ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಸ: ಅಧಿಕಾರಿಗಳ ವಿರುದ್ಧ ಗ್ರಾಮಸಭೆಯಲ್ಲಿ ಅಸಮಾಧಾನ

ಕಳಸ ಸರ್ಕಾರಿ ಆಸ್ಪತ್ರೆಗೆ ವೈದ್ಯ, ಸಿಬ್ಬಂದಿ ನೇಮಕಕ್ಕೆ ಆಗ್ರಹ
Last Updated 12 ಸೆಪ್ಟೆಂಬರ್ 2022, 13:52 IST
ಅಕ್ಷರ ಗಾತ್ರ

ಕಳಸ: ಇಲ್ಲಿನ ಗ್ರಾಮ ಪಂಚಾಯಿತಿಯ ಗ್ರಾಮಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯ ಮತ್ತು ಸಿಬ್ಬಂದಿ ಕೊರತೆ ಬಗ್ಗೆ ಗ್ರಾಮಸ್ಥರು ದನಿ ಎತ್ತಿ, ಈ ಬಗ್ಗೆ ಸಭೆಯಲ್ಲಿ ನಿರ್ಣಯ ಮಾಡುವಂತೆ ಒತ್ತಾಯಿಸಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ರಫೀಕ್ ಮಾತನಾಡಿ, ‘ಗ್ರಾಮಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಯಾವ ಪ್ರಯೋಜನವೂ ಆಗಲ್ಲ. ಶಾಸಕ ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಈ ಬಗ್ಗೆ ಮನವರಿಕೆ ಮಾಡಿ ಸರ್ಕಾರದ ಮಟ್ಟದಲ್ಲಿ ಸಮಸ್ಯೆ ಬಗೆಹರಿಸಬೇಕು’ ಎಂದು ಹೇಳಿದರು.

ಜೆಡಿಎಸ್ ಮುಖಂಡ ಸಂತೋಷ್ ಮಾತನಾಡಿ, ‘ಕಳಸ ತಾಲ್ಲೂಕು ಕಚೇರಿ ಆರಂಭವಾಗಿದ್ದರೂ ಜನರಿಗೆ ಅನುಕೂಲ ಆಗಿಲ್ಲ. ಇಲ್ಲಿ ತಾಲ್ಲೂಕು ಮಟ್ಟದ ಯಾವ ಕೆಲಸವೂ ಆಗುತ್ತಿಲ್ಲ. ಜನರು ಮೂಡಿಗೆರೆಗೆ ಅಲೆಯುವುದು ನಿಂತಿಲ್ಲ’ ಎಂದು ದೂರಿದರು.

ಕಾಂಗ್ರೆಸ್ ಮುಖಂಡ ಮಹೇಶ್ ಮಾತನಾಡಿ, ‘ಕಳಸದ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ 60 ವರ್ಷ ಮೀರಿರುವ ಸಿಬ್ಬಂದಿಯೊಬ್ಬರನ್ನು ಇನ್ನೂ ಮುಂದುವರಿಸಲಾಗಿದೆ. ಅವರ ಬದಲಿಗೆ ಒಬ್ಬ ನಿರುದ್ಯೋಗಿಗೆ ಉದ್ಯೋಗ ಕೊಡಬಹುದು’ ಎಂದು ಗಮನ ಸೆಳೆದರು.

ಕಳಸ ಆಸುಪಾಸಿನಲ್ಲಿ ಕಂಡು ಬಂದಿರುವ ಆನೆ ಹಾವಳಿ ಬಗ್ಗೆ ಪ್ರಸ್ತಾಪಿಸಿದ ಗ್ರಾಮಸ್ಥರು, ಜನರಿಗೆ ಪ್ರಾಣಾಪಾಯ ಆಗುವ ಮೊದಲು ಆನೆ ಓಡಿಸಬೇಕು. ಬೆಳೆ ಹಾನಿ ತಪ್ಪಿಸಬೇಕು ಎಂದರು.

ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್ ಮಾತನಾಡಿ, ಆನೆ ಓಡಿಸಲು ಕ್ರಮ ವಹಿಸಲಾಗುತ್ತಿದೆ. ಆನೆ ಹಾವಳಿಯಿಂದ ಹಾನಿಯಾದ ಸ್ವಂತ ಹಿಡುವಳಿಯ ಜಮೀನಿಗೆ ಪರಿಹಾರ ಸಿಗುತ್ತದೆ ಎಂದರು.

ಪಂಚಾಯಿತಿ ವ್ಯಾಪ್ತಿಯ ನಿವೇಶನರಹಿತರ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದಾಗ ತಾಲ್ಲೂಕು ಪಂಚಾಯಿತಿ ಅಧಿಕಾರಿ ಪ್ರಕಾಶ್ ಮಾತನಾಡಿ, ಕಳಸದ ಎಲ್ಲ ಅರ್ಹ ನಿವೇಶನರಹಿತರ ಪಟ್ಟಿ ವಸತಿನಿಗಮಕ್ಕೆ ಕಳುಹಿಸಲಾಗಿದೆ. ಶೀಘ್ರದಲ್ಲೇ ನಿವೇಶನದ ಹಕ್ಕುಪತ್ರ ಸಿಗಲಿದೆ ಎಂದರು.

ಲೋಕೋಪಯೋಗಿ ಇಲಾಖೆ ಕಾರ್ಯವೈಖರಿ ಬಗ್ಗೆ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಳಸ-ಕಳಕೋಡು, ಕಳಸ-ಕುದುರೆಮುಖ, ಕಳಸ-ಬಾಳೆಹೊಳೆ-ಮಾಗುಂಡಿ, ಕಳಸ-ಹೊರನಾಡು ರಸ್ತೆಯ ದುರವಸ್ಥೆ ಬಗ್ಗೆ ಸ್ಪಷ್ಟನೆ ಕೇಳಿದರು.

ಆಗ ಮಾತನಾಡಿದ ಕಿರಿಯ ಎಂಜಿನಿಯರ್ ಸತೀಶ್, ಅನೇಕ ರಸ್ತೆಗಳ ಅಭಿವೃದ್ಧಿಗೆ ಟೆಂಡರ್ ಆಗಿದ್ದು, ಮಳೆಗಾಲದ ನಂತರ ಎಲ್ಲ ರಸ್ತೆಗಳ ಕಾಮಗಾರಿ ಆರಂಭವಾಗಲಿದೆ ಎಂದರು.

ಹೊರನಾಡು- ಬಲಿಗೆ ರಸ್ತೆಯ ಬಾಕಿ ಕಾಮಗಾರಿ ಮತ್ತು ಚರಂಡಿ ನಿರ್ವಹಣೆ ಮಾಡದಿರುವ ಬಗ್ಗೆ ಸದಸ್ಯರಾದ ಸುವರ್ಣಮ್ಮ ಮತ್ತು ವೀರೇಂದ್ರ ಗಮನ ಸೆಳೆದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಯಾ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT