ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ ಕುಟುಂಬಕ್ಕೆ ಸೌಲಭ್ಯ ಮರೀಚಿಕೆ

ಬಾಲಕಿಯರ ಶಿಕ್ಷಣದ ಕನಸಿಗೆ ಆಧಾರ್‌ ಕಾರ್ಡ್‌ ಅಡ್ಡಿ l ಸ್ವಂತ ಸೂರಿಲ್ಲದೆ ಪರದಾಟ
Last Updated 13 ಆಗಸ್ಟ್ 2022, 2:57 IST
ಅಕ್ಷರ ಗಾತ್ರ

ಕಡೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸರ್ಕಾರ ಹತ್ತಾರು ಸೌಲಭ್ಯಗಳನ್ನು ಘೋಷಿಸಿವೆ. ಆದರೆ, ಅದ್ಯಾವ ಸೌಲಭ್ಯವೂ ಸಿಗದೆ ತಾಲ್ಲೂಕಿನ ದೊಡ್ಡಪಟ್ಟಣಗೆರೆಯಲ್ಲಿ ಕುಟುಂಬವೊಂದು ದುಃಸ್ಥಿತಿಯಲ್ಲಿದೆ.

ತಾಲ್ಲೂಕಿನ ದೊಡ್ಡ ಪಟ್ಟಣಗೆರೆಯಲ್ಲಿರುವ ವಚನ ಪರಿಶಿಷ್ಟ (ಮಾದಿಗ) ಜನಾಂಗದ ಲಕ್ಕಮ್ಮನಿಗೆ ಸ್ವಂತ ಸೂರಿಲ್ಲ. ಗಂಡ ಇದ್ದರೂ ಆತ ಮದ್ಯವ್ಯಸನಿ. ಕೂಲಿ ಕೆಲಸದಲ್ಲೇ ಜೀವನ ನಿರ್ವಹಣೆ ಮಾಡಬೇಕಿದೆ. ಈ ಹಿಂದೆ ಇದ್ದ ಗುಡಿಸಲು ಮಳೆಗೆ ಧರಾಶಾಯಿಯಾಗಿದೆ. ಈಗ ಪರಿಚಿತರೊಬ್ಬರ ಮನೆಯಲ್ಲಿ ತಾತ್ಕಾಲಿಕ ವಾಸ್ತವ್ಯವಿದ್ದಾರೆ. ಇವರು ಪಡಿತರ ಚೀಟಿ, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಹೊಂದಿಲ್ಲ. ಪರಿಶಿಷ್ಟ ಜನಾಂಗದವರಾದ ಇವರಿಗೆ ಜಾತಿ ಪ್ರಮಾಣ ಪತ್ರವೂ ದೊರೆತಿಲ್ಲ.
ಇಬ್ಬರು ಪುತ್ರಿಯರು ಮನೆಯಲ್ಲೇ ಇದ್ದಾರೆ. ಒಬ್ಬಳು ಹತ್ತನೇ
ತರಗತಿ ಪರೀಕ್ಷೆಯಲ್ಲಿ ಶೇ 81
ಅಂಕ ಗಳಿಸಿದ್ದಾಳೆ. ಮತ್ತೊಬ್ಬಳು
8ನೇ ತರಗತಿ ತೇರ್ಗಡೆಯಾಗಿದ್ದಾಳೆ.

ಲಕ್ಕಮ್ಮನ ಸ್ವಂತ ಊರು ದೊಡ್ಡಪಟ್ಟಣಗೆರೆ. ಈಕೆಯನ್ನು ತರೀಕೆರೆಯ ಕಾವಲು ದುಗ್ಲಾಪುರದಲ್ಲೊಬ್ಬರಿಗೆ ಮದುವೆ ಮಾಡಿಕೊಡಲಾಗಿದೆ. ಆತ ಮದ್ಯವ್ಯಸನಿ. ಈ ದಂಪತಿಗೆ ಮೂವರು ಹೆಣ್ಣು ಮಕ್ಕಳು. ಗಂಡ ಲಕ್ಕಮ್ಮನಿಂದ ದೂರವಾಗಿದ್ದಾನೆ. ಕೂಲಿ ನಾಲಿ ಮಾಡಿಯೇ ದೊಡ್ಡ ಮಗಳಿಗೆ ಲಕ್ಕಮ್ಮ ಮದುವೆ ಮಾಡಿಸಿದ್ದಾರೆ. ನಂತರ ತಾಯಿಯ ಊರಿಗೆ ಹತ್ತು ವರ್ಷಗಳ ಹಿಂದೆ ವಾಪಸ್ಸಾದ ಲಕ್ಕಮ್ಮ, ಇಬ್ಬರು ಮಕ್ಕಳನ್ನು ದುಗ್ಲಾಪುರದ ಶಾಲೆಯಿಂದ ಟಿಸಿ ಪಡೆದು ಸ್ಥಳೀಯ ಶಾಲೆಗೆ ಸೇರಿಸಿದ್ದಾರೆ.

ಲಕ್ಕಮ್ಮನ ಎರಡನೇ ಮಗಳು ರಕ್ಷಿತಾ ದೊಡ್ಡ ಪಟ್ಟಣಗೆರೆಯ ಕಟ್ಟೆ ಹೊಳೆಯಮ್ಮ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ಪಾಸಾದ ನಂತರ ಅದೇ ಗ್ರಾಮದಲ್ಲಿರುವ ಪದವಿಪೂರ್ವ ಕಾಲೇಜಿನಲ್ಲಿ ಪ್ರವೇಶಾತಿ ಸಿಕ್ಕಿಲ್ಲ. ಆಧಾರ್ ಕಾರ್ಡ್ ಇಲ್ಲ ಎಂಬುದು ಇದಕ್ಕೆ ಕಾರಣ. ಇವರ ಎರಡನೇ ಮಗಳು ಅಮೂಲ್ಯಾ ಏಳನೇ ತರಗತಿ ಪಾಸಾಗಿದ್ದಾಳೆ. ಎಂಟನೇ ತರಗತಿಗೆ ದಾಖಲು ಮಾಡಲು ತಾಯಿಯೇ ಮುಂದಾಗಲಿಲ್ಲ. ಅಕ್ಕನಿಗೆ ಹೇಳಿದಂತೆಯೇ ಈಕೆಗೂ ಹೇಳುತ್ತಾರೆಂಬ ಅಳುಕು ಅದಕ್ಕೆ ಕಾರಣ.

ಲಕ್ಕಮ್ಮನಿಗೆ ಇದೇ ಗ್ರಾಮದಲ್ಲಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಕೊಡಿಸಲು ಸ್ಥಳೀಯರಾದ ವಾಸು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಅಧಿಕಾರಿಗಳು ಸಬೂಬು
ಹೇಳುತ್ತಲೇ ಬಂದಿದ್ದಾರೆ. ಇತ್ತ ಹೆಣ್ಣುಮಕ್ಕಳಿಗೆ ಓದಲು ಆಸಕ್ತಿಯಿದ್ದರೂ ದಾಖಲಾತಿ ಸಿಗದೆ ಶಿಕ್ಷಣದಿಂದ ವಂಚಿತರಾಗಿದ್ದಾರೆ.

ಲಕ್ಕಮ್ಮ ವಾಸವಿದ್ದ ಗುಡಿಸಲು ಮಳೆಗೆ ಬಿದ್ದುಹೋಗಿದೆ. ಗ್ರಾಮಸ್ಥರಲ್ಲಿ ಕೆಲವರು ಮಾನವೀಯ ನೆಲೆಯಲ್ಲಿ ಕೈಲಾದ ಸಹಾಯ ಮಾಡುತ್ತಿದ್ದಾರೆ. ಹೀಗೆ ದುಃಸ್ಥಿತಿಯಲ್ಲಿರುವ ಕುಟುಂಬಕ್ಕೆ ಆಸರೆಯಾಗಿರುವವರು ಇದೇ ಗ್ರಾಮದ ವಾಸು ಅವರ ಕುಟುಂಬ. ತಮಗೆ ಸಿಗುವ ಮಾಸಿಕ ಪಡಿತರವನ್ನು ಲಕ್ಕಮ್ಮ ಕುಟುಂಬಕ್ಕೆ ನೀಡುತ್ತಾರೆ.

ಈ ಕುಟುಂಬಕ್ಕೆ ಒಂದು ಸೂರು ಸಿಗಬೇಕು. ಹೆಣ್ಣು ಮಕ್ಕಳು ಶಿಕ್ಷಣ ವಂಚಿತರಾಗದೆ ಮುಂದುವರೆಸಬೇಕು. ಸಂಬಂಧಿಸಿದವರು ಇದರತ್ತ ಗಮನ ಹರಿಸಬೇಕೆಂಬುದು ಗ್ರಾಮಸ್ಥರ ಆಶಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT