ಭಾನುವಾರ, ಸೆಪ್ಟೆಂಬರ್ 26, 2021
27 °C
29 ಸದಸ್ಯ ಸ್ಥಾನ

ಕಳಸ ಗ್ರಾಮ ಪಂಚಾಯಿತಿ: ಗದ್ದುಗೆಗಾಗಿ ಬಿಜೆಪಿ–ಜೆಡಿಎಸ್‌ ಪೈಪೋಟಿ

ರವಿ ಕೆಳಂಗಡಿ Updated:

ಅಕ್ಷರ ಗಾತ್ರ : | |

ಕಳಸ: 29 ಸದಸ್ಯ ಸ್ಥಾನವನ್ನು ಹೊಂದಿ ರುವ ಜಿಲ್ಲೆಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಆಗಿರುವ ಕಳಸ ಪಂಚಾ ಯಿತಿಯಲ್ಲಿ ಅಧಿಕಾರ ಹಿಡಿಯಲು ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿತರ ನಡುವೆ ತೀವ್ರ ಸ್ಪರ್ಧೆ ಆರಂಭವಾಗಿದೆ.

ಫೆಬ್ರುವರಿ 2ರಂದು ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಿಗದಿ ಆಗಿದ್ದು, ಇವೆರಡೂ ಸ್ಥಾನಗಳ ಆಕಾಂಕ್ಷಿಗಳು ಕನಿಷ್ಠ 15 ಮತ ಗಳಿಸಲೇಬೇಕಿದೆ. ಬಿಜೆಪಿ ಬೆಂಬಲಿತರು 14 ಸ್ಥಾನ ಗೆದ್ದಿದ್ದು, ಜೆಡಿಎಸ್ ಬೆಂಬಲಿತರು 13 ಸ್ಥಾನದಲ್ಲಿ ವಿಜಯಿ ಆಗಿದ್ದಾರೆ. ಆದರೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳು ಕೂದಲೆಳೆಯಲ್ಲಿ ತಪ್ಪುವ ಆತಂಕ ಎರಡೂ ಪಾಳೆಯದಲ್ಲಿ ಇದೆ. ಆದರಿಂದಲೇ 2 ಸ್ಥಾನ ಗೆದ್ದಿರುವ ಕಾಂಗ್ರೆಸ್ ಬೆಂಬಲಿತ ವೀರೇಂದ್ರ ಮತ್ತು ಮಹೇಶ್ ಅವರಿಗೆ ಈಗ ಭಾರೀ ಬೇಡಿಕೆ ಬಂದಿದೆ.

ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಈಗ ಕಾಂಗ್ರೆಸ್ ನಾಯಕರ ಓಲೈಕೆಯಲ್ಲಿ ತೊಡಗಿದ್ದಾರೆ. ಈ ಇಬ್ಬರು ಬೆಂಬಲ ನೀಡಿದರೆ ಮುಂದಿನ 5 ವರ್ಷ ಕಳಸದಲ್ಲಿ ಅಧಿಕಾರ ಚಲಾಯಿಸ ಬಹುದು ಎಂಬ ಕನಸು ಎರಡೂ ಪಕ್ಷದ್ದು. ಜೊತೆಗೆ ಎರಡೂ ಪಕ್ಷಗಳ ಬೆಂಬಲಿತ ಸದಸ್ಯರ ನಿಷ್ಠೆ ಬದಲಾಯಿಸುವ ಪ್ರಯತ್ನ ಎರಡೂ ಕಡೆ ನಡೆದಿದೆ.

ಕಳೆದ ಅವಧಿಯ ನಂತರ ಜೆಡಿಎಸ್ ಬೆಂಬಲಿತರು ಈ ಬಾರಿಯೂ ಗದ್ದುಗೆ ಏರುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಮುಂದಿನ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ದೃಷ್ಟಿಯಿಂದ ಬಿಜೆಪಿ ಬೆಂಬಲಿತರಿಗೆ ಕಳಸ ಪಂಚಾಯಿತಿ ಅಧಿಕಾರ ಅತ್ಯಗತ್ಯ. ಈ ಬಾರಿ ಕಳಸ ಪಂಚಾಯಿತಿ ಅಧ್ಯಕ್ಷ ಸ್ಥಾನ ಬಿಸಿಎಂಎ ಮಹಿಳೆಗೆ ಮೀಸಲಾಗಿದ್ದರೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ದಕ್ಕಿದೆ.

ತಾಲ್ಲೂಕು ಪಂಚಾಯಿತಿ ಸದಸ್ಯ ರಫೀಕ್ ಪತ್ನಿ ಜಮೀಲಾ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಜಯಾ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದಾರೆ. ಜೆಡಿಎಸ್, ಬಿಜೆಪಿ ಮುಖಂಡರು ಚುನಾವಣೆಗಾಗಿ ರಣತಂತ್ರ ರೂಪಿಸುತ್ತಿದ್ದಾರೆ.

ಕಳಸಕ್ಕೆ ವಿಶೇಷ ತಹಶೀಲ್ದಾರ್ ನೇಮಕಾತಿ ನಡೆದಿದೆ. ತಾಲ್ಲೂಕು ಕೇಂದ್ರ ಮತ್ತು ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೆ ಏರಿದಲ್ಲಿ ಕಳಸದ ಅಭಿವೃದ್ಧಿಯಲ್ಲಿ ಪಂಚಾಯಿತಿಯ ಪಾತ್ರ ದೊಡ್ಡದೇ ಇರುತ್ತದೆ. ಈ ಎಲ್ಲ ಹಿನ್ನೆಲೆಯಲ್ಲಿ ಮಂಗಳವಾರದ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು