ಸೋಮವಾರ, ಡಿಸೆಂಬರ್ 5, 2022
21 °C
ಕರ್ನಾಟಕ ಜನಶಕ್ತಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಕಲ್ಕುಳಿ ವಿಠಲ್ ಹೆಗ್ಡೆ

ಹಕ್ಕುಪತ್ರ ನೀಡಲು ‘ಅರಣ್ಯ’ ಅಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶೃಂಗೇರಿ: ‘ದಿನಕ್ಕೊಂದು ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಮಲೆನಾಡು ನಲುಗುತ್ತಿದೆ. ಸರ್ಕಾರಗಳು ನಿರಂತರವಾಗಿ ಕೃಷಿ-ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿವೆ. ಇದರಿಂದ ರೈತಾಪಿ ವರ್ಗ ಹಾಗೂ ಕೂಲಿ ಕಾರ್ಮಿಕರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ’ ಎಂದು ಕರ್ನಾಟಕ ಜನಶಕ್ತಿ ಸಂಘಟನೆ ರಾಜ್ಯ ಕಾರ್ಯದರ್ಶಿ ಕೆ.ಎಲ್ ಅಶೋಕ್ ಹೇಳಿದರು.

ಶೃಂಗೇರಿ ಭಾರತಿ ಬೀದಿಯ ಮೆಸ್ಕಾಂ ಮುಂಭಾಗದಲ್ಲಿ ಕರ್ನಾಟಕ ಜನಶಕ್ತಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ‘ಜನವಿರೋಧಿ ನೀತಿಗಳನ್ನು ಸರ್ಕಾರ ಹಿಂಪಡೆಯಬೇಕು. ಅಡಿಕೆ ಎಲೆಚುಕ್ಕಿ ರೋಗ, ಹಳದಿ ಎಲೆ ರೋಗದ ಸಂಶೋಧನೆಗಾಗಿ ತಕ್ಷಣ ಸರ್ಕಾರ ವಿಜ್ಞಾನಿಗಳ ತಂಡ ರಚಿಸಬೇಕು. ತೋಟಗಾರಿಕೆ ಹಾಗೂ ಕೃಷಿ ಇಲಾಖೆಯು ಕೃಷಿಕರ ಭೂಮಿಯ ಮಣ್ಣು ಪರೀಕ್ಷೆ ಸೇರಿದಂತೆ ವೈಜ್ಞಾನಿಕ ಪರಿಹಾರ ಹಾಗೂ ಉಪಯೋಗದ ಮಾಹಿತಿಯನ್ನು ಎಲ್ಲ ಕೃಷಿಕರಿಗೆ ನೀಡಬೇಕು’ ಎಂದರು.

ಪರಿಸರವಾದಿ ಡಾ. ಕಲ್ಕುಳಿ ವಿಠಲ್ ಹೆಗ್ಡೆ ಮಾತನಾಡಿ, ‘ದೈವಬನ, ನಾಗಬನ, ಚೌಡಿಬನ, ಸೊಪ್ಪಿನಬೆಟ್ಟ, ದರಗಿನ ಕಾಡು ಹೀಗೆ ನಾನಾ ಹೆಸರಿನಲ್ಲಿ ಹಿರಿಯ ಕೃಷಿಕರು ಕಾಡನ್ನು ರಕ್ಷಣೆ ಮಾಡಿದ್ದಾರೆ. ಶತಮಾನಗಳಿಂದ ಕಾಡು ಮತ್ತು ಮನುಷ್ಯನ ನಡುವೆ ನಂಟಿದೆ. ಆದರೆ ಕಾಡನ್ನು ಪ್ರಸ್ತಾವಿತ ಅರಣ್ಯ ಎಂದು ಘೋಷಿಸಿ ಜನರನ್ನು ಬೀದಿಪಾಲು ಮಾಡಲು ಸರ್ಕಾರ ಹೊರಟಿದೆ. ಹಾಗಾಗಿ, ವಸತಿ ಹಾಗೂ ನಮೂನೆ 50, 53 ಅರ್ಜಿ ಹಾಕಿಕೊಂಡ ಬಡವರಿಗೆ ಹಕ್ಕುಪತ್ರ ನೀಡಲು ಅರಣ್ಯ ಇಲಾಖೆಯ ಕಾಯ್ದೆಗಳು ಅಡ್ಡಿಮಾಡುತ್ತಿವೆ. ಭೂ ದಾಖಲಾತಿ ಇಲ್ಲದ ರೈತ ಕುಟುಂಬಗಳು ಸರ್ಕಾರದ ಪರಿಹಾರ ಸೌಲಭ್ಯದಿಂದ ವಂಚಿತವಾಗುತ್ತಿವೆ. ಕೂಡಲೇ ಸಾಗುವಳಿ ಭೂಮಿ ಪರಿಶೀಲನೆ ಮಾಡಿ ರೈತರಿಗೆ ಸೌಲಭ್ಯವನ್ನು ನೀಡುವ ಬಗ್ಗೆ ಸರ್ಕಾರ ಕ್ರಮ ವಹಿಸಬೇಕು. ಅಡಿಕೆ ಎಲೆಚುಕ್ಕಿ ರೋಗ, ಹಳದಿ ಎಲೆ ರೋಗ ಪರಿಹಾರಕ್ಕೆ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಅವರು ವಿಜ್ಞಾನಿಗಳ ತಂಡ ರಚಿಸಲು ಮುಂದಾಗಬೇಕು’ ಎಂದು ಒತ್ತಾಯಿಸಿದರು.

ರೈತ ಮುಖಂಡ ನವೀನ್ ಕರುವಾನೆ ಮಾತನಾಡಿ, ‘ಅಡಿಕೆಯನ್ನು ಸುಂಕ ರಹಿತವಾಗಿ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರಿಂದ ರೈತ ಸಮುದಾಯ ದಿಕ್ಕೆಡಲಿದೆ. ಬದುಕಿಗಾಗಿ ಮನೆ ಕಟ್ಟಿಕೊಂಡ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಬೇಕು. ಬಡವರು ವಸತಿ, ಭೂಮಿ ಪಡೆಯುವುದು ಸಂವಿಧಾನ ಬದ್ಧ ಹಕ್ಕು ಎಂದು ಸರ್ಕಾರ ನಿರೂಪಿಸಬೇಕು. ಗ್ರಾಮೀಣ ರಸ್ತೆಗಳ ಅಭಿವೃದ್ಧಿಯ ಜೊತೆ ಫಸಲ್ ಬಿಮಾ ಕೃಷಿ ವಿಮೆ ಹಣ ನೇರವಾಗಿ ರೈತರ ಖಾತೆಗೆ ಪರಿಹಾರದ ಹಣ ಜಮಾ ಮಾಡಬೇಕು. ಜಿಲ್ಲಾಧಿಕಾರಿ ಎಲೆಚುಕ್ಕಿ ರೋಗ ಬಾಧಿತ ಅಡಿಕೆ ತೋಟಗಳ ವೀಕ್ಷಣೆ ಮಾಡಿಲ್ಲ’ ಎಂದು ಆರೋಪಿಸಿದರು.

ಕಂಬಳಗೆರೆ ರಾಜೇಂದ್ರ ತಮಟೆ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಪ್ರಾಂಶುಪಾಲರಾದ ಡಾ.ಬಿ ಗಣಪತಿ, ತಾಲ್ಲೂಕು ಜನಶಕ್ತಿ ಪದಾಧಿಕಾರಿಗಳಾದ ವೆಂಕಟೇಶ್ ಹಾಗಲಗಂಚಿ, ರಾಧಾ ಹಾಗಲಗಂಚಿ, ಸರೋಜಾ, ಮರಿಯಪ್ಪ ಹಾಗೂ ಡಿ.ಎಸ್.ಎಸ್‍ನ ಜಲಜಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು