ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರ್ಬಲರನ್ನು ಮೇಲೆತ್ತುವುದು ನಮ್ಮ ಸಂಸ್ಕೃತಿ

‘ಪ್ರದೀಪ ಪುರಸ್ಕಾರ’ ಪ್ರದಾನ ಸಮಾರಂಭದಲ್ಲಿ ಶಾಸಕ ರಮೇಶ್ ಕುಮಾರ್
Last Updated 21 ಫೆಬ್ರುವರಿ 2021, 16:19 IST
ಅಕ್ಷರ ಗಾತ್ರ

ಕೊಪ್ಪ: ‘ಪ್ರತಿಭೆ ಎಲ್ಲಿದ್ದರೂ, ಯಾರಲ್ಲಿದ್ದರೂ ಗೌರವಿಸಬೇಕು. ಪ್ರತಿಭೆ ಮತ್ತು ಶ್ರಮವನ್ನು ಗೌರವಿಸದ ದೇಶ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ’ ಎಂದು ಶ್ರೀನಿವಾಸಪುರ ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.

ತಾಲ್ಲೂಕಿನ ಬಿಲಗದ್ದೆಯಲ್ಲಿ ಬಾಸಾಪುರ ಸುಜನ ಟ್ರಸ್ಟ್ ವತಿಯಿಂದ ಶನಿವಾರ ನಡೆದ ಸಮಾರಂಭದಲ್ಲಿ ಉಡುಪಿ ವೈಕುಂಠ ಬಾಳಿಗ ಕಾನೂನು ಕಾಲೇಜು ನಿವೃತ್ತ ಪ್ರಾಂಶುಪಾಲ ಎನ್.ಆರ್.ಪುರದ ಡಾ.ಪ್ರಕಾಶ್ ಕಣಿವೆಗೆ ‘ಪ್ರದೀಪ ಪುರಸ್ಕಾರ’ ಪ್ರದಾನ ಮಾಡಿ ಅವರು ಮಾತನಾಡಿದರು.

‘ದುರ್ಬಲರನ್ನು ಮೇಲೆತ್ತುವುದು ನಮ್ಮ ಸಂಸ್ಕೃತಿ. ನಾಮ ಇಟ್ಟುಕೊಂಡು ತಿರುಗುವುದು, ಕ್ರೌರ್ಯವನ್ನು ಬೋಧಿಸುವುದು ನಮ್ಮ ಸಂಸ್ಕೃತಿಯಲ್ಲ. ದಶರಥ ರಾಮನ ಆದರ್ಶವನ್ನು ನಾವು ಪಾಲಿಸಬೇಕು. ರೈತನ ಸಹೋದರನೊಬ್ಬ ಸರ್ಕಾರಿ ಹುದ್ದೆ ಪಡೆದ ನಂತರ ರೈತರನ್ನೇ ಕಡೆಗಣಿಸುವುದು ಇಂದಿನ ಸಮಾಜದಲ್ಲಿದೆ’ ಎಂದು ತಿಳಿಸಿದರು.

‘ದೇಶದಲ್ಲಿ ಸಾಲ ನೀತಿಯಾಗಲೀ, ಗೊಬ್ಬರ ನೀತಿಯಾಗಲೀ ಎಂಬುದು ಇಲ್ಲ. ರೈತ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ದೆಹಲಿಯಲ್ಲಿ ರೈತರು ಜೀವದ ಹಂಗು ತೊರೆದು ಕುಳಿತಿದ್ದಾರೆ, ಅವರನ್ನು ಮಾತನಾಡಿಸಲು ಆಳುವವರಲ್ಲಿ ಬಿಂಕ, ಪ್ರೆಸ್ಟೇಜ್‌ ಅಡ್ಡಿಯಾಗಿದೆ’ ಎಂದರು.

ರಾಜ್ಯ ವಕೀಲರ ಪರಿಷತ್‌ನ ಅಧ್ಯಕ್ಷ ಎಲ್.ಶ್ರೀನಿವಾಸ ಬಾಬು ಮಾತನಾಡಿ, ‘ಪ್ರಕಾಶ್ ಕಣಿವೆ ಅವರು, ತಮ್ಮ ಶಿಷ್ಯ ವರ್ಗಕ್ಕೆ ಕಾನೂನು ಮತ್ತು ಸಂವಿಧಾನ ಉಳಿಸುವ ಕೃಷಿ ಕಾಯಕವನ್ನು ತಿಳಿಸಿಕೊಟ್ಟಿದ್ದಾರೆ’ ಎಂದರು.

‘ಪ್ರದೀಪ ಪುರಸ್ಕಾರ’ ಸ್ವೀಕರಿಸಿದ ಡಾ.ಪ್ರಕಾಶ್ ಕಣಿವೆ, ‘ಈ ಹಿಂದೆ ಪುರಸ್ಕಾರವನ್ನು ಧೀಮಂತ ವ್ಯಕ್ತಿಗಳಿಗೆ ನೀಡಿದ್ದರಿಂದ ಪ್ರಶಸ್ತಿ ಮೌಲ್ಯ ಹೆಚ್ಚಿದೆ. ಈ ಪ್ರಶಸ್ತಿ ಸ್ವೀಕರಿಸುವಷ್ಟು ದೊಡ್ಡ ಸಾಧನೆ ನಾನು ಮಾಡಿಲ್ಲ. ಪುರಸ್ಕಾರವನ್ನು ತಿರಸ್ಕರಿಸುವುದು ಸರಿಯಲ್ಲ’ ಎಂದರು.

ಸುಜನ ಪ್ರತಿಷ್ಠಾನ ವಿಶ್ವಸ್ಥರಾದ ಶಾಸಕ ಟಿ.ಡಿ.ರಾಜೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಟ್ರಸ್ಟ್ ವತಿಯಿಂದ ಮುಂದಿನ ದಿನಗಳಲ್ಲಿ ಇಂತಹ ಸಾಮಾ ಜಿಕ ಕಾರ್ಯಕ್ರಮಗಳನ್ನು ಸಾರ್ವಜ ನಿಕರ ಸಹಕಾರದೊಂದಿಗೆ ಮುಂದುವರಿ ಸಿಕೊಂಡು ಹೋಗುತ್ತೇವೆ’ ಎಂದರು.

ಮೀನುಗಾರಿಕೆ ಇಲಾಖೆ ನಿವೃತ್ತ ನಿರ್ದೇಶಕ ಡಾ. ಎನ್.ಆರ್.ರಾಮಕೃಷ್ಣ ಅವರು ಹಿರೇತೋಟ ಡಾ.ಎಸ್.ಪ್ರದೀಪ ಅವರ ಕುರಿತು ಮಾತನಾಡಿ, ‘ಅಮೆರಿಕದಲ್ಲಿ ವಿಜ್ಞಾನಿಯಾಗಿದ್ದ ತೀರ್ಥಹಳ್ಳಿಯ ಹಿರೇತೋಟ ಪ್ರದೀಪ್ ಅವರು, ಮಲೆನಾಡಿನ ಪರಿಸರದ ಬಗ್ಗೆ ಆಸಕ್ತರಾಗಿದ್ದರು. ಅಧ್ಯಯನ, ಸಂಶೋಧನಾ ಕ್ಷೇತ್ರದಲ್ಲಿ ಅವರು ಸಾಧಿಸಿದ್ದು ಅಪಾರ’ ಎಂದರು.

ಸುಜನ ಪ್ರತಿಷ್ಠಾನ ಪ್ರಧಾನ ಸಂಚಾಲಕ ಎಂ.ಆರ್.ಸುರೇಶ್ ಅವರು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಅವರ ‘ರೈತರ ಭದ್ರತೆ ದೇಶದ ಭದ್ರತೆ’ ಕೃತಿ ಮರು ಬಿಡುಗಡೆ ಮಾಡಿದರು. ಕೊಪ್ಪ ವಕೀಲರ ಸಂಘದ ಅಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿದರು.

ಎನ್.ಆರ್.ಪುರ ವಕೀಲರ ಸಂಘದ ಅಧ್ಯಕ್ಷ ಜಿ.ದಿವಾಕರ್, ಶೃಂಗೇರಿ ವಕೀಲರ ಸಂಘದ ಅಧ್ಯಕ್ಷ ಜಿ.ಎಂ.ಸತೀಶ್, ಕೊಪ್ಪ ವಕೀಲರ ಸಂಘದ ಕಾರ್ಯದರ್ಶಿ ಎಸ್.ಆರ್.ಶ್ರೀಕಾಂತ್ ಮಾತನಾಡಿದರು. ತೆನೆ ಬಳಗ, ಸ್ನೇಹ ಶೃಂಗ, ಕರುವಾನೆ ಕೃಷ್ಣಪ್ಪ ಗೌಡ ಸೇವಾ ಪ್ರತಿಷ್ಠಾನದ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT