ಭಾನುವಾರ, ಆಗಸ್ಟ್ 14, 2022
25 °C

ಕಳಸ ತಾಲ್ಲೂಕು ರಚನೆ: ಅಂತಿಮ ಅಧಿಸೂಚನೆ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳಸ: ಕಳಸ ತಾಲ್ಲೂಕು ರಚನೆಯ ಬಗ್ಗೆ ರಾಜ್ಯ ಸರ್ಕಾರವು ಅಂತಿಮ ಅಧಿಸೂಚನೆ ಹೊರಡಿಸಿದ್ದು, ನೂತನ ತಾಲ್ಲೂಕು ಅಸ್ತಿತ್ವಕ್ಕೆ ಬರಲಿದೆ.

ಮಾರ್ಚ್ ತಿಂಗಳಲ್ಲಿ ತಾಲ್ಲೂಕಿನ ಗಡಿ ಗುರುತು ಮಾಡುವ ಬಗ್ಗೆ ಅಧಿಸೂಚನೆ ಹೊರಡಿಸಲಾಗಿತ್ತು. ಕಳಸ ಹೋಬಳಿ ವ್ಯಾಪ್ತಿಯ ಕಳಸ, ಹೊರನಾಡು, ಸಂಸೆ, ಇಡಕಿಣಿ, ಮರಸಣಿಗೆ ಮತ್ತು ತೋಟದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂದಾಯ ಗ್ರಾಮಗಳನ್ನು ಒಳಗೊಂಡು ಕಳಸ ತಾಲ್ಲೂಕು ರಚಿಸುವ ಬಗ್ಗೆ ಪ್ರಸ್ತಾವವನ್ನು ರಾಜ್ಯ ಸರ್ಕಾರ ರಾಜ್ಯ ಪತ್ರದಲ್ಲಿ ಪ್ರಕಟಿಸಿತ್ತು. ಯಾವುದೇ ತಕರಾರು ಅಥವಾ ವಿರೋಧ ಇದ್ದರೆ ತಿಳಿಸಲು ಕೋರಲಾಗಿತ್ತು.

ಈ ಪ್ರಸ್ತಾವಕ್ಕೆ ಯಾರಿಂದಲೂ ವಿರೋಧ ಬರದ ಹಿನ್ನೆಲೆಯಲ್ಲಿ ಇದೀಗ ಕಳಸ ತಾಲ್ಲೂಕು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಹಣಕಾಸು ಇಲಾಖೆಯ ಅನುಮೋದನೆ ನಂತರ ಕಳಸ ತಾಲ್ಲೂಕು ರಚನೆಗೆ ಬೇಕಾಗುವ ಅನುದಾನವನ್ನು ನಿರೀಕ್ಷಿಸಲಾಗಿದೆ ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳಸದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ₹ 10 ಕೋಟಿ ಅನುದಾನ ಕೇಳಿದ್ದೀನಿ. ತಾಲ್ಲೂಕು ಕೇಂದ್ರಕ್ಕೆ ಜಮೀನು ಒದಗಿಸಲು ಕ್ರಮ ತೆಗೆದುಕೊಳ್ಳುತ್ತೇನೆ. ಕಳಸದ ಗಣಪತಿಕಟ್ಟೆ ಪ್ರದೇಶದಲ್ಲಿ ಪ್ರಶಸ್ತವಾದ ಸ್ಥಳ ಇದೆ. ಕಳಸದ ಜನತೆಗೆ ತಾಲ್ಲೂಕು ಕೇಂದ್ರದ ರೂಪದಲ್ಲಿ ಶಾಶ್ವತವಾದ ಕೊಡುಗೆ ನೀಡಿದ್ದೇವೆ’ ಎಂದರು.

ತಾಲ್ಲೂಕು ಅಂತಿಮ ಅಧಿಸೂಚನೆ ಹೊರಡಿಸುವಲ್ಲಿ ವಿಶೇಷ ಪರಿಶ್ರಮ ತೋರಿದ್ದ ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ‘ಪ್ರಜಾವಾಣಿ’ ಜೊತೆ ಮಾತನಾಡಿ, ‘ಕಳಸದ ಸಾವಿರಾರು ಜನರ ದಶಕಗಳ ತಾಲ್ಲೂಕು ಬೇಡಿಕೆ ಈಡೇರಿದಂತಾಗಿದೆ. ದೂರದ ಮೂಡಿಗೆರೆಗೆ ಹೋಗಿ ಬರಲು ಜನರು ಪಡುತ್ತಿದ್ದ ಪಾಡು ನಾನು ಕೂಡ ಗಮನಿಸಿದ್ದೇನೆ. ನನ್ನ ತಾಯಿಯ ಊರಿಗೆ ತಾಲ್ಲೂಕಿನ ಸ್ಥಾನಮಾನ ಸಿಕ್ಕಿದ್ದು ಖುಷಿ ಆಗಿದೆ’ ಎಂದರು.

‘ಕಳಸ ತಾಲ್ಲೂಕಿನ ಕೊಡುಗೆ ನೀಡಿದ ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರು, ಶಾಸಕರು ಮತ್ತು ಈ ಹಿಂದೆ ಯೂ ತಾಲ್ಲೂಕು ಕೇಂದ್ರಕ್ಕೆ ಶ್ರಮಿಸಿದ ಎಲ್ಲ ಮುಖಂಡರು, ಜನಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು.

‘ಕಳಸ ಜನರ ತಾಲ್ಲೂಕು ಬೇಡಿಕೆ ಯನ್ನು ವರುಷದ ಹಿಂದೆ ಮುಖ್ಯ ಮಂತ್ರಿಯ ಗಮನಕ್ಕೆ ತರಲಾಗಿತ್ತು. ಈ ಮನವಿಯನ್ನು ಪುರಸ್ಕರಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಳಸ ತಾಲ್ಲೂಕನ್ನು ಘೋಷಣೆ ಮಾಡಿದ್ದಾರೆ’ ಎಂದು ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸಿ.ಟಿ.ರವಿ ಪ್ರಕಟಣೆಯಲ್ಲಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.