ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೂರು | ವಿಶಿಷ್ಟ ಆಚರಣೆಯ ಕಾರಹಬ್ಬ ಇಂದು

ರೈತರ ಪಾಲಿಗೆ ಕೃಷಿ ಬದುಕಿನ ಆರಂಭದ ಹಬ್ಬ
Last Updated 5 ಜೂನ್ 2020, 4:42 IST
ಅಕ್ಷರ ಗಾತ್ರ

ಕಡೂರು: ಕಾರಹಬ್ಬ ಎಂಬುದು ರೈತರ ಪಾಲಿಗೆ ಕೃಷಿ ಬದುಕಿನ ಆರಂಭದ ಹಬ್ಬ. ಕಾರಹಬ್ಬ ಎಂಬ ಹೆಸರಿನಲ್ಲಿ ತಮ್ಮ ಜೀವನಾಡಿಯಾದ ಎತ್ತು ರಾಸುಗಳನ್ನು ಸಿಂಗರಿಸಿ ಪೂಜೆ ಮಾಡಿ ವರ್ಷದ ಕೃಷಿ ಬದುಕನ್ನು ಆರಂಭಿಸುವ ಜಾನಪದ ಹಿನ್ನೆಲೆಯ ಹಬ್ಬವಿದು. ಈ ಬಾರಿ ಜೂನ್ 5ರಂದು ಕಾರಹಬ್ಬ ಆಚರಿಸಲು ರೈತಾಪಿ ವರ್ಗ ಸಿದ್ಧವಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಎಷ್ಟೇ ಆಧುನಿಕತೆ ಅವರಿಸಿದ್ದರೂ ಕೃಷಿ ಬದು ಕಿನಲ್ಲಿನ್ನೂ ಸಾಂಪ್ರದಾಯಿಕತೆ ಉಳಿದು ಕೊಂಡಿದೆ. ಅಂತಹ ಒಂದು ಆಚರಣೆ ಕಾರಹಬ್ಬ.

ಸಾಮಾನ್ಯವಾಗಿ ಮುಂಗಾರು ಆರಂಭಕ್ಕೆ ಮುನ್ನವೇ ಹೊಲಗಳಲ್ಲಿ ಉಳುಮೆ ಮಾಡಿ ಹಸನುಗೊಳಿಸುವ ಕಾರ್ಯ ಆರಂಭವಾಗಿರುತ್ತದೆ. ಮಳೆ ಬಿದ್ದ ಕೂಡಲೇ ಬಿತ್ತನೆ ಆರಂಭವಾ ಗಬೇಕು. ಹಾಗೆಯೇ ರೈತನಿಗೆ ಹೆಗಲೆಣೆಯಾಗಿ ನಿಂತು ದುಡಿಯುವ ಎತ್ತಿಗೆ ಕಾರಹಬ್ಬದಂದು ಪೂರ್ಣ ವಿಶ್ರಾಂತಿಯ ಸಮಯ. ಅಂದು ಎತ್ತುಗಳಿಗೆ ಸ್ನಾನ ಮಾಡಿಸಿ, ದಣಿದ ದೇಹಕ್ಕೆ ಚೈತನ್ಯ ನೀಡುವ ಕಷಾಯ (ತುಳಸಿ, ತುಂಬೆ ಮುಂತಾದ ಗಿಡಮೂಲಿಕೆಗಳ ರಸ) ಕುಡಿಸಿ ಸಂಜೆ ಜೋಡೆತ್ತುಗಳನ್ನು ಮನೆಯೊಳಗೆ ತಂದು ಪೂಜಿಸಿ ತಯಾರಿಸಿದ ಸಿಹಿ ತಿಂಡಿಗಳನ್ನು ಕೊಟ್ಟು ಕಾಲ್ಹಿಡಿದು ನಮಸ್ಕರಿಸುತ್ತಾರೆ. ಎತ್ತುಗಳಿಗೆ ಕಷಾಯ ಕುಡಿಸುವುದು ಒಂದು ರೀತಿ ‘ವಾರ್ಮ್ ಅಪ್’ ಮಾಡಿ ದಂತೆ. ಪೂಜಿಸಿ ನಮಸ್ಕರಿಸುವುದು ತಮ್ಮ ಜೊತೆಗೆ ಸಮನಾಗಿ ದುಡಿಯುವ ಜೊತೆಗಾರರಿಗೆ ಗೌರವಿಸುವ ಪದ್ಧತಿ.

ಕಾರಹಬ್ಬದಂದು ಮುಸ್ಸಂಜೆ ಗ್ರಾಮದ ಅಂಚಿನಲ್ಲಿರುವ ಕರಿಗಲ್ಲು ಎಂಬ ಜಾಗಕ್ಕೆ ರೈತರೆಲ್ಲರೂ ತೆರಳುತ್ತಾರೆ. ಈ ಕರಿಗಲ್ಲಿನ ಮಧ್ಯೆ ಗ್ರಾಮದ ಕುಳವಾಡಿ (ಈತ ಗ್ರಾಮದ ವಕ್ತಾರನಿದ್ದಂತೆ) ತಯಾರಿಸಿಕೊಂಡು ಬಂದ ಕರಿಹಗ್ಗವನ್ನು ಜೊತೆಗೆ ಸಣ್ಣ ಮಡಕೆಯಲ್ಲಿ ರೈ‍‍ತರು ಬೆಳೆಯುವ ಧಾನ್ಯಗಳನ್ನು ತುಂಬಿ ಇಟ್ಟು ಪೂಜಿಸುತ್ತಾರೆ. ಊರ ಜೋಯಿಸರು ಪೂಜೆ ಮಾಡಿದ ನಂತರ ಆ ಮಡಕೆಯಲ್ಲಿನ ಧಾನ್ಯಗಳನ್ನು ಮೂರು ಸಾರಿ ಭೂಮಿಯ ಮೇಲೆ ಉರುಳಿ ಬಿಡುತ್ತಾರೆ. ಯಾವ ಧಾನ್ಯ ಮುಂದೆ ಹೋಗುತ್ತದೆಯೋ ಆ ವರ್ಷ ಆ ಧಾನ್ಯ ಸಮೃದ್ಧವಾಗಿ ಬೆಳೆಯುತ್ತದೆ ಎಂಬ ನಂಬಿಕೆ ಜನರದು.

ನಂತರ ಕರಿಹಗ್ಗ (ಹಂಬಳ್ಳಿ ಎಂಬ ಬಳ್ಳಿಯಿಂದ ದಪ್ಪನಾಗಿ ಹೊಸೆದು ಬೇವಿನ ಮತ್ತು ಬೇಟೆ ಸೊಪ್ಪನ್ನು ಸೇರಿಸಿ ಮಾಡಿದ ಹಗ್ಗವಿದು)ವನ್ನು ಕರಿಗಲ್ಲಿನ ಸುತ್ತ ಕಟ್ಟಲಾಗುತ್ತದೆ. ಮತ್ತೊಮ್ಮೆ ಪೂಜಿಸಿದ ನಂತರ ನೆರೆದವರೆಲ್ಲರೂ ಸೇರಿ ಹಗ್ಗ ಎಳೆಯುತ್ತಾರೆ. ಅದು ಹರಿದ ಕೂಡಲೇ ಸಿಕ್ಕಷ್ಟು ಬಳ್ಳಿಯನ್ನು ತೆಗೆದುಕೊಂಡು ಮನೆಗೆ ಓಡುತ್ತಾರೆ. ಮೊದಲು ಮನೆ ತಲುಪುವ ರೈತನ ಹೊಲದಲ್ಲಿ ಹೆಚ್ಚು ಬೆಳೆಯೆಂಬ ನಂಬಿಕೆ ಗ್ರಾಮೀಣರದ್ದು. ಮಾರನೇ ದಿನದಿಂದ ರೈತರ ಕೃಷಿ ಬದುಕು ಅಧಿಕೃತವಾಗಿ ಆರಂಭವಾಗುತ್ತದೆ.

ಆಧುನಿಕತೆಯ ನಡುವಿನಲ್ಲೂ ಸಾಂಪ್ರದಾಯಿಕತೆ ಉಳಿಸಿಕೊಂಡಿರುವ ಗ್ರಾಮೀಣ ರೈತರ ವಿಶಿಷ್ಟ ಆಚರಣೆಯಾಗಿ ಕಾರಹಬ್ಬ ಉಳಿದುಕೊಂಡು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT