ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತ ರೈತರ ಜಮೀನಿನ ದಾಖಲೆ ಅಸಮರ್ಪಕ

ಕೂಸ್ಗಲ್‌ನಲ್ಲಿ ಕಾರ್ಯಕ್ರಮ; ಸಾರ್ಯ ಗ್ರಾಮಸ್ಥರ ಆಕ್ರೋಶ
Last Updated 19 ಜೂನ್ 2022, 5:04 IST
ಅಕ್ಷರ ಗಾತ್ರ

ಕೂಸ್ಗಲ್(ಎನ್.ಆರ್.ಪುರ): ಭದ್ರಾ ಅಣೆಕಟ್ಟೆ ನಿರ್ಮಾಣದ ನಂತರ ಮುಳಗಡೆಯಾದ ರೈತರಿಗೆ ಸಾರ್ಯ ಗ್ರಾಮದಲ್ಲಿ ಜಮೀನು ನೀಡಿದ್ದರೂ ಇದುವರೆಗೂ ದಾಖಲೆಗಳೇ ಸರಿಯಾಗಿಲ್ಲ. ಅರಣ್ಯ ಇಲಾಖೆಯಿಂದ ಸಹಕಾರ ಸಿಗುತ್ತಿಲ್ಲ ಎಂದು ಸಾರ್ಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ಹೊನ್ನೆಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ಯಗ್ರಾಮದ ಕೂಸ್ಗಲ್ ರಂಗನಾಥ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶನಿವಾರ ನಡೆದ ’ಅಧಿಕಾರಿಗಳ ನಡೆ ಹಳ್ಳಿಕಡೆ‘ ಕಾರ್ಯಕ್ರಮದಲ್ಲಿ ಗ್ರಾಮದ ಜನರು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಮಸ್ಥರಾದ ಪುರುಷೋತ್ತಮ್, ಸುಬ್ಬೇಗೌಡ, ಗುರುಮೂರ್ತಿ ಮಾತನಾಡಿ, ’1960ರಲ್ಲಿ ಮುಳುಗಡೆ ಪ್ರದೇಶದಿಂದ ಸಾರ್ಯಗ್ರಾಮಕ್ಕೆ ಬಂದಿದ್ದು ಈ ಗ್ರಾಮದ ಸರ್ವೆ ನಂ.73ರಲ್ಲಿ 200 ಎಕರೆ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗ ಹಸ್ತಾಂತರಿಸಿ ಬದಲಿ ಜಮೀನನ್ನು ಕಂದಾಯ ಇಲಾಖೆ ಪಡೆದಿದೆ. ಆ ಭೂಮಿಯನ್ನು ಮುಳುಗಡೆ ಪ್ರದೇಶದ ರೈತರಿಗೆ ನೀಡಿದೆ. ಆದರೆ ಇದುವರೆಗೂ ಪಕ್ಕಾ ಪೋಡಿಯಾಗಿಲ್ಲ. ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೆ ನಡೆದಿಲ್ಲ. 2011ರಲ್ಲಿ ಬಫರ್ ಝೋನ್ ಆಗಿದೆ. ಭದ್ರಾ ಹುಲಿ ಯೋಜನೆ, ಪರಿಸರ ಸೂಕ್ಷ್ಮ ವಲಯದ ತೂಗುಗತ್ತಿ ಇದೆ. ಆನೆಗಳು ಬೆಳೆ ನಾಶ ಮಾಡುತ್ತಿವೆ. ಆನೆಗಳ ಹತೋಟಿಗೆ ರೈಲ್ವೆ ಹಳಿಗಳ ಬೇಲಿ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿ, ’ಸಾರ್ಯ ಗ್ರಾಮದ ಸಮಸ್ಯೆಗಳ ಬಗ್ಗೆ ಮಾಹಿತಿಯಿದೆ. ಸರ್ವೆ ನಂ.73ರಲ್ಲಿ 152 ಎಕರೆ ಪಹಣಿ ಆಗಿದೆ. 30 ಜನರಿಗೆ ಮಂಜೂರಾಗಿದೆ. ರೈತರಿಗೆ ಅರಣ್ಯ ಭಾಗ ತೋರಿಸುವ ಬದಲು ಕೃಷಿ ಮಾಡಿರುವ ಜಾಗವನ್ನು ಗುರುತಿಸಿ ಮಂಜೂರು ಮಾಡಬೇಕು. ಕಂದಾಯ ಹಾಗೂ ಅರಣ್ಯ ಇಲಾಖೆಯಿಂದ ಜಂಟಿ ಸರ್ವೆ ಮಾಡಲಾಗುವುದು‘ ಎಂದರು.

ಅರಣ್ಯ ಒತ್ತುವರಿ ಮಾಡಿದ ಜಮೀನನ್ನು ಮಂಜೂರು ಮಾಡಲು ಪ್ರಾರಂಭದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಅರಣ್ಯ ಹಕ್ಕು ಸಮಿತಿ ಸಭೆ ನಡೆಸುತ್ತದೆ. ವಿಭಾಗೀಯ ಮಟ್ಟದಲ್ಲಿ ಸಭೆ ನಡೆಸಲಾಗುತ್ತದೆ. ಅಂತಿಮವಾಗಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ‘ಆನೆ ದಾಟದಂತೆ ಚಾನಲ್ ನಿರ್ಮಾಣ ಮಾಡಿದರೆ ಅತಿವೃಷ್ಟಿ ಸಮಯದಲ್ಲಿ ಮನೆ, ಜಮೀನುಗಳಿಗೆ ನೀರು ನುಗ್ಗುವ ಅಪಾಯವಿದೆ. ರೈಲ್ವೆ ಹಳಿ ನಿರ್ಮಿಸಿ ಶಾಶ್ವತ ಪರಿಹಾರ ಮಾಡಬೇಕು. ಮುಳುಗಡೆ ಪ್ರದೇಶದಿಂದ ಬಂದ ರೈತರು ಸಾರ್ಯ ಗ್ರಾಮದಲ್ಲಿ ಬದಲಿ ಜಮೀನು ಕೇಳಿದ್ದು ಇದಕ್ಕೆ ಪರಿಹಾರ ಒದಗಿಸಬೇಕು‘ ಎಂದರು.

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಮಾತನಾಡಿ, ’ಜಿಲ್ಲಾಧಿಕಾರಿ ಸಮಸ್ಯೆ ಹೆಚ್ಚಾಗಿರುವ ಸಾರ್ಯ ಗ್ರಾಮ ಆಯ್ಕೆ ಮಾಡಿಕೊಂಡು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸರ್ಕಾರದಿಂದ ರೈಲ್ವೆ ಹಳಿಗ ಬೇಲಿ ನಿರ್ಮಾಣಕ್ಕೆ ಸರ್ಕಾರದಿಂದ ಮಂಜೂರಾಗಿರುವ ಅನುದಾನ ಬಳಸಿಕೊಂಡು ಆನೆಗಳ ಹಾವಳಿ ಹೆಚ್ಚಾಗಿರುವ ಜಾಗ ಗುರುತಿಸಿ ಬೇಲಿ ನಿರ್ಮಿಸಬೇಕು‘ ಎಂದರು.

ಹೊನ್ನೆಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಪಿ.ಅಶೋಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಹಶೀಲ್ದಾರ್ ಸಿ.ಜಿ.ಗೀತಾ, ಇಒ ಎಸ್.ನಯನಾ, ಎಸಿಎಫ್ ಮಂಜುನಾಥ್, ಐಎಫ್ ಸಿ ಲೇಕಾ ಜಮೀನ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವೀಣಾ, ಸದಸ್ಯರಾದ ಶೃತಿ, ಚಾಂದನಿ, ಮಂಜುನಾಥ್, ಚಿನ್ನಪ್ಪನ್, ವಲಯ ಅರಣ್ಯಾಧಿಕಾರಿ ಸಂತೋಷ್ ಸಾಗರ್, ಸಚ್ಚಿನ್ ಇದ್ದರು. ಗ್ರಾಮದ ಮಹಿಳೆಯರು ಅತಿಥಿಗಳಿಗೆ ಪೂರ್ಣಕುಂಭ ಸ್ವಾಗತ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT