ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಟಣ ಪಂಚಾಯಿತಿಯ ನಿರೀಕ್ಷೆಯಲ್ಲಿ ಕಳಸ

ಜಿಲ್ಲೆಯಲ್ಲೇ ಅತಿ ದೊಡ್ಡ ಗ್ರಾಮ ಪಂಚಾಯಿತಿಗೆ ಬೇಕು ಮೇಲ್ದರ್ಜೆ ಭಾಗ್ಯ
Last Updated 12 ಸೆಪ್ಟೆಂಬರ್ 2019, 10:07 IST
ಅಕ್ಷರ ಗಾತ್ರ

ಕಳಸ: ನಾಲ್ಕು ದಶಕಗಳ ಹೋರಾಟದ ಫಲವಾಗಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಹಿಂದಿನ ಸಮ್ಮಿಶ್ರ ಸರ್ಕಾರ ಕಳಸಕ್ಕೆ ತಾಲ್ಲೂಕು ಕೇಂದ್ರದ ಸ್ಥಾನಮಾನ ನೀಡಿತು. ಆದರೆ, ಕಳಸ ಪಟ್ಟಣ ಈಗಲೂ ಗ್ರಾಮ ಪಂಚಾಯಿತಿಯ ಕೇಂದ್ರವೇ ಅಗಿದ್ದು, ಸಮಗ್ರ ಅಭಿವೃದ್ಧಿಯಿಂದ ವಂಚಿತವಾಗಿದೆ. ಪಟ್ಟಣದ ಕ್ಷಿಪ್ರ ಅಭಿವೃದ್ಧಿಗಾಗಿ ಕಳಸವು ಪಟ್ಟಣ ಪಂಚಾಯಿತಿಯ ಸ್ಥಾನಮಾನದ ನಿರೀಕ್ಷೆಯಲ್ಲಿದೆ.

29 ಸದಸ್ಯರು ಇರುವ ಕಳಸ ಗಾಮ ಪಂಚಾಯಿತಿ ಜಿಲ್ಲೆಯಲ್ಲೇ ಅತಿ ದೊಡ್ಡದು. ಕಳಸ ಪಟ್ಟಣವನ್ನು ಕೇಂದ್ರವಾಗಿಸಿ ಕಳಸ ಪಟ್ಟಣ ಪಂಚಾಯಿತಿ ಘೋಷಿಸಬೇಕು ಎಂಬ ಬೇಡಿಕೆ ಕಳೆದ ದಶಕದಿಂದಲೂ ಇದೆ. ಆದರೆ, ಇದೀಗ ಕಳಸಕ್ಕೆ ತಾಲ್ಲೂಕು ಕೇಂದ್ರದ ಗರಿಮೆ ಸಿಕ್ಕ ಮೇಲೆ ಪಟ್ಟಣ ಪಂಚಾಯಿತಿ ಸ್ಥಾನಮಾನ ಅನಿವಾರ್ಯವೇ ಆಗಿದೆ.

ಕಳಸ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 12 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಗ್ರಾಮ ಪಂಚಾಯಿತಿಗಳಿಗೆ ಸರ್ಕಾರ ನೀಡುವ ಅಲ್ಪ ಅನುದಾನ ಕಳಸ ಪಟ್ಟಣದ ‘ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಸುರಿದಂತಾಗುತ್ತದೆ. ಆದ್ದರಿಂದಲೇ ಕಳಸದ ರಸ್ತೆ, ಚರಂಡಿ ಕೆಲಸಗಳೆಲ್ಲವೂ ದಶಕಗಳಿಂದಲೂ ಪಾಳು ಬಿದ್ದಿವೆ.

‘ಪಟ್ಟಣ ಪಂಚಾಯಿತಿಯಾಗಿ ಕಳಸ ಬದಲಾದರೆ ವಾರ್ಷಿಕ ₹ 5 ಕೋಟಿಯಷ್ಟು ನೇರ ಅನುದಾನ ಸಿಗಲಿದೆ. ಜೊತೆಗೆ ಪಟ್ಟಣ ವ್ಯಾಪ್ತಿಯಲ್ಲಿ ಪರಿಷ್ಕೃತ ಕರಗಳ ವಸೂಲಾತಿಯಿಂದ ಲಕ್ಷಗಟ್ಟಲೆ ಆದಾಯ ಪಟ್ಟಣ ಪಂಚಾಯಿತಿಗೆ ಸಿಗಲಿದೆ. ಸ್ಥಳೀಯ ಕಾಮಗಾರಿಗಳಿಗೆ ಮತ್ತು ಅಭಿವೃದ್ಧಿಗೆ ಹಣದ ಕೊರತೆ ಕಾಡುವುದಿಲ್ಲ’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ರಾಜೇಂದ್ರ ಹಿತ್ತಲಮಕ್ಕಿ ಅಭಿಪ್ರಾಯಪಡುತ್ತಾರೆ.

ಕಳಸ ಪಟ್ಟಣದ ಸೆರಗಿನಲ್ಲೇ ಇರುವ ಗಣಪತಿಕಟ್ಟೆ, ಕಲ್ಮಕ್ಕಿ, ಕಳಸೇಶ್ವರನಗರ, ಎಡದಾಳು ಮತ್ತಿತರ ಪ್ರದೇಶಗಳನ್ನು ಸೇರಿಸಿಕೊಂಡು ಕಳಸ ಪಟ್ಟಣ ಪಂಚಾಯಿತಿ ಸ್ಥಾಪಿಸಲು ಅವಕಾಶ ಇದೆ. ಕಳಸ ಪಂಚಾಯಿತಿಯ ಉಳಿದ ಪ್ರದೇಶಗಳನ್ನು ಕಳಸ ಗ್ರಾಮಾಂತರ ಗ್ರಾಮ ಪಂಚಾಯಿತಿ ಎಂದು ಉಳಿಸಿಕೊಳ್ಳಬಹುದಾಗಿದೆ. ಕಳಸ ಪಟ್ಟಣ ಪಂಚಾಯಿತಿಯಾದರೆ ಮಾತ್ರ ತಾಲ್ಲೂಕು ಕೇಂದ್ರದ ಅಭಿವೃದ್ಧಿ ಆಗುತ್ತದೆ. ಗ್ರಾಮ ಪಂಚಾಯಿತಿಯೇ ಆಗಿ ಮುಂದುವರಿದರೆ ತಾಲ್ಲೂಕು ಕೇಂದ್ರದ ಮೂಲಸೌಕರ್ಯಕ್ಕೆ ಅಡ್ಡಿ ಆಗುತ್ತದೆ ಎಂದು ಪಟ್ಟಣದ ಅಭಿವೃದ್ಧಿಯ ಕಲ್ಪನೆ ಹೊಂದಿರುವವರು ಹೇಳುತ್ತಾರೆ.

ಕಳಸವನ್ನು ಪಟ್ಟಣ ಪಂಚಾಯಿತಿ ಮಾಡುವ ಬಗ್ಗೆ ಈಗಾಗಲೇ ರಾಜ್ಯ ಸರ್ಕಾರದ ಬಳಿಗೆ ಶಾಸಕ ಎಂ.ಪಿ. ಕುಮಾರಸ್ವಾಮಿ ಅಹವಾಲು ಕೊಂಡೊಯ್ದಿದ್ದಾರೆ. ಮುಂದಿನ ಜನವರಿಯ ನಂತರ ಗ್ರಾಮ ಪಂಚಾಯಿತಿಗೆ ಚುನಾವಣೆ ನಡೆಯಲಿದೆ. ಅಷ್ಟರೊಳಗೆ ಕಳಸವನ್ನು ಪಟ್ಟಣ ಪಂಚಾಯಿತಿಯಾಗಿ ಘೋಷಣೆ ಮಾಡಿದರೆ ಆಡಳಿತಾತ್ಮಕವಾಗಿ ಅನುಕೂಲ ಆಗುತ್ತದೆ ಎಂಬ ಅಭಿಪ್ರಾಯ ಬಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT