದ್ದರಿಂದ, ಸ್ವಾವಲಂಬನೆಯ ಬದುಕಿನತ್ತ ಆಸಕ್ತಿ ಕಟ್ಟಿಕೊಂಡು, ಆಭರಣ ತಯಾರಿಕೆಯ ಕೌಶಲವನ್ನು ಕರತಲಮಲಾಕವನ್ನಾಗಿಸಿಕೊಂಡು ತನ್ನ ತಾಯಿಯೊಂದಿಗೆ ಬದುಕು ರೂಪಿಸಿಕೊಂಡಿದ್ದಾರೆ.

 

ಮೊದಮೊದಲು ಹವ್ಯಾಸಕ್ಕಾಗಿ ಆಭರಣ ತಯಾರಿಕೆಗೆ ಮುಂದಾದ ಡೀನಾ, ಬದುಕಿಗೆ ಅದನ್ನೇ ವೃತ್ತಿಯಾಗಿಸಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಬಣ್ಣ ಬಣ್ಣದ ನೂಲಿನ ಮೂಲಕ ಹೆಣ್ಣು ಮಕ್ಕಳು ಬಳಸುವ ಸರ, ಕಿವಿ ಓಲೆ, ಅಲಂಕಾರಿಕ ಬಳೆಗಳು, ವಿವಿಧ ವಿನ್ಯಾಸದ ಆಭರಣಗಳನ್ನು ತಯಾರಿಸುತ್ತಿದ್ದಾರೆ. ರಾಜ್ಯದ ಮೂಲೆ ಮೂಲೆಯಲ್ಲಿ ಡೀನಾ ಅವರ ಆಭರಣಗಳ ಅಂದವನ್ನು ಪ್ರೀತಿಸುವ ಗ್ರಾಹಕರಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಭರಣಗಳನ್ನು ಕೊಂಡುಕೊಳ್ಳುವ ಗ್ರಾಹಕರಿಗೆ ಕೋರಿಯರ್ ಮೂಲಕ ಆಭರಣವನ್ನು ಕಳುಹಿಸುವ ಮೂಲಕ ವೃತ್ತಿ ಬದುಕಿಗೆ ತಂತ್ರಜ್ಞಾನದ ಬಳಕೆಯನ್ನೂ ಮಾಡಿಕೊಂಡಿದ್ದಾರೆ.

ಅಲ್ಲದೆ, ಕೆಲವು ವರ್ತಕರು ಕೂಡ ಬಣ್ಣ ಬಣ್ಣದ ಆಭರಣಗಳನ್ನು ಖರೀದಿಸಿ, ಜಾತ್ರೆ, ಹಬ್ಬ ಹರಿದಿನಗಳಲ್ಲಿ ಮಾರಾಟ ಮಾಡುತ್ತಾರೆ. ಗ್ರಾಹಕರು ಹೇಳುವ ವಿಧವಿಧದ ವಿನ್ಯಾಸಗಳಲ್ಲಿ ಬಳೆ, ಸರಗಳನ್ನು ತಯಾರು ಮಾಡುವ ಡೀನಾ, ಗ್ರಾಹಕರಿಂದ ಆರ್ಡರ್ ಪಡೆದು ಆಭರಣಗಳನ್ನು ತಯಾರಿಸಿ ಕೊಡುತ್ತಾರೆ. ವೃದ್ಧಾಪ್ಯದ ಹೊಸ್ತಿಲಿನಲ್ಲಿರುವ ತಾಯಿ ಕಾರ್ಮಿನ್‍ ರೋಡ್ರಿಗಸ್ ಅವರು ಮಗಳು ಡೀನಾ ಅವರ ಸ್ವಉದ್ದಿಮೆಗೆ ಸಹಾಯಕವಾಗಿ ದುಡಿಯುತ್ತಿದ್ದು, ತಿರುಗಾಡಲೂ ಸಾಧ್ಯವಾಗದ ಮಗಳಿಗೆ ಆಸರೆಯಾಗಿ ನಿಂತಿದ್ದಾರೆ.

ಸದ್ಯ ಮನೆಯಲ್ಲಿ ಬಣ್ಣದ ನೂಲಿನೊಂದಿಗೆ ಬದುಕು ರೂಪಿಸಿಕೊಂಡಿರುವ ಡೀನಾ, ಆಭರಣ ತಯಾರಿಕೆಯನ್ನು ಬೃಹತ್ ಮಟ್ಟದಲ್ಲಿ ಮಾಡಿ, ಅಲ್ಲಿ ಹತ್ತಾರು ಅಂಗವಿಕಲರಿಗೆ ಉದ್ಯೋಗ ನೀಡಿ ಅವರ ಸ್ವಾವಲಂಬಿ ಬದುಕಿಗೆ ನೆರವಾಗಬೇಕು ಎಂಬ ಕನಸನ್ನು ಹೊಂದಿದ್ದಾರೆ.

ಆರ್ಥಿಕ ಕೊರತೆಯ ನಡುವೆಯೂ ಆತ್ಮವಿಶ್ವಾಸ ಹಾಗೂ ದೃಢ ನಿರ್ಧಾರದೊಂದಿಗೆ ಅಂಗವಿಕಲತೆಯನ್ನು ಮೀರಿ ಸ್ವಾವಲಂಬನೆಯ ಸಾಧನೆ ಮಾಡಿರುವ ಡೀನಾ ಮಹಿಳಾ ದಿನಾಚರಣೆಯ ಮಾದರಿಯಾಗಿದ್ದಾರೆ. ಆಭರಣಗಳಿಗಾಗಿ 83101 86538 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !