ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪ | ಹೊಸದೇವಸ್ಥಾನದಲ್ಲಿ ಕಣ್ಮನ ಸೆಳೆಯುತ್ತಿದೆ ಆಕರ್ಷಕ ಕಲ್ಯಾಣಿ

ನರೇಗಾದಿಂದ ಪುನರ್ ನಿರ್ಮಾಣಗೊಂಡ ಪುಷ್ಕರಣಿ
Last Updated 4 ಡಿಸೆಂಬರ್ 2022, 5:51 IST
ಅಕ್ಷರ ಗಾತ್ರ

ಕೊಪ್ಪ: ತಾಲ್ಲೂಕಿನ ತುಳುವಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಿಮನೆ ಗ್ರಾಮದ ‘ಹೊಸ ದೇವಸ್ಥಾನ’ ಎಂಬ ಪ್ರಸಿದ್ಧಿಯ ದುರ್ಗಾ ಮತ್ತು ವಿನಾಯಕ ದೇವಸ್ಥಾನದ ಬಳಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ‘ಕಲ್ಯಾಣಿ’ ಪ್ರಮುಖ ಆಕರ್ಷಣೆಯಾಗಿದೆ.

ನಾಲ್ಕೈದು ಶತಮಾನಗಳ ಹಿಂದೆ ಪ್ರತಿಷ್ಠಾಪಿಸಲ್ಪಟ್ಟ ದುರ್ಗಾ ಮತ್ತು ವಿನಾಯಕ ದೇವಾಲಯಗಳ ಸಮುಚ್ಚಯ ‘ಹೊಸ ದೇವಸ್ಥಾನ’ ಎಂದೇ ಜನಜನಿತವಾಗಿದೆ. ಈ ಹಿಂದೆ ಇದ್ದ ಕಲ್ಯಾಣಿ(ಪುಷ್ಕರಣಿ) ನೀರನ್ನು ಕೆಲವು ವರ್ಷಗಳ ಹಿಂದೆ ದೇವರ ಅಭಿಷೇಕಕ್ಕೆ ಬಳಸಲಾಗುತ್ತಿತ್ತು. ಕಾಲ ಕಳೆದಂತೆ ಶಿಥಿಲಗೊಂಡಿತ್ತು.

ಎಂಟು ಗ್ರಾಮಗಳಿಗೆ ಈ ದೇವಸ್ಥಾನವೇ ಪ್ರಮುಖವಾಗಿತ್ತು. ಇತಿಹಾಸ ಸಂಶೋಧಕರ ಮೂಲಕ ಕಲ್ಯಾಣಿಯ ಬಗ್ಗೆ ಮಾಹಿತಿ ಕಲೆ ಹಾಕಿದ ಆಡಳಿತ ಮಂಡಳಿಯವರು, ಗ್ರಾಮಸ್ಥರು ಪುಷ್ಕರಣಿ ಮರು ನಿರ್ಮಾಣ ನಿಟ್ಟಿನಲ್ಲಿ ನರೇಗಾ ಯೋಜನೆ ಮೊರೆ ಹೋದರು.

‘ನಾಲ್ಕೈದು ವರ್ಷಗಳ ಹಿಂದೆ ಇಲ್ಲಿ ಕಲ್ಯಾಣಿ ಇದೆ ಎಂದು ನಮಗೆ ತಿಳಿದಿರಲಿಲ್ಲ. ಕಾಲ ಕ್ರಮೇಣ ಇದರ ಬಗ್ಗೆ ಮಾಹಿತಿ ಪಡೆದು, ನರೇಗಾ ಯೋಜನೆಯಡಿ ಕೆಲಸ ಮಾಡಿಸುತ್ತಿದ್ದಾರೆ’ ಎಂದು ಕರಿಮನೆ ಗ್ರಾಮದ ಜಗದೀಶ್‌ ಎಂಬುವರು ಸಂತಸ ಹಂಚಿಕೊಂಡಿದ್ದಾರೆ.

‘ಕಲ್ಯಾಣಿಯ ಪುನಶ್ಚೇತನ ಕಾಮಗಾರಿಯನ್ನು ನರೇಗಾ ಉದ್ಯೋಗ ಚೀಟಿ ಹೊಂದಿದ ಕುಟುಂಬಸ್ಥರು ಬಹಳ ಸೊಗಸಾ ಮಾಡುತ್ತಿದ್ದಾರೆ’ ಎಂದು ತುಳುವಿನಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆರ್.ಸುಬ್ರಹ್ಮಣ್ಯ ಹೇಳುತ್ತಾರೆ.

ಇತಿಹಾಸ: ದುರ್ಗಾಂಬಾ ದೇವಿಯ ಮೂರ್ತಿಯು ಹಲವು ಶತಮಾನಗಳ ಸಮೀಪದ ಬೆಟ್ಟದ ಮೇಲಿತ್ತು. ಅಲ್ಲಿ ಸಿದ್ಧಿ ಸಮುದಾಯದವರಿಂದ ಮಾತೆ ಪೂಜಿಸಲ್ಪಡುತ್ತಿದ್ದಳು, ಕಾಲಾಂತರದಲ್ಲಿ ಈಗಿರುವ ಹೊಸ ದೇವಸ್ಥಾನದ ಪ್ರದೇಶದಲ್ಲಿ ಪ್ರತಿಷ್ಠಾಪಿಸಲಾಯಿತು’ ಎಂಬ ಪ್ರತೀತಿ ಇದೆ.

ಈ ಬೆಟ್ಟವನ್ನು ದುರ್ಗದ ಬೆಟ್ಟ ಎಂದು ಕರೆಯಲಾಗುತ್ತಿದೆ. ಬೆಟ್ಟಕ್ಕೆ ಹೋಗುವ ದಾರಿಯ ಬಲಪಕ್ಕದಲ್ಲಿ ‘ಸೇವೆ ಕಟ್ಟೆ’ ಎಂದು ಕರೆಯಲ್ಪಡುವ ಕಲ್ಲಿನ ಕಟ್ಟೆಯೊಂದಿಗೆ ಮೇಲೆ ಮೂರು ಸಣ್ಣ ಸಣ್ಣ ಕಲ್ಲಿನ ಗದ್ದುಗೆಗಳಿವೆ. ವಿಶೇಷ ದಿನಗಳಲ್ಲಿ ದೇವರ ಮೂರ್ತಿಯನ್ನು ಸೇವೆ ಕಟ್ಟೆಯವರೆಗೆ ಪಲ್ಲಕ್ಕಿಯಲ್ಲಿ ಹೊತ್ತೊಯ್ದು, ಪೂಜೆ ಬಳಿಕ ವಾಪಸ್‌ ತರುವ ಪದ್ಧತಿ ಇತ್ತು. ಶತಮಾನಗಳ ಹಿಂದೆ ಇಲ್ಲಿ ರಥೋತ್ಸವ ಜರುಗುತ್ತಿತ್ತು ಎಂದು ಮಾಹಿತಿ ಬಲ್ಲವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT