ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ನೈಸರ್ಗಿಕ ಕೃಷಿಕ ಚಂದ್ರಶೇಖರ್‌ಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ

Last Updated 30 ಅಕ್ಟೋಬರ್ 2022, 15:31 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವವರ ಪಟ್ಟಿಯನ್ನು ಭಾನುವಾರ ಪ್ರಕಟಿಸಿದ್ದು, ತಾಲ್ಲೂಕಿನ ಮೂಗುತಿಹಳ್ಳಿಯ ನೈಸರ್ಗಿಕ ಕೃಷಿಕ ಎನ್‌.ಎಸ್‌.ಚಂದ್ರಶೇಖರ್ ಅವರಿಗೆ ಪುರಸ್ಕಾರ ಒಲಿದಿದೆ.

ಕೃಷಿ ಕ್ಷೇತ್ರದಲ್ಲಿ ಅವರಿಗೆ ಪ್ರಶಸ್ತಿ ಸಂದಿದೆ. ಚಂದ್ರಶೇಖರ್‌ ಅವರು ಮೂಲತಃ ಅಜ್ಜಂಪುರ ತಾಲ್ಲೂಕಿನ ನಾರಣಾಪುರ ಗ್ರಾಮದವರು. ಎನ್‌.ಕೆ.ಶಿವರುದ್ರಪ್ಪ ಮತ್ತು ಗಂಗಮ್ಮ ದಂಪತಿಯ ಪುತ್ರ. ಚಿಕ್ಕಮಗಳೂರು ತಾಲ್ಲೂಕಿನ ಮೂಗುತಿಹಳ್ಳಿಯಲ್ಲಿ ನೆಲೆಸಿದ್ದಾರೆ.
2009ರಲ್ಲಿ ಕೃಷಿ ಆರಂಭಿಸಿದರು. 12 ಎಕರೆ ತೋಟ, ಜಮೀನು ಇದೆ. ಎರಡು ಕೊಳವೆ ಬಾವಿ, ಒಂದು ತೆರೆದ ಬಾವಿ ಇವೆ. ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ.

ಉಳುಮೆ ಮಾಡದೆ, ಗೊಬ್ಬರ ಬಳಸದೆ, ಔಷಧ ಸಿಂಪಡಿಸದೆ, ನೈಸರ್ಗಿಕ ವಾತಾವರಣದಲ್ಲಿ ಉತ್ಪಾದನೆ, ಮಿತ ಖರ್ಚು ಅಧಿಕ ಆದಾಯ ಅವರ ಕೃಷಿಯ ವಿಶೇಷ.ಅಡಿಕೆ, ಕಾಫಿ, ಕೋಕೊ, ಬಾಳೆ ಸಹಿತ 10 ವಿಧದ ಹಣ್ಣಿನ ಗಿಡಗಳು, ಜಾಯಿಕಾಯಿ ಬೆಳೆದಿದ್ದಾರೆ.

ನೈಸರ್ಗಿಕ ಕೃಷಿಯ ಬಗ್ಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿ ಮಾಹಿತಿ ನೀಡುತ್ತಾರೆ. ಸಮ್ಮೇಳನ, ಕಾರ್ಯಗಾರಗಳಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ.

ಪ್ರಶಸ್ತಿಗಳು: ಬೆಂಗಳೂರಿನ ಜಿಕೆವಿಕೆ ‘ಪ್ರಗತಿಪರ ಕೃಷಿಕ’, ಬಾಗಲಕೋಟೆಯ ತೋಟಗಾರಿಕೆ ವಿ.ವಿಯ ‘ಶ್ರೇಷ್ಠ ತೋಟಗಾರಿಕೆ ರೈತ’, ಗುಜರಾತ್ ಸರ್ಕಾರದ ‘ಶ್ರೇಷ್ಠ ಕೃಷಿಕ’, ಕರ್ನಾಟಕ ಸರ್ಕಾರದ ‘ಕೃಷಿ ಪಂಡಿತ’, ಪಶುಸಂಗೋಪನೆ ಇಲಾಖೆಯ ‘ಶ್ರೇಷ್ಠ ಕೃಷಿಕ’ ಸಹಿತ ಹಲವು ಪುರಸ್ಕಾರ ಸಂದಿವೆ.

ಕೃಷಿ ಇಲಾಖೆಯ ಜಿಲ್ಲಾ ಸಮಾಲೋಚನ ಸಮಿತಿ, ಜಿಲ್ಲೆಯ ಹಾಪ್ ಕಾಮ್ಸ್ ಸದಸ್ಯರಾಗಿದ್ದಾರೆ. ತಾಲ್ಲೂಕಿನ ಮಲೆನಾಡಿನ 20 ರೈತರ ಒಕ್ಕೂಟ ‘ಕಾಯಕ ಬಳಗ’ ರಚಿಸಿ ತಿಂಗಳಿಗೆ ಒಬ್ಬೊಬ್ಬರ ತೋಟದಲ್ಲಿ ಸಭೆ ಸೇರಿ ಕೃಷಿ ಚಟುವಟಿಕೆಯ ಬಗ್ಗೆ ಚರ್ಚೆ ಮಾಡುತ್ತಾರೆ. ಪತ್ರಿಕೋದ್ಯಮದಲ್ಲೂ ಕಾರ್ಯನಿರ್ವಹಿಸಿದ್ದಾರೆ. ‘ಕರ್ನಾಟಕದ ವೀರಶೈವ ಮಠಗಳು’ ಗ್ರಂಥ ಸಹಿತ ಹಲವು ಪುಸ್ತಕ ಪ್ರಕಟಿಸಿದ್ದಾರೆ.

*
ಕೃಷಿ ಕ್ಷೇತ್ರದ ಸಾಧನೆ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಖುಷಿ ನೀಡಿದೆ. ಇನ್ನಷ್ಟು ಸಾಧನೆ ಮಾಡಲು ಪ್ರೇರಣೆ ನೀಡಿದೆ.
–ಚಂದ್ರಶೇಖರ್‌ ನಾರಣಾಪುರ, ನೈಸರ್ಗಿಕ ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT